ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಪ್ಲಾಸ್ಟಿಕ್ ಮಯ...

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತನ್ನ ಒಡಲು ಸೇರಿದ ವಸ್ತುಗಳನ್ನೊಮ್ಮೆ ಮೇಲೆ ತಂದು ಹಾಕುವುದು ಸಮುದ್ರದ ನಿಯಮ. ಮಳೆಗಾಲದಲ್ಲಿ ನದಿ, ಝರಿ, ಹಳ್ಳ-ಕೊಳ್ಳದ ನೀರಿನೊಂದಿಗೆ ಸೇರಿ ಹರಿದುಹೋದ ಮರದ ಎಲೆ, ಮರದ ಟೊಂಗೆ, ಬೇರು ಕಸ-ಕಡ್ಡಿ ಎಲ್ಲವೂ ಕಡಲತೀರದಲ್ಲಿ ರಾಶಿರಾಶಿಯಾಗಿ ಬೀಳುತ್ತದೆ.

ಹೀಗೆ ತೀರದ ಮೇಲೆ ಬಿದ್ದ ಮರದ ಎಲೆ, ಟೊಂಗೆ, ಬೇರು ಮರಳಿನಲ್ಲಿ ಮಿಶ್ರಣವಾಗಿ ಸಾಂಪ್ರದಾಯಿಕ ಗೊಬ್ಬರ ಸಿದ್ಧಗೊಂಡು ಅಮಾವಾಸ್ಯೆಯ ಉಬ್ಬರಕ್ಕೆ ಪುನಃ ಸಮುದ್ರ ಸೇರುತ್ತದೆ. ಇದು ಮೀನುಗಳಿಗೆ ಆಹಾರ. ಇದೊಂದು ಪ್ರಕೃತಿ ನಿಯಮ.

ಆದರೆ ಮಾನವ ಈ ನಿಯಮ ಮೀರಿ ನಡೆದಿದ್ದಾನೆ. ರವೀಂದ್ರನಾಥ ಟ್ಯಾಗೋರ ಕಡಲತೀರದ ಗೊಬ್ಬರ ರಾಶಿಯಲ್ಲಿ ಪ್ಲಾಸ್ಟಿಕ್‌ಗಳೇ ಕಣ್ಣಿಗೆ ರಾಚುತ್ತಿವೆ. ಕಡಲತೀರದಲ್ಲಿ ಕಣ್ಣು ಹಾಯಿಸುವಷ್ಟು ದೂರದವರೆಗೆ ಬಿದ್ದ ಕಸದ ರಾಶಿಯಲ್ಲಿ ಅರ್ಧದಷ್ಟು ಪ್ಲಾಸ್ಟಿಕ್ ಚೀಲಗಳು, ಬಕೆಟ್, ಪೆನ್ನು, ಗುಟ್ಕಾ ಪ್ಯಾಕೆಟ್‌ಗಳು ಸೇರಿವೆ!

ಭೂಮಿಯ ಮೇಲ್ಮೈ ವಾತಾವರಣಕ್ಕೆ ಮಾರಕ ಎನಿಸಿರುವ ಪ್ಲಾಸ್ಟಿಕ್ ಈಗ ಸಾಗರ ಗರ್ಭ ಸೇರುವುದರೊಂದಿಗೆ ಅಲ್ಲಿಯ ಜೀವಿಗಳಿಗೂ ಕುತ್ತು ತಂದಿದೆ.
ಪ್ಲಾಸ್ಟಿಕ್‌ಗಳನ್ನು ತಿನ್ನುವುದರಿಂದ ಸಾಗರದಲ್ಲಿ ಜೀವಿಸುವ ಮೀನು ಮತ್ತು ಪಕ್ಷಿ ಪ್ರಭೇದಗಳು ಸಾವಿನ ಹಾದಿ ಹಿಡಿದಿವೆ.

ಸಾಗರದಲ್ಲಿ ಜೀವಿಸುವ ಪಕ್ಷಿಗಳ 312 ಪ್ರಭೇದಗಳಲ್ಲಿ 111 ಪ್ರಭೇದಗಳು, ತೇಲುವ ಪ್ಲಾಸ್ಟಿಕ್ ಚೂರುಗಳನ್ನು ಆಹಾರವೆಂದು ತಪ್ಪಾಗಿ ಭಾವಿಸಿ ತಿಂದು ಸಾವನ್ನಪ್ಪುತ್ತಿವೆ.

ನೀರಿನಲ್ಲಿ ತೇಲುವ ಪ್ಲಾಸ್ಟಿಕ್ ಹೊಳೆಯುತ್ತದೆ. ಇದನ್ನು ಮೀನುಗಳೆಂದು ನಂಬಿ ಪಕ್ಷಿಗಳು ಅವುಗಳನ್ನು ನುಂಗುತ್ತವೆ. ದೇಹ ಸೇರಿದ ಪ್ಲಾಸ್ಟಿಕ್ ಜೀರ್ಣಾಂಗದಿಂದ ಹೊರಹಾಕಲು ಸಾಧ್ಯವಾಗದೇ ಹೊಟ್ಟೆಯುಬ್ಬಿ ಪಕ್ಷಿಗಳು

ಕೊನೆಯುಸಿರೆಳೆಯುವುದರಿಂದ ಕೆಲವು ಪಕ್ಷಿ ಪ್ರಭೇದಗಳು ಅಳವಿನಂಚಿಲ್ಲಿವೆ. ದೇಶದ ಸಮುದ್ರದಲ್ಲಿರುವ ದ್ವೀಪಗಳಲ್ಲಿ ಹೆಚ್ಚಾಗಿ ಕಂಡುಬರುವ ~ಬ್ಲೂ ಪೆಟ್ರಲ್~ ಹಕ್ಕಿಯ ಸತ್ತ ಮರಿಗಳ ಜಠರ ಪರೀಕ್ಷೆಯಲ್ಲಿ ಶೇ. 90 ರಷ್ಟು ಪಕ್ಷಿಗಳ ಸಾವಿಗೆ ಕಾರಣ ಅವು ತಿಂದಿರುವ ಪ್ಲಾಸ್ಟಿಕ್!

ಮೀನುಗಳಿಗೂ ಮಾರಕ: ಮೀನು ಮತ್ತು ಇತರ ಜೀವಿಗಳ ಸಮಸ್ಯೆ ಇನ್ನೊಂದು ಬಗೆಯದ್ದು. ಪ್ಲಾಸ್ಟಿಕ್ ಮತ್ತು ಉಪ್ಪು ನೀರಿನ ಸಾಂದ್ರತೆ ಒಂದೇ ಆಗಿರುವುದರಿಂದ ಪ್ಲಾಸ್ಟಿಕ್ ನೀರಿನಲ್ಲಿ ನಿಧಾನವಾಗಿ ಸಮುದ್ರದಾಳ ಸೇರುತ್ತದೆ. ಗಾಳಿಯ ವೇಗ, ತೆರೆ ಮತ್ತು ಪ್ರವಾಹ ಬಂದ ಸಂದರ್ಭದಲ್ಲಿ ಮುಳುಗಿದ ಪ್ಲಾಸ್ಟಿಕ್ ಹಾಳೆಗಳು ಮೇಲೆ ಬಂದು ತೇಲುತ್ತವೆ.

ಸಾಗರದ ತಳ ಸೇರಿದ ಪ್ಲಾಸ್ಟಿಕ್ ಅಲ್ಲಿ ಹರಡಿ ತಳದ ರಾಡಿ ಮೇಲೆ ಬರದಂತೆ ತಡೆಯುವುದರಿಂದ ಫಲವತ್ತತೆಯ ಪ್ರಮಾಣ ಕುಗ್ಗಿ ಆಹಾರೋತ್ಪತ್ತಿ ಪ್ರಮಾಣ ಕಡಿಮೆಯಾಗಿ ಮೀನುಗಳಿಗೆ ಲಭ್ಯವಾಗುವ ಆಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹವಳದ ಬಂಡೆಗಳ ಮೇಲೆ ಬೀಳುವ ಪ್ಲಾಸ್ಟಿಕ್ ಅಲ್ಲಿರುವ ಜೀವಿಗಳ ಬದುಕಿಗೆ ಸಂಚಕಾರ ತಂದಿದೆ.

ಆಹಾರ ಹುಡುಕುವ ಕಡಲಾಮೆಗಳಿಗೆ ತೇಲುತ್ತಿರುವ ಪ್ಲಾಸ್ಟಿಕ್ ಚೀಲ ~ಜೆಲ್ಲಿ ಫಿಶ್~ ರೀತಿಯಲ್ಲಿ ಕಂಡುಬಂದು ಅದನ್ನು ತಿಂದು ಜಠರ ಉಬ್ಬಿ ಸಾಯುತ್ತಿವೆ. ಸಮುದ್ರದಲ್ಲಿ ಸೇರುವ ಪ್ಲಾಸ್ಟಿಕ್‌ನಿಂದಾಗಿ ಏಳು ಕಡಲಾಮೆಗಳ ಪ್ರಭೇದಗಳು ಅಪಾಯದಂಚು ತಲುಪಿದೆ.

ಸಾಗರದಲ್ಲಿ ಪ್ಲಾಸ್ಟಿಕ್ ಹಾಳೆಗಳಿಂದ ಮೇಲ್ಪದರ ನಿರ್ಮಾಣ ಆಗುವುದರಿಂದ ಆಮ್ಲಜನಕ ಮತ್ತು ಸೂರ್ಯನ ಕಿರಣಗಳಿಂದ ವಂಚಿತವಾಗಿ ಅಸಂಖ್ಯಾತ ಸೂಕ್ಷ್ಮ ಸಸ್ಯಗಳು (ಫೈಟೋಪ್ಲಾಂಕ್ಟನ್) ನಾಶವಾಗುತ್ತಿರುವುದೂ ಆತಂಕದ ವಿಷಯ.

`ಸಂಶೋಧನೆಯೊಂದರ ಪ್ರಕಾರ ಜಗತ್ತಿನಲ್ಲಿ ಉತ್ಪಾದನೆ ಆಗುವ ಪ್ಲಾಸ್ಟಿಕ್‌ನ ಪೈಕಿ ಶೇ 57ರಷ್ಟು ಸಮುದ್ರ ಸೇರುತ್ತಿವೆ. ಇದು ಅಪಾಯದ ಸಂಕೇತ. ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಹೆಜ್ಜೆ ಇಡಬೇಕಾಗಿದೆ~ ಎನ್ನುತ್ತಾರೆ ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಡಾ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT