ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಬೀದಿಗಳಿಂದಲೂ ಪುಟಾಣಿ ಅಂಬೇಡ್ಕರರು

Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಎಪ್ಪತ್ತರ ದಶಕದ ಕೊನೆ. ಅಕ್ಷರ ಕಲಿಕೆಗಾಗಿ ಹೋರಾಟ, ದಲಿತ ಚಳವಳಿಯ ಉರಿ ನನ್ನೂರಿಗೂ ತಾಕಿತ್ತು. ಆಗತಾನೇ ಪದವಿ ಶಿಕ್ಷಣ ಪಡೆಯುತ್ತಿದ್ದ ಊರಿನ ರಾಜಕುಮಾರಣ್ಣ, ಲಕ್ಕಪ್ಪಣ್ಣ ಮತ್ತು ಸೋಮಶೇಖರಣ್ಣ, ಇವರುಗಳೆಲ್ಲ ಹಾಸನ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು. ದಲಿತಪರ ಕಾಳಜಿಯ ಹಾಡ್ಯದ ಸೋಮಶೇಖರಣ್ಣ ನಮ್ಮ ಪ್ರೀತಿಯ ಹೋರಾಟಗಾರ. ದಲಿತ ಸಂಘರ್ಷ ಸಮಿತಿಯ ಪಿರಿಯಾಪಟ್ಟಣದ ರಾಜ್ಯಮಟ್ಟದ ಕಾರ್ಯಕರ್ತರ ಶಿಬಿರ ನಡೆಯುತ್ತಿತ್ತು. ಆಗ ಇವರು ಕಾವೇರಿ ನದಿಗೆ ಈಜಲು ಹೋಗಿ ಸಾವಿಗೀಡಾದರು. ಅಂತ್ಯಕ್ರಿಯೆ ಸಂದರ್ಭದಲ್ಲಿ ಕೋಲಾರದ ಗಡ್ಡಂ ವೆಂಕಟೇಶಣ್ಣ- `ಸೋಮಶೇಖರಣ್ಣನೆ ನಿನಗೆ ಕೆಂಪು ವಂದನೆ. ಇದು ನಿನ್ನ ಮರಣವಲ್ಲ ನಾಡಿನ ನಾಳಿನ ಕಿರಣ' ಎಂದು ಹಾಡು ಬರೆದರು. ಇದು ಇಂದಿಗೂ ದಲಿತ ಸಂಘರ್ಷ ಸಮಿತಿಯ ಹೋರಾಟಗಳಲ್ಲಿ  ಗುನುಗುತ್ತದೆ.

ಒಮ್ಮೆ ರಾಜಕುಮಾರಣ್ಣ, ಲಕ್ಕಪ್ಪಣ್ಣ ಮತ್ತು ಹಾಡ್ಯದ ಸೋಮಶೇಖರಣ್ಣರವರು `ಹಾಡು ಹೇಳಿಕೊಡ್ತೀವಿ, ಬನ್ನಿ' ಅಂತ ಕರೆದರು. ನಾವು ಹತ್ತಾರು ಮಕ್ಕಳು (ನಾನಾಗ ಹೈಸ್ಕೂಲಿನಲ್ಲಿದ್ದೆ) ರಾಮಮಂದಿರ ಸೇರಿಕೊಂಡೆವು. ಹಾಡ್ಯದ ಸೋಮಶೇಖರಣ್ಣ ದಮಡಿ ತೆಗೆದು `ನಿಮಗೆಲ್ಲಾ ಹಾಡು ಹೇಳಿಕೊಡುತ್ತೇನೆ, ನಾನು ಹೇಳಿದಂತೆ ಹೇಳಬೇಕು' ಎಂದು `ನನ್ನ ತಂಗಿ ಅನಸೂಯ' (ಬಡ ಕುಂಬಾರರ ಮನೆಯ ಹೆಣ್ಣುಮಗಳ ಕುರಿತಾದ ಗೀತೆ) ಎಂಬ ಹಾಡು ಆರಂಭಿಸಿದರು. ಹಾಡು ಕೇಳುತ್ತಾ, ಹೇಳುತ್ತಾ ನಮ್ಮ ಕಣ್ಣುಗಳಲ್ಲಿ ನೀರು. ಎಲ್ಲಾ ಮುಗಿದ ಮೇಲೆ ಸೋಮಶೇಖರಣ್ಣ ಒಂದು ಘಳಿಗೆ ಸುಮ್ಮನಾದರು.

ಆ ಮೌನ ನಮ್ಮನ್ನೆಲ್ಲಾ ಅಲುಗಾಡಿಸಿತು. ನಿಧಾನವಾಗಿ ಮಾತು ಪ್ರಾರಂಭಿಸಿದ ಸೋಮಶೇಖರಣ್ಣ- `ಇದು ಹಾಡಲ್ಲ. ಕೋಲಾರ ಜಿಲ್ಲೆಯಲ್ಲಿ ನಡೆದ ಘಟನೆ. ಇಂಥವು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಸುಮ್ಮನೆ ಇದ್ದೀವಿ. ಅದನ್ನು ತಪ್ಪಿಸಲು ಮೊದಲು ಮಾಡಬೇಕಾದ ಕೆಲಸ ಶಿಕ್ಷಣ ಪಡೆಯುವುದು, ಆ ಮೂಲಕ ನಾಡಿನಲ್ಲಿ ಏನು ನಡೆಯುತ್ತಿದೆ; ಈ ದೇಶದ ಆಗುಹೋಗುಗಳೇನು ಎಂಬುದನ್ನು ತಿಳಿಯುವುದು ಮುಖ್ಯ ಎಂದರು.

ಎಲ್ಲಕ್ಕಿಂತಲೂ ಮುಖ್ಯವಾಗಿ ಈ ದೇಶದ ಕಾನೂನುಗಳು ನಮ್ಮಂತಹವರ ಪರವಾಗಿ ಇವೆ. ಈ ಕಾನೂನುಗಳನ್ನು ರೂಪಿಸಿದವರು ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಎನ್ನುತ್ತ ಅಂಬೇಡ್ಕರ್ ಹುಟ್ಟಿದ್ದು, ಬೆಳೆದಿದ್ದು ಹೋರಾಟ ನಡೆಸಿದ್ದನ್ನು ಬಿಚ್ಚಿಟ್ಟರು. ಅವತ್ತು `ಅಂಬೇಡ್ಕರ್ ಸಿನಿಮಾ' ನೋಡಿದಂತಾಗಿತ್ತು.

ಕಾರ್ಯಕ್ರಮ ಮುಗಿದಾಗ ರಾತ್ರಿ ಸುಮಾರು ಒಂಬತ್ತು ಗಂಟೆ. ಹಸಿವು ಮರೆತು ಹೋಗಿತ್ತು. ರಾಮಮಂದಿರದಿಂದ ಹೊರಗೆ ಬಂದ ನಮ್ಮನ್ನೆಲ್ಲಾ ಪರಿಚಯಿಸಿಕೊಂಡ ಸೋಮಶೇಖರಣ್ಣ `ನೀವೆಲ್ಲಾ ಚೆನ್ನಾಗಿ ಓದಬೇಕು, ದೊಡ್ಡ ದೊಡ್ಡ ಅಧಿಕಾರಿಗಳಾಗಬೇಕು. ನೊಂದವರಿಗೆ, ಶೋಷಿತರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು. ಆಗ ಅಂಬೇಡ್ಕರ್ ಕಂಡ ಕನಸು ನನಸಾಗುತ್ತದೆ' ಎಂದರು. ಕತ್ತಲೆಯಲ್ಲಿ ಅವರು ಹೇಳಿದ ಆ ಮಾತು ಈಗಲೂ ಕೇಳಿಸುತ್ತಿದೆ.

ಆ ರಾತ್ರಿ ನನ್ನಂತಹ ಅನೇಕರಿಗೆ ನಿದ್ರೆ ಬರಲಿಲ್ಲ. ಬೆಳಗಾಗುತ್ತಲೇ ರಾತ್ರಿಯ ಮಾತಿನ ಗುಂಗಿನಿಂದ ಹೊರಬರದ ನಾವು ಹಾಡುತ್ತಾ, ಸೋಮಶೇಖರಣ್ಣನ ವಿಚಾರಧಾರೆಯನ್ನು ಮರುವ್ಯಾಖ್ಯಾನಿಸುತ್ತಾ ನಿಂತೆವು. ಅಂಬೇಡ್ಕರ್ ಬಗ್ಗೆ ಓದಲು ಮನಸ್ಸು ಕಾತರಿಸುತ್ತಿತ್ತು. ಸೋಮಶೇಖರಣ್ಣನವರಂತೆ ನಾವೂ ಹಾಡಿಕೊಂಡು ಹೋರಾಟ ಮಾಡಿಕೊಂಡಿರಬೇಕು ಎನ್ನುವಷ್ಟು ನಮ್ಮೆಲ್ಲರ ಮನಸ್ಸು ಹಂಬಲಿಸುತ್ತಿತ್ತು. ಆದರೆ ಆಗ ಅದು ಅಸಾಧ್ಯದ ಮಾತಾಗಿತ್ತು.

ಈ ಮಧ್ಯೆ ನಮ್ಮ ಕೇರಿಗೆ ಇದ್ದ ಹೊಲಗೇರಿ ಹೆಸರನ್ನು ಬದಲಾಯಿಸಿ `ಡಾ.ಬಿ.ಆರ್.ಅಂಬೇಡ್ಕರ್ ನಗರ' ಎಂದು ಬೋರ್ಡ್ ಹಾಕಬೇಕೆಂದು ಹಿರಿಯರೊಬ್ಬರು ಸೂಚಿಸಿದರು. ಈ ಮಾತಿನಿಂದ ಒಂದು ಕ್ಷಣ ನಾವೆಲ್ಲಾ ರೋಮಾಂಚಿತರಾಗಿ ಕುಣಿದಾಡುವಷ್ಟು ಖುಷಿಯಾಯ್ತು.

ಅಲ್ಲಿದ್ದ ಇನ್ನೊಬ್ಬ ಹಿರಿಯರು, `ಹೌದು, ಈ ಬೋರ್ಡನ್ನು ಹಾಕಲೇಬೇಕು. ನಾವು ಹೊಲಗೇರಿ ಅಂತ ಹೇಳಬಾರದು. ಅಂಬೇಡ್ಕರ್ ನಗರದೋರು ಅಂತ ಹೇಳಿಕೊಳ್ಳಬೇಕು' ಎಂದರು. ಅವರ ಮಾತು ನಮ್ಮಲ್ಲಿ ಅದೆಂಥದ್ದೋ ಆತ್ಮವಿಶ್ವಾಸ ಮೂಡಿಸುತ್ತಿತ್ತು.

ಮತ್ತೊಬ್ಬರು `ನಮ್ಮ ಹಾಸನ ಜಿಲ್ಲೆಯಲ್ಲೇ ಹೊಳೆನರಸೀಪುರದಲ್ಲಿ ಮಾತ್ರ ಅಂಬೇಡ್ಕರ್ ನಗರ ಅಂತ ಇದೆ. ಅದನ್ನು ಬಿಟ್ಟರೆ ನಮ್ಮದು ಮಾತ್ರ' ಎಂದರು. `ನೀವೀಗ ಸ್ಕೂಲಿಗೆ ಹೋಗಿ. ನಾವು ಕೆಲಸಕ್ಕೆ ಹೋಗ್ತೇವೆ. ಬೋರ್ಡನ್ನು ರೆಡಿ ಮಾಡಿ ಸಂಜೆಯೇ ಹಾಕಿಬಿಡೋಣ. ಅದೇನಾಗುತ್ತೋ ನೋಡೋಣ' ಎನ್ನುವ ಮಾತುಗಳು ನಮ್ಮಳಗೆ ಆತಂಕವನ್ನು ಮೂಡಿಸುತ್ತಿದ್ದರೂ ಅದಕ್ಕೆ ಪ್ರತಿರೋಧದಂತೆ ಮೊಂಡು ಧೈರ್ಯವೂ ಒತ್ತರಿಸಿ ಬರುತ್ತಿತ್ತು. ಆಗಿನ ಕಾಲದಲ್ಲಿ ನಮ್ಮೂರಿನ ಉಳಿದ ಪ್ರಬಲ ಸಮುದಾಯದ ಜನ ಇಂತಹದನ್ನ ಸಹಿಸಿಕೊಂಡವರಲ್ಲ.

ಶಾಲೆಯ ಪಾಠಕ್ಕೆ ನನ್ನ ಕಿವಿಗಳು ಮುಚ್ಚಿ ಹೋಗಿದ್ದವು. ಮನಸ್ಸಿನಲ್ಲಿ ಅಂಬೇಡ್ಕರ್ ಹೆಸರು ಮತ್ತೆ ಮತ್ತೆ ಕೇಳಿಸುತ್ತಿತ್ತು. ಆ ಹೊತ್ತು ಶನಿವಾರವಾದ್ದರಿಂದ ಶಾಲೆ ಮುಗಿದ ತಕ್ಷಣ ಬಾವಿಕಟ್ಟೆ ಹತ್ತಿರ ಸೇರಿಕೊಂಡೆವು. ನಮಗೇ ಗೊತ್ತಿಲ್ಲದಂತೆ ಸ್ವಾಭಿಮಾನ ಎದೆಯುಬ್ಬಿಸುತ್ತಿತ್ತು.
ಹಲಗೆ, ಎರಡು ಕಂಬಗಳು, ಮೊಳೆ... ಅದಕ್ಕೆ ಬೇಕಾದ ಬಣ್ಣ- ಯಾರ‌್ಯಾರು ಏನೇನು ತರುವುದು ಎಂದು ಮಾತನಾಡಿಕೊಳ್ಳುತ್ತಿದ್ದಾಗಲೇ ಕೇರಿಯ ಉಳಿದ ಜನರಿಗೆ ಇವರೇನು ಮಾಡುತ್ತಿದ್ದಾರೆ ಎನ್ನುವ ಕುತೂಹಲ. `ಏನ್ರಪ್ಪಾ ಸಮಾಚಾರ' ಎಂದು ಕೆಲವರು ತಡೆಯಲಾರದೆ ಕೇಳಿಯೇ ಬಿಟ್ಟರು.

ನಾವ್ಯಾರೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಸದ್ಯಕ್ಕೆ ಹಲಗೆಪಟ್ಟಿಯ ಮೇಲೆ ಬರೆಯುವುದು, ನಂತರ ಸಕಲೇಶಪುರದಲ್ಲಿ ಬೋರ್ಡ್ ಬರೆಯುವವರ ಬಳಿ ಅಂಬೇಡ್ಕರ್ ಭಾವಚಿತ್ರ ಹಾಕಿಸಿ ಅದರ ಪಕ್ಕ `ಡಾ. ಅಂಬೇಡ್ಕರ್ ನಗರ' ಎಂದು ಬರೆಯಿಸುವುದು ಎಂದಾಯಿತು. ಇದಕ್ಕಾಗಿ ಬೇಕಾಗುವ ಖರ್ಚು ವೆಚ್ಚವನ್ನು ಎಲ್ಲರೂ ಭರಿಸುವುದು ಎಂದು ತೀರ್ಮಾನಿಸಲಾಯಿತು. ಆದರೆ ಇಡೀ ಕೇರಿ ಸುತ್ತಿದರೂ ಅಗಲವಾದ ಹಲಗೆಪಟ್ಟಿ ಸಿಗಲಿಲ್ಲ. ಮಲ್ಲೇಶಣ್ಣ ಅಷ್ಟೊತ್ತಿಗೆ ಹೊಗೆ ಹಿಡಿದ ಒಂದು ಸಾಧಾರಣ ಹಲಗೆಯನ್ನು ಅಟ್ಟದಿಂದ ಇಳಿಸಿ ನೆಲಕ್ಕೆ ಬಡಿಯುತ್ತಾ `ನೋಡ್ರುಲಾ ಇದಾಗುತ್ತಾ' ಅಂತ ತಂದರು.

ಅಲ್ಲಿದ್ದವರಿಗೆಲ್ಲಾ ಇದಕ್ಕಿಂತ ಒಳ್ಳೆಯದು ಸಿಗುವುದಿಲ್ಲ ಅನ್ನಿಸಿ ಅದನ್ನೇ ಕತ್ತರಿಸಿ ರೆಡಿ ಮಾಡಲಾಯಿತು. ಮೊದಲು ಹಲಗೆಗೆ ಟಾರ್ ಬಳಿದು ಅದರ ಮೇಲೆ ಬಿಳಿಬಣ್ಣದಲ್ಲಿ ಹೆಸರು ಬರೆದರೆ ಆಗ ಅದು ಎದ್ದು ಕಾಣುತ್ತದೆ. ಟಾರ್ ಹೊಡೆಯುವುದರಿಂದ ಅಕ್ಷರಗಳು ಮಳೆಯಲ್ಲಿ ತೊಳೆದು ಹೋಗುವುದಿಲ್ಲ ಎಂದರು ಕೆಲವರು. `ಟಾರು ಅಂಗಡಿಯಲ್ಲಿ ಸಿಗುತ್ತಾ, ಇಲ್ವಾ?' ಯಾರಿಗೂ ಗೊತ್ತಿರಲಿಲ್ಲ. `ಸಿಗುತ್ತೆ ಕಣ್ರುಲಾ. ಮಲ್ಲೇಶ್‌ಗೌಡ್ರಂಗಡೀಲಿ ಏನ್ ಸಿಗಲ್ಲ!

ಏ ಸುಬ್ಬು, ರಾಮು ಇಬ್ರೂ ಹೋಗಿ ಕಿಟಕಿಗೆ ಹೊಡೆಯೂದಕ್ಕೆ ಕಪ್ಪು ಮತ್ತು ಬಿಳಿಬಣ್ಣದ ಪೈಂಟ್ ಡಬ್ಬಿ ಸಿಗುತ್ತಾ ಕೇಳಿ ತಗೊಂಡ್ ಬರ‌್ರಲ' ಎಂದು ಕಳುಹಿಸಿದರು. ಅಂಗಡಿಗೆ ಹೋಗಿ ಬಣ್ಣದ ಡಬ್ಬಿಗಳನ್ನು ತೆಗೆದುಕೊಳ್ಳುವಾಗ `ಇದಕ್ಕೆ ಟರ್ಪಂಟಾಯಿಲ್ ಬೇಡ್ವಾ ಅಂದ್ರು. ನಮ್ಮವರು ಹೆಸರು ಹೇಳಿಲ್ಲವಾದ್ದರಿಂದ `ಬೇಡ' ಅಂದೆವು.

ನಾವು ಬಂದು ಎಂಥದೋ ಆಯಿಲ್ ಬೇಕಾ ಅಂದ್ರು ಎಂದಿದ್ದಕ್ಕೆ `ಏ ಸೀಮೆಣ್ಣೆ ಹಾಕಿ ವಡುದ್ರೆ ಆಗುತ್ತೆ ಬುಡು' ಎಂಬ ಉತ್ತರ. ಬೋರ್ಡ್ ಬರೆಯಲು ಸಿದ್ಧರಾಗಿದ್ದ ಭೋಜಣ್ಣ `ಬ್ರಶ್ ಎಲ್ಲಿ?' ಅಂತ ಕೇಳಿದ್ರು. ಮತ್ತೊಮ್ಮೆ ಅಂಗಡಿಗೆ ಓಡಿಸಿದರು. ಕಾಲುಗಳಲ್ಲಿ ಗಾಳಿಯ ಚಕ್ರ ಇದ್ದುದರಿಂದ ಕಣ್ಣುಮುಚ್ಚಿ ಬಿಡುವುದರೊಳಗೆ ಹೋಗಿ ಬಂದೆವು. ಇಷ್ಟಕ್ಕೂ ಅಂಬೇಡ್ಕರ್ ನಗರ ಎಷ್ಟೊತ್ತಿಗೆ ಕಣ್ಣಿಗೆ ಕಾಣಿಸುತ್ತದೋ ಎನ್ನುವ ಕುತೂಹಲ!

ಅಂತೂ ಇಂತೂ ಭೋಜಣ್ಣ ಬೋರ್ಡ್ ಪೂರ್ತಿ ಮಾಡಿದರು. ನಮಗಂತೂ ಅದನ್ನು ಹಿಡಿದುಕೊಂಡು ಕುಣಿದಾಡುವಷ್ಟು ಖುಷಿ. ಬಣ್ಣ ಸ್ವಲ್ಪ ಒಣಗಿದ ಮೇಲೆ ಎರಡೂ ಕಂಬಗಳ ಒಗ್ಗೂಡಿಸಿ ಅದರ ಮೇಲೆ ಬೋರ್ಡನ್ನು ಇಟ್ಟು ನಿಧಾನವಾಗಿ ಮೊದಲನೇ ಮೊಳೆ ಹೊಡೆದರು. ಎರಡನೇ ಮೊಳೆ ಹೊಡೆಯುತ್ತಿದ್ದಂತೆ ಸರೀಮಧ್ಯಕ್ಕೆ ಸೀಳಿಕೊಂಡಿತು. ಬೈಗುಳ, ಸಲಹೆಗಳು ಮುಂದುವರಿದವು. ಪ್ರಯತ್ನಿಸಿದಷ್ಟೂ ಸೀಳುವಿಕೆ ಜಾಸ್ತಿಯಾಗುತ್ತಾ ಹೋಯ್ತು. `ಅತ್ಲಾಗಿ ಬಿಟ್ಬುಡ್ರಲಾ ಅದನ್ನ, ಇನ್ನೊಂದ್ ಹಲಗೆ ತಂದು ಮೊದಲು ಮೊಳೆ ಹೊಡ್ಕೊಂಡು ಆಮೇಲೆ ಪೈಂಟ್ ಮಾಡಿ ಹೆಸ್ರು ಬರೀರಿ' ಎನ್ನುವ ಕುಮಾರಣ್ಣನ ಮಾತಿಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು.

ಮತ್ತೆ ಯಾರದೋ ಮನೆಯ ಅಟ್ಟದಿಂದ ಹಲಗೆ ಬಂತು. ಮೊದಲಿಗಿಂತ ಹೆಚ್ಚು ಎಚ್ಚರಿಕೆ. ಕೊನೆಗೂ ಬೋರ್ಡ್ ಸಿದ್ಧ ಆಯ್ತು. ಮೂರು ಗಂಟೆಗೆ ಶುರುವಾದ ಕೆಲಸ ಸಂಜೆ ಏಳರ ಹೊತ್ತಿಗೆ ಮುಗೀತು. ಬೋರ್ಡನ್ನು ಬುಡ್ಡಿ ದೀಪದ ಬೆಳಕಲ್ಲಿ ಕಣ್ತುಂಬಿಕೊಂಡೆವು. ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎನ್ನುವ ಅನುಮಾನ. ಬೋರ್ಡ್ ಹಾಕುವ ಮಾರ್ಗದಲ್ಲಿಯೇ ಕೆಲವರು ಹಾದು ಹೋದರು. ಅವರು ಬೋರ್ಡನ್ನು ದುರುಗುಟ್ಟಿಕೊಂಡು ನೋಡಿದ್ದು ಗೊತ್ತಾಯಿತು.

ಇದನ್ನು ಗಮನಿಸಿಯೂ ಗಮನಿಸದಂತೆ ನಮ್ಮ ಕೆಲಸಗಳಲ್ಲಿ ಮಗ್ನರಾದೆವು. ಏಕೋ ಅಲ್ಲಿದ್ದವರಿಗೆಲ್ಲಾ ಎಲ್ಲಿ ಇದನ್ನು ಕಿತ್ತು ಹಾಕುತ್ತಾರೋ ಎನ್ನುವ ಆತಂಕ. ಆದರೂ ನಮ್ಮ ಕೇರಿಯಲ್ಲೇ ಹಾಕಿಕೊಂಡಿದ್ದರಿಂದ ಉಳಿದವರೇಕೆ ತಗಾದೆ ತೆಗೆಯುತ್ತಾರೆ ಎನ್ನುವ ಸಮಾಧಾನವಿತ್ತು. ಕಂಬಗಳನ್ನು ಗಟ್ಟಿಯಾಗಿ ಕಲ್ಲು ಜಡಿದು ನೆಟ್ಟೆವು. `ಇದನ್ನು ಯಾವನೂ ಅಲ್ಲಾಡಿಸುವುದಕ್ಕೆ ಆಗಲ್ಲ' ಎಂದು ಮಾತನಾಡಿಕೊಂಡೆವು. ಬೋರ್ಡನ್ನು ಮತ್ತೆ ಮತ್ತೆ ಕಣ್ಣು ತುಂಬಿಕೊಂಡೆವು. ಒಂದು ಹೂವಿನ ಹಾರವಿದ್ದಿದ್ದರೆ.... ಅನ್ನಿಸಿತ್ತಾದರೂ ಹಳ್ಳಿಯಲ್ಲಿ ಹಾರ ಎಲ್ಲಿ ಸಿಗಬೇಕು?

ರಾತ್ರಿಯೆಲ್ಲಾ ಬೋರ್ಡೇ ಕಣ್ಣು ತುಂಬಿಕೊಂಡಿತ್ತು. ಎಷ್ಟೊತ್ತಿಗೆ ಬೆಳಗಾಗುತ್ತೋ... ಆ ಬೋರ್ಡನ್ನು ಎಷ್ಟೊತ್ತಿಗೆ ನೋಡುತ್ತೇನೋ ಎಂದು ನಿದ್ರೆಗೆ ಜಾರಿದೆ. ಆಗ ನನಗೊಂದು ಕನಸು ಬಿತ್ತು. ಬೋರ್ಡು ಹಾಕುವಾಗ ನಮ್ಮನ್ನು ದುರುಗುಟ್ಟಿಕೊಂಡು ನೋಡಿದವರು ನಾವೆಲ್ಲಾ ಅಲ್ಲಿದ್ದಂತೆಯೇ ಬೋರ್ಡನ್ನು ಕಿತ್ತುಹಾಕಲು ಪ್ರಯತ್ನಿಸುತ್ತಿದ್ದರು. ಎಷ್ಟೇ ತಡೆದರೂ, ಬೇಡಿಕೊಂಡರೂ ಬಿಡದೇ ಕೀಳಲು ಪ್ರಯತ್ನಿಸುತ್ತಿದ್ದರು.

ಹೀಗೆ ಮಾಡುತ್ತಿದ್ದಾಗ ಬೋರ್ಡ್, ಅದರ ಜೊತೆಗೆ ಕಂಬಗಳು ಇದ್ದಕ್ಕಿದ್ದಂತೆ ಮೇಲಕ್ಕೆ ಬಂದವು. ನಾವು ನೋಡನೋಡುತ್ತಿದ್ದಂತೆ ಬೋರ್ಡು ಅವರ ಕೈಯಿಂದ ಬಿಡಿಸಿಕೊಂಡು ಮೇಲಕ್ಕೆ ಹೋಗಿತ್ತು. ನಾವೆಲ್ಲಾ ಆಶ್ಚರ್ಯ ಸಂತೋಷದಿಂದ `ಓ ಓಹೋ' ಎಂದು ಕುಣಿದಾಡಿದೆವು. ಆಗ ಬೋರ್ಡು ಕೀಳಲು ಬಂದವರು ನಮ್ಮನ್ನು ಅಟ್ಟಿಸಿಕೊಂಡು ಬಂದರು. ತಕ್ಷಣ ಬೋರ್ಡು ತನ್ನ ಮೊದಲ ಸ್ಥಾನಕ್ಕೆ ಬಂದು ನಿಂತುಕೊಂಡಿತು.

ಮತ್ತೆ ಇವರು ಅದನ್ನು ಕೀಳಲು ಹೋದರು. ಬೋರ್ಡು ಮತ್ತೆ ಮೇಲಕ್ಕೆ ಹೋಯಿತು. ಮತ್ತೆ ನಾವು ಕೂಗಿದೆವು. ಮತ್ತೆ ಓಡಿಸಿಕೊಂಡು ಬಂದರು. ಹೀಗೆ ನಾಲ್ಕೈದು ಸಾರಿ ಆದ ಮೇಲೆ ಅವರಿಗೂ ಸುಸ್ತಾಗಿ, ಇವತ್ತಲ್ಲಾ ನಾಳೆ ನಿಮ್ಮನ್ನು ನೋಡ್ಕೊಳ್ತೀವಿ ಮಕ್ಳಾ? ಎಂದು ವಾಪಸ್ ಹೋದರು. ಮೇಲಕ್ಕೆ ಹೋದ ಬೋರ್ಡು ಆಕಾಶದಲ್ಲೇ ನಿಂತುಕೊಂಡಿತು. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಮತ್ತೆ ಮತ್ತೆ ನೋಡಿದೆವು. ಎಲ್ಲಿಂದ ನೋಡಿದರೂ ಯಾವ ಕಡೆಯಿಂದ ನೋಡಿದರೂ `ಅಂಬೇಡ್ಕರ್ ನಗರ' ಅಂತಲೇ ಕಾಣಿಸುತ್ತಿತ್ತು. `ಅಂಬೇಡ್ಕರ್ ನಗರ' ಎನ್ನುವುದು ನಮ್ಮ ಕೇರಿಯ ಮೇಲಲ್ಲಾ ನಮ್ಮ ಊರಿನ ಮೇಲೆಯೇ ನಿಂತಿದೆ ಅನ್ನಿಸಿತು. ಕನಸಿನಲ್ಲಿ ಸಂತೋಷವಾಗಿದ್ದ ನನ್ನನ್ನು ಅವ್ವ ಎಚ್ಚರಿಸಿದಳು. `ಹೇ ಸುಬ್ಬೂ ಸುಬ್ಬೂ. ಏನ್ ಕನಸಲ್ಲಿ ಇಷ್ಟು ಜೋರಾಗಿ ಮಾತಾಡ್ತಿದ್ದೀಯ' ಅಂದಳು.

ಮರುದಿನ ಬೆಳಗ್ಗೆ ಒಂದೇ ಸಮನೆ ರಾಮು ಬಾಗಿಲು ಬಡಿಯುತ್ತಾ ಕೂಗುತ್ತಿದ್ದ. ದಡಬಡನೆ ಎದ್ದು ಏನಾಯಿತೆಂದು ಕೇಳಿದೆ. ಬೋರ್ಡು ನಾಪತ್ತೆಯಾದದ್ದನ್ನೂ ಕೇರಿಯವರೆಲ್ಲ ಬಾವಿಕಟ್ಟೆ ಹತ್ತಿರ ಕುಳಿತಿದ್ದನ್ನೂ ಅವನು ವಿವರಿಸಿದ. ಅಲ್ಲಿ ಇನ್ನೂ ತೊಳೆಯದ ಎಲ್ಲರ ಮುಖ ಮತ್ತಷ್ಟು ಕಳೆಗುಂದಿತ್ತು.

ಅಂಗಡಿ ಕಡೆಯಿಂದ ಬರುತ್ತಿದ್ದ ಮೋರಿ ನಿಂಗ್‌ಮಾವ ಕೆಮ್ಮುತ್ತ ಕ್ಯಾಕರಿಸಿಕೊಂಡು, ನಮ್ಮ ಕಡೆ ನೋಡಿ, `ಕಾಲಲ್ಲಿ ನಡೀರ‌್ರಲಾ ಅಂದ್ರೆ ತಲೇಲ್ ನಡೀತೀರಾ. ಬೋಲ್ಡಂತೆ ಬೋಲ್ಡು. ಹಿಂಗೇ ಆಡ್ತಾ ಇರಿ. ಕೈಕಾಲ್ ಮುರ‌್ದು ಮೂಟೆ ಕಟ್ಟಿ ಕೂರಿಸ್ತಾರೆ. ನಿಮ್ ಬೋಲ್ಡನ್ನೆಲ್ಲಾ ಒಡೆದು ಸಿಗುದು ಸೌದೆ ಮಾಡ್ಕಂಡು ಹೋಟೆಲ್‌ನವರು ದೋಸೆ ಬೇಯಿಸ್ತಾವ್ರೆ. ಎಂಥದ್ದೋ ನಗರ‌್ವಂತೆ. ಬೋರ್ಡ್ ಹಾಕಿದೇಟ್ಗೆ ಕಾಲಕಾಲದಿಂದ ಬಂದ ಹೊಲಗೇರಿ ಪೇಟೆ ಆಗ್ಬುಡುತ್ತಾ' ಎಂದು ನಮ್ಮನ್ನು ಉಗಿಯುತ್ತಾ ಮನೆಕಡೆ ಹೋದರು.

ಬೇರೆಯವರಿಗೆ ಸಮಾಧಾನ ಹೇಳುವುದಕ್ಕಿಂತ ನಮಗೆ ನಾವೇ ಸಮಾಧಾನ ಮಾಡಿಕೊಂಡೆವು. ಒಳಗಿನ ಸಿಟ್ಟು ದುಃಖದ ಮೇಲೂ, ದುಃಖವು ಸಿಟ್ಟಿನ ಮೇಲೂ ಸವಾರಿ ಮಾಡುತ್ತಿದ್ದು ಹೊಟ್ಟೆಯಲ್ಲಿ ಏನೋ ಸಂಕಟವಾಗುತ್ತಿತ್ತು. ರಾತ್ರೆ ನಾನು ಕಂಡ ಕನಸನ್ನ ಇವರಿಗೆಲ್ಲಾ ಹೇಳಿ ಆಕಾಶದ ಕಡೆ ತೋರಿಸಿ `ನೋಡಿ ಅಂಬೇಡ್ಕರ್ ನಗರ ಅಂತ ಅಲ್ಲಿ ಕಾಣುತ್ತಿದೆ' ಅನ್ನಬೇಕು ಅನ್ನಿಸಿತ್ತು. ಎಲ್ಲಿ ನಗುತ್ತಾರೋ ಅಂತ ಸುಮ್ಮನಾದೆ. ಯಾರ ಎದೆಗಳಲ್ಲೂ ಮಾತು ಉಳಿದಿರಲಿಲ್ಲ. ಒಬ್ಬೊಬ್ಬರೇ ಜಾಗ ಬಿಟ್ಟರು. ರಾತ್ರೆ ಬೋರ್ಡ್ ಹಾಕಿದ್ದು ನಿಜವೋ ಸುಳ್ಳೋ ಎನ್ನುವಷ್ಟು ಖಾಲಿತನ ನಮ್ಮನ್ನೆಲ್ಲಾ ಆವರಿಸಿತ್ತು. ಆದರೆ, ಬೋರ್ಡ್ ಹಾಕಿದ ನಮ್ಮ ಕೈಗಳು ಮತ್ತು ಅದನ್ನು ನೋಡಿದ ಕಣ್ಣಿನಿಂದ `ಅಂಬೇಡ್ಕರ್ ನಗರ'ವನ್ನು ಯಾರೂ ಕಿತ್ತುಕೊಳ್ಳಲು ಆಗಲಿಲ್ಲ.

ಆನಂತರದ ದಿನಗಳಲ್ಲಿ ನಾವು `ಅಂಬೇಡ್ಕರ್ ನಗರ' ಅಂತ ಬೋರ್ಡ್ ಹಾಕಲು ಪ್ರಯತ್ನಿಸಲಿಲ್ಲ. ಕಾಲೇಜಿಗೆ ಬಂದಾಗ ಊರಿಗೆ ಪತ್ರ ಬರೀತಿದ್ದೆವು. ಆಗ `ಅಂಬೇಡ್ಕರ್ ನಗರ' ಅಂತಲೇ ವಿಳಾಸ ಕೊಡುತಿದ್ದೆವು. ಅಚ್ಚರಿ ಎಂಬಂತೆ ಪತ್ರಗಳು ಮನೆ ಸೇರುತ್ತಿದ್ದವು. ನಮ್ಮ ಕೇರಿಯಲ್ಲಿ ಈಗ ಒಂದು ಅಂತಸ್ತಿನ `ಅಂಬೇಡ್ಕರ್ ಭವನ' ನಿರ್ಮಾಣವಾಗುತ್ತಿದೆ. ಮಲೆನಾಡಿನ ಕಡೆಯ ನಮ್ಮ ಊರಿನಲ್ಲಿ ಬದಲಾವಣೆಯ ಹೊಸ ಗಾಳಿ ಬೀಸಿದೆ. ಚಳವಳಿ ಕಲಿಸಿದ ತಾಯ್ತನದ ಅರಿವು, ಅಂಬೇಡ್ಕರ್ ಹೆಸರಿನ ಆತ್ಮವಿಶ್ವಾಸದ ಶಿಕ್ಷಣದಿಂದ ನಮ್ಮೂರಿನ ಅನೇಕರು ವಿದ್ಯಾವಂತರಾಗಿ ಬದುಕುತ್ತಿದ್ದಾರೆ.

ಒಳ್ಳೆಯ ಉದ್ಯೋಗಗಳಲ್ಲಿದ್ದಾರೆ. ನಮ್ಮೂರಿನ ಉಳಿದ ಸಮುದಾಯದವರಿಗೂ ಶಿಕ್ಷಣ ದಾರಿದೀಪವಾಗಿದೆ. ಮನುಷ್ಯರ ನಡುವೆ ಪ್ರೀತಿಯಿದೆ ಎನ್ನುವ ಹೊಸ ಮಂತ್ರಕ್ಕೆ ತಲೆದೂಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಇದಕ್ಕೆ ಒಬ್ಬರಿಗೊಬ್ಬರು ಅಭಿನಂದನಾರ್ಹರು.

ದೇವನೂರ ಮಹಾದೇವ ಹೇಳಿದಂತೆ ಎಲ್ಲಾ ಬೀದಿಗಳಿಂದಲೂ ಪುಟ್ಟ ಪುಟ್ಟ ಅಂಬೇಡ್ಕರ್ ಹುಟ್ಟಿ ಬೆಳೆಯುತ್ತಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಕನಸುಗಳನ್ನು ಇನ್ನಷ್ಟು ಚಿಗುರಿಸಲು ಮತ್ತೆ ಮತ್ತೆ ಕನಸು ಕಾಣಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT