ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ನಿರ್ಮಿಸಲು ಸೂಚನೆ

Last Updated 11 ಜನವರಿ 2012, 8:05 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ನಿರ್ಮಿಸಬೇಕು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಸ್ಮಶಾನ ಸಮಸ್ಯೆ ಕುರಿತಂತೆ ನಡೆದ ಅಧಿಕಾರಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಒಟ್ಟು 171 ಗ್ರಾಮಗಳಿವೆ. ಈ ಪೈಕಿ 26 ಬೇಚರಾಕ್ ಗ್ರಾಮಗಳು, 146 ಚರಾಕ್ ಗ್ರಾಮಗಳು. 146ರ ಪೈಕಿ 67 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇದೆ. 79ರಲ್ಲಿ ಇಲ್ಲ. ಇದರಲ್ಲಿ 65 ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಸರ್ಕಾರಿ ಜಮೀನು ಲಭ್ಯ ಇದೆ.
 
ಇನ್ನುಳಿದ 12 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲ. 12ರಲ್ಲಿ 7 ಗ್ರಾಮಗಳ ಜನರು ಸ್ಮಶಾನಕ್ಕೆ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಉಳಿದ 5 ಗ್ರಾಮಗಳಲ್ಲಿ ಭೂಸ್ವಾದೀನ ಪ್ರಕ್ರಿಯೆ ಮೂಲಕ ಸ್ಮಶಾನಕ್ಕೆ ಜಮೀನು ವಶಪಡಿಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಎಪಿಎಂಸಿ ಅಧ್ಯಕ್ಷ ಡಿ.ಜಿ. ಸೋಮಶೇಖರಪ್ಪ ಮಾತನಾಡಿ, ಶಿವಮೊಗ್ಗ-ಶಿಕಾರಿಪುರಗಳಲ್ಲಿ 75 ಮತ್ತು 100ಕೆಜಿ ಬತ್ತದ ಚೀಲಗಳನ್ನು ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುತ್ತದೆ. ಆದರೆ, ಹೊನ್ನಾಳಿಯಲ್ಲಿ 50ಕೆಜಿ ಚೀಲಗಳಲ್ಲಿ ಖರೀದಿಸಲಾಗುತ್ತದೆ. ಜ್ಯೋತಿ ಭತ್ತವನ್ನು ಖರೀದಿಸುತ್ತಿಲ್ಲ. ಈ ತಾರತಮ್ಯವನ್ನು ಒಂದು ವಾರದೊಳಗೆ ಸರಿಪಡಿಸದಿದ್ದರೆ, ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಬತ್ತ ಸುರಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಉತ್ತರಿಸಿದ ಪಟ್ಟಣಶೆಟ್ಟಿ, ರಾಜ್ಯ ಆಹಾರ ನಿಗಮದ ಆದೇಶದಂತೆ ಜಿಲ್ಲೆಯಲ್ಲಿ 50ಕೆಜಿ ತೂಕದ ಚೀಲಗಳಲ್ಲಿ ಖರೀದಿಸಲಾಗುತ್ತಿದೆ ಎಂದರು.

ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ವಿಶೇಷ ಆದೇಶದ ಮೂಲಕ ಹೊನ್ನಾಳಿಯಲ್ಲೂ 75 ಮತ್ತು 100ಕೆಜಿ ಬತ್ತದ ಚೀಲಗಳನ್ನು ಹಾಗೂ ಜ್ಯೋತಿ ಬತ್ತವನ್ನೂ ಖರೀದಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ತಾಲ್ಲೂಕಿನ ಕೊನೆಯ ಭಾಗದ ಗ್ರಾಮಗಳಾದ ಸವಳಂಗ, ಚಿನ್ನಿಕಟ್ಟೆ, ಜೋಗ ಇತರ ಗ್ರಾಮಗಳ ಜನತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕಾಲದಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ತಮ್ಮ ಬಳಿ ದೂರಿದ್ದಾರೆ. ಇದನ್ನು ಸರಿಪಡಿಸಿ, ದಕ್ಷತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ-ಉಪ ವಿಭಾಗಾಧಿಕಾರಿಗೆ ಸೂಚಿಸಿದರು.

ಉಪ ವಿಭಾಗಾಧಿಕಾರಿ ಮಹಾಂತೇಶ್ ಬೀಳಗಿ, ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಮಲ್ಲಿಕಾರ್ಜುನ್  ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT