ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ವರ್ಗದ ಹಿತಕಾಯುವ ಜೆಡಿಎಸ್

ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿಕೆ
Last Updated 25 ಏಪ್ರಿಲ್ 2013, 9:39 IST
ಅಕ್ಷರ ಗಾತ್ರ

ಹಿರಿಯೂರು: ರಾಜಕೀಯ ವಿರೋಧಿಗಳು ಜೆಡಿಎಸ್ ಅನ್ನು ಅಪ್ಪ-ಮಕ್ಕಳ ಪಕ್ಷ ಎಂದ ಅಪಪ್ರಚಾರ ನಡೆಸುತ್ತಿದ್ದು, ನಮ್ಮ ಪಕ್ಷ  ಬಡವರ, ಅಲ್ಪಸಂಖ್ಯಾತರ, ಜನಸಾಮಾನ್ಯರ ಪ್ರತಿನಿಧಿಸುವ, ಎಲ್ಲ ಜಾತಿ-ವರ್ಗದ ಹಿತಕಾಯುವ ಪಕ್ಷ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬಲವಾಗಿ ಸಮರ್ಥಿಸಿಕೊಂಡರು.

ತಾಲ್ಲೂಕಿನ ರಂಗನಾಥಪುರ ಗ್ರಾಮದಲ್ಲಿ ಬುಧವಾರ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿರುವ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್ ಅವರನ್ನು ನಾನು ಬೆಳೆಸಿದೆ. ಆದರೆ, ಅವರೆಲ್ಲ ಪಕ್ಷ ತೊರೆದು ಹೋದರು. ಕಾವೇರಿ ನೀರಿನ ಹೋರಾಟದಲ್ಲಿ ರಾಜ್ಯದ ಸಂಸದರು ನನ್ನ ಜತೆ ಸಹಕರಿಸಲಿಲ್ಲ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೇಂದ್ರ ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ.

ಹೀಗಾಗಿ, ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಮಾಡಿದೆ. ರಾಜಕೀಯ ಕಾರಣಕ್ಕೆ ನಾಡಿನ ನೆಲ-ಜಲ ಕೈತಪ್ಪುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅವರು ಹೇಳಿದರು.

ಬಯಲುಸೀಮೆಯ ಜನರ ನೀರಿನ ಹಾಗೂ ಇತರ ಸಮಸ್ಯೆಗಳ ಅರಿವು ಇದ್ದು, ಸೂಕ್ತ ಕಾಲದಲ್ಲಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಲಾಗುವುದು. ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಯಾದವರು- ಒಕ್ಕಲಿಗರು ಒಗ್ಗಟ್ಟಾಗಿರುವುದು ರಾಜಕೀಯ ವಿಚಾರದಲ್ಲಿ ಕಾಣುತ್ತಿರುವ ಮಹತ್ತರ ಬದಲಾವಣೆ ಎಂದರು.

ಹಿರಿಯೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಎ. ಕೃಷ್ಣಪ್ಪ, ಎನ್.ಆರ್. ಲಕ್ಷ್ಮೀಕಾಂತ್, ಸುಮೇರ್‌ಮಲ್‌ಷಾ, ಡಿ. ಯಶೋಧರ, ಶಿವಪ್ರಸಾದಗೌಡ, ಕೆ. ಶಂಕರಮೂರ್ತಿ, ಎಸ್. ಗಿರಿಜಪ್ಪ,ಕೆ. ವಿಶ್ವನಾಥ್, ಎಂ.ಓ. ಮಂಜುನಾಥ್, ಎಚ್. ವೆಂಕಟೇಶ್, ಎಚ್.ಆರ್. ತಿಮ್ಮಯ್ಯ, ಪಿಟ್ಲಾಲಿ ಕರಿಬಸಣ್ಣ, ಜೆ.ಆರ್. ಸುಜಾತಾ ಮತ್ತಿತರರು ಹಾಜರಿದ್ದರು.

ಜೆಡಿಎಸ್‌ಗೆ ಸೇರ್ಪಡೆ: ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಆರ್. ಗೋಪಾಲ್, ಕೃಷಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ. ಉಗ್ರಮೂರ್ತಿ, ಎಂ.ಓ. ಮಂಜುನಾಥ್, ಮೂಡಲಗಿರಿಯಪ್ಪ, ಮೂರ್ತಿ, ರಾಜಪ್ಪ, ಚಂದ್ರಪ್ಪ, ಹನುಮಂತಪ್ಪ, ತಿಪ್ಪಣ್ಣ ಮತ್ತಿತರರು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT