ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಶಿವಮಯವು

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪಾಳಿ ಮೇಲೆ ಪಾಳಿ... ಕರೆಂಟಿಲ್ಲದ ರಾತ್ರಿಗಳ ದೆಸೆಯಿಂದ ನಸುಕಿನ ಪಾಳಿಗೆಂದು ಬಂದ ಬಡಪಾಯಿಯನ್ನು ಮತ್ತೆ ಮತ್ತೆ ಬೆನ್ನಟ್ಟಿ ಬರುವ ಪಾಳಿ... ಮಾಸಾಂತ್ಯದಲ್ಲಿ ವೇತನದ ವಿವರದೊಂದಿಗೆ `ಹೆಚ್ಚುವರಿ ಕೆಲಸ~ದ ಬಾಬತ್ತಿನಲ್ಲಿ ಒಂದಿಷ್ಟು ಅಧಿಕ ಮೊತ್ತ ಜಮಾ ಆಗುವ ಖುಷಿಗೆ ನಿದ್ದೆಯನ್ನು ಒದ್ದೊದ್ದು ಓಡಿಸುವ ಕಾಯಕಯೋಗಿಗಳು...

ಕಾರ್ಪೊರೇಟ್ ಜಗತ್ತೆಂಬೋ ನಿದ್ರಾವಿಹೀನರ ಆಡುಂಬೊಲದಲ್ಲಿ ದಿನದಿನವೂ ಶಿವರಾತ್ರಿ! ಹೈ ಫ್ಯಾಷನ್‌ವಾಲಾರ ಸಂತೆಯಾಗಿ ಕಾಣುವ ಬೆಂಗಳೂರು ಧಾರ್ಮಿಕತೆಯ ಫ್ರೇಮಿನಲ್ಲಿ ಕಾಣುವ ಬಗೆಯೇ ಬೇರೆ.
 

ಮಹಾಶಿವರಾತ್ರಿಗೆಂದು ಭಾನುವಾರದಿಂದಲೇ ಹೂಗಳ ಅಟ್ಟೆಯೊಂದಿಗೆ ಗುಡ್ಡೆಬೀಳುವ ಬಿಲ್ವಪತ್ರೆ, ತುಳಸೀಹಾರದ ಕಂತೆಗಳು, ರುದ್ರಾಕ್ಷಿಗೆ ಕುದುರಿದ ಬೇಡಿಕೆ, ಶಿವಾಲಯಗಳ ಮುಂದೆ ಭಕ್ತಗಡಣ, ದೇವರಮನೆಯಲ್ಲೂ ಶುಚಿಗೊಂಡು ಕುಳಿತ ಶಿವನ ಫೋಟೊ, ಇಷ್ಟಲಿಂಗ,  ಸಾಲಿಗ್ರಾಮ..., ವಿಭೂತಿ ಬಿಲ್ಲೆ... ಶಿವಸ್ತೋತ್ರ ಪಠಣಕ್ಕೆ ತಲೆ ತುಂಬಾ ಸೆರಗು ಹೊದ್ದು ಕ್ಷಣಗಣನೆ ಮಾಡುತ್ತಿರುವ ಪತಿ-ಪತ್ನಿ.

ಸೋಮವಾರ ಮಧ್ಯಾಹ್ನದ ಪಾಳಿಗೆ ಹೋಗಬೇಕಾದ ಸಿಟಿ ಹೆಣ್ಣು ಮಗಳು, ರಾತ್ರಿ ಪಾಳಿಗೆ ಹೊರಡುವ ಮುನ್ನ ಶಿವಪೂಜೆಯನ್ನೂ, ಹಬ್ಬದ ಭೋಜನವನ್ನೂ ತಯಾರಿಸುವ ಉತ್ಸಾಹದಲ್ಲಿದ್ದಾಳೆ.
 

ರಾತ್ರಿ ಎರಡು ಗಂಟೆಗೆ ಮುಗಿಯುವ ಪಾಳಿ ಮುಗಿಸಿ ಮನೆಗೆ ಮರಳುವ ವೇಳೆಗೆ ಪಕ್ಕದ ಶಿವಗುಡಿಯಲ್ಲಿ ಮೊದಲ ಜಾಮದ ಪೂಜೆಗೆ ಸಿದ್ಧತೆಯಾಗಿರುತ್ತದೆ. ಮನೆಗೆ ಬಂದವಳೇ ಸ್ನಾನ ಮಾಡಿ ಮನೆ ಮಂದಿಯೊಂದಿಗೆ ಶಿವಗುಡಿಗೆ ಧಾವಿಸುವ ಯೋಜನೆ ಮಾಡಿದ್ದಾಳೆ. ಹೀಗಾಗಿ, ನೆನೆಸಿ ಒಗ್ಗರಣೆ ಹಾಕಿದ ಸಬ್ಬಕ್ಕಿಯಿಂದ ಮಾಡಿದ
 

`ಸಾಬೂದಾನಿ~, ಕೆಂಪುಗೆಣಸು, ಬಾಳೆಹಣ್ಣು, ಹಾಲು, ಖರ್ಜೂರ, ಶೇಂಗಾ ಉಂಡೆ, ಸಸ್ಯಾಹಾರಿ ಭೋಜನ ಸಿದ್ಧಪಡಿಸುವ ಭರಾಟೆಯಲ್ಲಿದ್ದಾಳೆ. ಮನೆ-ಕಚೇರಿಯೆಂಬ ಎರಡು ದೋಣಿಗಳ ಪಯಣಿಗಳಿಗೆ ಒಳಗೂ ಹೊರಗೂ ಕಾಯಕವೇ ಕೈಲಾಸ...

ಶಿವರಾತ್ರಿ ಸಂಪನ್ನವಾಗಬೇಕೆಂದರೆ ಶಿವಧ್ಯಾನದಲ್ಲಿ ರಾತ್ರಿ ಜಾಗರಣೆ ಮಾಡಬೇಕು ಎಂಬುದು ಶಿವರಾತ್ರಿಯ ಹಿಂದಿನ ಶಿಸ್ತು. ಬೆಂಗಳೂರಿನ ಬದುಕಿನಲ್ಲಿ ಅದು ಸಾಧ್ಯವೇ? ಶಿವರಾತ್ರಿಯೆಂಬುದನ್ನು ಮರೆಯೋದುಂಟೇ? ಆದರೂ ಜಾಗರಣೆ ಓಕೆ, ಶಿವಧ್ಯಾನವೇ ಯಾಕೆ? ಎಂಬುದು ಸಮಕಾಲೀನ ಮಂತ್ರ... ಹೊಂದಾಣಿಕೆಯ ತಂತ್ರ!

ಸರಿ ಹಾಗಿದ್ದರೆ, ಜಾಗರಣೆಗೆ ಹತ್ತಾರು ಹಾದಿ. ಹೊನಲು ಬೆಳಕಿನಲ್ಲಿ ಕ್ರಿಕೆಟ್ಟೋ, ಫುಟ್‌ಬಾಲೋ, ಎತ್ತುಗಳ ಓಟವೋ, ಯಕ್ಷಗಾನವೋ, ನಗೆನಾಟಕವೋ, ಸಾಂಸ್ಕೃತಿಕ ಉತ್ಸವವೋ?

ನಗೆ ಜಾಗರಣೆಯ ಮೂಲಕ ಸಿಲಿಕಾನ್ ಸಿಟಿಯ ಉದ್ದಗಲಕ್ಕೂ ನಗೆಹೊನಲು ಹರಿಸುವ ಹಾಸ್ಯೋತ್ಸವ, ನೆನಪಲ್ಲೇ ಕಚಗುಳಿಯಿಡುತ್ತದೆ. ಅಯ್ಯೋ, ಅದಕ್ಕೇನು ಅಲ್ಲಿಗೇ ಹೋಗಬೇಕಾಗಿಲ್ಲ, ಟೀವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಇದ್ದೇ ಇರುತ್ತದೆ. ಇಲ್ಲೇ ಕುಳಿತು ನೋಡಿದರಾಯಿತು ಬಿಡಿ ಎಂದು ಲೆಕ್ಕಾಚಾರ ಹಾಕುತ್ತಾರೆ ಮತ್ತೊಬ್ಬ ಶಿವಭಕ್ತ. ಅದೂ ಸರಿಯೇ, ಆಯಾ ಜಾಮದ ಪೂಜೆ ಮಾಡುತ್ತಲೇ, ನಗು ನಗುತ್ತಾ ಜಾಗರಣೆ ಮಾಡೋಣ ಎನ್ನುತ್ತದೆ ಹಿರಿಜೀವ.
 

ಶಿವನ ಸಂತೃಪ್ತಿಯೇ ಎಲ್ಲರ ಉದ್ದೇಶ. ಅದಕ್ಕೆ ಎಷ್ಟೊಂದು ಪರದಾಟ. ಆದರೆ ಇಲ್ಲೊಬ್ಬನಿದ್ದಾನೆ- ಶಿವನನ್ನು ಒಲಿಸಿಕೊಳ್ಳಲು ಉಪವಾಸ, ಜಾಗರಣೆ, ಪೂಜೆ, ಧ್ಯಾನವೇ ಬೇಕಿಲ್ಲ. ಏನಾದರೊಂದು ಉಪಕಾರದ ಕೆಲಸವನ್ನು ಮನಃಪೂರ್ವಕ ಮಾಡಿದರೂ ಶಿವ ಮೆಚ್ಚುತ್ತಾನೆ ಎಂಬುದು ಅವನ ನಂಬಿಕೆ. ಅದಕ್ಕವನು ಕಂಡುಕೊಂಡ ದಾರಿ

ಬಿಲ್ವಪತ್ರೆಯ ಉಚಿತ ವಿತರಣೆ. ಶಿವರಾತ್ರಿಯಂದು ಬಿಲ್ವಪತ್ರೆಗೆ ಇನ್ನಿಲ್ಲದಷ್ಟು ಬೇಡಿಕೆ. ಹೇಳಿದ ಮೊತ್ತ ಕೊಟ್ಟು ಕೊಳ್ಳದೇ ವಿಧಿಯಿಲ್ಲ. ಅಂತಿರುವಾಗ, ಮನೆ ಮನೆಯ ಗೇಟಿನ ಮುಂದೆ ನಿಂತು ಬಿಲ್ವಪತ್ರೆ ತಗೊಳ್ಳಿ ಅಮ್ಮಾ ಅಂತ ವಿನಯದಿಂದ ಕರೆದು ದೊಡ್ಡ ಗೋಣಿಚೀಲ ಖಾಲಿ ಮಾಡಿ ಪ್ರಫುಲ್ಲ ಮನಸ್ಸಿನಿಂದ ಮನೆ ಹಾದಿ ಹಿಡಿಯುವ ಆ ಶಿವಭಕ್ತ, ವಿಜಯನಗರದ ಬಂಟರ ಸಂಘದ ಆಸುಪಾಸಿನಲ್ಲಿ ಪ್ರತಿವರ್ಷವೂ ಬಿಲ್ವಪತ್ರೆ ಹಂಚಿ ಖುಷಿಪಡುತ್ತಾನೆ. ಶಿವಾರ್ಪಣಮಸ್ತು!

`ಶಿವನೆಂದರೆ ನನಗೆ ಪಂಚಪ್ರಾಣ. ದೇವರನ್ನೇ ನಂಬದಿದ್ದ ನನಗೆ ಅತ್ಯಂತ ಸಂಕಷ್ಟದ ದಿನಗಳಿಂದ ಮುಕ್ತಿ ದೊರಕಿದ್ದು ಯಾರದೋ ಮಾತಿಗೆ ಕಟ್ಟುಬಿದ್ದು ಶಿವನ ಕ್ಯಾಲೆಂಡರ್ ತಂದು ಗಂಧದಕಡ್ಡಿ ಹಚ್ಚಿ ನನಗೆ ತೋಚಿದಂತೆ ಪೂಜೆ ಮಾಡಲು ಶುರುಮಾಡಿದ ಮೇಲೆ.
 

ಈಗ ಶಿವರಾತ್ರಿಯಂದು ಹಾಸ್ಟೆಲ್ ಮಕ್ಕಳಿಗೆಲ್ಲ ಬೆಲ್ಲದ ಅವಲಕ್ಕಿ ಮತ್ತು ಏನಾದರೊಂದು ಸಿಹಿತಿನಿಸು ಹಂಚುತ್ತೇನೆ. ಹತ್ತು ರೂಪಾಯಿಗೂ ಪರದಾಡುತ್ತಿದ್ದ ನಾನು ಇವತ್ತು ಮಗಳಿಗಾಗಿ ಎರಡು ಲಕ್ಷದ ಜೀವವಿಮೆ ಮಾಡಿಸಿದ್ದೇನೆ.
 

ಇದು ಸಾಧ್ಯವಾದುದು ಶಿವನಿಂದ~ ಎಂದು ವಿನೀತಭಾವದಿಂದ ನುಡಿಯುತ್ತಾಳೆ ಮಹಿಳಾ ವಸತಿ ನಿಲಯವೊಂದರಲ್ಲಿ ಕೆಲಸ ಮಾಡುವ ಅರುಣಾ. ಅವಳಂತೆ ಕಷ್ಟವನ್ನೂ ಸುಖವನ್ನೂ ಸಮರ್ಪಣಾ ಭಾವದಿಂದ ಶಿವಾರ್ಪಣವೆಂದು ಬದುಕುತ್ತಿರುವ ಜೀವಗಳೆಷ್ಟೋ.
ಎಲ್ಲಾ ಶಿವಮಯವೂ...!

 ಚಿತ್ರಗಳು: ಮೀರಾ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT