ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಮೊಳಗಿದ ಪಂಚಾಕ್ಷರ ಮಂತ್ರ

Last Updated 21 ಫೆಬ್ರುವರಿ 2012, 6:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಓಂ ನಮಃ ಶಿವಾಯ, ಶಿವಾಯನಮಃ... ಹೀಗೆ ಶಿವನ ಕುರಿತು ಷಡಕ್ಷರಿ ಹಾಗೂ ಪಂಚಾಕ್ಷರಿ ಮಂತ್ರ ನಗರದ ಶಿವನ ದೇವಸ್ಥಾನಗಳಲ್ಲಿ ಸೋಮವಾರ ಮೊಳಗಿತು.

ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿಯ ಈಶ್ವರ ದೇವಸ್ಥಾನ, ಸಿದ್ಧಾರೂಢಮಠದಲ್ಲಿಯ ಅಮೃತಶಿಲೆ ಶಿವಲಿಂಗ, ವಿದ್ಯಾನಗರದ ಜಯನಗರದ ಬಡಾವಣೆಯಲ್ಲಿಯ ಶಿವಮಂದಿರದಲ್ಲಿಯ ಶಿವಲಿಂಗಕ್ಕೆ ಕ್ಷೀರಾಭಿಷೇಕ ನಡೆದವು.

ಎರಡು ಶಿವಲಿಂಗ ಹಾಗೂ ನಂದಿ ಒಟ್ಟಿಗಿರುವ ಅಪರೂಪದ ಹುಬ್ಬಳ್ಳಿಯ ಉಣಕಲ್ಲದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಯಿತು. ಬಿಲ್ವಪತ್ರೆ ಹಾಗೂ ಎಕ್ಕಿ ಹೂವುಗಳನ್ನು ಅರ್ಪಿಸಿ ನಂತರ ಉತ್ರಾಣಿ ಕಡ್ಡಿಗಳಿಂದ ದೀಪ ಬೆಳಗಿದರು. ನಂತರ ಕರ್ಜೂರ, ಅಳಿಟ್ಟು, ಬಾಳೆಹಣ್ಣು, ದಾಕ್ಷಿ, ನೆನೆಸಿದ ಕಡ್ಲಿ ಹಾಗೂ ಶೇಂಗಾವನ್ನು ನೈವೇದ್ಯ ಮಾಡಿದರು.

ದೀಡ ನಮಸ್ಕಾರ: ಈ ಬಾರಿ ಸೋಮವಾರ ಶಿವರಾತ್ರಿ ಬಂದುದರಿಂದ ಹೆಚ್ಚಿನ ಭಕ್ತಿಯಿಂದ ಜನರು ಆಚರಿಸಿದರು. ಅದರಲ್ಲೂ ನಗರದ ಸಿದ್ಧಾರೂಢಮಠದಲ್ಲಿ ನೆರೆದಿದ್ದ ಭಕ್ತರ ಸಂಖ್ಯೆ ಅಪಾರ. ಪ್ರತಿ ಸೋಮವಾರಕ್ಕೊಮ್ಮೆ ಉಭಯ ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆಯುವ ಭಕ್ತರ ಜೊತೆಗೆ ಸಿದ್ಧಾರೂಢ ಸ್ವಾಮಿಯ 175ನೇ ಜಯಂತ್ಯುತ್ಸುವ ಹಾಗೂ ಗುರುನಾಥಾರೂಢರ ಜನ್ಮ ಶತಮಾನೋತ್ಸವ ಅಂಗವಾಗಿ ವಿಶ್ವ ವೇದಾಂತ ಪರಿಷತ್‌ನಲ್ಲಿ ಭಾಗವಹಿಸಲು ಬಂದವರೂ ಅಸಂಖ್ಯ.
 
ಇದರೊಂದಿಗೆ ಮಂಗಳವಾರ ಜರುಗುವ ರಥೋತ್ಸವದಲ್ಲಿ ಪಾಲ್ಗೊಳ್ಳ ರಾಜ್ಯದಾದ್ಯಂತ ಬಂದವರ ಜೊತೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಹಾಗೂ ಗೋವಾ ರಾಜ್ಯಗಳ ಭಕ್ತರೂ ಆಗಮಿಸಿದ್ದರು. ಇವರಲ್ಲಿ ಗುಲ್ಬರ್ಗ ಜಿಲ್ಲೆಯ ಆಳಂದದಿಂದ ಆಗಮಿಸಿದ ಭಕ್ತರು ಸಿದ್ಧಾರೂಢಮಠದ ಆವರಣದಲ್ಲಿ ದೀಡ ನಮಸ್ಕಾರ ಹಾಕಿದರು.

ಗಂಗಾಜಲ: ಶಿವರಾತ್ರಿ ಪ್ರಯುಕ್ತ ರಾಜ್ಯ ಸರ್ಕಾರ ನೀಡಿದ ಪವಿತ್ರ ಗಂಗಾಜಲವು ಜಿಲ್ಲಾಧಿಕಾರಿಗಳ ಮೂಲಕ ಹಳೆಹುಬ್ಬಳ್ಳಿಯ ಜಡೆಯ ಶಂಕರಲಿಂಗ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ಬಂತು.

ಭಕ್ತರು ಗಂಗಾಜಲವನ್ನು ಸ್ವೀಕರಿಸಿ, ಶಂಕರಲಿಂಗ ದರ್ಶನ ಪಡೆದರು. ಇದರೊಂದಿಗೆ ಗೋಕುಲ ರಸ್ತೆಯಲ್ಲಿನ ಶಿವಪುರ ಕಾಲೊನಿಯ ಉದ್ಯಾನದಲ್ಲಿ ನಿರ್ಮಿಸಿದ ಬೃಹತ್ ಶಿವನ ಮೂರ್ತಿಗೆ ಪಂಚಾಮೃತಾಭಿಷೇಕ, ಮಹಾ ಅಭಿಷೇಕ ಹಾಗೂ ಮಂಗಳಾರತಿ ನಡೆದವು. ಸಂಜೆ ಸಚಿವ ಜಗದೀಶ ಶೆಟ್ಟರ ಜಲಾಭಿಷೇಕ ಮಾಡಿ, ದೀಪ ಬೆಳಗಿಸಿ ಭಕ್ತಾದಿಗಳಿಗೆ ಹಿತವಚನ ನೀಡಿದರು.

ಶಾಂತಿಯಾತ್ರೆ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಯವು ಶಿವರಾತ್ರಿ ಅಂಗವಾಗಿ 50 ಜ್ಯೋತಿರ್ಲಿಂಗ ಶಾಂತಿಯಾತ್ರೆಯನ್ನು ನಗರದಲ್ಲಿ ಏರ್ಪಡಿಸಿತ್ತು. ನಗರದ ಬಂಕಾಪುರ ಚೌಕದಿಂದ ಜೆ.ಸಿ. ನಗರದವರೆಗೆ ನಡೆದ ಶಾಂತಿಯಾತ್ರೆಯಲ್ಲಿ ನೂರಾರು ಬ್ರಹ್ಮಕುಮಾರಿ ಸೋದರ-ಸೋದರಿಯರು ಭಾಗವಹಿಸಿದ್ದರು.
ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಭಜನೆ ಮೂಲಕ ಜಾಗರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT