ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಶಾಂತಿದೂತನ ಸ್ಮರಣೆ

Last Updated 24 ಏಪ್ರಿಲ್ 2013, 10:35 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಜೈನ ಸಮುದಾಯದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.

ಜಯಂತಿ ಅಂಗವಾಗಿ ನಗರದ ಲಕ್ಷ್ಮೀಬಜಾರ್ ರಸ್ತೆಯಲ್ಲಿರುವ ಜೈನ್ ದೇವಸ್ಥಾನದಿಂದ ಮಹಾವೀರ ವೃತ್ತ, ದೊಡ್ಡಪೇಟೆಯಲ್ಲಿರುವ ಹಳೇ ಜೈನ್ ದೇವಾಲಯ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಹಾವೀರರ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ನಗರದ ಜೋಗಿಮಟ್ಟಿ ರಸ್ತೆಯ 7ನೇ ತಿರುವಿನ ಪದ್ಮಾಂಬಾ ನಿಲಯದಲ್ಲಿ ಮಂಗಳವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮಹಾವೀರ ಅವರ ಜನ್ಮ ಕಲ್ಯಾಣ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು.

1,008 ಪಾರ್ಶ್ವನಾಥಸ್ವಾಮಿ ಪದ್ಮಾವತಿ ದೇವಿ ದಿಗಂಬರ ಜೈನ ಸಂಘ ಹಾಗೂ ಭಾರತೀಯ ಜೈನ ಮಿಲನ್ ಮತ್ತು ದಿಗಂಬರ ಜೈನ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳು ಜರುಗಿದವು.

`ಅಹಿಂಸಾ ಮೂರ್ತಿಗೆ ನಮನ'
ಹಿರಿಯೂರು: ಅಹಿಂಸೆಯೇ ಶ್ರೇಷ್ಠ ಧರ್ಮ ಎಂದು ಜಗತ್ತಿಗೆ ಮೊದಲು ಸಾರಿದವರು ಭಗವಾನ್ ಮಹಾವೀರ. ಹಿಂಸೆ-ಕ್ರೌರ್ಯ ತಾಂಡವ ವಾಡುತ್ತಿರುವ ಜಗತ್ತಿನಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಮಹಾವೀರರ ಬೋಧನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾವೀರ ದಿಗಂಬರ ಜೈನ ಸಂಘದ  ಮುಖಂಡ ಮಹಾವೀರ್ ಜೈನ್ ಕರೆ ನೀಡಿದರು.

ನಗರದ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಗ್ರಾಮಸ್ಥರು ಹಾಗೂ ಮಹಾವೀರ ದಿಗಂಬರ ಜೈನ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಹಾವೀರರ 2,612ನೇ ಜಯಂತಿಯಲ್ಲಿ  ಅವರು ಮಾತನಾಡಿದರು.

ಜೈನರಲ್ಲಿ ತೀರ್ಥಂಕರರಾದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ನೆರೆ ಹೊರೆಯವರನ್ನು ಪ್ರೀತಿಸುವ, ದ್ವೇಷಕ್ಕೆ ಬದಲು ಪ್ರೀತಿಯನ್ನು ಕೊಡುವ ಗುಣವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ತ್ಯಾಗದಿಂದ ಸುಖ, ಅಹಿಂಸೆಯಿಂದ ಶಾಂತಿ ಲಭಿಸುತ್ತದೆ ಎಂದು ಅವರು ತಿಳಿಸಿದರು.

ಪಾರ್ಶ್ವನಾಥ್, ಅಣ್ಣಪ್ಪ, ಸುಮಿತ್ರಮ್ಮ, ರಾಜೇಶ್, ಸುಜಾತಾ, ತವನಪ್ಪ ಜೈನರ್, ದೇವೇಂದ್ರಪ್ಪ, ರವಿಕುಮಾರ್ ಜೈನ್, ಸುಮಂಗಳಮ್ಮ, ಅಂಬುಜಮ್ಮ, ಜಯಪದ್ಮ, ಮಂಜುನಾಥ್, ದಾನಪಾಲಪ್ಪ ಜೈನ್ ಹಾಜರಿದ್ದರು.

ಮಹಾವೀರ ಜನ್ಮ ಕಲ್ಯಾಣ
ಹೊಸದುರ್ಗ: ಪಟ್ಟಣದ ಜೈನ ಸಮಾಜದವರು ಮಹಾವೀರ ಜನ್ಮ ಕಲ್ಯಾಣ ಕಾರ್ಯವನ್ನು ಸಕಲ ಜೈನ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಆಚರಿಸಿದರು.

ಬೆಳಿಗ್ಗೆ 6ಕ್ಕೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಭಗವಾನ್ ಮಹಾವೀರ ಸ್ವಾಮಿಯ ಜಯಂತಿ ನಡೆಯಿತು. ಮೆರವಣಿಗೆಯಲ್ಲಿ ಮಹಾವೀರರ ತತ್ವ ಬೋಧನೆಗಳನ್ನು ಜನರಿಗೆ ತಿಳಿಸಲಾಯಿತು. ಶೋಭಾ ಯಾತ್ರೆಯಲ್ಲಿ ಶ್ರಾವಕ-ಶ್ರಾವಕಿಯರು, ನೂರಾರು ಮಕ್ಕಳು  ಭಾಗವಹಿಸಿದ್ದರು.
ನಂತರ ನಿತ್ಯ ಅಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ಮಹಾವೀರ ಜಿನ ಬಾಲಕನಿಗೆ ವಸ್ತ್ರಾಭರಣ ಹಾಕಿ ತೊಟ್ಟಿಲಿನಲ್ಲಿ ತೂಗುವುದು, ಬಾಲ ಲೀಲೋತ್ಸವ ನಡೆದವು.

ಮಹಾವೀರ ಜಯಂತಿ ಅಂಗವಾಗಿ ಪಟ್ಟಣ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಾಗೂ ತಂಪು ಪಾನೀಯವನ್ನು ವಿತರಿಸಲಾಯಿತು. ಸಂಜೆ ಪ್ರಮುಖ ರಸ್ತೆಯಲ್ಲಿ ಮಹಾವೀರರ ಭವ್ಯ ಮೆರವಣಿಗೆ ನಡೆಯಿತು.

ಕಾರ್ಯಕ್ರಮದ ನೇತೃತ್ವವನ್ನು ಜೈನ ಸಮುದಾಯದ ಅಧ್ಯಕ್ಷ ಇ.ವಿ. ಧನ್ಯಕುಮಾರ್ ಹಾಗೂ ಯುವಕ ಸಂಘದ ಅಧ್ಯಕ್ಷ ಇ.ಟಿ. ಬಾಹುಬಲಿ ವಹಿಸಿದ್ದರು.

ಅಹಿಂಸಾ ಪ್ರತಿಪಾದಕನ ಸ್ಮರಣೆ
ಚಿಕ್ಕಜಾಜೂರು: ಇಲ್ಲಿನ ಜೈನ ಸಮಾಜದವರು ಅಹಿಂಸಾ ಪ್ರತಿಪಾದಕ,  ಜೈನಧರ್ಮ ಪ್ರವರ್ತಕ ಭಗವಾನ್ ಮಹಾವೀರರ 2,613ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು.

ಬೆಳಿಗ್ಗೆ 11-30ಕ್ಕೆ ಕಿರಣ್‌ರಾಜ್ ಕೊಠಾರಿ ಅವರ ನಿವಾಸದಿಂದ ಮಹಾವೀರರ ಭಾವಚಿತ್ರದ ಮೆರವಣಿಗೆ ಆರಂಭಗೊಂಡಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಜನೆಯೊಂದಿಗೆ ಯುವಕರು ನೃತ್ಯ ಮಾಡುತ್ತಾ ಸಾಗಿದರು.

ಮೆರೆವಣಿಗೆಯಲ್ಲಿ ಜೈನ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಧ್ವಜಾರೋಹಣ: ಮೆರವಣಿಗೆ ಜೈನ ಮಂದಿರಕ್ಕೆ ಬಂದ ನಂತರ ಜೈನ ಸಾಧುಗಳು ಶಾಂತಿನಾಥ ಮತ್ತು ಮಹಾವೀರರ ಮಂತ್ರ ಪಠಿಸಿದರು. ನಂತರ ಧಾರ್ಮಿಕ ವಿಧಿಯಂತೆ ಕೊಠಾರಿ ವಂಶಸ್ಥರಿಂದ ದ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ಪ್ರತಿ ವರ್ಷ ಮಹಾವೀರ ಜಯಂತಿಯಂದು ಜೈನ ಮಂದಿರದ ಮೇಲಿನ ಧ್ವಜವನ್ನು ಬದಲಾಯಿಸುವ ಸಂಪ್ರದಾಯವಿದೆ. ಹೊಸ ಧ್ವಜಾರೋಹಣ ಬಳಿಕ ಹಳೆಯ ಧ್ವಜವನ್ನು ವಿವಾಹಿತ ಮಹಿಳೆಯ ಉಡಿಗೆ  ಶಿಖರದಿಂದ ಎಸೆಯಲಾಗುವುದು. ಎಸೆದ ಧ್ವಜ ನೇರವಾಗಿ ಉಡಿಗೆ ಬಿದ್ದರೆ ಅವರು ತಾಯ್ತನ  ಪಡೆಯುವರು ಎಂಬ ನಂಬಿಕೆ ಸಮಾಜದವರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT