ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಶ್ರದ್ಧಾಭಕ್ತಿಯ ಶಿವರಾತ್ರಿ

Last Updated 3 ಮಾರ್ಚ್ 2011, 11:15 IST
ಅಕ್ಷರ ಗಾತ್ರ

ವಿಜಾಪುರ: ಮಹಾ ಶಿವರಾತ್ರಿಯನ್ನು ವಿಜಾಪುರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದ ಮಕ್ಕಳು, ಮಹಿಳೆಯರೂ ಸಹಿತ ಭಕ್ತರು ತಂಡೋಪ ತಂಡವಾಗಿ ನಗರ ಹೊರ ವಲಯದ ಶಿವಗಿರಿಗೆ ತೆರಳಿ ಶಿವನ ಮೂರ್ತಿಯ ದರ್ಶನ ಪಡೆದರು. ನಂತರ ಜಿಲ್ಲಾ ಆಡಳಿತದಿಂದ ಪೂರೈಸಿದ ಗಂಗಾಜಲವನ್ನು ಸೇವಿಸಿ ಪುನೀತರಾದರು.

ಟಿ.ಕೆ. ಪಾಟೀಲ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಉಕ್ಕಲಿ ರಸ್ತೆಯ ಶಿವಗಿರಿವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವಿವಿಧ ನೃತ್ಯ ರೂಪಕ, ಆನೆ, ಕುದುರೆ, ಒಂಟೆ ಹಾಗೂ ಮಹಿಳೆಯರ ಡೊಳ್ಳು ಕುಣಿತ ಗಮನ ಸೆಳೆದವು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಯದ ಬ್ರಹ್ಮಕುಮಾರಿಯರು ಮತ್ತು ಬಸವಣ್ಣ, ಶಿವ ಸೇರಿದಂತೆ ವಿವಿಧ ಮಹಾನ್ ವ್ಯಕ್ತಿಗಳ ವೇಷಧಾರಿಗಳು ಅಲಂಕೃತ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.

ನಂತರ ಶಿವಗಿರಿಯಲ್ಲಿ ಸಹಸ್ರಾರು ಭಕ್ತರು ಶಿವನ ಮೂರ್ತಿಗೆ ಪೂಜೆ ಸಲ್ಲಿಸಿ, ಪ್ರಸಾದ ಪಡೆದರು. ಮೆರವಣಿಗೆಯ ಉಸ್ತುವಾರಿಯನ್ನು ಟಿ.ಕೆ. ಪಾಟೀಲ ಚಾರಿಟೇಬಲ್ ಟ್ರಸ್ಟ್‌ನ ಬಸಂತಕುಮಾರ ಪಾಟೀಲ ಹಾಗೂ ಕುಟುಂಬದವರು ವಹಿಸಿದ್ದರು.ರಾತ್ರಿ ಶಿವಗಿರಿಯ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಲೇಜರ್ ಶೋ ನಡೆಸಲಾಯಿತು. ಇದಕ್ಕೂ ಮೊದಲು ಮದ್ದು ಸುಡುವ ಕಾರ್ಯಕ್ರಮ ಜರುಗಿತು. ನಗರದ ಜೋರಾಪುರ ಪೇಠದ ಶಂಕರಲಿಂಗ ದೇವಸ್ಥಾನ, ದರ್ಗಾ ಹತ್ತಿರದ ಅಡವಿ ಶಂಕರಲಿಂಗ ಗುಡಿ ಹಾಗೂ ನಗರದ 770 ಲಿಂಗದ ದೇವಸ್ಥಾನದಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.

ಸಿಂದಗಿಯಲ್ಲಿ  ಗಂಗಾಜಲ ವಿತರಣೆ

ಸಿಂದಗಿ: ಪಟ್ಟಣದ ವಿವಿಧೆಡೆ ಮಹಾಶಿವರಾತ್ರಿ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಂಗಳೂರು ಕರ್ನಾಟಕ ಮುಜರಾಯಿ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ, ಶಾಸಕ ಮಾಲೂರು ಎಸ್.ಎನ್. ಕೃಷ್ಣಯ್ಯಶೆಟ್ಟಿ ಅವರು ಕಳುಹಿಸಲ್ಪಟ್ಟ ಪವಿತ್ರ ಗಂಗಾಜಲವನ್ನು ಮಠ, ಮಂದಿರಗಳಿಗೆ ತಾಲ್ಲೂಕು ಆಡಳಿತದ ವತಿಯಿಂದ ವಿತರಣೆ ಮಾಡಲಾಯಿತು.

ಕಂದಾಯ ಇಲಾಖೆಯ ಮಹಿಪತಿ ದೇಸಾಯಿ ಗಂಗಾಜಲದ ಕ್ಯಾನ್‌ಗಳನ್ನು ವಿವಿಧ ಮಠ, ಮಂದಿರಗಳ ಮುಖ್ಯಸ್ಥರಿಗೆ ವಿತರಿಸಿದರು. ಶಾಂತೇಶ್ವರಮಠ: ಸ್ಥಳೀಯ ಶಾಂತೇಶ್ವರ ಹಿರಿಯಮಠದಲ್ಲಿ ಬುಧವಾರ ಸಂಜೆ ಕರ್ತೃ ಗದ್ದುಗೆಗೆ ರುದ್ರಾಭೀಷೇಕ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಸಾರಂಗಮಠ: ಸಾರಂಗಮಠದಲ್ಲಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಸಹಯೋಗದೊಂದಿಗೆ ಶಿವಯೋಗ ಸಂಜೆ ಕಾರ್ಯಕ್ರಮ ನಡೆಯಿತು.

ಪ್ರಭು ಸಾರಂಗದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪದ್ಮರಾಜ ಒಡೆಯರ ಹಾಗೂ ಲಿಂಗೈಕ್ಯ ಚೆನ್ನವೀರ ಸ್ವಾಮಿಗಳವರ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನಡೆಯಿತು. ಅಲ್ಲದೇ ಸಾಮೂಹಿಕ ಇಷ್ಟಲಿಂಗ ಪೂಜೆ, ಇಷ್ಟಲಿಂಗಧಾರಣ ಮತ್ತು ಪಾದೋದಕ-ಮಹಾಪ್ರಸಾದ ನಡೆಯಿತು. ಭಕ್ತಾಧಿಗಳು ಇಡೀ ದಿನ ಉಪವಾಸ ವ್ರತ ಆಚರಿಸಿ ಸಂಜೆ ಸಂಗಮೇಶ್ವರ ದೇವಸ್ಥಾನಕ್ಕೆ ಹಾಗೂ ಶಾಂತೇಶ್ವರ ದೇವಸ್ಥಾನಕ್ಕೆ ಗುರುದೇವಾಶ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದುಕೊಂಡರು.

ತ್ರಿಮೂರ್ತಿ ಶಿವಜಯಂತಿ ಆಚರಣೆ

ಸಿಂದಗಿ ಪಟ್ಟಣದ ಓಂ ಶಾಂತಿ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ 75 ನೇ ತ್ರಿಮೂರ್ತಿ ಶಿವಜಯಂತಿಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು. ತನ್ನಿಮಿತ್ತ 10 ಅಡಿ ಎತ್ತರದ ಶಿವಲಿಂಗ ದರ್ಶನ ನಡೆಯಿತು. ಕಲಾವಿದ ರಮೇಶ ರೆಬಿನಾಳ ನಿರ್ಮಿಸಿದ ಶಿವಲಿಂಗವನ್ನು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಉದ್ಘಾಟಿಸಿದರು. 

ಇದೇ ಸಂದರ್ಭದಲ್ಲಿ ಅರುಣ ಶಹಾಪೂರ, ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಕಲಾವಿದ ರಮೇಶ ರೆಬಿನಾಳ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಲಯದ ಸಂಚಾಲಕಿ ಸುಶೀಲಾಜಿ ಸಾನ್ನಿಧ್ಯ ವಹಿಸಿದ್ದರು. ರಾಜಯೋಗಿನಿ ಪದ್ಮಾಜಿ ಈಶ್ವರೀಯ ವಿಶ್ವವಿದ್ಯಾಲಯದ ಪರಿಚಯ ಮಾಡಿಕೊಟ್ಟರು. ರಾಜಯೋಗಿನಿ ಪವಿತ್ರಾಜಿ ಮಹಾಶಿವರಾತ್ರಿಯ ಮಹತ್ವವನ್ನು ತಿಳಿಸಿದರು. ಮಾರ್ಚ್ 4 ರವರೆಗೆ ಶಿವಲಿಂಗ ದರ್ಶನ ಹಾಗೂ ಶಿವನ ಸಂದೇಶ ನಡೆಯಲಿದೆ ಎಂದರು. ಎಸ್.ಎಸ್.ಬುಳ್ಳಾ ಸ್ವಾಗತಿಸಿದರು. ಎಸ್.ಬಿ.ಚೌದರಿ ನಿರೂಪಿಸಿದರು. ಬಿ.ಕೆ. ಕಂಠಿಗೊಂಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT