ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಅವರೆ!

Last Updated 6 ಜನವರಿ 2011, 9:00 IST
ಅಕ್ಷರ ಗಾತ್ರ

ಮಾಗಿಯ ಚಳಿ ಹೆಚ್ಚಾದಂತೆ ನಗರದ ಮನೆ ಮನೆಗಳಲ್ಲಿ ಅವರೆ ಕಾಯಿ ಸೊಗಡಿನ ಕಂಪು ಹರಡುತ್ತಿದೆ. ಬೆಳಗು- ಸಂಜೆಯ ತಿಂಡಿ, ಮಧ್ಯಾಹ್ನ- ರಾತ್ರಿಯ ಊಟದ ಎಲ್ಲ ಬಗೆಯ ಅಡುಗೆಯಲ್ಲೂ ಅವರೆ ಕಾಳು ಇರಲೇಬೇಕು. ಅಷ್ಟರ ಮಟ್ಟಿಗೆ ಬೆಂಗಳೂರಿಗರಿಗೆ ಅವರೆ ವ್ಯಾಮೋಹ. ಹೀಗಾಗಿಯೇ ಯಶವಂತಪುರ, ಕಲಾಸಿಪಾಳ್ಯಮಾರುಕಟ್ಟೆ ಸೇರಿದಂತೆ ಎಲ್ಲ ಮಾರುಕಟ್ಟೆಗಳಲ್ಲೂ ಇದರ ಘಮಲು ಅಡರುತ್ತಿದೆ.

ಬೀದಿ ಬೀದಿಗಳಲ್ಲಿ ತರಕಾರಿ ತಳ್ಳುಗಾಡಿಗಳಲ್ಲಿ ಅವರೆಕಾಯಿ ಇರಲೇ ಬೇಕು. ಚಳಿಯ ಈ ಹಂಗಾಮಿನಲ್ಲಿ ಅದು ಅನಿವಾರ್ಯ. ಅದಕ್ಕಾಗಿಯೇ ಅನೇಕರು ಬರೀ ಅವರೆಕಾಯಿ ಮಾರಾಟಕ್ಕೆ ಇಳಿದಿದ್ದಾರೆ. ಜಯನಗರ 7ನೇ ಬ್ಲಾಕ್ ವೃತ್ತದ ಬಳಿಯಂತೂ ವರ್ಷದ ಬಹುಕಾಲ ಅವರೆ ಸಿಗುತ್ತದೆ. ಹೀಗಾಗಿ ಸೀಸನ್ ಇಲ್ಲದ ಹೊತ್ತಿನಲ್ಲಿ ಅವರೆ ಬೇಕೆನಿಸಿದರೆ ಅಲ್ಲಿ ಹೋಗಬೇಕು.

 ಯಶವಂತಪುರ ಮಾರುಕಟ್ಟೆಗೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಮೈಸೂರು ಕಡೆಯಿಂದ ಪ್ರತಿದಿನ 100 ರಿಂದ 150 ಟನ್ ಅವರೆಕಾಯಿ ಬರುತ್ತಿದೆ. ಬೆಳೆಗಾರರೇ ನೇರವಾಗಿ ಮಾರುಕಟ್ಟೆಗೆ ತಂದು ಸಗಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗ
ಚಿಲಕ, ಮಣಿ ಹಾಗೂ ಬುಡ್ಡ ಅವರೆ  ತಳಿಗಳು ಮಾರುಕಟ್ಟೆಗೆ ಬರುತ್ತಿವೆ. ಮಧ್ಯರಾತ್ರಿ  2ಗಂಟೆ ವೇಳೆಗೆ ಅವರೆ ಕಾಯಿ ಬರುತ್ತಿದ್ದು, ಬೆಳಿಗ್ಗೆ 8ರ ವೇಳೆಗೆ ಎಲ್ಲಾ ವ್ಯಾಪಾರವಾಗಿ ಬಿಡುತ್ತದೆ ಎಂದು ಸಗಟು ವ್ಯಾಪಾರಿ ಮುನೀರ್ ಅಹ್ಮದ್ ಹೇಳುತ್ತಾರೆ.

ಸಿಟಿ ಮಾರುಕಟ್ಟೆಗೆ ದೊಡ್ಡಬಳ್ಳಾಪುರ, ರಾಮನಗರ ಹಾಗೂ ಮೈಸೂರಿನ ಕೆಲ ಭಾಗಗಳಿಂದ ಅವರೆ ಕಾಯಿ ಬರುತ್ತಿದೆ. ಈ ಕಡೆ ಚಳಿಗಾಲದಲ್ಲಿ ಮಾತ್ರ ಬೆಳೆಯುವುದರಿಂದ ಅದರ ರುಚಿ ಹೆಚ್ಚು. ಅದಕ್ಕಾಗಿಯೇ ಜನರಿಗೂ ಅಚ್ಚುಮೆಚ್ಚು. ಕಾಳಿನಿಂದ ಮಾಡಿದ ಸಾರು ಹಾಗೂ ಇನ್ನಿತರ ಖಾದ್ಯಗಳಂತೂ ಎಂಥವರ ಬಾಯಿಯಲ್ಲೂ ನೀರು ಸುರಿಸುತ್ತದೆ. ಹೀಗಾಗಿ ಅವರೆ ಕಾಯಿ ಸದ್ಯ ಮಾರುಕಟ್ಟೆ ಮಹಾರಾಜನಾಗಿದ್ದಾನೆ.
ಚಿತ್ರಗಳು:  ಎಸ್.ಕೆ. ದಿನೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT