ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಂಸಿ ಗಣಿಗಾರಿಕೆ: ಶೀಘ್ರ ಸಿಬಿಐ ತನಿಖೆ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ `ಲಕ್ಷ್ಮೀನಾರಾಯಣ ಮೈನಿಂಗ್ ಕಂಪೆನಿ~ (ಎಲ್‌ಎಂಸಿ) ಸರ್ಕಾರಕ್ಕೆ ಹಿಂತಿರುಗಿಸಿದ ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಅದಿರು ಹೊರತೆಗೆದು ಸಾಗಣೆ ಮಾಡಿರುವ ಪ್ರಕರಣ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ಆರಂಭಿಸಲಿದೆ.

ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ) ಈಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ `ಎಲ್‌ಎಂಸಿ~ ಕಂಪೆನಿ ಸರ್ಕಾರಕ್ಕೆ ಹಿಂತಿರುಗಿಸಿದ ಗುತ್ತಿಗೆ ಪ್ರದೇಶದಲ್ಲಿ ಅದಿರು ಹೊರತೆಗೆದು ಸಾಗಿಸಿದ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಸಲಹೆ ಮಾಡಿದೆ. ಈ ಸಲಹೆಯನ್ನು ನ್ಯಾಯಾಲಯ ಅಂಗೀಕರಿಸಿದೆ.

`ಈ ಗಣಿಗಾರಿಕೆ ಹಿಂದೆ ನಮ್ಮ ಪಾತ್ರವೇನೂ ಇಲ್ಲ. ಬಳ್ಳಾರಿ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವ ಗಾಲಿ ಜನಾರ್ದನರೆಡ್ಡಿ, ಅವರ ಆಪ್ತರಾದ ಕೂಡ್ಲಿಗಿ ಶಾಸಕ ನಾಗೇಂದ್ರ ಮತ್ತವರ ಗುಂಪು ಈ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ~ ಎಂದು ಆರೋಪಿಸಿ `ಎಲ್‌ಎಂಸಿ~ ಜನವರಿ 15ರಂದು ಸಿಇಸಿ ಅಧ್ಯಕ್ಷರಿಗೆ ಬರೆದಿರುವ 11 ಪುಟಗಳ ಪತ್ರವನ್ನು ನ್ಯಾ.ಅಫ್ತಾಬ್ ಆಲಂ ನೇತೃತ್ವದ ತ್ರಿಸದಸ್ಯ ಅರಣ್ಯ ಪೀಠದ ಅನುಮತಿ ಹಿನ್ನೆಲೆಯಲ್ಲಿ ಸಿಬಿಐಗೆ ಹಸ್ತಾಂತರಿಸಲಾಗಿದೆ.

ಇದರಿಂದಾಗಿ ಈಗಾಗಲೇ ಅಕ್ರಮ ಗಣಿಗಾರಿಕೆ ಆರೋಪದಡಿ ಬಂಧಿತರಾಗಿರುವ ಜನಾರ್ದನರೆಡ್ಡಿ ಮತ್ತೊಂದು ಸುತ್ತು ಸಿಬಿಐ ವಿಚಾರಣೆಗೆ ಗುರಿಯಾಗಬೇಕಾಗಿದೆ. ಶಾಸಕ ನಾಗೇಂದ್ರ, `ವಿಜಯ ಲೀಸಿಂಗ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ~ (ವಿಎಲ್‌ಸಿ)ಯ ಅಲಿಖಾನ್, `ಎಲ್‌ಎಂಸಿ~ ಮಾಲೀಕರಾದ ಗೋಪಾಲದಾಸ್, ಅವರ ಪುತ್ರ ಪ್ರಶಾಂತ್, ಸೆಸ ಗೋವಾ ಕಂಪೆನಿ ಮುಖ್ಯಸ್ಥರು, ಇದೇ ಕಂಪೆನಿಯ ಹೊಸಪೇಟೆ ಮ್ಯಾನೇಜರ್ ಸೇರಿದಂತೆ ಹಲವರನ್ನು ಸಿಬಿಐ ಪ್ರಶ್ನಿಸುವ ಸಾಧ್ಯತೆಯಿದೆ.

ಸಿಇಸಿ ಅಧ್ಯಕ್ಷರಿಗೆ ಎಲ್‌ಎಂಸಿ ಬರೆದ ಪತ್ರದಲ್ಲಿ, `ಸರ್ಕಾರಕ್ಕೆ ಹಿಂತಿರುಗಿಸಿದ ಜಮೀನು ಈಗಿನ ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಈ ಭೂಮಿಯಲ್ಲಿ ವಿಎಲ್‌ಸಿ ಭಾರಿ ಯಂತ್ರ ಅಳವಡಿಸಿ ಅಕ್ರಮ ಗಣಿಗಾರಿಕೆ ನಡೆಸಿದೆ. 2010ರ ಜನವರಿಯಿಂದ ಜುಲೈವರೆಗೆ 10 ಲಕ್ಷ ಟನ್ ಅದಿರು ತೆಗೆದು ಜೈಸಿಂಗ್‌ಪುರ ಮತ್ತು ಎಮ್ಮಿಹಟ್ಟಿಗೆ ಸಾಗಿಸಿದೆ~ ಎಂದು ಆರೋಪಿಸಲಾಗಿದೆ. ಈ ಪತ್ರದ ಜತೆ ಅಗತ್ಯ ದಾಖಲೆಗಳನ್ನು ಸಿಇಸಿಗೆ ಒದಗಿಸಲಾಗಿದೆ.

 `ಎಲ್‌ಎಂಸಿ~ 96- 97ರಿಂದ ಮೂರು ವರ್ಷದ ಅವಧಿಗೆ `ಸೆಸ ಗೋವಾ~ ಕಂಪೆನಿಗೆ ಅದಿರು ಪೂರೈಸುವ ಒಪ್ಪಂದ ಮಾಡಿಕೊಂಡಿತ್ತು. ಅನಂತರ ಒಪ್ಪಂದ ನವೀಕರಣ ಆಗದಿದ್ದರೂ, ಪರಸ್ಪರ ಒಪ್ಪಿತ ಷರತ್ತುಗಳ ಅನ್ವಯ ವ್ಯವಹಾರ ಮುಂದುವರಿದಿತ್ತು. ಸೆಸ ಗೋವಾ ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಅದಿರು ಖರೀದಿಸುತ್ತಿದ್ದರಿಂದ ಎಲ್‌ಎಂಸಿ 2006ರಲ್ಲಿ ಈ ವ್ಯವಹಾರ ಸ್ಥಗಿತಗೊಳಿಸಿತ್ತು.

ಅನಂತರ `ಸೆಸ ಗೋವಾ~ದ ಹೊಸಪೇಟೆ ವಿಭಾಗ ವ್ಯವಸ್ಥಾಪಕ ಸುರೇಂದ್ರ, ಕೂಡ್ಲಿಗಿ ಶಾಸಕ ನಾಗೇಂದ್ರ ಅವರನ್ನು ಬಳಸಿಕೊಂಡು ಎಲ್‌ಎಂಸಿ ಮೇಲೆ ಪ್ರಭಾವ ಬೀರಿದರು. ಸ್ಥಗಿತಗೊಂಡಿದ್ದ ವ್ಯವಹಾರ ಪುನಃ ಆರಂಭಿಸುವ ಸಂಬಂಧ ಹೊಸಪೇಟೆ ಶಾಸಕ ಆನಂದ ಸಿಂಗ್ ಜತೆ ನಾಗೇಂದ್ರ ಮಾತುಕತೆ ನಡೆಸಿದರು.

ಗುತ್ತಿಗೆ ನವೀಕರಣ ಮತ್ತಿತರ ಕೆಲಸಗಳಲ್ಲಿ ಎಲ್‌ಎಂಸಿಗೆ ನೆರವು ನೀಡುತ್ತಿದ್ದ ಹೊಸಪೇಟೆ ಶಾಸಕರು, ರೆಡ್ಡಿ ಗುಂಪಿನ ಅನಗತ್ಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದರು. ಆನಂದ ಸಿಂಗ್ ಸಲಹೆಯಂತೆ ಎಲ್‌ಎಂಸಿ 2008- 09ರಿಂದ ಸೆಸ ಗೋವಾ ಜತೆ ವ್ಯವಹಾರ ಪುನರಾರಂಭಿಸಿತು.

ಮೊದಲಿಗಿಂತ ಕಡಿಮೆ ಬೆಲೆಗೆ ಅದಿರು ಪೂರೈಸಿತು. ಆದರೆ, ಈ ಅದಿರನ್ನು ಸೆಸ ಗೋವಾ, ಶಾಸಕ ನಾಗೇಂದ್ರ ಅವರಿಗೆ ಸರಬರಾಜು ಮಾಡಿದೆ ಎಂದು ಎಲ್‌ಎಂಸಿ ದೂರಿದೆ.

ಅಲ್ಲದೆ, ನೆರೆಯ `ಅಶ್ವತ್ಥನಾರಾಯಣ್‌ಸಿಂಗ್ ಮತ್ತು ಕಂಪೆನಿ~ (ಎಎನ್‌ಎಸ್) ಸರ್ಕಾರಕ್ಕೆ ವಾಪಸ್ ಮಾಡಿದ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿತ್ತು. ಆನಂದಸಿಂಗ್ ಬೆಂಬಲದಿಂದ ಇದನ್ನು ತಡೆಯಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಎಲ್‌ಎಂಸಿಯ ಹಲವು ಸಮಸ್ಯೆಗಳನ್ನು ಪರಿಹರಿಸಲು ಹೊಸಪೇಟೆ ಶಾಸಕರು ಸಹಕರಿಸಿದ್ದಾರೆ. ಈ ಕಾರಣಕ್ಕೆ ಅವರಿಗೆ 5 ಲಕ್ಷ ಟನ್ ಅದಿರನ್ನು ಮಾರುಕಟ್ಟೆ ದರಕ್ಕಿಂತ 200ರೂಪಾಯಿ ಕಡಿಮೆಗೆ ಪೂರೈಕೆ ಮಾಡಲು ಒಪ್ಪಲಾಗಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಹಿಂತಿರುಗಿಸಿದ ಪ್ರದೇಶದ ಗುತ್ತಿಗೆ ನವೀಕರಣ ಮಾಡಿಕೊಡಲು ಅವರು ಸಮ್ಮತಿಸಿದ್ದರು. ಆದರೆ, ಆನಂದಸಿಂಗ್ ಜತೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ರೆಡ್ಡಿಗಳ ಗುಂಪು ಅಡ್ಡಿಪಡಿಸಿತು ಎಂದು ಎಲ್‌ಎಂಸಿ ತಿಳಿಸಿದೆ.

`ಸರ್ಕಾರಕ್ಕೆ ಹಿಂತಿರುಗಿಸಿದ ಗಣಿ ಪ್ರದೇಶದಲ್ಲಿ ನಡೆದಿರುವ ಅಕ್ರಮದಲ್ಲಿ ನಮ್ಮದೇನೂ ಪಾತ್ರವಿಲ್ಲ~ ಎಂದು `ಎಲ್‌ಎಂಸಿ~ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ಸಿಬಿಐ ತನಿಖೆ ಎಲ್‌ಎಂಸಿ ವಾಪಸ್ ಮಾಡಿದ ಗುತ್ತಿಗೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರು ಯಾರು? ಎಂಬುದನ್ನು ಪತ್ತೆ ಹಚ್ಚಿ ಬಯಲಿಗೆಳೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT