ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎನ್‌ಜಿ ವಿದ್ಯುತ್ ಸ್ಥಾವರ: ರಾಜ್ಯ ನಿರಾಸಕ್ತಿ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಭಾರತೀಯ ಅನಿಲ ಪ್ರಾಧಿಕಾರವು ಇನ್ನೆರಡು ತಿಂಗಳ ಒಳಗೆ ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ರಾಜ್ಯಕ್ಕೆ ಪೂರೈಕೆ ಮಾಡಲು ಸಜ್ಜಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಬಿಡದಿ ಬಳಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಾಣ ಕಾರ್ಯಕ್ಕೆ ಇನ್ನಷ್ಟೇ ಚಾಲನೆ ನೀಡಬೇಕಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಹಾಗೂ ನಗರಕ್ಕೆ ಅನಿಲ ಪೂರೈಸುವ ಮೂಲಸೌಕರ್ಯಕ್ಕಾಗಿ ಭಾರತೀಯ ಅನಿಲ ಪ್ರಾಧಿಕಾರವು ಈ ಸಂಬಂಧ 2009ರಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದೀಗ ಅದು ಕಾರ್ಯರೂಪಕ್ಕೆ ಬರಲು ಸಿದ್ಧಗೊಂಡಿದೆ.

`ಈಗಾಗಲೇ ಶೇ 60ರಷ್ಟು ಪೈಪ್‌ಲೈನ್ ಅಳವಡಿಕೆ ಕೆಲಸ ಪೂರ್ಣಗೊಂಡಿದೆ. ಇದೇ ಮಾರ್ಚ್ 31ರೊಳಗೆ 745 ಕಿ.ಮೀ. ಭಾಗದ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ~ ಎಂದು ಭಾರತೀಯ ಅನಿಲ ಪ್ರಾಧಿಕಾರದ ಡಿಜಿಎಂ (ನಿರ್ಮಾಣ) ಮುರಳಿ ಮೋಹನ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

 `ಒಟ್ಟು ಪೈಪ್‌ಲೈನ್ ಅಳವಡಿಕೆಯ ಉದ್ದ 1,400 ಕಿ.ಮೀ.ಗಳಷ್ಟಿದೆ. ಮಾರ್ಚ್ ಅಂತ್ಯದೊಳಗೆ ಪೈಪ್‌ಲೈನ್ ಅಳವಡಿಕೆ ಕೆಲಸ ಮುಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಒಂದು ವೇಳೆ ತಡವಾದಲ್ಲಿ ಜೂನ್ ವೇಳೆಗೆ ಈ ಕಾರ್ಯ ಪೂರ್ಣಗೊಳಿಸಲಾಗುವುದು~ ಎಂದು ವಿವರಿಸಿದರು.

ಕೆಪಿಸಿಎಲ್ ಜತೆಗೆ, ಹುಬ್ಬಳ್ಳಿ, ಬೆಳಗಾವಿ, ಬಿಡದಿ ಹಾಗೂ ವೈಟ್‌ಫೀಲ್ಡ್ ಸೇರಿದಂತೆ ರಾಜ್ಯಾದ್ಯಂತ ದಿನದಿಂದ ದಿನಕ್ಕೆ ನಮ್ಮ ಗ್ರಾಹಕರ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಉಳಿದ 650 ಕಿ.ಮೀ.ನಷ್ಟು ಪೈಪ್‌ಲೈನ್ ಅಳವಡಿಕೆ ಕೆಲಸವನ್ನು ಹಂತ-ಹಂತವಾಗಿ ಮುಗಿಸಲು ಉದ್ದೇಶಿಸಲಾಗಿದೆ. ಆದರೆ, ಅನಿಲ ವಿತರಣೆಗೆ ಮುಖ್ಯ ಕೊಳವೆ ಮಾರ್ಗದಲ್ಲಿ ಪೈಪ್‌ಲೈನ್ ಅಳವಡಿಸುವ ಕೆಲಸ ಪೂರ್ಣಗೊಳಿಸುವುದು ನಮಗೆ ಮುಖ್ಯವಾಗಿದೆ~ ಎಂದು ಅವರು ತಿಳಿಸಿದರು.

ದ್ರವೀಕೃತ ನೈಸರ್ಗಿಕ ಅನಿಲದಿಂದ ವಿದ್ಯುತ್ ಉತ್ಪಾದಿಸುವ ಬಿಡದಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿರುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಇನ್ನೂ ಉದ್ದೇಶಕ್ಕಾಗಿ ಟೆಂಡರ್ ಕೂಡ ಕರೆದಿಲ್ಲ. ಅನಿಲ ಖರೀದಿಗೆ ಸಂಬಂಧಿಸಿದಂತೆಯೂ ಇನ್ನಷ್ಟೇ ಅದು ಭಾರತೀಯ ಅನಿಲ ಪ್ರಾಧಿಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬೇಕಿದೆ.

ಮಹಾರಾಷ್ಟ್ರದ ದಾಬೋಲ್‌ನಿಂದ ಪೈಪ್‌ಲೈನ್ ಅಳವಡಿಕೆಯಲ್ಲಿ ವಿಳಂಬ, ಅನಿಲ ದರದಲ್ಲಿ ಏರಿಳಿತ, ಅನಿಲ ಕೊರತೆ ಮತ್ತಿತರ ಕಾರಣಗಳಿಂದ ಈ ಯೋಜನೆ ಕೈಗೆತ್ತಿಕೊಳ್ಳುವಲ್ಲಿ ತಡವಾಗಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ಈ ನಡುವೆ, 2010ರ ಜೂನ್‌ನಲ್ಲಿ 700 ಮೆಗಾವಾಟ್ ವಿದ್ಯುತ್ ಕಡಿಮೆಗೊಳಿಸಲು ಕೆಪಿಸಿಎಲ್ ನಿರ್ಧರಿಸಿದ್ದರಿಂದ ಒಟ್ಟು 2100 ಮೆಗಾವಾಟ್‌ನ ಈ ಯೋಜನೆಯು ಅಂತಿಮವಾಗಿ 1400 ಮೆಗಾವಾಟ್‌ಗೆ ಇಳಿಯಿತು. ನೈಸರ್ಗಿಕ ಅನಿಲದಿಂದ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲು 12ರಿಂದ 15 ರೂಪಾಯಿವರೆಗೆ ವೆಚ್ಚ ತಗಲುತ್ತದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
 
ಮುಂದಿನ ಐದು ವರ್ಷಗಳಲ್ಲಿ ಉತ್ಪಾದನಾ ವೆಚ್ಚ ಇನ್ನಷ್ಟು ಕಡಿಮೆಯಾಗುವ ಆಶಯವನ್ನು ಹೊಂದಿರುವ ಅಧಿಕಾರಿಗಳು, ಆ ವೇಳೆಗೆ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲು 5 ರೂಪಾಯಿ ಸಾಕಾಗಬಹುದು ಎಂದು ಹೇಳಿದ್ದಾರೆ.

`ನಾವು ಬಿಡದಿ ಯೋಜನೆ ಕೈಗೆತ್ತಿಕೊಳ್ಳುವುದು ಸುಲಭ. ಆದರೆ, ಭಾರತೀಯ ಅನಿಲ ಪ್ರಾಧಿಕಾರ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದೇ ಅನುಮಾನವಾಗಿದೆ~ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

2010ರ ಆಗಸ್ಟ್‌ನಲ್ಲಿ ಬಿಡದಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಪ್ರಾಥಮಿಕ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಆಯ್ಕೆಯಾದ ಗುತ್ತಿಗೆದಾರರನ್ನು ಮಾರ್ಚ್‌ನಲ್ಲಿ ಕರೆಯಲಿರುವ ಅಂತಿಮ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಜೂನ್‌ನಲ್ಲಿ ಘಟಕ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಮೂರು ವರ್ಷದ ಗಡುವಿನೊಳಗೆ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ದಾಬೋಲ್ ಮತ್ತು ಬೆಂಗಳೂರು ನಡುವಿನ ಪೈಪ್‌ಲೈನ್ ಅಳವಡಿಕೆಯು ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ ಜಿಲ್ಲೆಗಳು, ಗೋವಾ ಹಾಗೂ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳ ಮಾರ್ಗವಾಗಿ ಹಾದು ಬರಲಿದೆ.

ಒಟ್ಟು 4,600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಡಿ ಪ್ರತಿ ದಿನ 16 ದಶಲಕ್ಷ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯುಬಿಕ್ ಮೀಟರ್ ನೈಸರ್ಗಿಕ ಅನಿಲ ಪೂರೈಕೆಯಾಗಲಿದೆ.

ಈ ಯೋಜನೆಗೆ 1998ರಲ್ಲಿ ರಾಜ್ಯ ಸರ್ಕಾರ ಕೆಐಎಡಿಬಿ ಮೂಲಕ 191 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ 3.5 ಕೋಟಿ ರೂಪಾಯಿ ಗಳು ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT