ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಜಿ ಒಪ್ಟಿಮಸ್ 3 ಡಿ ಫೋನ್

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಫೋನ್‌ಗಳು ವಿಕಾಸಗೊಂಡು ಸ್ಮಾರ್ಟ್‌ಫೋನ್‌ಗಳಾದವು. ಸ್ಮಾರ್ಟ್‌ಫೋನ್‌ಗಳನ್ನು ಎಲ್ಲರೂ ಕೊಂಡುಕೊಂಡ ನಂತರ ತಯಾರಾದ ಸ್ಮಾರ್ಟ್‌ಫೋನ್‌ಗಳನ್ನು ಮಾರುವುದು ಹೇಗೆ? ಅದಕ್ಕೆ ಒಂದಿಷ್ಟು ಹೊಸ ಹೊಸ ಸವಲತ್ತುಗಳನ್ನು ಸೇರಿಸಿದಾಗ ಮತ್ತೆ ಅವುಗಳ ಮಾರಾಟ ಆಗುತ್ತದೆ. ಈ ಸರಣಿ ಮುಂದುವರಿಯುತ್ತದೆ. ಇದೇ ತರ್ಕವನ್ನು ಅನುಸರಿಸಿ ಸ್ಮಾರ್ಟ್‌ಫೋನ್‌ಗಳಿಗೆ ಕ್ಯಾಮರಾ ಅಳವಡಿಸಲಾಯಿತು. ಕ್ಯಾಮರಾಗಳ ಮೆಗಾಪಿಕ್ಸೆಲ್ ಹೆಚ್ಚಿಸುತ್ತಲೇ ಹೋದರು. ನೋಕಿಯಾದವರು ಹಾಗೆ ಮಾಡುತ್ತ 41 ಮೆಗಾಪಿಕ್ಸೆಲ್ ಕ್ಯಾಮರಾ ಉಳ್ಳ ಫೋನ್ ತಯಾರಿಸಿದ್ದಾರೆ. ಸರಿ. ಮುಂದೇನು? ಇನ್ನೇನು ಅಳವಡಿಸಬಹುದು? ಆಗ ಹೊಳೆದ ಉತ್ತರ 3 ಆಯಾಮದ ಕ್ಯಾಮರ. ಎಲ್‌ಜಿ ಕಂಪೆನಿಯವರು 3 ಆಯಾಮದ ಕ್ಯಾಮರ ಉಳ್ಳ ಫೋನ್ ತಯಾರಿಸಿದ್ದಾರೆ. ಅಥವಾ ಸರಿಯಾಗಿ ಹೇಳುವುದಾರೆ ಮೂರು ಆಯಾಮದ ಕ್ಯಾಮರ ಜೊತೆ ಫೋನ್ ಅಳವಡಿಸಿದ್ದಾರೆ. ಅದುವೇ ಎಲ್‌ಜಿ ಒಪ್ಟಿಮಸ್ 3ಡಿ ಪಿ 725 (LG Optimus 3D P725). ಈಗ ಅದರ ಗುಣಾವಗುಣಗಳ ಕಡೆ ಕಣ್ಣು ಹಾಯಿಸೋಣ.

ಮೊದಲನೆಯದಾಗಿ ಗುಣವೈಶಿಷ್ಟ್ಯಗಳು. 1.2 ಗಿಗಾಹರ್ಟ್ಸ್ ಡ್ಯುವಲ್ ಕೋರ್ (ಅಂದರೆ ಎರಡು ಹೃದಯಗಳು), 8 + 1 ಗಿಗಾಬೈಟ್ ಮೆಮೊರಿ, ಅದರಲ್ಲಿ ಸುಮಾರು 5.3 ಗಿಗಾಬೈಟ್‌ಗಳಷ್ಟು ಬಳಕೆದಾರರಿಗೆ ಲಭ್ಯ, 2ಜಿ ಮತ್ತು 3ಜಿ ನೆಟ್‌ವರ್ಕ್ ಸೌಲಭ್ಯ, ಅಂತರಜಾಲ ಸಂಪರ್ಕ, 3 ಆಯಾಮ ಸೌಲಭ್ಯವುಳ್ಳ ಎಲ್‌ಸಿಡಿ ಸ್ಪರ್ಶಸಂವೇದಿ ಗೊರಿಲ್ಲ ಗ್ಲಾಸ್ ಪರದೆ, 16 ಮಿಲಿಯನ್ ಬಣ್ಣಗಳು, 480x800 ಪಿಕ್ಸೆಲ್ ಪರದೆ, 32 ಗಿಗಾಬೈಟ್ ತನಕ ಅಧಿಕ ಮೆಮೊರಿ ಮೈಕ್ರೊಎಸ್‌ಡಿ ಕಾರ್ಡ್ ಮೂಲಕ, ವೈಫೈ ಮತ್ತು ಬ್ಲೂಟೂತ್ ಸಂಪರ್ಕ ಸೌಲಭ್ಯ, 5 ಮೆಗಾಪಿಕ್ಸೆಲ್ ಪ್ರಾಥಮಿಕ ಮೂರು ಆಯಾಮದ ಅಂದರೆ ಎರಡು ಲೆನ್ಸ್ ಉಳ್ಳ ಮುಂದುಗಡೆಯ ಕ್ಯಾಮರ ಮತ್ತು 0.3 ಮೆಗಾಪಿಕ್ಸೆಲ್‌ನ ಇನ್ನೊಂದು ಎದುರುಗಡೆ ಕ್ಯಾಮರ, ಎಫ್‌ಎಂ ರೇಡಿಯೋ, ಎಂಪಿ3 ಮತ್ತು ಎಂಪಿ4 ಪ್ಲೇಯರ್, 3.5 ಮಿಮಿ ಆಡಿಯೋ ಇಯರ್‌ಫೋನ್ ಕಿಂಡಿ, 1520 mAH  ಬ್ಯಾಟರಿ, ಆಂಡ್ರೋಯಿಡ್ 2.3, ಇತ್ಯಾದಿ. ಬೆಲೆ ಸುಮಾರು 29 ಸಾವಿರ ರೂ ((flipkart.com).

ಗ್ಯಾಜೆಟ್ ಸಲಹೆ
ವಿಜಯ್ ಅವರ ಪ್ರಶ್ನೆ: ನಾವು ಅಂತರಜಾಲ ತಾಣಗಳ ಮೂಲಕ ಗ್ಯಾಜೆಟ್ ತರಿಸಿ, ನಂತರ ಅವು ಹಾಳಾದರೆ ಯಾರ ಮೂಲಕ ಗ್ಯಾರಂಟಿ ಪಡೆದು ಅದನ್ನು ದುರಸ್ತಿ ಮಾಡಿಸಬೇಕು?
ಉ: ಸಾಮಾನ್ಯವಾಗಿ ಈ ಪ್ರಶ್ನೆಗೆ ಉತ್ತರವನ್ನು ಆಯಾ ಜಾಲತಾಣದಲ್ಲೆೀ ನೀಡಿರುತ್ತಾರೆ. ಎಲ್ಲ ಕಂಪೆನಿಗಳು ಉತ್ಪನ್ನವನ್ನು ಕೊಂಡ ದಾಖಲೆ ಮತ್ತು ತಾರೀಕನ್ನು ತೋರಿಸಿದರೆ ಅದು ಗ್ಯಾರಂಟಿಯಲ್ಲಿ ಇದೆ ಎಂದಾದರೆ ಉಚಿತವಾಗಿ ದುರಸ್ತಿ ಮಾಡುತ್ತಾರೆ. ಆದುದರಿಂದ ಉತ್ಪನ್ನ ಕೋರಿಯರ್‌ನಲ್ಲಿ ಬಂದಾಗ ಅದರ ಜೊತೆ ಇರುವ ಇನ್‌ವಾಯಿಸ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳತಕ್ಕದ್ದು. ಕೆಲವು ಜಾಲತಾಣಗಳು ಉತ್ಪನ್ನವನ್ನು ಎಲ್ಲಿಗೆ ಕಳುಹಿಸತಕ್ಕದ್ದು ಎಂಬುದನ್ನೂ ನಮೂದಿಸಿರುತ್ತಾರೆ. ಅನುಮಾನವಿದ್ದಲ್ಲಿ ಅವರಿಗೆ ಇಮೈಲ್ ಮಾಡಿ ತಿಳಿದುಕೊಳ್ಳಬಹುದು.


ಇದರ ಧ್ವನಿ ಗುಣಮಟ್ಟ ಚೆನ್ನಾಗಿದೆ. ಉತ್ತಮ ಎಂಪಿ3 ಪ್ಲೇಯರ್ ಆಗಿ ಬಳಸಬಹುದು. ಇದರ ಜೊತೆ ದೊರೆಯುವ ಇಯರ್‌ಫೋನ್‌ನ ಗುಣಮಟ್ಟವೂ ಪರವಾಗಿಲ್ಲ. ಆದರೆ ಕ್ರಿಯೇಟಿವ್ ಇಪಿ 630 ಇಯರ್‌ಫೋನ್‌ನ ಗುಣಮಟ್ಟಕ್ಕಿಂತ ಸ್ವಲ್ಪ ಕಡಿಮೆ ಎನ್ನಬಹುದು. ಎಫ್‌ಎಂ ರೇಡಿಯೋದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಮನೆಯ ಒಳಗೆ ಅಷ್ಟೇನೂ ಅದ್ಭುತವಾಗಿ ಬರುವುದಿಲ್ಲ. ಆದರೆ ಹೊರಗಡೆ ಚೆನ್ನಾಗಿ ಬರುತ್ತದೆ. ಇದರ ಸ್ಪೀಕರ್ ಚೆನ್ನಾಗಿದೆ. ಕರೆಗಳ ಗುಣಮಟ್ಟ ಚೆನ್ನಾಗಿದೆ. ಧ್ವನಿಯ ಮಟ್ಟ (ವಾಲ್ಯೂಮ್) ಚೆನ್ನಾಗಿದೆ. ಒಟ್ಟಿನಲ್ಲಿ ಕರೆ ಮಾಡಲು ಮತ್ತು ಸ್ವೀಕರಿಸಲು ಉತ್ತಮ ಫೋನ್.

ಬ್ಯಾಟರಿ ಶಕ್ತಿ ಅಷ್ಟಕ್ಕಷ್ಟೆ. ಬೆಳಿಗ್ಗೆ ಚಾರ್ಜ್ ಮಾಡಿದರೆ ಸಾಯಂಕಾಲಕ್ಕೆ ಬ್ಯಾಟರಿ ಮುಗಿರುತ್ತದೆ. ಇದು ಅಂತರಜಾಲ ಸಂಪರ್ಕ, ಇಮೈಲ್, ಫೇಸ್‌ಬುಕ್, ಟ್ವಿಟ್ಟರ್, ಇತ್ಯಾದಿಗಳನ್ನು ಬಳಸಿದರೆ. ಹಾಗೆ ನೋಡಿದರೆ ಎಲ್ಲ ಸ್ಮಾರ್ಟ್‌ಫೋನ್‌ಗಳ ಹಣೆಬರಹವೂ ಇಷ್ಟೆ. ಯಾವ ಸ್ಮಾರ್ಟ್‌ಫೋನೂ 24 ಗಂಟೆ ಶಕ್ತಿ ಹೊಂದಿರುವುದಿಲ್ಲ. ಎಲ್ಲವನ್ನೂ ರಾತ್ರಿ ಹೊತ್ತಿಗೆ ಚಾರ್ಜಿಗೆ ಹಾಕಬೇಕಾಗುತ್ತದೆ.

ಈ ಫೋನಿನ ವಿಶೇಷ ಇರುವುದು ಮೂರು ಆಯಾಮದ ಕ್ಯಾಮರಾದಲ್ಲಿ. ಒಂದರಿಂದ ಇನ್ನೊಂದಕ್ಕೆ ಸುಮಾರು ಒಂದು ಇಂಚು ದೂರ ಇರುವಂತೆ ಎರಡು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ನಮ್ಮ ಎರಡು ಕಣ್ಣುಗಳನ್ನು ಅನುಕರಿಸುತ್ತದೆ. ಮೂರು ಆಯಾಮ ಚಿತ್ರ ನಮ್ಮ ಮೆದುಳಿನಲ್ಲಿ ಮೂಡಲು ನಮಗೆ ಇರುವ ಎರಡು ಕಣ್ಣುಗಳು ಸಹಾಯ ಮಾಡುತ್ತವೆ. ಎಡದ ಕಣ್ಣು ನೋಡುವ ಚಿತ್ರ ಬಲದ ಕಣ್ಣು ನೋಡುವ ಚಿತ್ರಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇದನ್ನೇ ಈ ಫೋನಿನ ಕ್ಯಾಮರ ಅನುಕರಿಸುತ್ತದೆ. ಎಡದ ಕ್ಯಾಮರಾದಲ್ಲಿ ತೆಗೆದ ಫೋಟೋವನ್ನು ಎಡದ ಕಣ್ಣಿಗೆ ಮತ್ತು ಬಲದ ಕ್ಯಾಮರಾದಲ್ಲಿ ತೆಗೆದ ಫೋಟೋವನ್ನು ಬಲದ ಕಣ್ಣಿಗೆ ಬೀಳುವಂತೆ ಪರದೆಯ ವಿನ್ಯಾಸ ಮಾಡಲಾಗಿದೆ. ಇದರಿಂದ ಮೂರು ಆಯಾಮದ ಚಿತ್ರ ನೋಡಿದ ಭಾವನೆ ಉಂಟಾಗುತ್ತದೆ. ಮೂರು ಆಯಾಮದ ವೀಡಿಯೋ ಕೂಡ ತಯಾರಿಸಿ ನೋಡಬಹುದು. ಮೂರು ಆಯಾಮದಲ್ಲಿ ನೋಡಲು ಪ್ರತ್ಯೇಕ ಕನ್ನಡಕದ ಅಗತ್ಯವಿಲ್ಲ. ಈ ಕ್ಯಾಮರ ಫೋನಿನಲ್ಲಿ ತೆಗೆದ ಮೂರು ಆಯಾಮದ ಫೋಟೋ ಮತ್ತು ವೀಡಿಯೋಗಳು ಚೆನ್ನಾಗಿವೆ. ಫೋನ್ ಜೊತೆ ಕೆಲವು ಮೂರು ಆಯಾಮದ ಆಟಗಳು ಮತ್ತು ಒಂದು ಕಾರ್ಟೂನ್ ಲಭ್ಯ. ಇವು ಚೆನ್ನಾಗಿವೆ. ಮೂರು ಆಯಾಮವನ್ನು ಅನುಭವಿಸಿಯೇ ತಿಳಿಯಬೇಕು. ಆ ಫೋಟೋಗಳನ್ನು ಈ ಪತ್ರಿಕೆಯಲ್ಲಿ ಮುದ್ರಿಸುವಂತಿಲ್ಲ. ಮೂರು ಆಯಾಮದ ವೀಡಿಯೋವನ್ನು ನಿಮ್ಮಲ್ಲಿ ಮೂರು ಆಯಾಮದ ಟಿವಿ ಇದ್ದಲ್ಲಿ ಅದಕ್ಕೆ ಜೋಡಿಸಿ ವೀಕ್ಷಿಸಬಹುದು. ಹೈಡೆಫಿನಿಶನ್ ವೀಡಿಯೋ ಕೂಡ ತಯಾರಿಸಬಹುದು ಮತ್ತು ವೀಕ್ಷಿಸಬಹುದು.

ಇದರ 4.3 ಇಂಚು ಗಾತ್ರದ ಪರದೆ ಚೆನ್ನಾಗಿದೆ. ಸ್ಪರ್ಶಸಂವೇದಿಯಾಗಿದೆ. ಉತ್ತಮ ಗುಣಮಟ್ಟದ ಗೊರಿಲ್ಲ ಗ್ಲಾಸ್ ಅಳವಡಿಸಲಾಗಿದೆ. ಬಣ್ಣಗಳ ಗುಣಮಟ್ಟವೂ ಚೆನ್ನಾಗಿದೆ. ಒಟ್ಟಿನಲ್ಲಿ ಉತ್ತಮ ಅನುಭವ ನೀಡುತ್ತದೆ.

ಈ ಫೋನಿನ ಒಂದೇ ಒಂದು ಪ್ರಮುಖ ಕೊರತೆಯೆಂದರೆ ಕನ್ನಡದ ಸೌಲಭ್ಯ ಇಲ್ಲದಿರುವುದು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT