ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ನೇರ ಸಬ್ಸಿಡಿ: ಗೊಂದಲದ ಗೂಡು

Last Updated 5 ಡಿಸೆಂಬರ್ 2013, 8:01 IST
ಅಕ್ಷರ ಗಾತ್ರ

ವಿಜಾಪುರ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಸಂಪರ್ಕ ಹೊಂದಿರುವ ಗ್ರಾಹಕರಿಗೆ ಸಬ್ಸಿಡಿಯನ್ನು ನೇರವಾಗಿ ವರ್ಗಾಯಿ ಸುವ ಕೇಂದ್ರ ಸರ್ಕಾರದ ಯೋಜನೆ ಜಿಲ್ಲೆಯಲ್ಲಿಯೂ ಜಾರಿಗೆ ಬಂದಿದೆ. ಆದರೆ, ಪೂರ್ವ ಸಿದ್ಧತೆಯ ಕೊರತೆ ಯಿಂದ ಆರಂಭದಲ್ಲಿಯೇ ಇದು ಗೊಂದಲದ ಗೂಡಾಗಿ ಪರಿಣಮಿಸಿದೆ.

‘ಈ ಯೋಜನೆಯ ಜಾರಿಯಿಂದ ಗ್ರಾಹಕರು ಪ್ರತಿ ಸಿಲಿಂಡರ್‌ಗೆ ₨100 ಹೆಚ್ಚಿನ ಬೆಲೆ ತೆರಬೇಕಾಗುತ್ತದೆ’ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ‘ಗ್ರಾಹಕರಿಗೆ ಯಾವುದೇ ಹೊರೆ ಇಲ್ಲ’ ಎನ್ನುತ್ತಿದ್ದಾರೆ.

ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಹೊಂದಿರುವ ಗ್ರಾಹಕರು ಈ ವರೆಗೆ ₨434.50 ಸಂದಾಯ ಮಾಡಿ ಸಿಲಿಂಡರ್‌ ಪಡೆ ಯುತ್ತಿದ್ದರು. ಆಧಾರ್‌ ಸಂಖ್ಯೆ ನೋಂದಾಯಿಸಿಕೊಂಡ ನಂತರ ಅವರು ₨1,080 ಕೊಟ್ಟು ಸಿಲಿಂಡರ್‌ ಪಡೆದು ಕೊಳ್ಳಬೇಕು. ವರ್ಷಕ್ಕೆ ಒಂಬತ್ತು ಸಿಲಿಂಡರ್‌ ಮಿತಿಗೊಳಪಟ್ಟು, ಸಬ್ಸಿಡಿ ಹಣ ಅವರ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ನೂಕು ನುಗ್ಗಲು: ‘ಸಬ್ಸಿಡಿ ಮೊತ್ತ ವನ್ನು ಪಡೆಯಲು ಗ್ರಾಹಕರು ತಮ್ಮ ಬ್ಯಾಂಕ್‌ಗೆ ಹಾಗೂ ಎಲ್‌ಪಿಜಿ ವಿತರ ಕರಿಗೆ ಆಧಾರ್‌ ಸಂಖ್ಯೆ ನೀಡಬೇಕು. ಖಾತೆಯೊಂದಿಗೆ ಆಧಾರ್‌ ಸಂಖ್ಯೆ ಜೋಡಿಸಬೇಕು’ ಎಂದು ಕೇಂದ್ರ ಸರ್ಕಾರ ಜಾಹೀರಾತು ನೀಡಿದ ನಂತರ ಆಧಾರ್‌ ಸಂಖ್ಯೆಯ ಸಲ್ಲಿಸಲು ಬ್ಯಾಂಕ್ ಹಾಗೂ ಎಲ್‌ಪಿಜಿ ವಿತರಕರ ಬಳಿ ನೂಕುನುಗ್ಗಲು ಉಂಟಾಗುತ್ತಿದೆ.

ವಿಜಾಪುರ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ 19 ಜನ ವಿತರ ಕರು ಇದ್ದಾರೆ. ಒಟ್ಟಾರೆ 1,73,982 ಅಡುಗೆ ಅನಿಲ ಸಂಪರ್ಕಗಳಿದ್ದು, ಅವು ಗಳಲ್ಲಿ  68,576 ಗ್ರಾಹಕರು ಎರಡು ಸಿಲಿಂಡರ್‌ ಹಾಗೂ 1,05,406 ಜನ ಗ್ರಾಹಕರು ಒಂದೇ ಸಿಲಿಂಡರ್‌ಗಳನ್ನು ಹೊಂದಿದ್ದಾರೆ. ವಾಣಿಜ್ಯ ಬಳಕೆಯ ಸಂಪರ್ಕಗಳ ಸಂಖ್ಯೆ 4,759.

ಅನುಷ್ಠಾನ ಸಮಿತಿ: ಈ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳು, ಆಹಾರ ಮತ್ತು ನಾಗರೀಕ ಸರಬ ರಾಜು ಇಲಾಖೆ ಉಪನಿರ್ದೇಶಕರು, ಪುರಸಭೆಗಳ ಮುಖ್ಯಾಧಿಕಾರಿ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು, ತೈಲ ಮಾರಾಟ ಕಂಪನಿಗಳ ಪ್ರತಿನಿಧಿಗಳು, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿ ಕಾರಿಯವರು ನಾಮ ನಿರ್ದೇಶನ ಮಾಡಬಹುದಾದ ಇತರ ಸದಸ್ಯರು, ತೈಲ ಮಾರಾಟ ಕಂಪನಿಗಳ ಜಿಲ್ಲಾ ಮಟ್ಟದ ಸಮನ್ವಯಾಧಿಕಾರಿ ಇರಲಿದ್ದಾರೆ.

‘ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚನೆಯಾಗಿಲ್ಲ. ಸಬ್ಸಿಡಿ ಜಮೆ ಆಗದಿದ್ದರೆ ಯಾರಿಗೆ ದೂರು ಕೊಡ ಬೇಕು ಎಂಬ ಮಾಹಿತಿ–ಕೇಂದ್ರೀಕೃತ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ. ಆಧಾರ್‌ ಸಂಖ್ಯೆ ಜೋಡಿಸಿಕೊಳ್ಳಲು ಇನ್ನೂ ಮೂರು ತಿಂಗಳು ಕಾಲಾವಕಾಶ ಇದೆ. ಈ ಕುರಿತು ಕೇಳಿದರೆ ಯಾರ ಬಳಿಯೂ ಸಮರ್ಪಕ ಉತ್ತರ ದೊರೆ ಯುತ್ತಿಲ್ಲ’ ಎಂದು ಕೆಲ ಗ್ರಾಹಕರು ದೂರುತ್ತಿದ್ದಾರೆ.

‘ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ನಡೆಯ ಲಿದ್ದು, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ರಚನೆ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಸೋಮಲಿಂಗ ಗೆಣ್ಣೂರ ಹೇಳಿದರು.

ಗ್ರಾಹಕರು ಏನು ಮಾಡಬೇಕು?
ನೇರ ಸಬ್ಸಿಡಿ ಪಡೆಯಲು ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕ್‌ ಶಾಖೆ ಹಾಗೂ ತಮ್ಮ ಸಿಲಿಂಡರ್‌ ವಿತರಕರಿಗೆ ತಮ್ಮ ಆಧಾರ್‌ ಸಂಖ್ಯೆ ನೀಡಬೇಕು.

ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಸಂಖ್ಯೆ ಜೋಡಣೆಗೆ ಪ್ರತ್ಯೇಕವಾದ ಅರ್ಜಿ ನಮೂನೆ ಇದ್ದು, ಅದು ಆಯಾ ಬ್ಯಾಂಕ್‌ ಶಾಖೆಗಳಲ್ಲಿಯೂ ಲಭ್ಯ. ಅದನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಎಲ್‌ಪಿಜಿ ವಿತರಕರಿಗೂ ಇದೇ ಬಗೆಯ ಇನ್ನೊಂದು ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅದರಲ್ಲಿ ತೈಲ ಕಂಪನಿಯ ಹೆಸರು, ವಿತರಕರ ಹೆಸರು, ಗ್ರಾಹಕರ ಸಂಖ್ಯೆ ಮತ್ತು ಹೆಸರು, ನೋಂದಾಯಿತ ಮೊಬೈಲ್‌ ಸಂಖ್ಯೆ, ವಿಳಾಸ ನಮೂದಿಸಬೇಕು.

ಈ ಅರ್ಜಿಯೊಂದಿಗೆ ಆಧಾರ್‌ ಕಾರ್ಡ್‌, ಎಲ್‌ಪಿಜಿ ಗ್ರಾಹಕರ ಪುಸ್ತಕ,  ಇತ್ತೀಚೆಗೆ ಸಿಲಿಂಡರ್‌ ಪಡೆದ ರಸೀತಿ ಮತ್ತಿತರ ಅಗತ್ಯ ದಾಖಲೆಗಳ ಪ್ರತಿಗಳನ್ನು ಸಲ್ಲಿಸಬೇಕು.

ಬ್ಯಾಂಕ್‌ ಮತ್ತು ಎಲ್‌ಪಿಜಿ ವಿತರಕರಿಗೆ ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು. ಈ ಅರ್ಜಿ ನಮೂನೆಗಳು ವೆಬ್‌ಸೈಟ್‌ (http://petroleum.nic.in/dbtl)ನಲ್ಲಿಯೂ ಲಭ್ಯ.

ಸ್ಪಷ್ಟತೆ ಇಲ್ಲ
ಎಲ್‌ಪಿಜಿ ಗ್ರಾಹಕರ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸುವ ಪ್ರಕ್ರಿಯೆ ನಡೆದಿದೆ. ಸರ್ವರ್‌ ಸಮಸ್ಯೆಯಿಂದಾಗಿ ಹಗಲು ಹೊತ್ತಿನಲ್ಲಿ 25ರಿಂದ 30 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ. ಹೀಗಾಗಿ ನಾಲ್ವರು ಸಿಬ್ಬಂದಿಯನ್ನು ನೇಮಿಸಿ ರಾತ್ರಿ ಇಡೀ ಕೆಲಸ ಮಾಡಿಸುತ್ತಿದ್ದೇವೆ. ನಮ್ಮಲ್ಲಿ ಶೇ.60ರಷ್ಟು ಗ್ರಾಹಕರ ಜೋಡಣೆ ಪೂರ್ಣಗೊಂಡಿದೆ.

ನಾವು ನೋಂದಣಿ ಮಾಡಿದರೆ ಮುಗಿಯಲಿಲ್ಲ. ಬ್ಯಾಂಕ್‌ನವರೂ ಗ್ರಾಹಕರ ಖಾತೆಗೆ ಆಧಾರ್‌ ಸಂಖ್ಯೆ ನೋಂದಣಿ ಮಾಡಬೇಕು. ಆಗ ಮಾತ್ರ ಅವರಿಗೆ ನೇರವಾಗಿ ಸಬ್ಸಿಡಿ ದೊರೆಯಲಿದೆ. ಸಬ್ಸಿಡಿ ಹಣ ಖಾತೆಗೆ ಜಮೆ ಆಗದಿದ್ದರೆ ಗ್ರಾಹಕರು ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಸ್ಪಷ್ಟವಾಗಿಲ್ಲ.
ಮಾರುಕಟ್ಟೆಯ ದರ ಪಡೆದರೂ ಬೇಡಿಕೆಗೆ ತಕ್ಕಷ್ಟು ಸಿಲಿಂಡರ್‌ಗಳನ್ನು ಕಂಪನಿಗಳು ಪೂರೈಸುತ್ತಿಲ್ಲ.
–ಉಮೇಶ ಕಾರಜೋಳ, ಶ್ರೀ ಸಾಯಿ ಹೋಮ್‌ ನೀಡ್ಸ್‌, ವಿಜಾಪುರ.

ಸಿಲಿಂಡರ್ ನಿಲ್ಲಿಸಿಲ್ಲ
ಗ್ರಾಹಕರಿಗೆ ತೊಂದರೆ ಆಗುವುದು ಬೇಡ ಎಂಬ ಕಾರಣಕ್ಕೆ ಅವರ ಆಧಾರ್ ಕಾರ್ಡ್ ನ ಝರಾಕ್ಸ್‌ ಪ್ರತಿಯ ಮೇಲೆಯೇ ಅವರ ಗ್ರಾಹಕ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆಯನ್ನು ಪಡೆಯುತ್ತಿದ್ದೇವೆ. ಕೆಲಸದ ಒತ್ತಡ ಹಾಗೂ ಮಾನವ ಸಂಪನ್ಮೂಲದ ಕೊರತೆಯಿಂದಾಗಿ ನಾವು ಈ ನೋಂದಣಿ ಕೆಲಸವನ್ನು ಹೊರಗುತ್ತಿಗೆಯಿಂದ ಮಾಡಿಸಿಕೊಳ್ಳಬೇಕಾಗಿ ಬಂದಿದೆ.

ಆಧಾರ್‌ ಸಂಖ್ಯೆ ಜೋಡಣೆಯಾದ ಗ್ರಾಹಕರಿಂದ ಪ್ರತಿ ಸಿಲಿಂಡರ್‌ಗೆ ₨1080 ಪಡೆಯುತ್ತಿದ್ದು, ಉಳಿದವರಿಂದ ಸದ್ಯ ಈಗಿರುವ ದರವನ್ನೇ ಪಡೆಯಲಾಗುತ್ತಿದೆ.

–ಸುಶೀಲೇಂದ್ರ ಜಿ.ಮಂಗಲಗಿ, ಸಂಗಮ ಎಂಟರ್‌ಪ್ರೈಸಿಸ್‌, ವಿಜಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT