ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳು–ಬೆಲ್ಲ ಹಂಚುವುದೇಕೆ ಗೊತ್ತೆ?

Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಕರ ಸಂಕ್ರಮಣಕ್ಕೆ ಎಳ್ಳು ಬೆಲ್ಲ ಮತ್ತು ನೆಲಗಡಲೆ ಮೂರನ್ನು ಸೇರಿಸಿ ಹಂಚುವದು ವಾಡಿಕೆ ಆದರೆ ಈ ಮೂರು ಪದಾರ್ಥಗಳೇ ಏಕೆ? ಮಕರ ಸಂಕ್ರಮಣದ ನಂತರ ಋತು ಬದಲಾವಣೆಯಾಗುವುದರಿಂದ ಮುಂದೆ ಬರುವ ಸೆಕೆ ಕಾಲದಲ್ಲಿ ಬೇಕಾಗುವ ಪೋಷಕಾಂಶಗಳನ್ನು ಈ ಪದಾರ್ಥಗಳು ಒದಗಿಸುತ್ತವೆ. ಆದ್ದರಿಂದಲೇ ಪ್ರಾಮುಖ್ಯತೆ.

ಎಳ್ಳು:- ಎಳ್ಳು ಭಾರತದ ಅಂತ್ಯಂತ ಪ್ರಾಚೀನ ತಲಧಾನ್ಯ. ಕ್ರಿ.ಪೂ ೧೬೦೦ ಪೂರ್ವದಿಂದಲೇ ಭಾರತದಲ್ಲಿ ಎಳ್ಳಿನ ಬಳಕೆ ಇತ್ತು. ಖನಿಜ ಮತ್ತು ಜೀವ ಸತ್ವಗಳ ಆಗರವಾಗಿರುವ ಎಳ್ಳನ್ನು ಮೊದಲು ಭಾರತದಲ್ಲಿ ಮಸಾಲೆ ರೂಪದಲ್ಲಿ ಬಳಸುತ್ತಿದ್ದರು. ಈಗ ಎಳ್ಳನ್ನು ವಿವಿಧ ವ್ಯಂಜನಗಳನ್ನು ತೈಯಾರಿಸಲು ಬಳಸುತ್ತಾರೆ. ಅದರ ಪೌಷ್ಠಿಕ ಗುಣದಿಂದಾಗಿ ಎಳ್ಳು ನಮ್ಮೆಲ್ಲರ ದೈನಂದಿನ ಆಹಾರದ ಒಂದು ಭಾಗವಾಗಿದೆ. ಎಳ್ಳಿನಲ್ಲಿ ಶರೀರಕ್ಕೆ ಬೇಕಾದ ಪೋಷಕಾಂಶಗಳಾದ ಸತು, ಮ್ಯಾಗ್ನಿಸಿಯಂ, ರಂಜಕ, ಕಬ್ಬಿಣ, ಮ್ಯಾಂಗನೀಜ್, ಸೆಲೆನಿಯಮ್, ನಿಯಾಸಿನ್, ಟೊಕೊಫೆರಾಯಿಲ್ ಮುಂತಾದ ಖನಿಜಗಳು, ಎ ,ಈ ಮತ್ತು ಬಿ೬ ಮುಂತಾದ ಜೀವಸತ್ವಗಳು ಇರುತ್ತವೆ.

ಎಳ್ಳಿನಲ್ಲಿ ಪ್ರೊಟಿನ್, ಕಾರ್ಬೊಹೈಡ್ರಟ್ ಎಮಿನೋ ಆಸಿಡ್‌ಗಳು ಹೇರಳವಾಗಿದ್ದು, ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುತ್ತದೆ. ಎಳ್ಳಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇದ್ದು, ಇದರ ಸೇವನೆಯಿಂದ ಹಲ್ಲು ಹಾಗೂ ಎಲುಬು ಗಟ್ಟಿಯಾಗುತ್ತವೆ. ಎಳ್ಳಿನ ಸೇವನೆ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೆ, ಮೈಗ್ರೇನ್‌ ತಡೆಗಟ್ಟುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ.

ಎಳ್ಳೆಣ್ಣೆ ಕೂದಲು ಉದರುವುದನ್ನು ತಡೆಯುವುದಲ್ಲದೆ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಚಳಿಗಾಲದಲ್ಲಿ ಸ್ವಲ್ಪ ಬಿಸಿ ಮಾಡಿದ ಎಳ್ಳೆಣ್ಣೆಯಿಂದ ಮಸಾಜ್‌ ಮಾಡಿಕೊಳ್ಳುವುದರಿಂದ ಚರ್ಮ ಮೃದುವಾಗಿರುತ್ತದೆ ಎಳ್ಳು ಶಿಶಿರ ಋತುವಿನಲ್ಲಿ ಶರೀರಕ್ಕೆ ಬೇಕಾಗುವ ಕೊಬ್ಬಿನಾಂಶವನ್ನು ಒದಗಿಸಿ ಜೀರ್ಣ­ಕ್ರಿಯೆಯನ್ನು ಬಲವರ್ಧನೆ ಮಾಡುತ್ತದೆ. ಚಳಿಗಾಲದಲ್ಲಿ ಶರೀರ ದಕೊಬ್ಬಿನಾಂಶ ಉತ್ತೇಜನ ಕಡಿಮೆಯಾಗುವುದರಿಂದ ಮುಂದೆ ಬರುವ ಸೆಕೆಯನ್ನು ಎದುರಿಸಲು ಶರೀರದಲ್ಲಿ ಕೊಬ್ಬಿನಾಂಶ ಬೇಕಾಗುತ್ತದೆ. ಆದ್ದರಿಂದಲೇ ಮಕರ ಸಂಕ್ರಮಣದಂದು ಎಳ್ಳಿನ ಸೇವನೆ.

ಎಳ್ಳಿನಲ್ಲಿ ಎರಡು ಬಗೆಗಳಿವೆ ಬಿಳಿ ಎಳ್ಳು, ಕಪ್ಪುಎಳ್ಳು. ವ್ಯದ್ಯ­ಕೀಯ ದೃಷ್ಟಿಯಿಂದ ಕರಿ ಎಳ್ಳು ಉತ್ತಮ. ಶ್ರಾದ್ಧ ಕರ್ಮಗಳ­ಲ್ಲಿಯೂ ಕರಿ ಎಳ್ಳಿಗೆ ಪ್ರಾಧಾನ್ಯ. ಕರಿ ಎಳ್ಳಿನ ಸೇವನೆಯಿಂದ ಮೂಲವ್ಯಾಧಿ, ಉರಿಮೂತ್ರ ರೋಗಗಳು ಗುಣವಾಗುವವು. ಬೆಲ್ಲ: -ಕಬ್ಬಿನ ಹಾಲಿಗೆ ಯಾವುದೇ ರಾಸಾಯನಿಕ ಬೆರಸದೆ ಬೆಲ್ಲವನ್ನು ತೈಯಾರಿಸುವುದರಿಂದ ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಬೆಲ್ಲದಲ್ಲಿ ಗ್ಲುಕೋಸ್ ಅಂಶ ಕಡಿಮೆ ಇರುವುದರಿಂದ ಇದು ಮಧುಮೇಹಿಗಳಿಗೆ ಒಳ್ಳೆಯದು.

ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿರು ವುದರಿಂದ ರಕ್ತಹೀನತೆಯಿಂದ ಬಳಲುವವರಿಗೆ  ಬೆಲ್ಲ ಪ್ರಯೋಜನಕಾರಿ. ನೆಲಗಡಲೆಯೊಂದಿಗೆ ಸೇವಿಸಿದರೆ ಇನ್ನೂ ಹೆಚ್ಚಿನ ಲಾಭ. ಬೆಲ್ಲವನ್ನು ಸಿಹಿ ಔಷಧಿ ಎಂದೂ ಹೇಳಬಹುದು. ಕಫದೊಂದಿಗೆ ಬರುವ ಕೆಮ್ಮು, ಒಣಕೆಮ್ಮು, ಅಜೀರ್ಣ, ಮಲಬದ್ಧತೆ ಹಾಗೂ ಮೈಗ್ರೇನ್‌ ನಿವಾರಣೆಯಲ್ಲಿ ಬೆಲ್ಲ ಔಷಧಿಯಾಗಿ ಕೆಲಸ ಮಾಡುತ್ತದೆ. ಬೆಲ್ಲದ ಸೇವನೆ ರಕ್ತ ಪರಿಚಲನೆಯನ್ನು ಹತೋಟಿಯಲ್ಲಿಡುವುದಲ್ಲದೇ ಆಸಿಡಿಟಿಯನ್ನು ನಿವಾರಿಸುತ್ತದೆ.

ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಾದ ಅಸ್ತಮಾ ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ, ಧೂಳಿನಿಂದ ಕೂಡಿದ ವಾತಾವರಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೆಲ್ಲದ ಸೇವನೆಯಿಂದ ಲಾಭವಾಗುತ್ತದೆ. ಮನೆಗೆ ಬಂದ ಅತಿಥಿಗಳಿಗೆ ನೀರಿನೊಂದಿಗೆ ಬೆಲ್ಲದ ತುಂಡನ್ನು ಆಸರೆಯಾಗಿ ನೀಡುವುದು ನಮ್ಮ ಸಂಪ್ರದಾಯಗಳಲ್ಲಿ ಒಂದು.

ನೆಲಗಡಲೆ(ಶೇಂಗಾ):- ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುವ ನೆಲಗಡಲೆ ನಾವು ಬಳಸುವ ಮತ್ತೊಂದು ತೈಲಧಾನ್ಯ. ಶೇಂಗಾ ಎಣ್ಣೆ ತುಂಬ ಸ್ವಾದಿಷ್ಟವಾಗಿರುತ್ತದೆ. ಇದನ್ನು ಬಡವರ ಡ್ರೈಫೂಟ್‌ ಎಂದೂ ಹೇಳಬಹುದು. ನೆಲಗಡಲೆ ಭಾರತದ ಬೆಳೆಯಲ್ಲ. ಇದರ ಮೂಲ ಬ್ರಾಜಿಲ್. ಬ್ರಾಜಿಲ್‌ದಿಂದ ಇದು ಏಷ್ಯಾ ಮತ್ತು ಆಫ್ರಿಕಾಖಂಡವನ್ನು ಪ್ರವೇಶಿಸಿತು. ೧೦೦ ಗ್ರಾಂ ನೆಲಗಡಲೆ ಬೀಜದಲ್ಲಿ ಕೊಬ್ಬು ೪೪.೨ ಗ್ರಾಂ, ಕಾರ್ಬೊಹೈಡ್ರೇಟ್ ೨೩.೬ ಗ್ರಾಂ, ಪ್ರೊಟಿನ್ ೨೬.೯ಗ್ರಾಂ ಇರುತ್ತವೆ. ನೆಲಗಡಲೆ ಮಾಂಸಖಂಡಗಳ ವಿಕಾಸಕ್ಕೆ ಸಹಾಯ ಮಾಡುತ್ತದೆ. ಶರೀರದಲ್ಲಿ ಆಮ್ಲಜನಕದ ಕೊರತೆ ಉಂಟಾದಾಗ ಇದು ಹೃದಯವನ್ನು ರಕ್ಷಿಸುತ್ತದೆ.

ಇದರಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಇರುವುದರಿಂದ ಉಪ್ಪಿಲ್ಲದ ಸೇವನೆ ಉತ್ತಮ. ನೆಲಗಡಲೆಯಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನು ದೂರ ಮಾಡುವ ಗುಣವಿದೆ. ಮೂತ್ರಪಿಂಡ, ಪಿತ್ತಕೋಶ ಹಾಗು ಥೈರಾಯ್ಡ್ ಸಮಸ್ಯೆ ಇರುವವರಿಗೆ ನೆಲಗಡಲೆಯ ಸೇವನೆ ಸರಿಯಲ್ಲ. ಆದ್ದರಿಂದಲೇ ಋತು ಪರಿವರ್ತನೆಯ ಸಂಕ್ರಾಂತಿ ಸಮಯದಲ್ಲಿ ದೇಹದ ಸಮತೋಲನವನ್ನು ಕಾಪಾಡುವ ದೃಷ್ಟಿಯಿಂದ ಎಳ್ಳು ಬೆಲ್ಲಗಳ ಜೊತೆಯಲ್ಲಿ ಹುರಿದ ನೆಲಗಡಲೆ ಬೀಜ ಹಾಗೂ ಒಣಕೊಬ್ಬರಿ ಚೂರುಗಳ ಮಿಶ್ರಣವನ್ನು ಸೇವಿಸುವ ಸಂಪ್ರದಾಯ ಬೆಳೆದು ಬಂದಿದೆ. ತಾವು ತಿನ್ನುವದಷ್ಟೇ ಅಲ್ಲದೆ ಇತರರಿಗೂ ಹಂಚಿ ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಂದೇಶ ನೀಡಲಾಗುತ್ತದೆ.  
–ಮುರಲೀಧರ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT