ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎವಾನ್ ವಾಯ್ಸಸ್‌ಗೆ ಐಷಾ ಕಂಠ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಆಕೆ ಕನಸು ಕಂಗಳ ತರುಣಿ. ಉದಯೋನ್ಮುಖ ಸಂಗೀತ ಪ್ರತಿಭೆ. ಆ ಕ್ಷೇತ್ರದಲ್ಲಿ ಮಹತ್ತರವಾದುದ್ದನ್ನು ಸಾಧಿಸುವ ಹಂಬಲ. ಆಕೆಯ ಕನಸುಗಳಿಗೆ ಈಗ ಜೀವ ಬಂದಿದೆ.

ಬೆಂಗಳೂರಿನ ಯುವ ಸಂಗೀತಗಾರ್ತಿ 21 ವರ್ಷದ ಐಷಾ ಅಲಿ, ಈಗ ಎವಾನ್ ಸೌಂದರ್ಯವರ್ಧಕಗಳ ಕಂಪೆನಿ ನಡೆಸುವ `ಎವಾನ್ ವಾಯ್ಸಸ್~ ಜಾಗತಿಕ ಸಂಗೀತ ಸ್ಪರ್ಧೆಯಲ್ಲಿ ಮೂರನೇ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಇನ್ನುಳಿದ ಮೂರು ಸುತ್ತುಗಳಲ್ಲಿ ಆಯ್ಕೆಯಾದಲ್ಲಿ ಜಗತ್ತಿನ ಅತ್ಯುತ್ತಮ ಸಂಗೀತಗಾರ್ತಿಯ ಪಟ್ಟ ಆಕೆಗೆ ದೊರಕಲಿದೆ.

ಮೂಲತಃ ಆಂಧ್ರಪ್ರದೇಶದ ಮದನಪಲ್ಲಿಯ ಐಷಾ ಅಲಿ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸೃಷ್ಟಿ ಸ್ಕೂಲ್ ಆಫ್ ಆರ್ಟ್‌ನಲ್ಲಿ ಗ್ರಾಫಿಕ್ ಡಿಸೈನ್‌ನಲ್ಲಿ ಪದವಿ ಪಡೆಯಲು ಓದುತ್ತಿದ್ದಾರೆ. ಆದರೆ, ಸಂಗೀತ ಆಕೆಯ ಕಣ, ಕಣಗಳಲ್ಲಿ ತುಂಬಿಕೊಂಡಿದೆ.

ಏಳು ವರ್ಷದವರಿದ್ದಾಗ ರಿಷಿ ವ್ಯಾಲಿ ಶಾಲೆಯಲ್ಲಿ ಕಾಯರ್ ತಂಡದ ಸದಸ್ಯೆಯಾದಾಗ ಅವರ ಸಂಗೀತದ ಹಂಬಲ ಚಿಗುರಿತು. ಮೂರು ವರ್ಷಗಳ ಕಾಲ ಭಾರತೀಯ ಶಾಸ್ತ್ರೀಯ ಸಂಗೀತ ಕಲಿತು, ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಎಂಟು ವರ್ಷ ಅರಗಿಸಿಕೊಂಡಿದ್ದಾರೆ.
 
8 ವರ್ಷ ಮೃದಂಗ ಬಾರಿಸುವುದನ್ನು ಕಲಿತಿದ್ದಾರೆ. ಡಿಜಂಬೆ ಎಂಬ ಆಫ್ರಿಕಾ ವಾದ್ಯವೂ ಅವರಿಗೆ ಪ್ರಿಯ. ಬರೀ ಗಾಯನ ಮತ್ತು ವಾದ್ಯ ಬಾರಿಸುವುದರಲ್ಲಷ್ಟೇ ಅವರು ಪರಿಣತರಲ್ಲ. ಆಕೆ ಸ್ವತಃ ಗೀತೆಗಳನ್ನು ರಚಿಸುತ್ತಾರೆ. ಸಂಗೀತ ಸಂಯೋಜನೆ ಮಾಡುತ್ತಾರೆ.

ಪ್ರಸ್ತುತ ಬನಾನಾ ಬೀಚ್‌ನಲ್ಲಿ ಕರೊಕೆ ಜಾಕಿಯ ಕೆಲಸ ನಿರ್ವಹಿಸುತ್ತಿರುವ ಆಕೆ, ಬೆಂಗಳೂರಿನ ಹಲವೆಡೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಸಂಗೀತದ ಹೊರತಾಗಿ ಪೇಂಟಿಂಗ್, ಸಮಕಾಲೀನ ನೃತ್ಯ ಮತ್ತು ರಂಗಭೂಮಿ ಆಕೆಯ ಹೃದಯಕ್ಕೆ ಹತ್ತಿರ.

ತಂದೆ ಮುಮ್ತಾಜ್ ಅಲಿ ಭಜನ್ ಹಾಡುತ್ತಾರೆ. ಅಮ್ಮ ಉಡುಪಿಯವರು. ಹೀಗಾಗಿ ಅಲ್ಪಸ್ಪಲ್ಪ  ಕೊಂಕಣಿ ಗೊತ್ತು. `ಅಪ್ಪ ಅನಾಥ ಮಕ್ಕಳ ಅಭಿವೃದ್ಧಿಗಾಗಿ ನಡೆಸುವ ಸ್ವಯಂಸೇವಾ ಸಂಸ್ಥೆಯ ಜೊತೆ ಕೆಲಸ ಮಾಡುತ್ತಿದ್ದಾರೆ. ಸಂಗೀತವನ್ನು ಆ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಸಂಗೀತದ ಪ್ರೀತಿಯೇ ನನ್ನಲ್ಲೂ ಹರಿದುಬಂದಿದೆ~ ಎನ್ನುತ್ತಾರೆ ಐಷಾ.

ವಯಸ್ಸಿನಲ್ಲಿ ಚಿಕ್ಕವಳಾದರೂ ಐಷಾ, ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸ್ಲಮ್ ಡಾಗ್ ಖ್ಯಾತಿಯ ಸೌಂಡ್ ಎಂಜಿನಿಯರ್ ರಸೂಲ್ ಫುಕುಟ್ಟಿ, ಹಿನ್ನೆಲೆ ಗಾಯನಕ್ಕಾಗಿ ಐಷಾ ಅವರನ್ನು ಸಂಪರ್ಕಿಸಿದ್ದರಂತೆ.

`ಭಾರತದಲ್ಲಿ ಪಾಶ್ಚಿಮಾತ್ಯ ಸಂಗೀತಕ್ಕೆ ಅಷ್ಟು ಅವಕಾಶ ಇಲ್ಲ. ಅಂತಿಮವಾಗಿ ಹಿನ್ನಲೆ ಗಾಯನಕ್ಕೆ ಸೀಮಿತಗೊಳ್ಳುತ್ತೇವೆ. ಸ್ವಂತದ ಆಲ್ಬಂ ತಯಾರಿಸುವ, ಜಾಗತಿಕ ಮಟ್ಟದಲ್ಲಿ ಲೈವ್ ಕಾರ್ಯಕ್ರಮ ನೀಡುವ ತಮ್ಮ ಕನಸು ಈ ಸ್ಪರ್ಧೆಯಿಂದ ನನಸಾಗುವಂತೆ ಕಾಣುತ್ತಿದೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಕಾರಣ. ಜಗತ್ತಿನ ಖ್ಯಾತ ಪಾಪ್ ಗಾಯಕರಾದ ಫರ್ಗಿ, ಡಯಾನ್ ವಾರನ್ ಮತ್ತು ದಂತಕತೆಯೇ ಆಗಿರುವ ಗೀತ ರಚನಾಕಾರ್ತಿ ನತಾಶಾ ಬೆಡಿಂಗ್‌ಫೀಲ್ಡ್ ಅವರೊಂದಿಗೆ ಬೆರೆಯಲು ಸಾಧ್ಯವಾಯಿತು~ ಎಂದು ಅಭಿಮಾನದಿಂದ ಹೇಳುತ್ತಾರೆ ಆಕೆ.
 

ಜಾಗತಿಕ ಸೌಂದರ್ಯವರ್ಧಕಗಳ ಕಂಪೆನಿಗಳ ಎವಾನ್ ಆರಂಭವಾಗಿ 125 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಅಂಗವಾಗಿ `ಎವಾನ್ ವಾಯ್ಸಸ್~ ಜಾಗತಿಕ ಯುವ ಸಂಗೀತ ಪ್ರತಿಭೆಗಾಗಿ ಶೋಧ ನಡೆಸಿದೆ. ಎವಾನ್ ವಾಯ್ಸಸ್ ವೆಬ್‌ಸೈಟ್‌ನಲ್ಲಿ ಈ ಪ್ರತಿಭಾ ಶೋಧದ ಕುರಿತು ತಿಳಿದುಕೊಂಡ ಐಷಾ ಅಲಿ, ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಇಂಗ್ಲಿಷ್ ಗೀತೆ ಆಯ್ದುಕೊಂಡು, ಆ ಗೀತೆಯನ್ನು ಹಾಡಿ, ವಿಡಿಯೋ ಮಾಡಿ ಕಳುಹಿಸಿದ್ದರು.
ಇದರ ಆಧಾರದ ಮೇಲೆ ವಿವಿಧ ದೇಶಗಳ 178 ಜನರನ್ನು ಮೊದಲ ಸುತ್ತಿಗೆ ಆಯ್ಕೆ ಮಾಡಲಾಯಿತು. ಮಲೇಷ್ಯಾದಲ್ಲಿ ನಡೆದ ಆಡಿಷನ್‌ನಲ್ಲಿ ಈ ಪೈಕಿ 100 ಜನರನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಯಿತು. ಇದರಲ್ಲಿ  ಐಷಾ ಸೇರಿ ಇಬ್ಬರು ಭಾರತೀಯರು ಆಯ್ಕೆಯಾಗಿದ್ದಾರೆ.
ಮೂರನೇ ಸುತ್ತಿನಲ್ಲಿ ಮೊದಲ ಎರಡು ಸುತ್ತಿಗಿಂತ ಕಠಿಣವಾದ ಗೀತೆಯನ್ನು ಕೊಡಲಾಗಿದೆ. ಅಭ್ಯರ್ಥಿಗಳು ಅದನ್ನು ಹಾಡಿ ವಿಡಿಯೋ ಮಾಡಿ  `ಎವಾನ್ ವಾಯ್ಸಸ್~ನಲ್ಲಿ ಅಪ್‌ಲೋಡ್ ಮಾಡಬೇಕು. ವಿಡಿಯೋ ವೀಕ್ಷಿಸಿ ಯಾರೇ ಬೇಕಾದರೂ ತಮ್ಮ ನೆಚ್ಚಿನ ಸಂಗೀತಗಾರರ ಪರ ಮತ ಹಾಕಬಹುದು. ಈ 100 ಜನರಲ್ಲಿ ಅತಿಹೆಚ್ಚು ಮತ ಪಡೆದ 25 ಜನರನ್ನು ಹಾಲಿವುಡ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ಗೆ ಆಯ್ಕೆ ಮಾಡಲಾಗುವುದು. ಅಲ್ಲಿ ಆಯ್ಕೆಯಾದ 10 ಜನರಿಗೆ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾಗವಹಿಸುವ, ಅಂತರ್‌ರಾಷ್ಟ್ರೀಯ ಖ್ಯಾತಿಯ ಪಾಪ್ ತಾರೆಗಳ ಜೊತೆ ಸಂಗೀತ ರೆಕಾರ್ಡ್ ಮಾಡಿಕೊಳ್ಳುವ ಅವಕಾಶ.
ಬೆಂಗಳೂರಿನ ಐಷಾ ಅಲಿಗೆ ಮತ ಹಾಕಲು www.AvonVoices.com ಭೇಟಿ ನೀಡಿ. ಕೊನೆಯ ದಿನ ಜೂನ್ 20.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT