ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ದಿನ ಅಧಿಕಾರ ಗೊತ್ತಿಲ್ಲ

Last Updated 9 ಫೆಬ್ರುವರಿ 2012, 19:15 IST
ಅಕ್ಷರ ಗಾತ್ರ

ಬೆಂಗಳೂರು: `ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆ ಎಂಬುದು ಗೊತ್ತಿಲ್ಲ. ಆದರೆ, ಅಧಿಕಾರದಲ್ಲಿ ಇರುವಷ್ಟೂ ದಿನ ಒಳ್ಳೆಯ ಕೆಲಸ ಮಾಡುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಧಾನಮಂಡಲ ಸಚಿವಾಲಯದ ನೌಕರರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, `ನಾನು ಲಾಬಿ ಮಾಡಿ ಮುಖ್ಯಮಂತ್ರಿ ಹುದ್ದೆ ಪಡೆದವನಲ್ಲ. ಈ ಹುದ್ದೆಗೆ ಬರುವ ಯೋಚನೆ ಕೂಡ ನನ್ನಲ್ಲಿ ಇರಲಿಲ್ಲ. ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆ. ಜನಸಾಮಾನ್ಯರ ಏಳಿಗೆಗಾಗಿಯೇ ಈ ಅಧಿಕಾರವನ್ನು ಉಪಯೋಗಿಸುತ್ತೇನೆ~ ಎಂದರು.

`ಮೊದಲ ಬಾರಿಗೆ ಸರ್ಕಾರಿ ನೌಕರರಿಂದ ಅಭಿನಂದನೆ ಪಡೆಯುತ್ತಿರುವುದು ಸಂತಸದ ಸಂಗತಿ. ದೇಶದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರಿಂದ ಸನ್ಮಾನ ಸ್ವೀಕರಿಸಿದ ಈ ದಿನ ನನ್ನ ಪಾಲಿಗೆ ಪವಿತ್ರವಾದುದು. ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಗೆದ್ದ ತಕ್ಷಣ, ಅಧಿಕಾರಿಗಳಿಗೆ ಸೇವೆಯಿಂದ ನಿವೃತ್ತಿಯಾದ ಬಳಿಕ ಸನ್ಮಾನಿಸಲಾಗುತ್ತದೆ. ಏಕೆಂದರೆ, ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ಕೆಲಕಾಲದ ಬಳಿಕ ಸನ್ಮಾನಿಸುವುದಕ್ಕೆ ಅರ್ಹರಿಲ್ಲದಷ್ಟು ಕೆಟ್ಟು ಹೋಗುತ್ತಾರೆ. ಅಧಿಕಾರಿಗಳು ನಿವೃತ್ತಿಯ ವೇಳೆಗೆ ಪರಿಶುದ್ಧರಾಗುತ್ತಾರೆ~ ಎಂದು ಹೇಳಿದರು.

`ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು. ಈ ಅವಧಿಯಲ್ಲಿ ನಿರಂತರ ಸವಾಲುಗಳು ಎದುರಾಗಿವೆ. ಎಲ್ಲರ ಸಹಕಾರದಿಂದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದೇನೆ. ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಆಡಳಿತ ನಡೆಸುತ್ತಿದ್ದೇನೆ. ಅಧಿಕಾರಿಗಳು ಮತ್ತು ನೌಕರರ ಸಹಕಾರದಿಂದ ಇದು ಸಾಧ್ಯವಾಗಿದೆ. ನಾವು ಎಡವುತ್ತಿದ್ದೇವೆ ಎಂದು ಗಮನಕ್ಕೆ ಬಂದರೆ ತಕ್ಷಣವೇ ಅಧಿಕಾರಿಗಳು, ನೌಕರರು ನಮ್ಮನ್ನು ಎಚ್ಚರಿಸಬೇಕು~ ಎಂದು ಮನವಿ ಮಾಡಿದರು.

ಉತ್ತಮ ಆಡಳಿತದ ನಿರೀಕ್ಷೆ: ನ್ಯಾ.ವೆಂಕಟಾಚಲಯ್ಯ ಅವರು ಮಾತನಾಡಿ, `ಆರು ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಸದಾನಂದ ಗೌಡ ಅವರು ಕಾರ್ಯನಿರ್ವಹಿಸಿದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಒಳ್ಳೆಯ ಆಡಳಿತವನ್ನು ನೀಡಿದ್ದಾರೆ. ಮುಂದೆಯೂ ಅದನ್ನು ಕಾಯ್ದುಕೊಳ್ಳುವ ನಿರೀಕ್ಷೆ ಹುಟ್ಟಿಸಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ಖುದ್ದಾಗಿ ನೋಡಬೇಕು ಎಂದುಕೊಂಡಿದ್ದೆ. ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT