ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಮಾ ಕಾಯ್ದೆ ಹಿಂಪಡೆಯಲು ಆಗ್ರಹ

Last Updated 2 ಡಿಸೆಂಬರ್ 2013, 9:13 IST
ಅಕ್ಷರ ಗಾತ್ರ

ಹೂವಿನಹಡಗಲಿ: ಪ್ರತಿಭಟನೆ, ಮುಷ್ಕರ ನಡೆಸುವ ಸರ್ಕಾರಿ ವಲಯಗಳ ಕಾರ್ಮಿಕರ ಮೇಲೆ ‘ಎಸ್ಮಾ ಕಾಯ್ದೆ’ ಜಾರಿಗೊಳಿಸುವ ತೀರ್ಮಾನವನ್ನು ಸರ್ಕಾರ ಕೂಡಲೇ ಹಿಂಪಡೆ­ಯಬೇಕೆಂದು ಎಐಟಿಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ಆಗ್ರಹಿಸಿದರು.

ತಾಲ್ಲೂಕು ಅಂಗನವಾಡಿ  ಫಡೆರೇಷನ್ ಮತ್ತು ಎಐಟಿಯುಸಿ  ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿ ಉದ್ದೇಶಿಸಿ  ಮಾತನಾಡಿದರು.

ಬದುಕಿನ ಹಕ್ಕಿಗಾಗಿ  ಹೋರಾಟ ಮಾಡುವ  ನೌಕರರನ್ನು ಪ್ರಬಲ ಕಾಯ್ದೆ, ಕಾನೂನುಗಳಿಂದ ಕಟ್ಟಿ ಹಾಕುವ ಕ್ರಮ ಸರಿಯಲ್ಲ. ಸದನದಲ್ಲಿ ಚರ್ಚೆಗೆ ಅವಕಾಶ ನೀಡದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಕಾಯ್ದೆ ಜಾರಿಗೆ ಮುಂದಾಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದರು.

ಸರ್ಕಾರಕ್ಕೆ ತಾಕತ್ತಿದ್ದರೆ ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ವಜಾ ಮಾಡಿ ನೋಡಲಿ ಎಂದು ಸವಾಲೆಸೆದರು.

ಕಡಿಮೆ ಸಂಬಳ ನೀಡಿ ದುಡಿಸಿಕೊಳ್ಳುತ್ತಿರುವ ಸರ್ಕಾರಗಳೇ ಕಾರ್ಮಿಕರನ್ನು  ಶೋಷಿಸುತ್ತಿವೆ. ಘೋಷಣೆ ಮಾಡಿರುವಂತೆ  ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ಗೌರವ ಧನ ಮತ್ತು ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ 5 ಸಾವಿರ ಪಿಂಚಣಿ ನೀಡಬೇಕು. ಕೂಡಲೇ ಕಾರ್ಯಕರ್ತೆಯರ ನ್ಯಾಯಯತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಫೆಡರೇಷನ್ ಅಧ್ಯಕ್ಷೆ ಎನ್. ಮಂಜುಳಾ ಮಾತನಾಡಿ,  ಪ್ರತಿಯೊಂದು ಬೇಡಿಕೆಯನ್ನು ಹೋರಾಟದ ಮೂಲಕವೇ  ಈಡೇರಿಸಿಕೊಳ್ಳಬೇಕಾಗಿರುವುದು ಅಂಗನವಾಡಿ ಸಿಬ್ಬಂದಿಯ ದೌರ್ಭಾಗ್ಯ.  ನಮ್ಮಿಂದ ಎಲ್ಲ ರೀತಿಯ ಸೇವೆ ಪಡೆಯುವ ಸರ್ಕಾರ ಅಂಗನವಾಡಿ ಸಿಬ್ಬಂದಿಯನ್ನು ‘ಸಿ’ ಮತ್ತು ‘ಡಿ’ ದರ್ಜೆ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿದರು.

ಕಸಾಪ ಅಧ್ಯಕ್ಷ  ಸುರೇಶ  ಅಂಗಡಿ, ಅಂಗವಿಕಲರ ಸಂಘದ ಅಧ್ಯಕ್ಷ ಎಸ್.ಚಂದ್ರಪ್ಪ, ಶಿವಕುಮಾರಗೌಡ ಇತರರು ಮಾತನಾಡಿದರು.  ಫೆಡರೇಷನ್ ಕಾರ್ಯದರ್ಶಿ ಬಿ. ಕಮಲಾಕ್ಷಿ, ಎನ್. ಸುನಂದಾ, ಬಿ. ಹೇಮಾವತಿ, ಜೆ. ಇಂದಿರಾ, ಎಸ್. ಹೇಮಾವತಿ, ವಿಜಯ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  ತಹಶೀಲ್ದಾರ್ ವಿಜಯಕುಮಾರ, ತಾ.ಪಂ. ಇಒ ಮಂಜಣ್ಣ ಮತ್ತು ಸಿಡಿಪಿಒ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT