ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸೆಲ್ಸಿ ಕೈ ಕೆಸರಾದರೆ ಬಾಯಿ ಮೊಸರು

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪ್ರಿಯ ವಿದ್ಯಾರ್ಥಿಗಳೇ,
ಪ್ರಸಕ್ತ ಸಾಲಿನಲ್ಲಿ ನಡೆಯುವ ಎಸ್ಸೆಸೆಲ್ಸಿ ಪರೀಕ್ಷೆ­ಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗ­ಬೇಕೆಂಬ ನಿಮ್ಮ ಆಕಾಂಕ್ಷೆ ಸಹಜವಾದುದು. ಆದರೆ ಅದು ಫಲಪ್ರದ ಆಗಬೇಕಾದರೆ ನೀವು ಕೆಲವು ಕರ್ತವ್ಯಗಳನ್ನು ಪಾಲಿಸಲೇಬೇಕಾಗುತ್ತದೆ. ಇದೋ ಇಲ್ಲಿದೆ ಅವುಗಳ ವಿವರ:

ಶಾಂತವಾಗಿ ಇರಿ: ಶಾಲೆಯಿಂದ ಮನೆಗೆ ಬಂದ ಮೇಲೆ ಸ್ವಲ್ಪ ಕಾಲ ವಿಶ್ರಮಿಸಿಕೊಂಡು ಒಂದು ಗಂಟೆ  ಆಟದಲ್ಲಿ ತೊಡಗಿಕೊಳ್ಳಿ. ಬಳಿಕ ನೀವು ಆ ದಿನ ಕಲಿತುಕೊಂಡ ಪಾಠಗಳತ್ತ ಗಮನ ಹರಿಸಿ. ಸುಮಾರು ಒಂದೂವರೆ ಗಂಟೆ ವ್ಯಾಸಂಗ ಮಾಡಿ. ನಿಮ್ಮ ಮನಸ್ಸಿನಲ್ಲಿರುವ ಅಂಶಗಳನ್ನು ಬರೆಯಿರಿ. ಈ ವಿಷಯಗಳು ಮತ್ತು ಪಠ್ಯ ಪುಸ್ತಕಗಳಲ್ಲಿರುವ ವಿಷಯಗಳು ಒಂದೇ ಆಗಿದ್ದರೆ ನಿಮ್ಮ ಪ್ರಯತ್ನಕ್ಕಾಗಿ ಸಂತಸಪಡಿ.

ಇಲ್ಲದಿದ್ದರೆ, ನೀವು ಪ್ರಯತ್ನಕ್ಕೆ ಇನ್ನಷ್ಟು ಒತ್ತು ಕೊಡಿ. ಏನೇ ಆದರೂ ಪ್ರಯತ್ನ ಬಿಡಬೇಡಿ. ಸತತ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು. ರಾತ್ರಿ ಹೊತ್ತು ಮನಸ್ಸಿಗೆ ಹಿತವಾದ  ಮಧುರ ಸಂಗೀತವನ್ನು ಆಲಿಸಿ. 10 ಗಂಟೆಗೆ ಮಲಗಿ. ಮಲಗಿದ ನಂತರ ಮನಸ್ಸಿನಲ್ಲಿ ಅಂದು ಓದಿದ ವಿಷಯಗಳನ್ನು ಮನನ ಮಾಡಿ.

ಬೆಳಿಗ್ಗೆ 6 ಗಂಟೆಗೆ ಎದ್ದು ಮುಖ ತೊಳೆದುಕೊಂಡು ಒಂದು ತಾಸು ಓಡಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಿ. 7 ಗಂಟೆಗೆ ಮನೆ ಸೇರಿ ಅಂದು ನಡೆಯುವ ಪಾಠ ಪ್ರವಚನಗಳತ್ತ ಗಮನ ಹರಿಸಿ. ಉಪಾಧ್ಯಾಯರು ಹೇಳಿಕೊಡುವ ಪಾಠಗಳ ಮೇಲೆ ಶ್ರದ್ಧೆ ಇರಲಿ.  ಯಾವ ಸಂದರ್ಭದಲ್ಲೂ ಮನಸ್ಸಿಗೆ ಅಶಾಂತಿ ತುಂಬಬೇಡಿ. ಮಾನಸಿಕ ಅಶಾಂತಿಯು ತುಂಬಾ ತೊಂದರೆ ಕೊಡುತ್ತದೆ. ಅದು ನಿಮ್ಮ ಹಾದಿಯನ್ನೇ ಬದಲಿಸಿಬಿಡಬಹುದು.

ಆದ್ದರಿಂದ ಅದನ್ನು ಲಘುವಾಗಿ ಪರಿಗಣಿಸದೆ ಅಶಾಂತಿಗೆ ಕಾರಣ ಕಂಡುಹಿಡಿದು ಅದರಿಂದ ದೂರ ಇರಿ. ದುರ್ಮಾರ್ಗದಲ್ಲಿ ಹೆಜ್ಜೆ ಹಾಕಿದರೆ ಅನಾಹುತ ತಪ್ಪಿದ್ದಲ್ಲ. ಯಾವಾಗಲೂ ಒಳ್ಳೆಯದನ್ನೇ ಯೋಚಿಸಿ. ಕೆಟ್ಟದ್ದನ್ನು ಯೋಚಿಸಿದರೆ ಕೆಡುಕಾಗುತ್ತದೆ. ಸದಾ  ಹರ್ಷಚಿತ್ತರಾಗಿರಿ. ಅದು ನಿಮ್ಮ ಮುಖಕ್ಕೆ ಕಾಂತಿ ಕೊಡುತ್ತದೆ. ಕಾಂತಿಹೀನ ಮುಖ ಮುಜುಗರವನ್ನು ಉಂಟು ಮಾಡುತ್ತದೆ.

ದುಶ್ಚಟಗಳಿಂದ ದೂರ ಇರಿ: ಸದಾ ಕಾಲ ಕೆಟ್ಟ ವಿಚಾರಗಳಿಂದ ದೂರ ಇರಿ. ಒಳ್ಳೆಯವರ ಸಹವಾಸ ಮಾಡಿ. ಅದರಿಂದ ಆಗುವ ಉಪಯೋಗ ಅಪಾರ. ಉಪಾಧ್ಯಾಯರು ನಿಮ್ಮ ಹಿತಚಿಂತಕರು ಎಂಬುದನ್ನು ತಿಳಿಯಿರಿ. ಅವರು ಮಾಡುವ ಉಪದೇಶಗಳಿಂದ ಪ್ರೇರೇಪಿತರಾಗಿ ಅವರ  ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕಿ. ಹಿಂಸಾಚಾರ ಬೀರುವ ಟಿ.ವಿ. ದೃಶ್ಯಗಳು, ಸಿನಿಮಾಗಳನ್ನು ನೋಡಬೇಡಿ. ಅವು ನಿಮ್ಮ ಮನಸ್ಸಿನ ಮೇಲೆ ಭಯಂಕರ ಪರಿಣಾಮವನ್ನು ಉಂಟು ಮಾಡುತ್ತವೆ. ಅನೈತಿಕ ವಿಚಾರಗಳಿಂದಲೂ ದೂರ ಇರಬೇಕು. ಅವುಗಳಿಂದ ಆಗುವ ಪರಿಣಾಮ ಅತ್ಯಂತ ದುಃಖಕರ ಆಗಿರುತ್ತದೆ.

ತರ್ಕಬದ್ಧವಾಗಿ ಚಿಂತಿಸಿ: ಯಾವಾಗಲೂ ತರ್ಕಬದ್ಧವಾಗಿ ಯೋಚಿಸಿ. ಯಾವ ವಿಷಯವನ್ನೂ ವಿಚಾರ ಮಾಡದೆ ನಂಬಬೇಡಿ. ವಿಷಯಗಳನ್ನು ಕಂಠಪಾಠ ಮಾಡಬೇಡಿ. ಅದು ನಿಮಗೆ ಮುಂದೆ ತೊಂದರೆ ಕೊಡಬಹುದು. ಯಾವ ವಿಷಯವನ್ನೂ ಕಷ್ಟಕರ ಎಂದು ಪರಿಗಣಿಸಬೇಡಿ. ಕಷ್ಟದ ಮೂಲ ಕಾರಣವನ್ನು ತಿಳಿದುಕೊಂಡು ಅದನ್ನು ನಿವಾರಿಸಲು ಪ್ರಯತ್ನಿಸಿ. ಆಗ  ಆ ವಿಷಯ ನಿಮಗೆ ಸುಲಭ ಎನಿಸತೊಡಗುತ್ತದೆ. ಯಾವುದೇ ವಿಷಯದ ಮೂಲ ತತ್ವಗಳನ್ನು ಅರಿತುಕೊಳ್ಳಿ. ಏಕೆಂದರೆ ವಿಷಯ ಅದರಲ್ಲಿರುವ ಮೂಲತತ್ವವನ್ನು ಅವಲಂಬಿಸಿರುತ್ತದೆ.

ಭಯ ಬೇಡ: ಪರೀಕ್ಷೆಗೆ ಹೆದರಬೇಡಿ. ಅದು ನಿಮ್ಮ ವ್ಯಾಸಂಗದ ಮಟ್ಟವನ್ನು ಅಳೆಯುತ್ತದೆ ಅಷ್ಟೆ.  ಹೇಗೆ ವೈದ್ಯರು ಒಬ್ಬ ರೋಗಿಯ ಆರೋಗ್ಯವನ್ನು ತಪಾಸಣೆ ಮಾಡಿ ಆರೋಗ್ಯದ ಮಟ್ಟ ಕಡಿಮೆಯಾಗಿದ್ದರೆ ಸೂಕ್ತ ಸಲಹೆಯನ್ನು ನೀಡುತ್ತಾರೋ, ಹಾಗೆಯೇ ಉಪಾಧ್ಯಾಯರು ನಿಮಗೆ ನಿಮ್ಮ ವ್ಯಾಸಂಗದ ಗುಣಮಟ್ಟ ಏರಲು ಸೂಕ್ತ ಸಲಹೆ ಕೊಡುತ್ತಾರೆ. ಪದೇ ಪದೇ ಪರೀಕ್ಷೆ ಮಾಡುವುದರಿಂದ ವ್ಯಾಸಂಗದ ಗುಣಮಟ್ಟ ಏರಲು ಸಾಧ್ಯವಾಗುತ್ತದೆ.

ಬೇಗ ಮಲಗಿ, ಬೇಗ ಏಳಿ: ರಾತ್ರಿ ಹೊತ್ತು ನಿದ್ದೆಗೆಟ್ಟು ಓದಿದರೆ ಆರೋಗ್ಯ ಹದಗೆಡುತ್ತದೆ. ಆರೋಗ್ಯವೇ ಭಾಗ್ಯ.  ಅಂದಂದಿನ ಪಾಠಗಳನ್ನು ಅಂದಂದೇ ಓದಿಕೊಂಡರೆ ಪರೀಕ್ಷೆ ಸಮೀಪಿಸುವಾಗ  ನಿದ್ದೆಗೆಟ್ಟು ರಾತ್ರಿಯಿಡೀ ಓದಬೇಕಾದ ಅವಶ್ಯಕತೆ ಇರುವುದಿಲ್ಲ.
ಮುಖ್ಯಾಂಶ ಪಟ್ಟಿ: ಪರೀಕ್ಷೆಗೆ ಮುನ್ನವೇ ಪ್ರತಿ ವಿಷಯದಲ್ಲೂ ನೀವು ಮುಖ್ಯಾಂಶಗಳ ಪಟ್ಟಿಯನ್ನು  ತಯಾರಿಸಿಕೊಂಡು ಅದರಲ್ಲಿನ ಅಂಶಗಳನ್ನು ಪದೇ ಪದೇ ಮನನ ಮಾಡಿಕೊಳ್ಳಿ.

ಹೀಗೆ ಮಾಡುವುದರಿಂದ ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಅತ್ಯಂತ ಸುಲಭವಾಗುತ್ತದೆ. ಪರೀಕ್ಷೆಯ ದಿನದಂದೂ ಆಯಾ ದಿನದ ವಿಷಯಗಳ ಪಟ್ಟಿಯನ್ನು ನೋಡಿ ಮನಸ್ಸನ್ನು ಸಿದ್ಧ ಮಾಡಿಕೊಳ್ಳಿ. ಪುಸ್ತಕಗಳನ್ನು ಓದಿ ಗಾಬರಿ ಪಡಬೇಡಿ. ಹಾಗಾದರೆ ಮನಸ್ಸಿಗೆ ಆಘಾತ ಉಂಟಾಗಿ ಉತ್ತರಗಳನ್ನು ಬರೆಯಲಾಗುವುದಿಲ್ಲ. ಪಟ್ಟಿಗಳು ಪುಸ್ತಕಗಳಲ್ಲಿರುವ ವಿಷಯಗಳನ್ನೇ ಒಳಗೊಂಡಿರುವುದರಿಂದ ಅವುಗಳನ್ನು ನೋಡಿದಾಗ ನಿಮಗೆ ಧೈರ್ಯ ಬರುತ್ತದೆ.

ಸಮಯದತ್ತ ನಿಗಾ ಇರಲಿ: ವಿನಾಕಾರಣ ಭಾವೋದ್ರೇಕ ಮಾಡಿಕೊಳ್ಳಬೇಡಿ. ಪರೀಕ್ಷೆಯ ದಿನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಯಾವ ರೀತಿಯಾದ ಭಾವೋದ್ರೇಕಕ್ಕೂ ಅವಕಾಶ ಕೊಡಬೇಡಿ. ಮನಸ್ಸು ಹಗುರವಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು.
ಚಿಂತೆ ಬೇಡ: ಗಾಬರಿ ಮಾಡಿಕೊಳ್ಳದೆ ಶಾಂತಚಿತ್ತರಾಗಿರಿ. ಪರೀಕ್ಷೆಯ ದಿನ ಸಮಯಕ್ಕೆ ಮುಂಚೆಯೇ ಶಾಲೆಗೆ ಹೋದರೆ ಸೂಕ್ತ. ಇಲ್ಲದಿದ್ದರೆ ಗಾಬರಿಗೊಂಡು ಮನಸ್ಸು ಚಿಂತೆಗೊಳಗಾಗುತ್ತದೆ. ಆಗ ಮನಸ್ಸಿನಲ್ಲಿ ಅಡಕವಾಗಿರುವ ವಿಷಯಗಳು ಆವಿಯಾಗುತ್ತವೆ.

ಆತುರ ಯಾಕೆ?: ‘ಆತುರಗಾರನಿಗೆ ಬುದ್ಧಿ ಮಟ್ಟು’ ಎಂಬ ಗಾದೆ ನಿಮ್ಮ ನೆನಪಿನಲ್ಲಿ ಇರಲಿ. ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಉತ್ತರ ಬರೆಯಲು ಮುಂದಾಗಬೇಡಿ. ಅದನ್ನು ಒಂದು ಬಾರಿ ಕೂಲಂಕಶವಾಗಿ ಓದಿ. ಮೊದಲು ಅತಿ ಸುಲಭವಾದ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಿದರೆ ಧೈರ್ಯ ಬರುತ್ತದೆ. ಮೊದಲೇ ಕಠಿಣವಾದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದರೆ ಸಮಯ ವ್ಯರ್ಥವಾಗಿ ಧೈರ್ಯ ಕೆಡುವ ಸಂಭವ ಜಾಸ್ತಿ.

ಆಲೋಚನೆ ಮಾಡಿ ಉತ್ತರ ಬರೆಯಿರಿ. ಎಲ್ಲ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ಬರೆದಿದ್ದೀರ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಮಯಕ್ಕೆ ಬೆಲೆ ಕೊಡಿ. ಇಷ್ಟೆಲ್ಲ ಆಸ್ಥೆಯಿಂದ ಓದಿನಲ್ಲಿ ತೊಡಗಿಸಿಕೊಂಡರೆ, ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಖಂಡಿತಾ ಸಿಗುತ್ತದೆ. ಕೈ ಕೆಸರಾದರೆ ಬಾಯಿ ಮೊಸರು ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT