ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸಲ್ಸಿ: ಯಶಸ್ಸು ಸುಲಭ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಎಸ್ಸೆಸೆಲ್ಸಿ ಎಂದರೆ ಸಾಕು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಆತಂಕ. ಮಕ್ಕಳಿಗಿಂತ ಪೋಷಕರೇ ಹೆಚ್ಚಿನ ಒತ್ತಡ ಅನುಭವಿಸುತ್ತಾರೆ. ತಮ್ಮ ಮಕ್ಕಳ ಮತ್ತು ಶಾಲೆಯ ಫಲಿತಾಂಶ ಹೆಚ್ಚಳ ಆಗಬೇಕು ಎಂಬುದು ಪೋಷಕರು ಮತ್ತು ಶಿಕ್ಷಕರ ಕಾಳಜಿ. ಆದರೆ ಈ ಕಾಳಜಿಗೆ ತಕ್ಕಂತೆ ಮಕ್ಕಳಿಗೆ ಎಸ್ಸೆಸೆಲ್ಸಿಯ ಮಹತ್ವ ತಿಳಿಸಿಕೊಡುವ ಕೆಲಸ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.

ಪ್ರತಿ ವಿದ್ಯಾರ್ಥಿಯ ಜೀವನದಲ್ಲೂ ಎಸ್ಸೆಸೆಲ್ಸಿ ಮಹತ್ವದ ಘಟ್ಟ. ಈ ಹಂತದ ಶಿಕ್ಷಣ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತು ಮಕ್ಕಳಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಿರುವುದರಿಂದ, ಪ್ರೌಢಶಾಲಾ ಹಂತದ ಶಿಕ್ಷಣದಲ್ಲಿ ಸುಧಾರಣೆಯ ಬೆಳಕು ಕಾಣಬೇಕಿದೆ.

ವಿದ್ಯಾರ್ಥಿಗಳು ಎಸ್ಸೆಸೆಲ್ಸಿಗೆ ಬಂದ ಕೂಡಲೇ ಅವರಲ್ಲಿ ಒಂದು ರೀತಿಯ ಭಯ, ಆತಂಕ ಸೃಷ್ಟಿಯಾಗುತ್ತಿದೆ. ಅದಕ್ಕೆ ಪೋಷಕರು ಮತ್ತು ಶಿಕ್ಷಕರೇ ಬಹುತೇಕ ಕಾರಣ ಎಂಬುದು ಸಾವಿರಾರು ಮಕ್ಕಳ ಜೊತೆ ನಡೆಸಿದ ಸಂವಾ­ದದ ಸಂದರ್ಭದಲ್ಲಿ ವ್ಯಕ್ತವಾಗಿದೆ. ಹೀಗಾಗಿ ಮಕ್ಕಳ ಪರೀಕ್ಷೆಯ ತಯಾರಿಗಾಗಿ ಶಿಕ್ಷಕರು ಮತ್ತು ಪೋಷಕರು  ಅನುಸರಿಸಬೇಕಾದ ವಿಧಾನ ಬದಲಾಗಬೇಕಿದೆ.

ಜೂನ್‌ನಲ್ಲಿ ಶಾಲೆಗಳು ಆರಂಭವಾಗು­ತ್ತವೆ. ಆ ತಿಂಗಳಲ್ಲಿ ಮಕ್ಕಳ ದಾಖಲಾತಿ, ಇನ್ನಿತರ ಕೆಲಸಗಳು ಇರುವುದರಿಂದ ಸಹಜ­ವಾಗಿಯೇ ಶಿಕ್ಷಕರ ಮೇಲೆ ಒತ್ತಡ ಇದ್ದೇ ಇರುತ್ತದೆ. ಹಾಗಾಗಿ ಆ ಅವಧಿಯಲ್ಲಿ ಪಾಠ, ಪ್ರವಚನಗಳು ನಡೆಯುವುದು ಅಷ್ಟಕ್ಕಷ್ಟೇ. ಆದ್ದರಿಂದ ಜುಲೈ ತಿಂಗಳ ಮೊದಲ ವಾರ­ದಲ್ಲೇ 10ನೇ ತರಗತಿ ಮಕ್ಕಳಿಗೆ ವಿಶೇಷ ಮಾಹಿತಿ ಕೊಡುವ ಕೆಲಸ ಆಗಬೇಕು. ಆದರೆ ರಾಜ್ಯದಲ್ಲಿ ಇಂತಹ ವಾತಾ­ವರಣ                 ಶೇ 99.99ರಷ್ಟು ಶಾಲೆಗಳಲ್ಲಿ ಕಾಣಸಿಗದು.

‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಎಂಬಂತೆ ಮಕ್ಕಳಿಗೆ ಪರೀಕ್ಷಾ ತರಬೇತಿ ಆರಂಭವಾಗುವುದು ಡಿಸೆಂಬರ್, ಜನವರಿ, ಫೆಬ್ರುವರಿಯಲ್ಲಿ! ವಾರ್ಷಿಕ ಪರೀಕ್ಷೆಗೆ ಕೆಲವೇ ದಿನಗಳು ಇರುವಾಗ ನಡೆಯುವ ಈ ಸರ್ಕಸ್‌ನಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಸೃಷ್ಟಿಯಾಗು­ತ್ತಿದೆ. ಆದರೆ ಇದು ಶಿಕ್ಷಕರು ಮತ್ತು ಪೋಷಕರ ಗಮನಕ್ಕೆ ಬರುತ್ತಿಲ್ಲ. ಇದು ಫಲಿತಾಂಶ ಹಿನ್ನಡೆಗೆ ಕಾರಣವೂ ಹೌದು.

ಸಿಗದ ಟಿಪ್ಸ್
ಎಸ್ಸೆಸೆಲ್ಸಿ ಪರೀಕ್ಷಾ ತರಬೇತಿಗೆ ಸಂಬಂಧಿಸಿ­ದಂತೆ ಇಲ್ಲೊಂದು ವಿಷಯವನ್ನು ಚರ್ಚೆ ಮಾಡ­ಬೇಕಾದ ಅಗತ್ಯ ಇದೆ. 2012– -13ನೇ ಶೈಕ್ಷಣಿಕ ವರ್ಷದ ಅವಧಿಯಲ್ಲಿ 10ನೇ ತರಗತಿಯ ಮಕ್ಕ­ಳಿಗೆ ಪರೀಕ್ಷೆಗೆ ಸಿದ್ಧರಾಗುವ ತರಬೇತಿ ಕಾರ್ಯಕ್ರ­ಮಕ್ಕೆ ಮಕ್ಕಳ ಆಕಾಡೆಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಎಲ್ಲ ತಾಲ್ಲೂಕು ಕಚೇರಿಗಳಿಗೆ ಬಿಡುಗಡೆ ಮಾಡಿದ ಮೊತ್ತ 15 ಸಾವಿರ ರೂಪಾಯಿ. ಅಂದರೆ ಒಟ್ಟು 35 ಲಕ್ಷ ರೂಪಾಯಿ ಮಾತ್ರ. ಈ ಹಣದಲ್ಲಿ ಮಕ್ಕಳಿಗೆ ಸಿಕ್ಕ ತರಬೇತಿ ಯಾವ ರೀತಿ ಇತ್ತು ಎಂಬುದನ್ನು ಗಮನಿಸಿದರೆ, ಅವರಲ್ಲಿ ವಿಜ್ಞಾನ ವಿಷಯದ ಉತ್ತೇಜನಕ್ಕಾಗಿ ನೀಡುತ್ತಿರುವ ‘ಇನ್‌್ಸಪೈರ್‌ ಅವಾರ್ಡ್‌’ ನೆನಪಿಗೆ ಬರುತ್ತದೆ. ಶಿಕ್ಷಣ ಇಲಾ­ಖೆಯ ಈ ಕಾರ್ಯಕ್ರಮ ಹೇಗೆ ಹೆಚ್ಚಿನ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಸೃಷ್ಟಿಸಲಿಲ್ಲವೋ ಅದೇ ರೀತಿ ಇಲ್ಲಿ ನೀಡಿದ ತರಬೇತಿಯಲ್ಲೂ ಮಕ್ಕಳು ಪರೀಕ್ಷೆಯನ್ನು ಎದುರಿಸಲು ಬೇಕಾದ ಟಿಪ್ಸ್ ನಿರೀಕ್ಷಿತ ಪ್ರಮಾಣದಲ್ಲಿ ಸಿಗಲಿಲ್ಲ.
ನಾಲ್ಕೈದು ಶಾಲೆಗಳ ನೂರಾರು ಮಕ್ಕಳನ್ನು ಒಂದೆಡೆ ಸೇರಿಸಿ ಶಾಲೆಯ ಹೊರಗೆ ಅಥವಾ ದೊಡ್ಡ ಸಭಾಂಗಣದಲ್ಲಿ ಈ ಕಾರ್ಯಕ್ರಮ ಮಾಡಿ­­ದರೆ ಮಕ್ಕಳಿಗೆ ಸೂಕ್ತ ಮಾಹಿತಿ ತಲುಪುವುದಾ­ದರೂ ಹೇಗೆ? ಸರ್ಕಾರಿ ಯೋಜನೆಗಳು ಸಮಾ­ಜದ ಕಟ್ಟಕಡೆಯ ವ್ಯಕ್ತಿಯನ್ನು ಹೇಗೆ ತಲುಪುವು­ದಿಲ್ಲವೋ ಅದೇ ರೀತಿ ಈ ಕಾರ್ಯಕ್ರಮ ಸಹ ಎಂಬುದು ಅನೇಕ ಶಿಕ್ಷಕರ ಅಭಿಮತವಾಗಿತ್ತು. ಹಣ ಖರ್ಚಾಯಿತೇ ಹೊರತು ನಿರೀಕ್ಷಿತ ಯಶಸ್ಸು ಸಿಗಲಿಲ್ಲ ಎನ್ನುವುದಕ್ಕೆ ಎಸ್ಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳೇ ಸಾಕ್ಷಿ. ಮಕ್ಕಳ ಅಕಾಡೆಮಿಯ ಉದ್ದೇಶ ಒಳ್ಳೆಯದೇ, ಆದರೆ ಜಾರಿಯಲ್ಲಿ ದೋಷವಿತ್ತು.

ಇನ್ನು ಈ ಸಾಲಿನ ಪರೀಕ್ಷೆಗೆ ನಾಲ್ಕು ತಿಂಗಳಷ್ಟೇ ಬಾಕಿ ಇದೆ. ಈಗಲೇ ಮಕ್ಕಳಿಗೆ ಎಸ್ಸೆಸೆಲ್ಸಿಯ ಮಹತ್ವ, ಪರೀಕ್ಷೆಗೆ ಸಿದ್ಧರಾಗುವ ಬಗೆ, ಪ್ರತಿ ವಿಷಯದಲ್ಲೂ ಉತ್ತರ ಬರೆಯುವ ಮಾದರಿಯ ಜೊತೆಗೆ ಒಂದಿಷ್ಟು ಸಾಧಕರ ಸಾಧನೆಯ ಮಾತುಗಳನ್ನೂ ಶಿಕ್ಷಕರು ಹೇಳಬೇಕು. ಇಷ್ಟು ಮಾಡಿದ್ದೇ ಆದರೆ ನಿಮ್ಮ ಮಕ್ಕಳ, ನಿಮ್ಮ ಶಾಲೆಯ 10ನೇ ತರಗತಿ ಫಲಿತಾಂಶ ಸುಧಾರಣೆಯಲ್ಲಿ ಉಜ್ವಲ ಬೆಳಕು ಕಾಣುತ್ತದೆ. ಯಶಸ್ಸು ನೀವು ತೆಗೆದುಕೊಳ್ಳುವ ನಿರ್ಧಾರ ಮತ್ತು ಅನುಸರಿಸುವ ವಿಧಾನದಲ್ಲಿ ಇದೆ. ಒಮ್ಮೆ ಪ್ರಯತ್ನಿಸಿ ನೋಡಿ.

(ಪರೀಕ್ಷಾ ತಯಾರಿ ಹೇಗೆ?– ಮುಂದಿನ ವಾರ)

ಮಹತ್ವ ತಿಳಿಸಿ?

*ಪ್ರೌಢಶಾಲಾ ಹಂತದಲ್ಲಿ ದೊರೆಯುವ ಶಿಕ್ಷಣ ಪ್ರತಿ ವಿದ್ಯಾರ್ಥಿಯ ಭವಿಷ್ಯ ರೂಪಿಸಬಲ್ಲದು.

*ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ವಿದ್ಯಾರ್ಥಿಗಳಿಗೆ ಮುಂದೆ ಸಿಗುವ ಅವಕಾಶಗಳನ್ನು ನಿರ್ಧರಿಸುತ್ತವೆ.

*ಪಿ.ಯು.ಸಿ., ಡಿಪ್ಲೊಮಾ, ಐ.ಟಿ.ಐ., ಡಿ.ಇಡಿ., ಸೇರಿದಂತೆ ಅನೇಕ ಕೋರ್ಸ್‌ಗಳ  ಸರ್ಕಾರಿ ಸೀಟು ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಅವಕಾಶ ನಿರ್ಧರಿಸುವುದು ಈ ಅಂಕಗಳೇ ಎಂಬುದನ್ನು ಅರ್ಥ ಮಾಡಿಸಿ. ಸರ್ಕಾರಿ ನೌಕರಿಗೂ ಈ ಅಂಕಗಳೇ ಮೂಲ ಎಂದು ಹೇಳಿಕೊಡಿ.

*ಯಾವುದೇ ನೌಕರಿಗೆ ಅರ್ಜಿ ಹಾಕಿದಾಗ 10ನೇ ತರಗತಿಯ ಅಂಕಪಟ್ಟಿ ಕೇಳುತ್ತಾರೆ. ಉದ್ಯೋಗಕ್ಕೆ ಆಯ್ಕೆಯಾದರೆ           ಸಂದ­ರ್ಶ­­ನದಲ್ಲೂ ಈ ಅಂಕಗಳನ್ನೇ ಕೇಳುತ್ತಾರೆ. ವಿಶೇಷ ಎಂದರೆ, ಐಎಎಸ್ ಸಂದರ್ಶನದಲ್ಲಿ ಸಹ ಎಸ್ಸೆಸ್ಸೆಲ್ಸಿಯಲ್ಲಿ ಓದಿದ ವಿಷಯ ಕೇಳುತ್ತಾರೆ ಎನ್ನುವುದು ತಿಳಿಯಬೇಕು.

*ಐಎಎಸ್, ಕೆಎಎಸ್, ಎಫ್‌ಡಿಎ, ಎಸ್‌ಡಿಎ, ಸಾಫ್‌್ಟವೇರ್‌, ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ... ಹೀಗೆ ಯಾವುದೇ ಹುದ್ದೆ ಅಥವಾ ಅಧ್ಯಯನಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಎಸ್ಸೆಸ್ಸೆಲ್ಸಿ ಹಂತದ ಪ್ರಶ್ನೆಗಳನ್ನು ಕೇಳುತ್ತಾರೆ. ಇದನ್ನು ಮಕ್ಕಳ ಮನಸ್ಸಿಗೆ ನಾಟುವಂತೆ, ಸಾಧ್ಯವಾದರೆ ಉದಾಹರಣೆ ಸಹಿತ ತಿಳಿಸಿ.

*ಇವುಗಳ ಜೊತೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಬಗೆಯನ್ನು ಹೇಳಿಕೊಡಿ. ಇಡೀ ವರ್ಷ ಅವರು ಮಾಡಬೇ­ಕಾದ ಕೆಲಸಗಳೇನು, ವಿಷಯಗಳ ನೋಟ್ಸ್, ಪ್ರತಿ ವಿಷಯ­ದಲ್ಲಿ ಉತ್ತರಿಸುವ ಮಾದರಿಯನ್ನು ಮಕ್ಕಳಿಂದಲೇ ಬರೆಸಿ.

*ಪಠ್ಯಕ್ರಮವನ್ನು ಆದಷ್ಟೂ ಡಿಸೆಂಬರ್ ಆರಂಭದಲ್ಲೇ ಮುಗಿಸಿದರೆ, ಉಳಿದ ಸಮಯವನ್ನು ಪರೀಕ್ಷಾ ತಯಾರಿಗಾಗಿ ಮೀಸಲಿಡಬಹುದು.

*ಇಷ್ಟೆಲ್ಲ ಆದ ಮೇಲೆ ಸಾಧಕರ ಸಾಧನೆಯ ಮಾತುಗಳನ್ನು ಅವರ ಮನಸ್ಸಿನಲ್ಲಿ ತುಂಬಿ. ನಿಮ್ಮ ಸುತ್ತ ಇರುವ ಸಾಧಕರ ಜೀವನದ ಕಥೆಗಳನ್ನು ಹೇಳಿ ಅವರಲ್ಲಿ ಕುತೂಹಲ ಸೃಷ್ಟಿಸಿ.

*ನಮ್ಮ ಎಲ್ಲ ಸಮಸ್ಯೆಗಳಿಗೆ ಒಂದೇ ಉತ್ತರ, ಅದು ಶಿಕ್ಷಣ ಎಂಬುದನ್ನು ಸರಿಯಾಗಿ ಅರ್ಥ ಮಾಡಿಸಿ.

*ಆ್ಯಪಲ್ ಕಂಪ್ಯೂಟರ್ಸ್‌ನ ಸ್ಟೀವ್ ಜಾಬ್ ಹೇಳಿದ ಹಾಗೆ, ‘ಸಮಯ ಬಹಳ ಕಡಿಮೆ ಇದೆ. ಇನ್ನೊಬ್ಬರ ಬಗ್ಗೆ ಮಾತನಾಡದೆ ನಿನ್ನ ಕೆಲಸ ನೀನು ಮಾಡು, ಯಶಸ್ಸು ನಿನ್ನನ್ನು ಹುಡುಕಿಕೊಂಡು ಬರುತ್ತದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT