ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ಬಗೆ ಹೀಗೆ...

Last Updated 25 ಫೆಬ್ರುವರಿ 2012, 9:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಪ್ರಜಾವಾಣಿ~, `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಬಳಗವು ಇಲ್ಲಿಯ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ, ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಮತ್ತು ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಕುರಿತ ಕೌನ್ಸೆಲಿಂಗ್ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವರವಾದ ಮಾಹಿತಿಗಳನ್ನು ಪಡೆದರು.

ಬೆಂಗಳೂರಿನ `ಸಿಗ್ಮಾ ಇಂಡಿಯಾ ಇನ್ಫೋಟೆಕ್ ಫೌಂಡೇಷನ್~ ನಿರ್ದೇಶಕ ಅಮೀನ್ ಇ ಮುದಸ್ಸರ್, ಬಿವಿಬಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ಉಪಪ್ರಾಚಾರ್ಯ ಪ್ರೊ.ಬಿ.ಎಲ್.ದೇಸಾಯಿ ಹಾಗೂ ಶ್ರೀಮತಿ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಗೌರಿ ಬಿ.ಗಡಾದ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಎಂದು ವಿವರಿಸಿದ ಅಮೀನ್ ಮುದಸ್ಸರ್, `ಪರೀಕ್ಷೆಗೆ ಸಿದ್ಧತೆ ನಡೆಸಲು ಮುಖ್ಯವಾಗಿ ಓದಬೇಕೆಂಬ ತಹತಹಿಕೆ ಅತ್ಯಗತ್ಯ. ನಾವೇನಾಗಬೇಕು ಎಂದು ಮೊದಲು ಕನಸು ಕಾಣಬೇಕು. ನಂತರ ಅದನ್ನು ಕಾರ್ಯರೂಪಕ್ಕಿಳಿಸಲು ಶ್ರಮಿಸಬೇಕು. ಸಮಯ ಪರಿಪಾಲನೆ ಅತ್ಯಗತ್ಯ. ಪ್ರಶಾಂತವಾದ ವಾತಾವರಣದಲ್ಲಿ ಕುಳಿತುಕೊಂಡು ವಿಷಯಗಳನ್ನು ಮನನ ಮಾಡಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಪ್ರಶ್ನೆಗಳಿಗೆ ಉತ್ತರಿಸುವಾಗ ಸಾಮಾನ್ಯ ಪ್ರಜ್ಞೆಯನ್ನು ಉಪಯೋಗಿಸಬೇಕು. ಎಲ್ಲ ಉತ್ತರಗಳೂ ಗೊತ್ತಿವೆ ಎಂದು ಬರೆಯಲು ಹೊರಡುವುದಕ್ಕಿಂತ ಮುಂಚೆ ಯಾವ ಉತ್ತರವನ್ನು ಹೆಚ್ಚು ಸ್ಪಷ್ಟವಾಗಿ ಬರೆಯಬಲ್ಲೆ ಎಂಬುದನ್ನು ಅರಿತುಕೊಂಡು ಅದಕ್ಕೆ ಉತ್ತರಿಸಬೇಕು. ಇದಕ್ಕೂ ಮೊದಲು ಸ್ನೇಹಿತರೊಂದಿಗೆ ಸೇರಿಕೊಂಡು ನಮಗೆ ಸಂದೇಹವಿರುವ ವಿಷಯಗಳನ್ನು ಚರ್ಚಿಸಬೇಕು. ನಂತರ ಇಡಿಯಾಗಿ ಪುಸ್ತಕಗಳನ್ನು ಓದುವ ಶ್ರಮ ತೆಗೆದುಕೊಳ್ಳುವ ಬದಲು ಕೆಲ ಸಂಕೇತಗಳನ್ನು ಬಳಸಿ ವಿಷಯ ಗ್ರಹಿಸಲು ಯತ್ನಿಸಬೇಕು~ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ನಂತರ ಇರುವ ಶೈಕ್ಷಣಿಕ ಅವಕಾಶಗಳ ಬಗ್ಗೆ ಮಾತನಾಡಿದ ಪ್ರೊ.ಬಿ.ಎಲ್.ದೇಸಾಯಿ, `ಎಸ್ಸೆಸ್ಸೆಲ್ಸಿ ಪೂರೈಸಿದ ವಿದ್ಯಾರ್ಥಿಗಳ ಮುಂದೆ ಪಿಯುಸಿ ಮತ್ತು ಡಿಪ್ಲೊಮಾ ಸೇರುವ ಎರಡು ಆಯ್ಕೆಗಳಿದ್ದು, ತಾಂತ್ರಿಕ ಶಿಕ್ಷಣದಲ್ಲಿ ಆಸಕ್ತಿ ಉಳ್ಳವರು ಪಾಲಿಟೆಕ್ನಿಕ್ ಸೇರಬಹುದು.

ಒಮ್ಮಿಂದೊಮ್ಮೆಲೆ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆಯುವ ಬದಲು ಡಿಪ್ಲೊಮಾ ಪೂರೈಸಿದ ಬಳಿಕ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಏಕೆಂದರೆ ಎಂಜಿನಿಯರಿಂಗ್‌ಗೆ ಅಗತ್ಯವಾದ ತಾಂತ್ರಿಕ ಮಾಹಿತಿ ಡಿಪ್ಲೊಮಾದಿಂದ ಬಂದಿರುತ್ತದೆ~ ಎಂದರು.

ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಇದೀಗ ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಸ್ಪರ್ಧೆ ಒಡ್ಡುತ್ತಿವೆ. ಆ ರಾಷ್ಟ್ರಗಳಲ್ಲಿಯೂ ಇದೀಗ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುತ್ತಿದೆ~ ಎಂದು ಎಚ್ಚರಿಸಿದರು.


ಪಾಲಿಟೆಕ್ನಿಕ್ ಮಾಡುವುದರಿಂದ ಇರುವ ಅನುಕೂಲತೆಗಳ ಬಗ್ಗೆ ವಿವರಿಸಿದ ಪ್ರೊ.ಗೌರಿ ಗಡಾದ, `ಅಂಚೆ ತೆರಪಿನ ಬದಲು ತರಗತಿಗಳಿಗೆ ಹಾಜರಾಗುವ ಮೂಲಕ ಕೋರ್ಸ್‌ಗಳನ್ನು ಪೂರೈಸಿದ ವಿದ್ಯಾರ್ಥಿಗಳು ಹೆಚ್ಚಿನ ಶೈಕ್ಷಣಿಕ ಗುಣಮಟ್ಟವನ್ನು ಹೊಂದಲು ಸಾಧ್ಯವಾಗುತ್ತದೆ. ಅವರಿಗೆ ಕೇಂದ್ರ, ರಾಜ್ಯ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲದೇ ಖಾಸಗಿ ವಲಯದ ಪ್ರತಿಷ್ಠಿತ ಕಂಪೆನಿಗಳಲ್ಲೂ ಉದ್ಯೋಗಾವಕಾಶಗಳು ಹೆಚ್ಚಿರುತ್ತವೆ~ ಎಂದರು.

`ವಿದ್ಯಾರ್ಥಿ ಪಡೆದ ಅಂಕಗಳ ಆಧಾರದ ಮೇಲೆ ಅವನು ಏನಾಗಬೇಕು ಎಂಬುದನ್ನು ಪೋಷಕರು ನಿರ್ಧರಿಸುತ್ತಾರೆ. ಆದರೆ ಆ ವಿದ್ಯಾರ್ಥಿಗೆ ತನ್ನ ಆಯ್ಕೆಯ ಕೋರ್ಸ್ ಆಯ್ದುಕೊಳ್ಳಲು ಅವಕಾಶ ಕೊಡಬೇಕು~ ಎಂದು ನುಡಿದರು.

ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯ, ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆ, ಸಾಖರೆ ಇಂಗ್ಲಿಷ್ ಮಾಧ್ಯಮ ಶಾಲೆ, ಪಿಳ್ಳೈ ಪ್ರೌಢಶಾಲೆ, ಶ್ರೀನಗರದ ಶ್ರೀಮತಿ ಲೀಲಾಬಾಯಿ ಲಕ್ಷ್ಮಣರಾವ್ ನಾಡಿಗೇರ ಪ್ರೌಢಶಾಲೆ, ರೋಟರಿ ಪ್ರೌಢಶಾಲೆ, ಶಾಂತಿನಾಥ ಪ್ರೌಢಶಾಲೆ, ಧಾರವಾಡದ ಕೆಎನ್‌ಕೆ ಬಾಲಕಿಯರ ಪ್ರೌಢಶಾಲೆ ಸೇರಿದಂತೆ ಅವಳಿ ನಗರದ ಹಲವು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT