ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕಾರ್ಯಯೋಜನೆ'

Last Updated 5 ಸೆಪ್ಟೆಂಬರ್ 2013, 20:16 IST
ಅಕ್ಷರ ಗಾತ್ರ

ಬೆಂಗಳೂರು:  `ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಗತಿ ಸಾಧಿಸಲು ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗಿದೆ. ಶಿಕ್ಷಕರು ಹೆಚ್ಚು ಶ್ರಮ ವಹಿಸಿ ಪಾಠ ಮಾಡಿದರೆ ಈ ವರ್ಷ ಫಲಿತಾಂಶದಲ್ಲಿ ಹೆಚ್ಚಳ ಆಗುತ್ತದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕ ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು. 

ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಶಿಕ್ಷಕರ ಸದನದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿ, `ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ 28ನೇ ಸ್ಥಾನ ಗಳಿಸಿತ್ತು. ಈ ವರ್ಷ 23ನೇ ಸ್ಥಾನ ಗಳಿಸಿದೆ. ಮುಂದಿನ ವರ್ಷ ಫಲಿತಾಂಶ ಇನ್ನಷ್ಟು ಹೆಚ್ಚಲು ಎಲ್ಲರೂ ಕೈಜೋಡಿಸಬೇಕು' ಎಂದರು.

`ವಿದ್ಯಾರ್ಥಿಗಳ ಜ್ಞಾನ ವಲಯ ವಿಸ್ತರಿಸಲು ಶಿಕ್ಷಕರು ನಿರಂತರವಾಗಿ ಶ್ರಮಿಸಬೇಕು. ಆಗ ಮಾತ್ರ ಶಿಕ್ಷಕರು ನಡೆದಾಡುವ ವಿಶ್ವಕೋಶ ಎಂಬ ಹೇಳಿಕೆಗೆ ಅರ್ಥ ಬರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆದರ್ಶ, ತ್ಯಾಗ ಹಾಗೂ ಮಾನವೀಯ ಗುಣಗಳನ್ನು ಬಿತ್ತಬೇಕು' ಎಂದು ಹೇಳಿದರು.

ಶಾಸಕ ಎಸ್.ಆರ್.ವಿಶ್ವನಾಥ್, `ದೇಶದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಇವತ್ತು ಗುರುಗಳ ಸ್ಥಿತಿ ಅತಂತ್ರವಾಗಿದೆ. ಹಿಂದೆ ಮಕ್ಕಳಿಗೆ ಶಿಕ್ಷೆ ವಿಧಿಸಿ ಪಾಠ ಹೇಳಿಕೊಡಲಾಗುತ್ತಿತ್ತು. ಈಗ ವಿದ್ಯಾರ್ಥಿಗಳಿಗೂ ಬೈದರೂ ದೊಡ್ಡ ಸುದ್ದಿಯಾಗುತ್ತದೆ. ಶಿಕ್ಷಕರೇ ಬಿಸಿಯೂಟ ತಯಾರಿಸಬೇಕಾದ ಸ್ಥಿತಿ ಇದೆ' ಎಂದರು.

ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಗರ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಜಿನ್ನುಬಾಯಿ ನಾಗರಾಜು, ಜಿಲ್ಲಾ ಪಂಚಾಯ್ತಿಯ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಎಂ.ಮಾರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಂಜನಪ್ಪ, ಗೋಪಾಲಕೃಷ್ಣ, ರಮೇಶ್, ನರಸಿಂಹ ಮತ್ತಿತರರು ಇದ್ದರು.

ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 24 ಮಂದಿ ಶಿಕ್ಷಕರಿಗೆ ಹಾಗೂ ಶಿಕ್ಷಕರ ಸಂಘದ ವತಿಯಿಂದ 24 ಮಂದಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿಕ್ಷಕರ ದಿನ: ನಗರದ ಮೌಂಟ್ ಲಿಟೆರಾ ಝೀ ಸ್ಕೂಲ್‌ನಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಸುಮಾರು 400 ವಿದ್ಯಾರ್ಥಿಗಳು ಪಾಲ್ಗೊಂಡು ಚಿತ್ರಕಲೆ, ಶಿಕ್ಷಕರ ಕೈಗೆ ಬ್ಯಾಂಡ್ ಕಟ್ಟುವ ಮೂಲಕ ಗುರುಗಳ ಸೇವೆಯನ್ನು ಸ್ಮರಿಸಿದರು.

ಪ್ರಾಂಶುಪಾಲೆ ರಮಾ ನಂದಕುಮಾರ್ ಮಾತನಾಡಿ, ಗುರುಗಳಲ್ಲಿ ವಿಶೇಷ ಭಾವನೆ ಮೂಡುವಂತೆ ಮಾಡಲು ವಿದ್ಯಾರ್ಥಿಗಳು ವಿಶೇಷ ಪ್ರಯತ್ನ ಮಾಡಿದ್ದಾರೆ. ವಿದ್ಯಾರ್ಥಿಗಳ ಉತ್ಸಾಹ ಮೆಚ್ಚುಗೆಗೆ ಪಾತ್ರವಾದುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT