ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಎಂಟು ಪೂರ್ವಸಿದ್ಧತಾ ಪರೀಕ್ಷೆಗಳು ಬೇಕೆ?

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಏಪ್ರಿಲ್ 2 ರಿಂದ ಪ್ರಾರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಳಗಾಗಿ ವಿದ್ಯಾರ್ಥಿಗಳಿಗೆ ಎಂಟು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಬೇಕೆಂದು `ಮೇಲಿನಿಂದ~ ಸೂಚನೆ ಬಂದಿದೆ.

ಇದರಲ್ಲಿ ರಾಜ್ಯಮಟ್ಟ, ಜಿಲ್ಲಾಮಟ್ಟ, ತಾಲ್ಲೂಕು ಮಟ್ಟ, ಶಾಲಾ ಮಟ್ಟದ ತಲಾ ಒಂದೊಂದು ಪರೀಕ್ಷೆಗಳು ಸೇರಿವೆ. ಇದಲ್ಲದೆ ಎರಡು ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಮನೆಯಲ್ಲಿ ಅಭ್ಯಾಸಮಾಡಿ ಬಂದು ಶಾಲೆಯಲ್ಲಿ ಉತ್ತರ ಬರೆಯಬೇಕು. ಮತ್ತೆರಡು ಪರೀಕ್ಷೆಗಳ ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಮನೆಯಲ್ಲೇ ಬರೆದು ತಂದು ಒಪ್ಪಿಸಬೇಕು. ಇದು ಈಗಿನ ಯೋಜನೆ.

ಆರು ವಿಷಯಗಳಿಗೆ ದಿನಕ್ಕೆ ಮೂರು ಗಂಟೆ 15 ನಿಮಿಷಗಳಂತೆ ಒಂದು ಪರೀಕ್ಷೆ ನಡೆಯಲು ಒಂದು ವಾರ ಬೇಕಾಗುತ್ತದೆ. ಒಟ್ಟು ಎಂಟು ಪರೀಕ್ಷೆಗಳು ನಡೆದರೆ ಒಟ್ಟು ಎರಡು ತಿಂಗಳಾಗುತ್ತವೆ. ಈ ಎರಡೂ ತಿಂಗಳು ಪ್ರತಿದಿನ ವಿದ್ಯಾರ್ಥಿಯು ಒಂದೊಂದು ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಎಸ್‌ಎಸ್‌ಎಲ್‌ಸಿ ಮಂಡಲಿ ಪರೀಕ್ಷೆ ನಡೆದ ಮೇಲೆ ಮೌಲ್ಯಮಾಪನವು 10 ರಿಂದ 15 ದಿನಗಳವರೆಗೆ ನಡೆಯುತ್ತದೆ. ಹಾಗಾದರೆ ಈ ಎಂಟು ಸರಣಿ ಪರೀಕ್ಷೆಗಳ ಮೌಲ್ಯಮಾಪನ ಹೇಗೆ ಮತ್ತು ಯಾವಾಗ ನಡೆಯುತ್ತದೆ? ಅಥವಾ ಮೌಲ್ಯಮಾಪನದ ಅಗತ್ಯ ಇಲ್ಲವೆ? ಯಾವ ಗುರಿಯನ್ನು ಸಾಧಿಸಲು ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ? ಎಂಬುದಕ್ಕೆ ಉತ್ತರ ಕೊಡುವವರಿಲ್ಲ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮೊದಲು ಒಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವುದು 80ರ ದಶಕದ ಪ್ರಾರಂಭದಲ್ಲಿ ಆರಂಭವಾಗಿತ್ತು. ಕ್ರಮೇಣ ಈ ಪೂರ್ವ ಸಿದ್ಧತಾ ಪರೀಕ್ಷೆಗಳ ಸಂಖ್ಯೆ ಹೆಚ್ಚುತ್ತಾ ಬಂತು. ಕಳೆದ ವರ್ಷ ಇಂತಹ ಐದು ಪರೀಕ್ಷೆಗಳನ್ನು ನಡೆಸಲಾಯಿತು. ಈ ವರ್ಷ ಆ ಸಂಖ್ಯೆ ಎಂಟಕ್ಕೆ ಏರಿದೆ.

ಎರಡು ವರ್ಷಗಳ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ 10ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸದಿದ್ದರೂ ಪರವಾಗಿಲ್ಲ, ನಡೆಸಿದರೂ ನೆಪ ಮಾತ್ರಕ್ಕೆ ನಡೆಸಿ, ಮುಂದಿನ ತರಗತಿಗಳಿಗೆ ಕಳಿಸಿ ಎಂಬ ಸೂಚನೆಯನ್ನು ರಾಜ್ಯಗಳಿಗೆ ನೀಡಲಾಗಿತ್ತು.

ಸ್ವತಃ ಕೇಂದ್ರೀಯ ವಿದ್ಯಾಲಯಗಳಲ್ಲೂ ಅಂತಹ ಪರೀಕ್ಷೆಯನ್ನು ರದ್ದುಗೊಳಿಸುವ ಪ್ರಸ್ತಾಪವೂ ಬಂತು, ಆದರೆ ಅನೇಕ ಪಾಲಕರು (ವಿದ್ಯಾರ್ಥಿಗಳಲ್ಲ!) ಇದನ್ನು ವಿರೋಧಿಸಿದರು.

ಆಗ ಮಧ್ಯ ಪ್ರವೇಶಿಸಿದ ಪ್ರಧಾನಿ ಮನಮೋಹನ ಸಿಂಗ್ ಅವರು `ಇಂತಹ ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವುದಿಲ್ಲ~ ಎಂದು ಹೇಳಿ ಪಾಲಕರನ್ನು ಸಮಾಧಾನಗೊಳಿಸಿದರು.

ದೇಶದಲ್ಲಿ ಪರೀಕ್ಷಾ ಭಯದಿಂದ ಪ್ರತಿವರ್ಷ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎರಡು ವರ್ಷಗಳ ಹಿಂದೆ 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವ ಪ್ರಸ್ತಾಪ ಮಾಡುತ್ತಾ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್, `ದೇಶದ ಯಾವುದೇ ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾನು ಸಹಿಸಲಾರೆ~ ಎಂದು ಭಾವುಕರಾಗಿ ಘೋಷಿಸಿದ್ದರು.

ಈ ಪರೀಕ್ಷೆಗಳು ಶಿಕ್ಷಣದ ಅನಿವಾರ್ಯ ಅಂಗವೇನಲ್ಲ. ಒಬ್ಬ ವಿದ್ಯಾರ್ಥಿ ಚೆನ್ನಾಗಿ ಕಲಿಯುತ್ತಿದ್ದರೆ ಅವನನ್ನು ಪರೀಕ್ಷಿಸದೆಯೇ ಬಿಟ್ಟರೂ ಅಂತಹ ಅನಾಹುತ ಏನೂ ಆಗುವುದಿಲ್ಲ.

ಆದರೆ ಕಲಿಯುವ ಆಸಕ್ತಿಯೇ ಇಲ್ಲದ ವಿದ್ಯಾರ್ಥಿಯನ್ನು ಮೇಲಿಂದ ಮೇಲೆ ಪರೀಕ್ಷಿಸುವುದು ಯಾವ ಪುರುಷಾರ್ಥಕ್ಕಾಗಿ? ಅಂತಹ ವಿದ್ಯಾರ್ಥಿಗಳಿಗೆ ಇದೊಂದು ರೀತಿಯ ಹಿಂಸೆ. ಮಕ್ಕಳು ಚೆನ್ನಾಗಿ ಉರು ಹೊಡೆದು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ ಅವರಲ್ಲಿ ಕುತೂಹಲ, ಸಂಶೋಧನಾಸಕ್ತಿ ಮತ್ತು ಪ್ರತ್ಯುತ್ಪನ್ನ ಬುದ್ಧಿ ಬೆಳೆಯಬಹುದೆ?

ಈ ಸರಣಿ ಪರೀಕ್ಷೆಯಿಂದ ಒಲ್ಲದ ಮನಸ್ಸಿನ ಮೊಂಡು ವಿದ್ಯಾರ್ಥಿಗಳಿಗೆ ಕತ್ತೆ ಚಾಕರಿ ನೀಡಿ, ಹಟ ತೊಟ್ಟು ಕೆಲಸ ತೆಗೆಸಬಹುದು. ಶಿಕ್ಷಕರಿಗೆ ಬಿಡುವಿಲ್ಲದಂತೆ ಮೌಲ್ಯಮಾಪನದ ಕೆಲಸವನ್ನು ಹೇರಬಹುದು.
 
ಆದರೆ ಪ್ರತಿಭಾವಂತ ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಮ್ಮದೇ ಯೋಜನೆ ಹಾಕಿಕೊಂಡು, ಸ್ವಇಚ್ಛೆಯಿಂದ ಸಾಕಷ್ಟು ಸಿದ್ಧರಾಗಲು ಸಾಧ್ಯವಾಗುವುದಿಲ್ಲ. ನ್ಯಾಯಶಾಸ್ತ್ರದ ಪ್ರಥಮ ಪಾಠವೆಂದರೆ ಒಬ್ಬ ಅಪರಾಧಿಗೆ ಶಿಕ್ಷೆಯಾಗದಿದ್ದರೂ ಚಿಂತೆಯಿಲ್ಲ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಈ ಸರಣಿ ಪರೀಕ್ಷೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾಲಿಗೆ `ಶಿಕ್ಷೆ~ ಆಗುತ್ತವೆ.

ನಾನು ಗ್ರಾಮೀಣ ಪ್ರದೇಶದ, ನೂರಕ್ಕೆ ನೂರು ಫಲಿತಾಂಶ ಪಡೆದು ಇಲಾಖೆಯಿಂದ ಪುರಸ್ಕಾರ ಪಡೆದ ಅನೇಕ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿಯ ಶಿಕ್ಷಕರೊಡನೆ, ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ್ದೇನೆ.
 
ಪರೀಕ್ಷೆಯು ಸರಿಯಾದ ರೀತಿಯಲ್ಲಿ ಪ್ರಾಮಾಣಿಕವಾಗಿ ನಡೆದರೆ, ಆ ಶಾಲೆಗಳಲ್ಲಿ ಶೇ 30 ರಷ್ಟೂ ಫಲಿತಾಂಶ ಬರಲಾರದು ಎಂದು ಅಲ್ಲಿಯ ಶಿಕ್ಷಕರಿಗೂ ಗೊತ್ತು. ಅಂದರೆ ಬೋರ್ಡ್ ಪರೀಕ್ಷೆಯೇ ಹೇಗೆ ನಡೆಯುತ್ತದೆ ಎಂದು ಅಂದಾಜು ಮಾಡಬಹುದು. ಇನ್ನು ಸರಣಿ ಪರೀಕ್ಷೆಗಳ ಗತಿ ಏನು? ಅವು ಹೇಗೆ ನಡೆಯಬಹುದು?

ಎಲ್ಲಾ ಸರಣಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ನೀಡದಿದ್ದರೆ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಕೆಲವು ಶಾಲೆಗಳಲ್ಲಿ ಧಮಕಿ ಹಾಕಿರುವ ದೂರುಗಳೂ ಬಂದಿವೆ.

ಏಕರೂಪ ಶಿಕ್ಷಣದ ಬಗ್ಗೆಯೇ ಅಸಮ್ಮತಿ ಇದೆ. ಶಿಕ್ಷಣ ತಜ್ಞರ ಪ್ರಕಾರ ಪ್ರತಿಯೊಂದು ಮಗುವೂ `ವಿಶಿಷ್ಟ~ (ಯುನೀಕ್). ಪ್ರತಿಯೊಂದು ಮಗುವಿನ ಒಳಗೂ ತನ್ನದೇ ಆದ ಆಸಕ್ತಿ, ಪ್ರತಿಭೆಗಳು ಇರುತ್ತವೆ. ಅವರಲ್ಲಿರುವ ಪ್ರತಿಭೆ ಅರಳುವಂತೆ ಮಾಡುವುದೇ ಶಿಕ್ಷಣ.

ಎಸ್‌ಎಸ್‌ಎಲ್‌ಸಿ ನಂತರ ಮುಂದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಬೇಕೆಂಬುದು ಅಪೇಕ್ಷೆ. ಆದ್ದರಿಂದ ಈಗಿನಿಂದಲೇ ವಿದ್ಯಾರ್ಥಿಗಳನ್ನು ಅದಕ್ಕೆ ಸಮರ್ಥರಾಗುವಂತೆ ತಯಾರು ಮಾಡುವುದು ಒಳ್ಳೆಯದು.

ಕೆಲವು ಶಾಲೆಗಳಲ್ಲಿ ಇನ್ನೂ ಪಾಠಗಳೇ ಪೂರ್ತಿಯಾಗಿಲ್ಲ. ಅದಕ್ಕೆ ಮೊದಲೇ ಶಾಲಾ ಮಟ್ಟದಲ್ಲಿ ನಡೆಸಬೇಕಾದ ಒಂದು ಪೂರ್ವ ಸಿದ್ಧತಾ ಪರೀಕ್ಷೆಯನ್ನು (ಕಾಟಾಚಾರಕ್ಕಾಗಿ?) ನಡೆಸಿಬಿಟ್ಟಿದ್ದಾರೆ. ಈ ಪರೀಕ್ಷೆಗಳಲ್ಲಿ ಮಕ್ಕಳನ್ನು ದೂರ ದೂರ ಕೂಡಿಸದೆ ತರಗತಿಯಲ್ಲಿ ಕೂಡಿಸುವಂತೆ ಕೂಡಿಸುತ್ತಾರೆ. ಹೀಗೆ ಕೂಡಿಸುವುದರಿಂದ ಮುಂದೆ ಬೋರ್ಡ್ ಪರೀಕ್ಷೆಯಲ್ಲಿ ನಕಲು ಮಾಡುವುದು ಹೇಗೆ ಎಂಬ ತರಬೇತಿ ಅವರಿಗೆ ಸಿಗುತ್ತದೆ, ಅಷ್ಟೆ.

ಶಿಕ್ಷಣ ಮಂತ್ರಿ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ `ಹೇಗಾದರೂ~ ಆಗಲಿ ತಮ್ಮ ಅವಧಿಯಲ್ಲಿ ಉತ್ತಮ ಫಲಿತಾಂಶ ಬರಬೇಕೆಂಬ ಬಯಕೆ. ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗೆ, ಮುಖ್ಯೋಪಾಧ್ಯಾಯರಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ `ಹೇಗಾದರೂ~ ಉತ್ತಮ ಫಲಿತಾಂಶ ಬರಬೇಕೆಂಬ ಬಯಕೆ.

ಈ `ಹೇಗಾದರೂ~ ಎಂಬ ಮೌಖಿಕ ಸೂಚನೆ ಮೇಲಿನಿಂದ ಕೆಳ ಹಂತದವರೆಗೂ ಮುಟ್ಟುತ್ತದೆ. ಫಲಿತಾಂಶ ಕಡಿಮೆಯಾದರೆ ವಿವರಣೆ ನೀಡುವಂತೆ ಮೇಲಧಿಕಾರಿಗಳಿಂದ ನೋಟಿಸ್ ಬರುವುದೆಂದು ಕಿರಿಯ ಅಧಿಕಾರಿಗಳಿಗೆ ಆತಂಕ. ಈ ಪರೀಕ್ಷೆಗಳು ಎಷ್ಟು ಋಜುತ್ವದಿಂದ ನಡೆಯುತ್ತದೆ ಎಂಬುದು `ತೆರೆದ ರಹಸ್ಯ~. ಒಟ್ಟಿನಲ್ಲಿ ಪರೀಕ್ಷೆ ಎನ್ನುವ ನಾಟಕ ನಡೆಯುತ್ತದೆ.

10ನೇ ತರಗತಿಯ ಪರೀಕ್ಷೆಗಳನ್ನು ನಡೆಸದಿದ್ದರೂ ಪರವಾಗಿಲ್ಲ ಎಂದು ಕೇಂದ್ರದವರು ಹೇಳುತ್ತಿರುವಾಗ ಈ ಎಂಟು ಸರಣಿ ಪರೀಕ್ಷೆಗಳನ್ನು ನಡೆಸುವುದು ಸರಿಯೇ? ವಿದ್ಯಾರ್ಥಿಗಳು ಮೊದಲು `ಕಲಿಯುವ~ ಕೆಲಸ ಮಾಡಬೇಕು.
 
ಅನಂತರವಷ್ಟೆ ಅವರನ್ನು ಪರೀಕ್ಷಿಸುವುದು. ಆದರೆ ವಿಪರೀತದ ಈ ಪರೀಕ್ಷೆಗಳಿಂದ `ಪರೀಕ್ಷೆಗಾಗಿ ಕಲಿಯುವುದೇ ಶಿಕ್ಷಣ~ ಎಂಬ ಭ್ರಮೆ ಉಂಟಾಗಬಹುದು. ಶಿಕ್ಷಣದ ಉದ್ದೇಶವನ್ನೇ ಮಸುಕು ಮಾಡಿ, ಶಿಕ್ಷಣದ ದಿಕ್ಕನ್ನೇ ತಪ್ಪಿಸುವ ಈ ಸರಣಿ ಪರೀಕ್ಷೆಗಳು ಅಗತ್ಯವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT