ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ: ಜಿಲ್ಲಾಮಟ್ಟದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆ

Last Updated 27 ಜನವರಿ 2012, 9:50 IST
ಅಕ್ಷರ ಗಾತ್ರ

ಕೋಲಾರ: ಜನವರಿ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆಸಲಾದ ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಸರ್ಕಾರಿ ಶಾಲೆಗಳು ಗಮನ ಸೆಳೆಯುವಂಥ ಸುಧಾರಿತ ಫಲಿತಾಂಶ ಪಡೆದಿವೆ ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದರು.

ನಗರದ ಮಹಿಳಾ ಸಮಾಜ ಶಾಲೆಯ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರೌಢ ಶಾಲಾ ಮುಖ್ಯಶಿಕ್ಷಕರ 2ನೇ ಸಭೆಯಲ್ಲಿ ಅವರು ಪವರ್‌ಪಾಯಿಂಟ್ ಮೂಲಕ ಪೂರ್ವಸಿದ್ಧತಾ ಪರೀಕ್ಷೆಗಳ ವಿಶ್ಲೇಷಣೆ ಮಾಡಿದರು.

ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ಹಿನ್ನೆಡೆ ಹೊಂದಿದ್ದ ಸರ್ಕಾರಿ ಶಾಲೆಗಳ ಫಲಿತಾಂಶ ಮೊದಲನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಸುಧಾರಣೆ ಕಂಡುಕೊಂಡಿದೆ, ಆದರೆ ಅನುದಾನಿತ ಶಾಲೆಗಳ ಫಲಿತಾಂಶದಲ್ಲಿ ಸುಧಾರಣೆ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೆಬ್ರುವರಿಯಲ್ಲಿ ನಡೆಯಲಿರುವ ಎರಡನೇ ಪೂರ್ವಸಿದ್ಧತಾ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಬೇಕು. ಆಗ ಮಾತ್ರ ಮುಖ್ಯ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಉತ್ತಮಗೊಳ್ಳುತ್ತದೆ ಎಂದರು.

ಕೆಲವು ಶಾಲೆಗಳು ಕಳೆದ ವರ್ಷ ಶೇ. 97 ಶೇ. ಸಾಧನೆ ತೋರಿವೆ. ಆದರೆ ಈಗ ಅವುಗಳ ಫಲಿತಾಂಶ ಶೇ. 47ಕ್ಕೆ ಇಳಿದಿರುವುದು ಆತಂಕದ ವಿಷಯ. ಅನೇಕ ಶಾಲೆಗಳಲ್ಲಿ ಇಂಗ್ಲಿಷ್, ಗಣಿತ ವಿಷಯಗಳ ಫಲಿತಾಂಶದ ಕುಸಿತದಿಂದಾಗಿಯೇ ಒಟ್ಟಾರೆ ಫಲಿತಾಂಶ ಕುಸಿದಿದೆ. ಅಂಥ ಶಾಲೆಗಳು ಗಣಿತ, ಇಂಗ್ಲಿಷ್ ವಿಷಯಗಳ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಯಾವ ವಿಷಯದಲ್ಲಿ ಹಿನ್ನೆಡೆ ಆಗಿದೆಯೋ ಅದನ್ನು ಸರಿಪಡಿಸಲು ಯತ್ನಿಸಬೇಕು ಎಂದರು.

ಪುರ್ವಸಿದ್ಧತೆ ಪರೀಕ್ಷೆಗಳಲ್ಲಿ ಒಟ್ಟಾರೆ ಶೇ. 61.43 ಫಲಿತಾಂಶ ದೊರೆತಿದೆ. ಕೋಲಾರ ತಾಲ್ಲೂಕು- 53.11,  ಬಂಗಾರಪೇಟೆ- 54.87, ಕೆಜಿಎಫ್ ಶಿಕ್ಷಣ ವಲಯ- 54.94, ಮಾಲೂರು- 53.38,  ಮುಳಬಾಗಿಲು- 65.34 ಮತ್ತು ಶ್ರೀನಿವಾಸಪುರ- 72.22 ಶೇ. ಫಲಿತಾಂಶ ಪಡೆದಿವೆ ಅದನ್ನು ಶೇ. 75ಕ್ಕೆ ಹೆಚ್ಚಿಸಲು ಶ್ರಮ ಪಡಬೇಕಾಗಿದೆ ಎಂದರು.

ಪೂರ್ವಸಿದ್ಧತಾ ಪರೀಕ್ಷೆಯಲ್ಲಿ 27,178 ವಿದ್ಯಾರ್ಥಿಗಳ ಪೈಕಿ 12,396 ಮಂದಿ ಉತ್ತೀರ್ಣ ರಾಗಿದ್ದಾರೆ. ಅವರಲ್ಲಿ 879 ಮಂದಿ ಅತ್ಯಧಿಕ ಅಂಕ ಪಡೆದಿದ್ದಾರೆ. 3612 ಮಂದಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದಾರೆ. ಎರಡನೇ ಪರೀಕ್ಷೆ ವೇಳೆಗೆ ಅವರ ಸಂಖ್ಯೆ ಹೆಚ್ಚಾಗಬೇಕು ಎಂದರು.

ರಾತ್ರಿ ಶಾಲೆ, ಹೆಚ್ಚುವರಿ ತರಗತಿಗಳು ಕಾಟಾಚಾರದ ಕಾರ್ಯಕ್ರಮವಾಗದಂತೆ ಕ್ರಮ ಬದ್ದವಾಗಿ ನಡೆಸಬೇಕು. ರಸಪ್ರಶ್ನೆ, ಗುಂಪು ಅಧ್ಯಯನದಂಥ ವೈವಿಧ್ಯಮಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮೂಡಿಸಬೇಕು ಎಂದರು.

ಇಲಾಖೆಯಿಂದಲೇ ವಿಜ್ಞಾನ, ಗಣಿತ, ಸಮಾಜ ವಿಜ್ಞಾನಗಳ 8 ಉತ್ತರ ಸಹಿತ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಶಾಲೆಗಳಿಗೆ ಒದಗಿಸಲಾಗಿದೆ. ಅವುಗಳನ್ನು ಸದ್ಬಳಕೆ ಮಾಡಬೇಕು ಎಂದರು. ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪ ಸಮನ್ವಯಾಧಿಕಾರಿ ಜಯರಾಮರೆಡ್ಡಿ, ಶಿಕ್ಷಣಾಧಿ ಕಾರಿಗಳಾದ ಸುಬ್ರಹ್ಮಣ್ಯಂ, ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶಿವಲಿಂಗಯ್ಯ, ಜಯರಾಜ್, ಕೃಷ್ಣ ಮೂರ್ತಿ, ವಿಷಯ ಪರಿವೀಕ್ಷಕರಾದ ಸಿ.ಆರ್. ಅಶೋಕ್, ಜನಾರ್ಧನನಾಯ್ಡು, ಶಿವಮಾದಯ್ಯ ಉಪಸ್ಥಿತರಿದ್ದರು.

ಶಿಕ್ಷಕರ ಜವಾಬ್ದಾರಿ ಹೆಚ್ಚು
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಜಿಲ್ಲಾವಾರು ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿರುವ ಜಿಲ್ಲೆ ಈ ಬಾರಿ 5ನೇ ಸ್ಥಾನಕ್ಕೇರಬೇಕು. ಆ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು ಎಂದು ವಿಧಾನ ಪರಿಷತ್ ಸದಸ್ಯ ಡಾ.ಶಿವಯೋಗಿಸ್ವಾಮಿ ಅಭಿಪ್ರಾಯಪಟ್ಟರು.

ಕಳೆದ ಸಾಲಿನಲ್ಲಿ 28ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಬರುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರೀ. ಈ ಬಾರಿಯೂ ಅದಕ್ಕೂ ಮೀರಿ ಗುರಿ ಸಾಧನೆಗೆ ಆದ್ಯತೆ ಮೇಲೆ ಕೆಲಸ ಮಾಡಬೇಕು.
ಪ್ರತಿ ಪ್ರೌಢಶಾಲೆಯೂ ಕಳೆದ ವರ್ಷ ಪಡೆದದ್ದಕ್ಕಿಂತ ಕನಿಷ್ಠ ಶೇ. 10 ಹೆಚ್ಚಿನ ಸಾಧನೆಯ ಗುರಿಯೊಂದಿಗೆ ಕೆಲಸ ಮಾಡಿದರೆ ಗುಣಾತ್ಮಕ ಮತ್ತು ಜಿಲ್ಲೆಗೆ ಘನತೆ ತರುವ ಫಲಿತಾಂಶ ಪಡೆಯಲು ಸಾಧ್ಯ ಎಂದರು. ಇಲಾಖೆ ಉಪನಿರ್ದೇಶಕ ಎಚ್.ಡಿ.ಗೋವಿಂದಯ್ಯ ಸ್ವಾಗತಿಸಿದರು. ಮಧ್ಯರ್ವಾಕ ಪರೀಕ್ಷೆಯ ನಂತರ ನಡೆದಿರುವ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶ ಸುಧಾರಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT