ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಕೆ ಬ್ಯಾಂಕ್: ರಂಗೇರಿದ ಚುನಾವಣಾ ಕಣ

ಅಧಿಕಾರ ಚುಕ್ಕಾಣಿಗೆ ಬಿಜೆಪಿ-ಕೆಜೆಪಿ ತೆರೆಮರೆಯ ಯತ್ನ
Last Updated 13 ಡಿಸೆಂಬರ್ 2012, 8:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಕೆ ಸಮಾಜದ ಪ್ರಾತಿನಿಧಿಕ ಸಂಸ್ಥೆ ಎನಿಸಿರುವ ಎಸ್‌ಎಸ್‌ಕೆ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ ಇದೇ 14ರಂದು ನಡೆಯಲಿದ್ದು, ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿಯಲು ಪರೋಕ್ಷವಾಗಿ ಬಿಜೆಪಿ ಹಾಗೂ ಕೆಜೆಪಿ ಪರಸ್ಪರ ಜಿದ್ದಾಜಿದ್ದಿಗೆ ಇಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬ್ಯಾಂಕಿನ ಆಡಳಿತದ ಹಿಡಿತ ಪಡೆಯಲು ಪುನಶ್ಚೇತನ ಮಂಡಳಿ, ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿ ಪರಸ್ಪರ ಪೈಪೋಟಿಗೆ ಸಜ್ಜಾಗಿವೆ. ಕೆಜೆಪಿಯಲ್ಲಿ ಗುರ್ತಿಸಿಕೊಂಡಿರುವ ಮಾಜಿ ಶಾಸಕ ಅಶೋಕ ಕಾಟವೆ ಅಭಿವೃದ್ಧಿ ಸಮಿತಿಯ ಗೆಲುವಿಗೆ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಕೆಜೆಪಿಗೆ ಸೇರ್ಪಡೆಯಾದ ಮಹಾನಗರ ಪಾಲಿಕೆ ಸದಸ್ಯೆ ರಾಜಶ್ರೀ ಜಡಿ ಇದೇ ಸಮಿತಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ.

ಇನ್ನು ಪಾಲಿಕೆಯ ಬಿಜೆಪಿ ಸದಸ್ಯ ಹಾಗೂ ಮಾಜಿ ಉಪಮೇಯರ್ ನಾರಾಯಣ ಜರತಾರಘರ್ ಪುನಶ್ಚೇತನ ಮಂಡಳಿಯಿಂದ ಕಣಕ್ಕೆ ಇಳಿದಿದ್ದು, ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಸಮಿತಿಯ ಮುಖಂಡ ಟ.ಎಂ.ಮೆಹರವಾಡೆ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಬಾರಿ ಯುವಕರಿಗೆ ಮತ ನೀಡಿ ಎಂದು ಪಕ್ಷೇತರರಾಗಿ ಕೆಲವರು ಸ್ಪರ್ಧಿಸಿದ್ದಾರೆ.

ಬ್ಯಾಂಕಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದವರು ಎಸ್‌ಎಸ್‌ಕೆ ಸಮಾಜದ ಮೇಲೆ ಪರೋಕ್ಷ ಹಿಡಿತ ಸಾಧಿಸಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ  ನಿರ್ಣಾಯಕರಾಗುವರು ಎಂದು ಶತಾಯಗತಾಯ ಗೆಲುವು ಸಾಧಿಸಲು ಎರಡೂ ಬಣಗಳು ಹೋರಾಟಕ್ಕೆ ಮುಂದಾಗಿರುವುದು ಚುನಾವಣೆ ರಂಗೇರಲು ಕಾರಣವಾಗಿದೆ.

ಭರ್ಜರಿ ಪ್ರಚಾರ: ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಮೂರು ಗುಂಪಿನವರು ಪತ್ರಿಕಾ ಗೋಷ್ಠಿ ಹಾಗೂ ಮಾಧ್ಯಮ ಪ್ರಕಟಣೆಗಳ ಮೂಲಕ ಮತದಾರರ ಗಮನ ಸೆಳೆಯಲು ಪ್ರಯತ್ನಿಸಿದರು.  ಹಳೇಹುಬ್ಬಳ್ಳಿ, ದಾಜಿಬಾನಪೇಟೆ, ಕಮರಿಪೇಟೆ, ಸಾಲ ಓಣಿ, ಅರಳಿಕಟ್ಟೆ ಓಣಿ, ದಿವಟೆ ಓಣಿ ಸೇರಿದಂತೆ ಎಸ್‌ಎಸ್‌ಕೆ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶದಲ್ಲಿ ಮನೆ ಮನೆ ಪ್ರಚಾರ, ಕಟೌಟ್, ಬ್ಯಾನರ್‌ಗಳ ಮೂಲಕ ಮತಯಾಚನೆ ನಡೆಸಿದರು.

ಭರವಸೆಗಳ ಮಹಾಪೂರ: `ತಮ್ಮ ಗುಂಪಿಗೆ ಮತ ನೀಡಿದಲ್ಲಿ ಬ್ಯಾಂಕಿನಲ್ಲಿ ಸೌಲಭ್ಯಗಳ ಹೆಚ್ಚಳ, ನಿಂತು ಹೋಗಿರುವ ಪಿಗ್ಮಿ ಸಂಗ್ರಹ ಕಾರ್ಯ ಪುನರಾರಂಭಿಸಿ ಹೆಚ್ಚಿನ ಜನರಿಗೆ ಉದ್ಯೋಗ ನೀಡುವುದಾಗಿ ಹಾಗೂ ಬ್ಯಾಂಕಿನ ನೌಕರರಿಗೆ ಸವಲತ್ತು ಹೆಚ್ಚಿಸುವುದಾಗಿ' ಭರವಸೆ ನೀಡುವ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

ರಕ್ಷಣಾ ಸಮಿತಿಯ ಪರವಾಗಿ ರಾಮಕೃಷ್ಣಸಾ ಕಿಶೋರ ಜಿತೂರಿ, ಭಾಸ್ಕರ ನಾರಾಯಣಸಾ ಜಿತೂರಿ, ಟಿಕಂದರ ಸುನೀಲ ರಘುನಾಥಸಾ, ಪ್ರಕಾಶ ಕಾಟವೆ, ಬದ್ದಿನಾರಾಯಣ ಉಮ್ಮಣಸಾ, ರಾಜು ಗುರುನಾಥ ಪವಾರ, ಮಹಿಳಾ ಮೀಸಲು ಕ್ಷೇತ್ರಕ್ಕೆ ಪಾಲಿಕೆ ಸದಸ್ಯೆ ರಾಜಶ್ರೀ ಜಡಿ, ವೃತ್ತಿಪರ ಪರಿಣಿತರ ಸ್ಥಾನಕ್ಕೆ ದಯಾನಂದ ಪವಾರ, ಪ್ರಕಾಶ ಕಬಾಡಿ ಸ್ಪರ್ಧಿಸಿದ್ದಾರೆ. ಪುನಶ್ಚೇತನ ಮಂಡಳಿಯಿಂದ ನಾರಾಯಣ ಖೋಡೆ, ನಾರಾಯಣ ಜರತಾರಘರ, ರಮೇಶ ದಲಭಂಜನ, ದೀಪಕ ಮಗಜಿಕೊಂಡಿ, ಟಿ.ಎಂ.ಮೆಹರವಾಡೆ, ವಿಠ್ಠಲ ಲದವಾ, ಮಹಿಳಾ ಮೀಸಲು ಸ್ಥಾನಕ್ಕೆ ರತ್ನಮಾಲಾ ಬದ್ದಿ ಹಾಗೂ ವೃತ್ತಿಪರರ ಮೀಸಲು ಸ್ಥಾನಕ್ಕೆ ಅರ್ಜುನಸಾ ಚವ್ಹಾಣ, ಎಂ.ಕೆ.ಮೆಹರವಾಡೆ ಸ್ಪರ್ಧಿಸಿದ್ದಾರೆ.  ಪಕ್ಷೇತರರಾಗಿ ಪ್ರಕಾಶ ಬುರಬುರೆ, ದೇವದಾಸ ಹಬೀಬ ಮತ್ತಿತರರು ಕಣಕ್ಕಿಳಿದಿದ್ದಾರೆ.

9 ಸ್ಥಾನಗಳಿಗೆ ತೀವ್ರ ಪೈಪೋಟಿ
ಮಹಿಳಾ ಮೀಸಲು ಸ್ಥಾನ ಸೇರಿದಂತೆ ಒಟ್ಟು 9 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಅದರಲ್ಲಿ ಸಾಮಾನ್ಯ ಕ್ಷೇತ್ರದ 6 ಸ್ಥಾನಗಳಿಗೆ 26 ಮಂದಿ ಸ್ಪರ್ಧಿಸಿದ್ದಾರೆ. ವೃತ್ತಿಪರ ಪರಿಣಿತರ ಎರಡು ಸ್ಥಾನಗಳಿಗೆ ನಾಲ್ಕು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಮಹಿಳಾ ಮೀಸಲು ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ್ದಾರೆ. ಬ್ಯಾಂಕಿಗೆ 9,133 ಮಂದಿ ಷೇರುದಾರರಿದ್ದು, ಕನಿಷ್ಠ 600 ಷೇರುದಾರರ ಮನಗೆದ್ದರೆ ಗೆಲುವು ಗ್ಯಾರಂಟಿ ಎಂಬ ನಂಬಿಕೆಯೊಂದಿಗೆ ಮತದಾರರ ಪಟ್ಟಿ ಹಿಡಿದು ಮತ ಗಟ್ಟಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಎರಡೂ ಗುಂಪುಗಳು ಪೈಪೋಟಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT