ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಕೆಡಿಆರ್‌ಡಿಪಿ ಜಿಲ್ಲೆಗೆ ಪದಾರ್ಪಣೆ

Last Updated 4 ಸೆಪ್ಟೆಂಬರ್ 2013, 10:05 IST
ಅಕ್ಷರ ಗಾತ್ರ

ಬಾಗಲಕೋಟೆ: ಗ್ರಾಮಾಭಿವೃದ್ಧಿ ಮತ್ತು ಬಡ ಜನರ ಬದುಕಿನಲ್ಲಿ ಪರಿವರ್ತನೆ ಕನಸನ್ನು ಕಟ್ಟಿಕೊಂಡು ಯಶಸ್ಸು ಸಾಧಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಬಾಗಲಕೋಟೆ ಜಿಲ್ಲೆಗೆ ಪದಾರ್ಪಣೆ ಮಾಡಿದೆ.
ಇದೇ 6ರಂದು ಬಾಗಲಕೋಟೆ ನಗರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಯೋಜನೆ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.

ಈ ಕುರಿತು ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಯೋಜನೆಯ ಪ್ರಾದೇಶಿಕ ನಿರ್ದೇಶಕ ಕೆ.ಬೂದಪ್ಪ ಗೌಡ, 2013 ಮೇ 13ರಂದು ಬಾಗಲಕೋಟೆ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ' ಎಂದು ತಿಳಿಸಿದರು.

`ಜಿಲ್ಲೆಯ ಸಣ್ಣ, ಅತೀ ಸಣ್ಣ ರೈತರ ಸಂಘಟನೆ, ಮಧ್ಯಮ ಮತ್ತು ಬಡವರ್ಗದ ಹಾಗೂ ಗ್ರಾಮೀಣ ಮಹಿಳೆಯರ ಸಂಘಟನೆ, ಸಬಲೀಕರಣವನ್ನು ಮುಖ್ಯ ಗುರಿಯಾಗಿರಿಸಿಕೊಂಡು ಮಹಿಳಾ ಸ್ವಸಹಾಯ ಸಂಘಗಳ ರಚನೆ, ಕಿರು ಆರ್ಥಿಕ ವ್ಯವಹಾರ, ಸ್ವ ಉದ್ಯೋಗ ಚಟುವಟಿಕೆ, ಆರೋಗ್ಯ ವಿಮಾ ಕಾರ್ಯ ಕ್ರಮ, ಕೃಷಿ ಸಂವರ್ದನೆ, ಸಾಮಾಜಿಕ ಅರಣ್ಯೀಕರಣ, ಜಲಾನಯನ ಅಭಿವೃದ್ಧಿ, ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ, ಜನಜಾಗೃತಿ, ಮಧ್ಯವರ್ಜನ ಶಿಬಿರಿ, ಜ್ಞಾನದೀಪ ಶಿಕ್ಷಣ, ಹಿಂದೂ ರುದ್ರಭೂಮಿ ಅಭಿವೃದ್ಧಿ, ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ, ಗ್ರಾಮ ನೈರ್ಮಲ್ಯ, ಗೋ ಶಾಲಾಭಿವೃದ್ಧಿ ಸೇರಿದಂತೆ ಮತ್ತಿತರರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು' ಎಂದರು.

`ಜಿಲ್ಲೆಯಲ್ಲಿ ಪ್ರಸ್ತುತ 54 ಪ್ರಗತಿ ಬಂಧು ಸ್ವಸಹಾಯ ತಂಡಗಳನ್ನು ರಚನೆ ಮಾಡಲಾಗಿದೆ. 2222 ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಲಾಗಿದೆ' ಎಂದು ಹೇಳಿದರು.

ವರ್ಷದ ಕಾರ್ಯಕ್ರಮ:
`ಜಿಲ್ಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 8 ಸಾವಿರ ಪ್ರಗತಿಬಂಧು ಸ್ವಸಹಾಯ ಸಂಘಗಳನ್ನು ರಚಿಸಿ,  ರೂ.12 ಕೋಟಿ ಪ್ರಗತಿನಿಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ, ಮೂರು ಸಾವಿರ ಶೌಚಾಲಯ, 150 ಜ್ಞಾನ ವಿಕಾಸ ಕೇಂದ್ರ, 500 ಗೋಬರ್ ಗ್ಯಾಸ್, 2 ಸಾವಿರ ಕುಟುಂಬಗಳಿಗೆ ಹೈನುಗಾರಿಕೆ ಮತ್ತು ಪಶುಸಂಗೋಪನೆ, ಒಂದು ಸಾವಿರ ಜೀವನ ಮಧುರ ವಿಮೆ ಮಾಡಿಸುವುದು, 600ಸೋಲಾರ್ ದೀಪ ಅಳವಡಿಸುವ ಗುರಿ ಹೊಂದಲಾಗಿದೆ' ಎಂದರು.

ಉದ್ಘಾಟನೆ:
ಇದೇ 6ರಂದು ಮಧ್ಯಾಹ್ನ 3.30ಕ್ಕೆ ನಗರದ ಶಂಕ್ರಪ್ಪ ಸಕ್ರಿ ಪ್ರೌಢಶಾಲಾ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಎಚ್.ವೈ.ಮೇಟಿ, ರತ್ನಾಕರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ವಿಶ್ವವೀರ ಅಹುಜ, ಸಚಿವೆ ಉಮಾಶ್ರೀ, ಸಂಸದ ಪಿ.ಸಿ.ಗದ್ದಿಗೌಡರ, ಜಿ.ಪಂ.ಅಧ್ಯಕ್ಷೆ ಶಾಂತವ್ವ ಭೂಷಣ್ಣನವರ, ತಾ.ಪಂ.ಅಧ್ಯಕ್ಷೆ ಗಿರಿಜಾ ದೇಸಾಯಿ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿ.ಪಂ.ಸಿಇಒ ಎಸ್.ಜಿ.ಪಾಟೀಲ, ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ, ಡಾ.ರಾಜಶೇಖರ ಕಂಠಿ, ಡಾ.ಬಸವರಾಜ ಕೆರೂಡಿ ಭಾಗವಹಿಸಲಿದ್ದಾರೆ.

ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಶಂಕರ ಶೆಟ್ಟಿ, ರವಿ ಒಂದ ಕುದುರೆ, ಮಹೇಶ, ಮಂಜುನಾಥ, ರವಿರಾಜ, ಸತೀಶ ಮತ್ತು ಓಂ ಮರಾಠಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT