ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿ ಸದಸ್ಯರಿಂದ ಕಲಾಪಕ್ಕೆ ಅಡ್ಡಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ನೌಕರಿ ಬಡ್ತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ವಿರೋಧಿಸಿ ಸಮಾಜವಾದಿ ಪಕ್ಷದ ಸದಸ್ಯರು ಮಂಗಳವಾರ ರಾಜ್ಯಸಭಾ ಕಲಾಪಕ್ಕೆ ಪದೇಪದೇ ಅಡ್ಡಿಪಡಿಸಿದರು.
`ಬಡ್ತಿಯಲ್ಲಿ ಮೀಸಲಾತಿ ಬೇಡ' ಎಂಬ ಘೋಷಣೆಗಳನ್ನು ಸದಸ್ಯರು ಪದೇಪದೇ ಕೂಗಿದರು.

ಮೊದಲಿಗೆ ಸದನ ಆರಂಭವಾಗುತ್ತಿದ್ದಂತೆ, ಪಕ್ಷದ ಸದಸ್ಯರು ಈ ಮಸೂದೆಯನ್ನು ಅಂಗೀಕರಿಸಬಾರದು ಎಂದು ಕೋಲಾಹಲವೆಬ್ಬಿಸಿದರು. ಮಧ್ಯಾಹ್ನದ ಊಟದ ನಂತರ ಸಭೆ ಆರಂಭವಾದಾಗಲೂ ಪಕ್ಷದ ಸದಸ್ಯರು ಮಸೂದೆ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಆಮೇಲೆ ಶಿವಸೇನಾ ಸದಸ್ಯರೂ ಸಮಾಜವಾದಿ ಪಕ್ಷದ ಸದಸ್ಯರ ಜತೆ ದನಿಗೂಡಿಸಿದರು. ಸದನದ ಕಲಾಪಕ್ಕೆ ಅಡ್ಡಿಪಡಿಸಬಾರದೆಂಬ ಉಪ ಸಭಾಧ್ಯಕ್ಷ ಪಿ.ಜೆ.ಕುರಿಯನ್  ಅವರ ಮನವಿಯನ್ನು ಯಾರೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.
ಮತ್ತೊಮ್ಮೆ ಮಧ್ಯಾಹ್ನ 3ಕ್ಕೆ ಸದನ ಪುನಃ ಆರಂಭವಾದಾಗಲೂ ಸಮಾಜವಾದಿ ಪಕ್ಷದ ಸದಸ್ಯರು ರಾಜ್ಯಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು.

ಕಳವಳ: ಸದನ ಕಲಾಪದ ಪ್ರಶ್ನೋತ್ತರ ಅವಧಿಗೆ ಪದೇಪದೇ ಭಂಗವಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭಾ ಅಧ್ಯಕ್ಷ  ಹಮೀದ್ ಅನ್ಸಾರಿ, ಪ್ರಶ್ನೋತ್ತರ ವೇಳೆಯನ್ನೇ ರದ್ದು ಮಾಡಬೇಕು ಎಂದಿದ್ದಾರೆ.ಪ್ರಶ್ನೋತ್ತರ ವೇಳೆಯಲ್ಲಿ ನಡೆಯುವ ಅನಪೇಕ್ಷಿತ ಸಂಗತಿಗಳನ್ನು ಸಭಾಧ್ಯಕ್ಷರ ಕುರ್ಚಿಯಲ್ಲಿ ಕುಳಿತವರು ಮೂಕ ಪ್ರೇಕ್ಷಕನಂತೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಪ್ರಶ್ನೋತ್ತರ ಅವಧಿಯನ್ನು ರದ್ದು ಮಾಡಬೇಕು ಅಥವಾ ಅದರ ಸಮಯವನ್ನಾದರೂ ಬದಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.ವಾಲ್‌ಮಾರ್ಟ್ ಲಾಬಿ ಮತ್ತು ಸರ್ಕಾರಿ ಉದ್ಯೋಗದಲ್ಲಿ ಬಡ್ತಿ ಕುರಿತು ವಿರೋಧ ಪಕ್ಷಗಳ ಸದಸ್ಯರು ಕೋಲಾಹಲ ಎಬ್ಬಿಸಿದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.

ಪ್ರಶ್ನೋತ್ತರ ಅವಧಿಯ ರದ್ದತಿ ಅಥವಾ ಬದಲಾವಣೆ ಕುರಿತು ಚರ್ಚಿಸಲು ಶಿಸ್ತು ಸಮಿತಿಯು ಸಭೆ ಕರೆಯಬೇಕು ಎಂದೂ ಅವರು ಇದೇ ವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT