ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಎಂ, ಏರ್‌ಇಂಡಿಯಾ ತಂಡಗಳು ಮುಂದಿನ ಹಂತಕ್ಕೆ

Last Updated 6 ಫೆಬ್ರುವರಿ 2012, 5:35 IST
ಅಕ್ಷರ ಗಾತ್ರ

ಕೊಲ್ಹಾರ: ಎಸ್.ಬಿ.ಎಂ. ಬೆಂಗಳೂರು ತಂಡ  ಹಾಗೂ ಮುಂಬೈಯ ಏರ್ ಇಂಡಿಯಾ ತಂಡಗಳು ಇಲ್ಲಿ ಭಾನುವಾರ ಆರಂಭಗೊಂಡ ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಆಶ್ರಯದ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಜಿಗಿದವು.

ರೆಡ್ ಆರ್ಮೀ ದೆಹಲಿ ತಂಡವನ್ನು 6-3 ಪಾಯಿಂಟ್‌ಗಳಿಂದ ಎಸ್.ಬಿ.ಎಂ ಮಣಿಸಿದರೆ ಏರ್ ಇಂಡಿಯಾ, ಹೈದರಾಬಾದ್‌ನ ಆಂಧ್ರ ಬ್ಯಾಂಕ್ ತಂಡವನ್ನು 17-14 ಪಾಯಿಂಟ್‌ಗಳಿಂದ ಸದೆಬಡಿಯಿತು. ಇನ್ನೊಂದು ಭೋಪಾಲ್‌ನ ಗ್ರೀನ್ ಆರ್ಮಿ ತಂಡ ಪುಣೆಯ ಬಿ.ಇ.ಜಿ. ತಂಡವನ್ನು 36-21ಪಾಯಿಂಟ್‌ಗಳಿಂದ ಸೋಲಿಸಿತು.
ಗ್ರಾಮದಲ್ಲಿ ಕಬಡ್ಡಿ ಕಲರವ:

ಕೆನೆ ಮೊಸರಿಗೆ ಖ್ಯಾತಿ ಪಡೆದಿರುವ ಕೊಲ್ಹಾರದ ಗಂಡು ಮಕ್ಕಳ ಸರಕಾರಿ ಶಾಲೆ ಆವರಣದಲ್ಲಿ ನಡೆಯುತ್ತಿರುವ ಟೂರ್ನಿ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಕಬಡ್ಡಿ ಪ್ರಿಯರು ಆಗಮಿಸುತ್ತಿದ್ದು ಆರು ಅಂತಸ್ತಿನ ಗ್ಯಾಲರಿ ಮಧ್ಯೆ ಎರಡು ಮೈದಾನಗಳಲ್ಲಿ `ಮಣ್ಣಿನ ಮಕ್ಕಳ~ ರೋಚಕ ಸೆಣಸಾಟಕ್ಕೆ ಚಪ್ಪಾಳೆ, ಶಿಳ್ಳೆಯ ಮೂಲಕ ಹುರಿದುಂಬಿಸುತ್ತಿದ್ದಾರೆ.

ನೇತಾಜಿ ಸುಭಾಷಚಂದ್ರ ಭೋಸ್ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಗ್ರಾಮದೇವತೆ
ಯಲ್ಲಮ್ಮದೇವಿ ಜಾತ್ರೆಯ ಅಂಗವಾಗಿ ಟೂರ್ನಿಯನ್ನು ಆಯೋಜಿಸಲಾಗಿದೆ.

`ಆಟಗಾರರಿಗೆ ಮನೆ ಆತಿಥ್ಯ~
ಕಬಡ್ಡಿ ಆಡಲು ಕೊಲ್ಹಾರಕ್ಕೆ ಬಂದಿರುವ ದೇಶದ ನಾನಾ ಭಾಗಗಳ ಆಟಗಾರರಿಗೆ ಇಲ್ಲಿನ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ವಿಶೇಷ ಆತಿಥ್ಯವನ್ನು ಕಲ್ಪಿಸಿದ್ದಾರೆ.

ವಿವಿಧ ಭಾಷೆಗಳನ್ನಾಡುವ ಪ್ರದೇಶದಿಂದ ಆಟಗಾರರು ಬಂದಿದ್ದಾರೆ. ಅವರ ಭಾಷೆ ತಿಳಿಯದಿದ್ದರೂ ಊಟ, ವಸತಿ ಮತ್ತಿತರ ಸೌಕರ್ಯಗಳನ್ನು ಒದಗಿಸಿ ಕನ್ನಡಿಗರ ಅತಿಥಿ ಸತ್ಕಾರದ `ರುಚಿ~ಯನ್ನು ತೋರಿಸುತ್ತಿದ್ದಾರೆ. ಜನರ ಔದಾರ್ಯಕ್ಕೆ ಆಟಗಾರರು ಕೂಡ ಮೆಚ್ಚುಗೆ ಸೂಚಿಸಿದ್ದು ಸಂತೃಪ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT