ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ: ಬ್ಯಾಂಕ್ ವಿಲೀನಕ್ಕೆ ಗಡುವು?

Last Updated 23 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ತನ್ನ ಉಳಿದ 5 ಸಹವರ್ತಿ ಬ್ಯಾಂಕ್‌ಗಳನ್ನು ಮುಂದಿನ 12ರಿಂದ 18 ತಿಂಗಳಲ್ಲಿ ವಿಲೀನಗೊಳಿಸಲಿದೆ.

ಈ 5 ಸಹವರ್ತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ‘ಎಸ್‌ಬಿಐ’ ಎದುರು ನೋಡುತ್ತಿದೆ ಎಂದು ಹಣಕಾಸು ಸಚಿವಾಲಯವು, ಹಣಕಾಸು ಸ್ಥಾಯಿ ಸಮಿತಿಗೆ ತಿಳಿಸಿದೆ.

‘ಎಸ್‌ಬಿಐ’ನಲ್ಲಿ ಸಹವರ್ತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ ಸರ್ಕಾರ ಯಾವ ಧೋರಣೆ ತಳೆದಿದೆ ಎಂದು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ನೇತೃತ್ವದ ಸ್ಥಾಯಿ ಸಮಿತಿಯು ಹಣಕಾಸು ಸಚಿವಾಲಯವನ್ನು ಕೇಳಿಕೊಂಡಿತ್ತು.

ಇನ್ನೂ 5 ಬ್ಯಾಂಕ್‌ಗಳು ವಿಲೀನಗೊಳ್ಳಬೇಕಾಗಿದೆ. ಈ ಬ್ಯಾಂಕ್‌ಗಳ ಹಲವಾರು ಸಂಘಟನೆಗಳು, ಮುಖಂಡರು ‘ಎಸ್‌ಬಿಐ’ನಲ್ಲಿ ವಿಲೀನಗೊಳ್ಳಬೇಕು ಎಂದು ಬಯಸಯತ್ತಾರೆ. ಇದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಹಲವಾರು ಪ್ರಯೋಜನಗಳಿವೆ ಎಂದು ‘ಎಸ್‌ಬಿಐ’ ಅಧ್ಯಕ್ಷ ಒ. ಪಿ. ಭಟ್  ಅವರು ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಕಳೆದ 2 ವರ್ಷಗಳ ಅವಧಿಯಲ್ಲಿ ಎರಡು ಸಹವರ್ತಿ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂದೋರ್ ‘ಎಸ್‌ಬಿಐ’ನಲ್ಲಿ ವಿಲೀನಗೊಂಡಿವೆ.

ಈಗ ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ ಹಾಗೂ ಷೇರುವಹಿವಾಟು ನಡೆಸದ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್  ವಿಲೀನಗೊಳ್ಳಬೇಕಾಗಿದೆ.

ಈ ವಿಲೀನ ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯುತ್ತಿದೆ. ಎಸ್‌ಬಿಐ ಸೇರಿದಂತೆ ಎಲ್ಲ ಸಹವರ್ತಿ ಬ್ಯಾಂಕ್‌ಗಳನ್ನು ಒಂದೇ ಕೋರ್ ಬ್ಯಾಂಕ್ ತಂತ್ರಜ್ಞಾನದಡಿ ತರಲಾಗಿದೆ. ಸಹವರ್ತಿ ಬ್ಯಾಂಕ್‌ಗಳೆಲ್ಲವು ‘ಎಸ್‌ಬಿಐ’ ಜಾರಿಗೆ ತಂದಿರುವ ಹಣಕಾಸು ಉತ್ಪನ್ನ, ಸೇವೆ ಮತ್ತು ಪ್ರಕ್ರಿಯೆಗಳನ್ನೇ ಅಳವಡಿಸಿಕೊಂಡಿವೆ.

ವಿಲೀನದಿಂದ ಹೆಚ್ಚು ಆರ್ಥಿಕ ಪ್ರಯೋಜನ, ಆಡಳಿತಾತ್ಮಕ ವೆಚ್ಚಕ್ಕೆ ಕಡಿವಾಣ, ವಹಿವಾಟು ಹೆಚ್ಚಳಕ್ಕೆ ಪರಿಣತ ಸಿಬ್ಬಂದಿಯ ಮರು ನಿಯೋಜನೆ ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವಾಲಯವು ಸ್ಥಾಯಿ ಸಮಿತಿಯ ಗಮನಕ್ಕೆ ತಂದಿದೆ. ಒಂದೇ ಭೂ ಪ್ರದೇಶದ ವ್ಯಾಪ್ತಿಯಲ್ಲಿ, ಒಂದೇ ಬಗೆಯ ಬ್ಯಾಂಕಿಗ್ ಚಟುವಟಿಕೆ ನಡೆಸುತ್ತಿರುವ ಬ್ಯಾಂಕ್‌ಗಳ ಮಧ್ಯೆ ಸ್ಪರ್ಧೆ ತಡೆಯಲು ಇದರಿಂದ ಸಾಧ್ಯವಾಗಲಿದೆ. ಇದರಿಂದ ಸ್ಟೇಟ್ ಬ್ಯಾಂಕ್ ಸಮೂಹವು ಇನ್ನಷ್ಟು ಬಲಿಷ್ಠ ಬ್ಯಾಂಕಿಂಗ್ ಸಂಘಟನೆಯಾಗಲಿದೆ ಎಂದೂ ಸಚಿವಾಲಯವು ಅಭಿಪ್ರಾಯಪಟ್ಟಿದೆ.

ಈ ಮೊದಲಿನ ಎರಡು ಬ್ಯಾಂಕ್‌ಗಳ ವಿಲೀನ ಸಂದರ್ಭದಲ್ಲಿ ಅವುಗಳ ಅನುಮತಿ ಮೇರೆಗೆ ನಿರ್ಧಾರಕ್ಕೆ ಬರಲಾಗಿತ್ತು. ಬ್ಯಾಂಕ್‌ಗಳ ಆಡಳಿತ ಮಂಡಳಿ, ಕೇಂದ್ರ ಸರ್ಕಾರ ಮತ್ತು ‘ಆರ್‌ಬಿಐ’ನ ಸಮ್ಮತಿಯನ್ನೂ ಪಡೆಯಲಾಗಿತ್ತು ಎಂದು ‘ಎಸ್‌ಬಿಐ’ ಅಧ್ಯಕ್ಷ ಒ. ಪಿ. ಭಟ್ ಅವರು ಬುಧವಾರ ಮುಂಬೈನಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT