ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ವಿಎಂ ಗುತ್ತಿಗೆ ನೀಡಿದ್ದ ಜಮೀನು ಸರ್ಕಾರದ್ದು

ಹುನಗುಂದ ಜೆಎಂಎಫ್‌ಸಿ ಮಹತ್ವದ ಆದೇಶ
Last Updated 7 ಜನವರಿ 2014, 20:06 IST
ಅಕ್ಷರ ಗಾತ್ರ

ಬಾಗಲಕೋಟೆ: ಇಳಕಲ್‌ನ ಶ್ರೀವಿಜಯ ಮಹಾಂತೇ­ಶ್ವರ ವಿದ್ಯಾವರ್ಧಕ ಸಂಘವು (ಎಸ್‌ವಿಎಂ) ಚೆನ್ಹೈ ಮೂಲದ ಜೆಮ್ ಗ್ರಾನೈಟ್ ಕಂಪೆನಿ ಸೇರಿದಂತೆ ವಿವಿಧ ಕಲ್ಲು ಗಣಿಗಾರಿಕೆ ಕಂಪೆನಿಗಳಿಗೆ ಗುತ್ತಿಗೆ ನೀಡಿದ್ದ ಸಾವಿರಾರು ಕೋಟಿ ಬೆಲೆ ರೂಪಾಯಿ ಬಾಳುವ 815 ಎಕರೆ ಜಮೀನು ಸರ್ಕಾರಕ್ಕೆ ಸೇರಿದ್ದಾಗಿದೆ ಎಂದು ಹುನಗುಂದ ಜೆಎಂಎಫ್‌ಸಿ ನ್ಯಾಯಾಲಯ ಮಂಗಳ­ವಾರ ಮಹತ್ವದ ಆದೇಶ ನೀಡಿದೆ.

ಸಂಘವು ಗ್ರಾನೈಟ್‌ ಕಂಪೆನಿಗಳಿಗೆ ನೀಡಿದ್ದ ಹುನಗುಂದ ತಾಲ್ಲೂಕಿನ ಬಲಕುಂದಿ ಸುತ್ತಮುತ್ತಲಿನ 815 ಎಕರೆ ಭೂಮಿ, ‘ಬಾಂಬೆ ಇನಾಂ ರದ್ಧತಿ ಕಾಯ್ದೆ 1953’ರ ಅನ್ವಯ ಸರ್ಕಾರಕ್ಕೆ ಸೇರಿದೆ ಎಂದು 1995ರ ಆಗಸ್ಟ್‌ನಲ್ಲಿ ಅಂದಿನ ವಿಜಾಪುರ ಜಿಲ್ಲಾಧಿ­ಕಾರಿ ಎಂ.ಆರ್‌.ಕಾಂಬ್ಳೆ ಸರ್ಕಾರದ ವಶಕ್ಕೆ ತೆಗೆದು­ಕೊಂಡಿದ್ದರು. ಇದಕ್ಕೆ ಮುನ್ನ 1994ರಲ್ಲಿ ಜಿಲ್ಲಾಧಿ­ಕಾರಿ­ಯಾಗಿದ್ದ ಮದನ್‌ಗೋಪಾಲ್‌ ಅವರು ಜಮೀನು ಸ್ವಾಧೀನ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಸರ್ಕಾರ ಅನುಮೋದನೆಯನ್ನೂ ನೀಡಿತ್ತು, ನಂತರ ಕಾಂಬ್ಳೆ ವಶಕ್ಕೆ ತೆಗೆದುಕೊಂಡರು.

ನಂತರ ಹಲವು ತಿಂಗಳವರೆಗೆ ಈ ಜಮೀನಿನಲ್ಲಿ ಗಣಿಗಾರಿಕೆ ಸ್ಥಗಿತವಾಗಿತ್ತು. ಜಿಲ್ಲಾಧಿಕಾರಿಯವರ ಈ ಕ್ರಮವನ್ನು ಸಂಘವು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಜಿಲ್ಲಾಧಿಕಾರಿ ಅವರ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌, ಜಮೀನು ಒಡೆತನವನ್ನು ಸ್ಥಳೀಯ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿ­ಕೊಳ್ಳುವಂತೆ ನಿರ್ದೇಶನ ನೀಡಿತ್ತು. ಬಳಿಕ 1997ರಿಂದ ಹುನಗುಂದ ಮತ್ತು ಬಾಗಲಕೋಟೆ ನ್ಯಾಯಾಲಯ­ದಲ್ಲಿ ಪ್ರಕರಣದ ದೀರ್ಘ ವಿಚಾರಣೆ ನಡೆಯಿತು.

ಈ ನಡುವೆ 2010ರಲ್ಲಿ ಫೆಬ್ರುವರಿಯಲ್ಲಿ ಧಾರವಾಡ ಹೈಕೋರ್ಟ್‌ ಪೀಠವು 6 ತಿಂಗಳ ಒಳಗೆ ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ಹುನಗುಂದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು ಎಂದು ವಿಶೇಷ ಸರ್ಕಾರಿ ವಕೀಲ ಆರ್‌.ಎಂ.ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ನ್ಯಾಯಾಲಯದ ಆದೇಶ  ಹೊರಬೀಳುತ್ತಿ­ದ್ದಂ­ತೆಯೇ ತಡೆಯಾಜ್ಞೆ ಕೋರಿ ಸಂಘ ಅರ್ಜಿ ಸಲ್ಲಿಸಿದೆ.

ಸ್ವಾಗತ: ಕೋರ್ಟ್‌ ಆದೇಶವನ್ನು ಸ್ವಾಗತಿಸಿದ ಇಳಕಲ್‌ ಜನಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್‌, ಸರ್ಕಾರ ತಕ್ಷಣ ಭೂಮಿ­ಯನ್ನು ತನ್ನ ವಶಕ್ಕೆ ತೆಗೆದುಕೊಂಡು ಅಕ್ರಮ ಗಣಿ­ಗಾರಿಕೆ­ಯನ್ನು ನಿಲ್ಲಿಸಬೇಕು ಎಂದು  ಒತ್ತಾಯಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಂಘವು ಗ್ರಾನೈಟ್‌ ಕಂಪೆನಿಗಳಿಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಗುತ್ತಿಗೆ ನೀಡುವ ಮೂಲಕ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿತ್ತು, ಈ  ಸಂಬಂಧ ಲೋಕಾಯುಕ್ತಕ್ಕೆ 2011ರಲ್ಲಿ ದೂರು ನೀಡಲಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT