ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.1ರಿಂದ ಕಸ ತೆರಿಗೆ ವಸೂಲಿ

ಘನತ್ಯಾಜ್ಯ ಸಂಗ್ರಹಣೆ ಏಜೆನ್ಸಿಗೆ ಮತ್ತೆ ಶರಣಾದ ಶಿರಸಿ ನಗರಸಭೆ
Last Updated 11 ಡಿಸೆಂಬರ್ 2013, 6:29 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಘನತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಯು ಮನೆ–ಮನೆ ಕಸ ಸಂಗ್ರಹಿಸುವ ಕಾರ್ಯವನ್ನು ಮೂರ್ನಾಲ್ಕು ದಿನ ಗಳಿಂದ ಸ್ಥಗಿತಗೊಳಿಸಿದ್ದು, ಇಡೀ ನಗರ ಕಸದ ಗುಡ್ಡೆಯಾಗಿ ಮಾರ್ಪಟ್ಟಿದೆ. ಈ ಕುರಿತು ಚರ್ಚಿಸಲು ಮಂಗಳವಾರ ತುರ್ತು ಸಭೆ ಕರೆದಿದ್ದ ನಗರಸಭೆ, ಪ್ರಸ್ತುತ ಕಸ ಸಂಗ್ರಹಿಸುವ ಏಜೆನ್ಸಿಗೆ ಹೆಚ್ಚುವರಿ ನೆರವು ನೀಡಿ ಮಾರ್ಚ್‌ ತನಕ ಮುಂದುವರಿಸಲು ತೀರ್ಮಾನಿಸಿದೆ.

‘ನಗರದ ಘನತ್ಯಾಜ್ಯ ಸಂಗ್ರಹಣೆಯನ್ನು 2012 ಮೇ ತಿಂಗಳಿನಿಂದ ಇಲ್ಲಿನ ಈಗಲ್‌ ಸೆಕ್ಯುರಿಟಿ ಸರ್ವೀಸ್ ಸಂಸ್ಥೆಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿದ್ದು, ನಗರದ ಎಲ್ಲ ಮನೆಗಳು, ಆಸ್ಪತ್ರೆ, ಉದ್ಯಮ, ಹೋಟೆಲ್‌ಗಳ ಕಸ ಸಂಗ್ರಹಣೆಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ನಗರಸಭೆಯ ಒಂದು ಟಿಪ್ಪರ್‌, ನಾಲ್ಕು ವಾಹನಗಳನ್ನು ಈ ಏಜೆನ್ಸಿಗೆ ನೀಡಲಾಗಿದ್ದು, ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಸಹ ಇದೇ ಸಂಸ್ಥೆಗೆ ವಹಿಸಲಾಗಿದೆ.

ಪ್ರತಿ ತಿಂಗಳು ಗ್ರಾಹಕರಿಂದ ವಸೂಲಿ ಮಾಡಿದ ಹಣದಲ್ಲಿ ₨ 8900 ಮೊತ್ತವನ್ನು ನಗರಸಭೆಗೆ ಭರಣ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಈ ಸಂಸ್ಥೆ ಗ್ರಾಹಕರಿಂದ ಸಕಾಲಕ್ಕೆ ಹಣ ವಸೂಲಿ, ಇಂಧನ ವೆಚ್ಚ ಭರಿಸುವುದು ಕಷ್ಟವಾಗುತ್ತಿದ್ದು, ನಿರ್ವಹಣೆ ಸಾಧ್ಯವಿಲ್ಲವೆಂದು ಕೆಲಸ ಸ್ಥಗಿತಗೊಳಿಸಿದೆ’ ಎಂದು ಪೌರಾಯುಕ್ತ ಕೆ.ಬಿ.ವೀರಾಪುರ ಸಭೆಗೆ ತಿಳಿಸಿದರು.

‘ಪ್ರಸ್ತುತ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ದೊಡ್ಡದಾಗಿದ್ದು, ಜನರಿಗೆ ಉತ್ತರ ನೀಡಲಾಗದೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದೇವೆ. ಆದಷ್ಟು ಶೀಘ್ರ ನಗರಸಭೆ ಕಸದ ಸಮಸ್ಯೆ ಬಗೆಹರಿಸಬೇಕು’ ಎಂದು ಸದಸ್ಯ ಜಗದೀಶ ಗೌಡ ಹೇಳಿದರು. ‘ಟೆಂಡರ್‌ ಪಡೆಯುವಾಗ ಏಜೆನ್ಸಿಗೆ ನಷ್ಟವಾಗುವ ಅರಿವಿರಲಿಲ್ಲವೇ? ಕಸ ಸಂಗ್ರಹಿಸುವ ಏಜೆನ್ಸಿಯವರು ಬಿಲ್‌ ವಸೂಲಿಗೆ ನಿಯಮಿತವಾಗಿ ಬರುವುದಿಲ್ಲ. ಎಲ್ಲ ಕಡೆಗಳಲ್ಲಿ ಕಸ ಸಂಗ್ರಹಣೆ ಸಮರ್ಪಕವಾಗಿ ಆಗುತ್ತಿಲ್ಲ.

ತಿಂಗಳ ಬಾಡಿಗೆ ಹಣ ₨ 20 ಪಡೆಯಲು ಬೈಕ್‌ ಮೇಲೆ ಬರುವಾಗ ಅವರಿಗೆ ನಷ್ಟ ಕಾಣಿಸುವುದಿಲ್ಲವೇ’ ಎಂದು ಸದಸ್ಯರಾದ ನಂದಾ ನಾಯ್ಕ, ರಾಕೇಶ ತಿರುಮಲೆ, ಫ್ರಾನ್ಸಿಸ್ ಫರ್ನಾಂಡಿಸ್‌ ಇತರರು ಪ್ರಶ್ನಿಸಿದರು. ‘ನಗರದ 31 ವಾರ್ಡ್‌ಗಳ ಕಸ ವಿಲೇವಾರಿಯನ್ನು 2–3 ಪ್ರತ್ಯೇಕ ಏಜೆನ್ಸಿಗೆ ಟೆಂಡರ್‌ ನೀಡುವುದರಿಂದ ತೊಂದರೆ ಆಗಲಾರದು’ ಎಂದು ಸದಸ್ಯ ಅರುಣ ಕೋಡ್ಕಣಿ ಹೇಳಿದರು. ‘ಘನತ್ಯಾಜ್ಯ ನಿರ್ವಹಣೆಗೆ ಗಂಭೀರ ಸಮಸ್ಯೆಯಾಗಿದ್ದು, ಪ್ರತ್ಯೇಕ ಅಧಿಕಾರಿ ನೇಮಿಸಬೇಕು’ ಎಂದು ಅರುಣ ಪ್ರಭು ಹೇಳಿದರು.

ಪ್ರಸ್ತುತ ಎದುರಾಗಿರುವ ತೊಂದರೆಯನ್ನು ಶೀಘ್ರ ನಿವಾರಿಸಲು ಹಾಲಿ ಕೆಲಸ ನಿರ್ವಹಿಸುತ್ತಿರುವ ಏಜೆನ್ಸಿಗೆ ನಗರಸಭೆ ನಾಲ್ಕು ತಿಂಗಳಿಂದ ನೀಡುತ್ತಿರುವ ₨ 63ಸಾವಿರ ಹಣದ ಜೊತೆಗೆ ಹೆಚ್ಚುವರಿ ₨ 25ಸಾವಿರ ನೀಡಿ ಮಾರ್ಚ್‌ 31ರವರೆಗೆ ಇದೇ ವ್ಯವಸ್ಥೆ ಮುಂದುವರಿಸಲು ಸಭೆ ನಿರ್ಣಯಿಸಿತು. ಈ ಅವಧಿ ಮುಗಿಯುವ ಒಳಗಾಗಿ ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT