ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.6 ರಂದು ಕಪ್ಪಡಿ ಕ್ಷೇತ್ರದಲ್ಲಿ ಮಹಾಮಾದಲಿ ಸೇವೆ

Last Updated 6 ಏಪ್ರಿಲ್ 2013, 7:11 IST
ಅಕ್ಷರ ಗಾತ್ರ

ಕೆ.ಆರ್.ನಗರ: ತಾಲ್ಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಮಹಾಶಿವರಾತ್ರಿಯಿಂದ ಪ್ರಾರಂಭವಾದ ಜಾತ್ರೆಯು ನೀಲಗಾರರ ಸಾಂಪ್ರದಾಯಕ ವಿಧಿ ವಿಧಾನದಂತೆ ಏಪ್ರಿಲ್ 6 ರಂದು ಮಹಾಮಾದಲಿ ಸೇವೆಯೊಂದಿಗೆ ಮುಕ್ತಾಯವಾಗಲಿದೆ.

ಸುಮಾರು 16 ನೇ ಶತಮಾನದಲ್ಲಿ ಕಾಣಿಸಿಕೊಳ್ಳುವ ಮಂಟೇಸ್ವಾಮಿ ಅವರ ಮೂಲ ನೆಲೆ ತಮಿಳುನಾಡು-ಕರ್ನಾಟಕ ಗಡಿಪ್ರದೇಶ. ಮಂಟೇಸ್ವಾಮಿಯು ಕೊಡೇಕಲ್‌ಗೆ ಹೋದಾಗ ರಾಚಪ್ಪಾಜಿ ಪರಿಚಯವಾದರು. ಕೊಡೇಕಲ್ ಬಸವಯ್ಯನವರ ಹಿರಿಯ ಪುತ್ರರಾದ ರಾಚಪ್ಪಾಜಿ ಕವಿಯೂ ಆಗಿದ್ದರು.

ರಾಚಪ್ಪಾಜಿ ತನ್ನ ಕಾವ್ಯಗಳಲ್ಲಿ ತನ್ನನ್ನು  ರಾಚ, ರಾಚಯ್ಯ, ರಾಚಣ್ಣ, ಚಿಕ್ಕರಾಚಯ್ಯ, ಬಾಲ ರಾಚಯ್ಯ ಎಂದು ಕರೆದುಕೊಂಡಿದ್ದಾರೆ. ಮಂಟೇಸ್ವಾಮಿಯ ಸಹಪಾಠಿಯಾದ ರಾಚಪ್ಪಾಜಿ ಮತ್ತು ಶಿಷ್ಯರಾದ ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ಚೆನ್ನಾಜಮ್ಮ ದೀನ ದಲಿತರ ಪರವಾಗಿ ಸಮಾಜದಲ್ಲಿ ಸಂಘರ್ಷ ನಡೆಸಿದವರು ಎಂದು ಹೇಳಲಾಗಿದೆ.

ದೊಡ್ಡಮ್ಮತಾಯಿ ರಾಚಪ್ಪಾಜಿ ಅವರ ಪತ್ನಿ. ರಾಚಪ್ಪಾಜಿಯವರು ವಿಜಯನಗರ ರಣಮೋಡಿಗಾರರಾದ ಗಾರುಡಿಗರನ್ನು ಗೆದ್ದು ಚೆನ್ನಾಜಮ್ಮಳನ್ನು ಶಿಶು ಮಗಳಾಗಿ  ಪಡೆದುಕೊಂಡಿದ್ದಾರೆ. ಮಂಟೇಸ್ವಾಮಿಯವರು ಬೊಪ್ಪಣ್ಣಪುರದ ಪಾತಾಳ ಲೋಕದಲ್ಲಿ ಪವಡಿಸಿದ ನಂತರ ಅವರ ಸೂಚನೆಯಂತೆ ರಾಚಪ್ಪಾಜಿ, ದೊಡ್ಡಮ್ಮತಾಯಿ, ಚೆನ್ನಾಜಮ್ಮನವರು ಕೆ.ಆರ್.ನಗರ ಯಡತೊರೆ ಕಾವೇರಿ ನದಿ ತೀರದ ಕಡೆ ಪ್ರಯಾಣ ಬೆಳೆಸುತ್ತಾರೆ.

ಆದರೆ ಪತಿಯ ಜೊತೆಗೆ ನೆಲೆ ನಿಲ್ಲಲು ಒಪ್ಪದ ದೊಡ್ಡಮ್ಮತಾಯಿ ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲು ಮುತ್ತನಹಳ್ಳಿಯಲ್ಲಿ ನೆಲೆ ನಿಲ್ಲುತ್ತಾಳೆ. ದೊಡ್ಡಮ್ಮತಾಯಿ ಅವರ ಬಯಕೆಯಂತೆ ಅಲ್ಲಿಯೇ ಬಿಟ್ಟು ರಾಚಪ್ಪಾಜಿ ಮತ್ತು ಚೆನ್ನಾಜಮ್ಮನವರು ಕೆ.ಆರ್.ನಗರ ತಾಲ್ಲೂಕಿನ ಚಂದಗಾಲು ಗ್ರಾಮದ ಬಳಿ ಕಾವೇರಿ ನದಿ ತೀರದಲ್ಲಿನ ಕಪ್ಪಡಿಯಲ್ಲಿ ನೆಲೆ ನಿಂತು ಐಕ್ಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಪ್ಪಡಿ ಕ್ಷೇತ್ರದಲ್ಲಿ ಪ್ರಶಾಂತವಾಗಿ ಹರಿಯುವ ಕಾವೇರಿ ನದಿಯ ದಂಡೆಯ ಮೇಲೆ ಇಸ್ಲಾಂ ಶೈಲಿಯಲ್ಲಿ ರಾಚಪ್ಪಾಜಿ, ಚೆನ್ನಾಜಮ್ಮನವರ ಗದ್ದಿಗೆ ಸಮಾಧಿಗಳಿವೆ. ಅವರು ಪವಡಿಸಿದ ಪಾತಾಳ ಬಾವಿಯ ಮೇಲೆ ಸಮಾಧಿ ನಿರ್ಮಿಸಲಾಗಿದೆ. ರಾಚಪ್ಪಾಜಿ ಪ್ರಭಾವಿತರಾದ ದಲಿತ ಸಮುದಾಯ ಅವರ ಒಕ್ಕಲಾಗಿ ಇಂದಿಗೂ ಅವರನ್ನು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅವರು ಸಂಚರಿಸಿದ್ದ, ತಂಗಿದ್ದ, ನೆಲೆಸಿದ್ದ ತಾಣಗಳಲ್ಲಿ ಗುಡಿಗೋಪುರ, ತೊರು ಗದ್ದಿಗೆಗಳನ್ನು ನಿರ್ಮಿಸಿಕೊಂಡು ಜಾತ್ರೆ, ಉತ್ಸವಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ.

ರಾಚಪ್ಪಾಜಿ, ಚೆನ್ನಾಜಮ್ಮನವರು ಐಕ್ಯಗೊಂಡಿರುವ ಕಪ್ಪಡಿ ಕ್ಷೇತ್ರದಲ್ಲಿ ಪ್ರತಿ ವರ್ಷ ಶಿವರಾತ್ರಿಯಿಂದ ಯುಗಾದಿ ಹಬ್ಬದವರೆಗೆ ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ಬೊಪ್ಪೇಗೌಡನಪುರ ಮತ್ತು ಮಳವಳ್ಳಿ ಧರ್ಮಾಧಿಕಾರಿಗಳು ಕಪ್ಪಡಿ ಕ್ಷೇತ್ರದ ಹಕ್ಕನ್ನು ಹೊಂದಿರುತ್ತಾರೆ. ಇವರ ನೇತೃತ್ವದಲ್ಲಿಯೇ ಜಾತ್ರೆ ನಡೆಯುತ್ತದೆ. ಅಲ್ಲದೇ ಪ್ರತಿ ವರ್ಷ ಒಂದು ಊರಿನ ಧರ್ಮಾಧಿಕಾರಿಗಳು ಜಾತ್ರೆಗೆ ಆಗಮಿಸಿ ಜಾತ್ರೆ ನಡೆಸಿಕೊಡುವ ವಾಡಿಕೆ ಇದೆ.

ಕಂಡಾಯಗಳು: ಕಂಡಾಯಗಳು ನೀಲಗಾರ ಪರಂಪರೆಯ ಪವಿತ್ರ ಸಂಕೇತ. ಕಂಡಾಯವೆಂಬುದು ವಿಶಿಷ್ಟ ಆಯುಧ. ಈ ಪರಂಪರೆಯ ಪ್ರತಿಯೊಬ್ಬ ಶರಣರ ಸಂಕೇತವಾಗಿ ಒಂದೊಂದು ಕಂಡಾಯವಿದೆ. ಶರಣರು ಸಾಂಸ್ಕೃತಿಕ ಯಾತ್ರೆ ಮಾಡುವಾಗ ತಮ್ಮೊಡನೆ  ರಕ್ಷಣೆಗಾಗಿ ಕಂಡಾಯಗಳನ್ನು ಬಳಸುತ್ತಿದ್ದರು ಎಂಬ ನಂಬಿಕೆ ಇದೆ.

ಪ್ರಚಾರದ ಇಲ್ಲದೆಯೇ ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಕಪ್ಪಡಿ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಮಹಾಶಿವರಾತ್ರಿಯಿಂದ ಯುಗಾದಿವರೆಗೆ ಹರಿದು ಬರುವ ಭಕ್ತಾದಿಗಳು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ನೈವೇದ್ಯಗಾಗಿ ತಂದ ತೆಂಗಿನಕಾಯಿ ಇಲ್ಲಿ ಒಡೆಯುವುದಿಲ್ಲ. ಬಾಳೆ ಹಣ್ಣಿನ ತೊಟ್ಟು ಮುರಿಯುವುದಿಲ್ಲ.

ಮುಡಿಕೊಟ್ಟು ಹರಕೆ ತೀರಿಸುತ್ತಾರೆ. ಕ್ಷೇತ್ರದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಾಂಸ ಆಹಾರ ಮಾಡಿದರೂ ಗದ್ದುಗೆಗೆ ತಂದು ನೈವೇದ್ಯ ಮಾಡುವುದಿಲ್ಲ. ಆದರೆ ಇಲ್ಲಿ ಪ್ರಾಣಿ ಬಲಿ ನಡೆಯುತ್ತದೆ ಎಂದು ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹದ್ದಿನಕಣ್ಣಿಟ್ಟು ಕಾಯತೊಡಗಿರುವುದರಿಂದ ಜಾತ್ರೆಗೆ ಆಗಮಿಸುತ್ತಿರುವ ಭಕ್ತಾದಿಗಳಿಗೆ ಕಿರಿ ಕಿರಿಯಾಗುತ್ತಿದೆ ಎಂದು ಹಲವು ಭಕ್ತಾದಿಗಳು ಆರೋಪಿಸಿದ್ದಾರೆ.

ಟ್ರಾಫಿಕ್ ಸಮಸ್ಯೆ: ಸಂಚಾರ ತೊಡಕು
ಕಪ್ಪಡಿ ಕ್ಷೇತ್ರದಲ್ಲಿ ಪ್ರತಿವರ್ಷ ಒಂದು ತಿಂಗಳಗಳ ಕಾಲ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಬಡವರು ಮತ್ತು ಮಧ್ಯಮ ವರ್ಗದ ಭಕ್ತಾದಿಗಳೇ ಹೆಚ್ಚು. ಭಾನುವಾರ ಅದರಲ್ಲೂ ಸರ್ಕಾರಿ ರಜೆ ದಿನಗಳಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ.

ಕಪ್ಪಡಿ ಕ್ಷೇತ್ರದ ಸುತ್ತ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡದೇ ಇರುವುದರಿಂದ 1ಕಿ.ಮೀ ಅಂತರದಲ್ಲಿ ವಾಹನಗಳು ನಿಲ್ಲಿಸಬೇಕಾಗುತ್ತದೆ. ಇದರಿಂದ ವಯೋವೃದ್ಧರು, ಮಹಿಳೆಯರು ಮತ್ತು ಮಕ್ಕಳು ಬಿಸಿಲಿನಲ್ಲಿ ನಡೆದುಕೊಂಡು ಹೋಗುವುದು ಕಷ್ಟವಾಗುತ್ತದೆ.
  -ಎಂ.ಆರ್.ಲವ. ಸಬ್‌ಇನ್ಸ್‌ಪೆಕ್ಟರ್.

ಕ್ಷೇತ್ರದ ಅಭಿವೃದ್ಧಿ ಯಾವಾಗ
ಕಪ್ಪಡಿ ಕ್ಷೇತ್ರಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳು ಬಂದು ಹೋಗುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. ಆದರೂ ಇಲ್ಲಿ ಬರುವ ಭಕ್ತಾದಿಗಳ ಸಂಖ್ಯೆಗನುಗುಣವಾಗಿ ಇಲ್ಲಿ ಮೂಲ ಭೂತ ಸೌಕರ್ಯಗಳು ಒದಗಿಸಿಲ್ಲ. ಭಕ್ತರು ಕಾವೇರಿ ನದಿದಂಡೆಯನ್ನೇ ಶೌಚಾಲಯವಾಗಿ ಬಳಸಿಕೊಳ್ಳುತ್ತಿರುವುದರಿಂದ ಕಾವೇರಿ ನದಿ ಕಲುಷಿತಗೊಳ್ಳುತ್ತಿದೆ. ಜನಸಂಖ್ಯೆಗನುಗುಣವಾಗಿ ಶೌಚಾಲಯ ನಿರ್ಮಿಸಬೇಕು. ಕ್ಷೇತ್ರ ಶುಚಿತ್ವ ಕಾಪಾಡಬೇಕು. ಕುಡಿಯಲು ಯೋಗ್ಯವಾದ ನೀರು ಒದಗಿಸಬೇಕು. ಭಕ್ತಾರು ಉಳಿದುಕೊಳ್ಳಲು ಇನ್ನೂ ಹೆಚ್ಚಿನ ಶೆಡ್‌ಗಳನ್ನು ನಿರ್ಮಿಸಬೇಕಾಗಿದೆ.
  -ಶರತ್ ಪವಾರ್. ಸ್ಥಳೀಯ. ಹೆಬ್ಬಾಳು ಕೊಪ್ಪಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT