ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ನಿವೇಶನಗಳಿಗೆ ಮಾತ್ರ ಅಧಿಕೃತ ಖಾತೆ

ಉಳಿದ ನಿವೇಶನದಾರರು ಅಕ್ರಮ–ಸಕ್ರಮಕ್ಕೆ ಕಾಯುವುದು ಅನಿವಾರ್ಯ: ಆಯುಕ್ತರು
Last Updated 30 ಜೂನ್ 2014, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆಯಾದ ಏಕ ನಿವೇ­ಶನಗಳಿಂದ ಮಾತ್ರ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ, ಅಂತಹ ನಿವೇ­ಶನಗಳಿಗೆ ಅಧಿಕೃತ ಖಾತೆ ಮಾಡಿಕೊಡಲಾಗುವುದು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ.­ಲಕ್ಷ್ಮಿನಾರಾಯಣ ತಿಳಿಸಿದರು.

ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಸೋಮವಾರ ಅಭಿವೃದ್ಧಿ ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಅವರು ಈ ಸ್ಪಷ್ಟನೆ ನೀಡಿದರು. ‘ಭೂಪರಿವರ್ತನೆಯಾದ ನಿವೇಶನ ವಿಂಗಡಣೆಯಾಗಿದ್ದರೆ ಅಥವಾ ಅದ­ರಲ್ಲಿ ಕಟ್ಟಡ ನಿರ್ಮಿಸಿದ್ದರೆ ಅಂತಹ ನಿವೇಶನದಾರರು ಅಧಿಕೃತ ಖಾತೆ ಮಾಡಿಸಿಕೊಳ್ಳಲು ಅಕ್ರಮ–ಸಕ್ರಮ ಯೋಜನೆ ಜಾರಿಗೆ ಬರುವ­ವರೆಗೆ ಕಾಯಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಅಕ್ರಮ–ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದರೂ ಹೈಕೋರ್ಟ್‌ನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ವಿಚಾರಣೆ ನಡೆಯು­ತ್ತಿ­ರುವ ಕಾರಣ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಿದೆ’ ಎಂದು ವಿವರಿಸಿದರು.

‘ಭೂಪರಿವರ್ತನೆಯಾದ ಏಕ ನಿವೇಶನಗಳಿಗಲ್ಲದೆ ಬೇರೆ ನಿವೇಶ­ನ­ಗಳಿಗೂ ಖಾತೆ ನೀಡಲು ಮುಂದಾದರೆ ಸರ್ಕಾರದ ಯೋಜನೆಗೆ ವಿರುದ್ಧ­­ವಾಗಿ ಬಿಬಿಎಂಪಿ ಕ್ರಮ ಕೈಗೊಂಡಂತೆ ಆಗುತ್ತದೆ. ಹೀಗಾಗಿ ಉಳಿದ ನಿವೇಶನಗಳಿಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಅಭಿವೃದ್ಧಿ ಶುಲ್ಕ ಪಡೆಯಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಮೇಯರ್‌ ಬಿ.ಎಸ್‌. ಸತ್ಯ­ನಾರಾ­­­ಯಣ, ‘ಭೂಪರಿವರ್ತನೆಯಾದ ಭೂಮಿಯಲ್ಲಿ ಹಂಚಿಕೆ ಮಾಡ­ಲಾದ ವೈಯಕ್ತಿಕ ನಿವೇಶನಗಳಿಗೂ ಖಾತೆ ನೀಡಲು ಅನುಮತಿ ನೀಡು­ವಂತೆ ಒತ್ತಾಯಿಸಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ಯ­ಲಾ­ಗುವುದು’ ಎಂದು ಪ್ರಕಟಿಸಿದರು.

ಚರ್ಚೆಗೆ ನಾಂದಿ ಹಾಡಿದ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಶ್ವತ್ಥನಾರಾಯಣಗೌಡ, ‘ಮುಖ್ಯಮಂತ್ರಿಗಳು ಬಿಬಿಎಂಪಿಯಿಂದ ₨ 4,000 ಕೋಟಿ ತೆರಿಗೆ ಸಂಗ್ರಹಿಸಲು ಸಾಧ್ಯವಿದೆ ಎಂದು ಬಾರಿ, ಬಾರಿ ಹೇಳುತ್ತಿದ್ದಾರೆ. ಕೌನ್ಸಿಲ್‌ ಸಭೆಯಲ್ಲಿ ನಾಲ್ಕು ತಿಂಗಳ ಹಿಂದೆಯೇ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ನಿರ್ಣಯ ಕೈಗೊಂಡಿದ್ದೇವೆ. ಅಧಿಕಾ­ರಿ­ಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾದರೆ ವರ­ಮಾನ ಸಂಗ್ರಹಣೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತಲೇ ಇದ್ದೇವೆ. ಕಂದಾಯ ವಿಭಾಗ ಮಾತ್ರ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿ­ಗಳ ಜಡತ್ವದಿಂದ ಪಾಲಿಕೆಗೆ ದುಡ್ಡೇ ಬರುತ್ತಿಲ್ಲ. ಹಿಡಿದಿರುವ ಜಡ ಬಿಡಿಸಲು ಅವರನ್ನೆಲ್ಲ ಪ್ರಕೃತಿ ಚಿಕಿತ್ಸಾಲಯಕ್ಕೆ ಕಳುಹಿಸಬೇಕು’ ಎಂದು ವ್ಯಂಗ್ಯವಾಡಿದರು. ಬಿಜೆಪಿಯ ಎನ್‌. ನಾಗರಾಜ್‌, ‘ಪ್ರತಿ ವಿಭಾಗದಲ್ಲೂ ಒಂದೊಂದು ವಾರ ವಿಶೇಷ ತೆರಿಗೆ ಸಂಗ್ರಹ ಮೇಳ ಮಾಡಬೇಕು. ಅಭಿವೃದ್ಧಿ ಶುಲ್ಕ ಸೇರಿ­ದಂತೆ ಎಲ್ಲ ತೆರಿಗೆಯನ್ನೂ ಈ ಮೇಳದಲ್ಲಿ ಸಂಗ್ರಹ ಮಾಡಬೇಕು.

ಇದರಿಂದ ಬಂದ ವರಮಾನವನ್ನು ಗುತ್ತಿಗೆದಾರರ ಬಾಕಿ ತೀರಿಸುವ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಳಸಬೇಕು’ ಎಂದು ಸಲಹೆ ನೀಡಿದರು. ವಿರೋಧ ಪಕ್ಷದ ನಾಯಕ ಮಂಜುನಾಥ ರೆಡ್ಡಿ, ‘ಸರ್ಕಾರದ ಮಾರ್ಗಸೂಚಿ ದರದಂತೆ ಅಭಿವೃದ್ಧಿ ಶುಲ್ಕ ಭರಿಸಲಾಗುವುದು ಎಂಬ ಪ್ರಮಾಣ ಪತ್ರ ಪಡೆದು ನೂರಾರು ನಿವೇಶನಗಳಿಗೆ ಖಾತೆ ನೀಡಲಾಗಿದೆ.

ಅಂತಹ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿದ ಬಿಲ್ಡರ್‌ಗಳು ಮನೆಗಳನ್ನು ಮಾರಾಟ ಮಾಡಿ ಜಾಗ ಖಾಲಿ ಮಾಡಿದ್ದಾರೆ. ಆ ನಿವೇಶನಗಳ ಅಭಿವೃದ್ಧಿ ಶುಲ್ಕವನ್ನು ಯಾರಿಂದ ಭರಿಸಲಾಗುತ್ತದೆ’ ಎಂದು ಪ್ರಶ್ನಿಸಿದರು. ‘ಕಟ್ಟಡಗಳಲ್ಲಿ ವಾಸವಾದ ವ್ಯಕ್ತಿಗಳಿಂದಲೇ ಅಭಿವೃದ್ಧಿ ಶುಲ್ಕ ಸಂಗ್ರಹ ಮಾಡಲಾಗುವುದು’ ಎಂದು ಕಂದಾಯ ವಿಭಾಗದ ಉಪ ಆಯುಕ್ತ ಐ.ರಮಾಕಾಂತ್‌ ತಿಳಿಸಿದರು.

ಮೂರು ತಿಂಗಳಲ್ಲಿ ಪಿಐಡಿ:‘ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ನಗರದ ಪ್ರತಿಯೊಂದು ಆಸ್ತಿಗೂ  ಗುರುತಿನ ಸಂಖ್ಯೆ (ಪಿಐಡಿ) ನೀಡುವ ಪ್ರಕ್ರಿಯೆಯನ್ನು ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಆಯುಕ್ತರು ಭರವಸೆ ನೀಡಿದರು. ‘ಪ್ರತಿ ತಿಂಗಳು ಸಾಧಿಸಲಾದ ಪ್ರಗತಿಯ ವರದಿಯನ್ನು ಅಧಿಕಾರಿಗಳಿಂದ ಪಡೆಯಲಿದ್ದೇನೆ’ ಎಂದು ಹೇಳಿದರು.

ಬಿಜೆಪಿಯ ಮಂಜುನಾಥ್‌ರಾಜು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಪಿಐಡಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡಿದ ರಮಾಕಾಂತ್‌, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 16,19,363 ಆಸ್ತಿಗಳನ್ನು ಗುರುತಿಸಲಾಗಿದ್ದು, 13,85,552 ಆಸ್ತಿಗಳಿಗೆ ಪಿಐಡಿ ನೀಡಲಾಗಿದೆ’ ಎಂದು ವಿವರಿಸಿದರು.

‘ಹಳೆಯ 75 ವಾರ್ಡ್‌ಗಳಲ್ಲಿ ಪಿಐಡಿ ನೀಡುವ ಪ್ರಕ್ರಿಯೆ ಈಗಾಗಲೇ ಶೇ 100ರಷ್ಟು ಪೂರ್ಣಗೊಂಡಿದೆ. ಹೊಸ ವಾರ್ಡ್‌ಗಳಲ್ಲಿ ಕೆಲಸ ಬಾಕಿ ಇದೆ. ಮಹದೇವಪುರ, ರಾಜರಾಜೇಶ್ವರಿನಗರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ಬಹುತೇಕ ಆಸ್ತಿಗಳಿಗೆ ಇನ್ನೂ ಪಿಐಡಿ ನೀಡಬೇಕಿದೆ. ಗ್ರಾಮಗಳ ದಾಖಲೆ ಸರಿಯಾಗಿ ಇಲ್ಲದೆ ಇರುವುದು ಮತ್ತು ಕೌಶಲಪೂರ್ಣ ಅಧಿಕಾರಿಗಳ ಕೊರತೆಯಿಂದ ಕೆಲಸ ಕುಂಟುತ್ತಾ ಸಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ತಿಂಗಳು 2000 ಕಟ್ಟಡಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ಕಟ್ಟಡದ ವಿಸ್ತೀರ್ಣಕ್ಕೂ, ಮಾಲೀಕರು ಕೊಟ್ಟ ಮಾಹಿತಿಗೂ ಇರುವ ವ್ಯತ್ಯಾಸವನ್ನು ಪತ್ತೆ ಹಚ್ಚಲು ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯ ಎಂಜಿನಿಯರ್‌ (ರಸ್ತೆಗಳು ಮತ್ತು ಮೂಲಸೌಕರ್ಯ) ಎಸ್‌.ಸೋಮಶೇಖರ್‌ ಹೇಳಿದರು.

‘ನಗರದ 1,049 ಕಿ.ಮೀ. ಉದ್ದದ ಮುಖ್ಯ ರಸ್ತೆಗಳ ಇತಿಹಾಸದ ನಿರ್ವಹಣೆ ವ್ಯವಸ್ಥೆಯನ್ನು ಇನ್ನು ಎರಡು ತಿಂಗಳಲ್ಲಿ ಸಂಪೂರ್ಣವಾಗಿ ಸನ್ನದ್ಧಗೊಳಿಸಲಾಗುವುದು. ಉಪರಸ್ತೆಗಳ ಇತಿಹಾಸ ನಿರ್ವಹಣೆಗೆ ಸಂಬಂಧಿಸಿದಂತೆ ವಲಯ ಅಧಿಕಾರಿಗಳ ಸಭೆ ಕರೆಯಲಾಗುವುದು’ ಎಂದು ತಿಳಿಸಿದರು.

ಕೆಂಪೇಗೌಡ ಪ್ರಶಸ್ತಿ ನೀಡಿ
ಹೊಸ ವಲಯಗಳ ಆಸ್ತಿಗಳಿಗೆ ಪಿಐಡಿ ಯಾವಾಗ ನೀಡ­ಲಾ­ಗು­­ವುದು ಎಂದು ಕಂದಾಯ ವಿಭಾಗದ ಉಪ ಆಯುಕ್ತ ಐ.ರಮಾಕಾಂತ್‌ ಅವರಿಗೆ ಕೇಳಿದರೆ, ಅವರು ಯಾವ, ಯಾವ ಪ್ರದೇಶದಲ್ಲಿ ಇನ್ನೂ ಪಿಐಡಿ ನೀಡಲಾ­ಗಿಲ್ಲ ಎಂಬ ವಿವರ ನೀಡು­ತ್ತಾರೆ. ಅವರ ಬುದ್ಧಿವಂತಿಕೆಗೆ ಮೆಚ್ಚ­­ಬೇಕು. ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡದೆ ಮೇಯರ್‌ ತಪ್ಪು ಮಾಡಿ­ದ್ದಾರೆ.

–ಕೆ.ಚಂದ್ರಶೇಖರ್‌, ಕಾಂಗ್ರೆಸ್‌ ಸದಸ್ಯ


‘ಕೌನ್ಸಿಲ್‌ ಸಭೆಯೋ, ಹುಚ್ಚಾಸ್ಪತ್ರೆಯೋ?’

ಬೆಂಗಳೂರು: ‘ಇದೇನು ಕೌನ್ಸಿಲ್‌ ಸಭೆಯೋ, ಹುಚ್ಚಾ­ಸ್ಪ­ತ್ರೆಯೋ?’– ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಸೋಮ­ವಾರ ಉಂಟಾಗಿದ್ದ ಗೊಂದಲದ ವಾತಾವ­ರ­ಣದಿಂದ ಬೇಸತ್ತು ಬಿಜೆಪಿಯ ಎನ್‌.ನಾಗರಾಜ್‌ ಕೇಳಿದ ಪ್ರಶ್ನೆ ಇದು. ಒಬ್ಬ ಸದಸ್ಯರು ಮಾತನಾಡುತ್ತಿದ್ದಾಗ ನಾಲ್ಕಾರು ಸದ­ಸ್ಯರು ಎದ್ದುನಿಂತು ಅವರ ಮಾತಿಗೆ ಅಡ್ಡಿಪಡಿ­ಸುತ್ತಿ­ದ್ದರು.

ಅಧಿಕಾರಿಗಳು ಉತ್ತರಿಸಲು ಆಸ್ಪದ ನೀಡ­ದಂತೆ ಗಲಾಟೆ ಮಾಡುತ್ತಿದ್ದರು. ಸದಸ್ಯರ ನಡುವೆಯೇ ವಾದ–ಪ್ರತಿವಾದದ ಅಬ್ಬರ ಜೋರಾಗಿತ್ತು. ಇದರಿಂದ ಆಕ್ರೋ­­ಶ­­­ಗೊಂಡ ನಾಗರಾಜ್‌ ಮೇಲಿನಂತೆ ಪ್ರಶ್ನಿಸಿದರು. ‘ಇದು ಸಭೆಯೋ, ಹುಚ್ಚಾಸ್ಪತ್ರೆಯೋ ಎನ್ನುವು­ದನ್ನು ನೀವೇ ನಿರ್ಧರಿಸಬೇಕು’ ಎಂದು ಮೇಯರ್‌ ಬಿ.ಎಸ್‌.­ಸತ್ಯನಾರಾಯಣ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಆಡಳಿತ ಪಕ್ಷದಿಂದಲೇ ಧರಣಿ: ‘ಬಿಬಿಎಂಪಿ ನೌಕರರ ಭವನದ ನವೀಕೃತ ಕಟ್ಟಡದಲ್ಲಿ ನಡೆದ ‘ನಮ್ಮ ಬೆಂಗಳೂರು ನನ್ನ ಕೊಡುಗೆ’ ಸಮಾರಂಭದಲ್ಲಿ ನೌಕರರ ಸಂಘದ ಅಧ್ಯಕ್ಷರೂ ಆದ ಮೇಯರ್‌ ಆಪ್ತ ಕಾರ್ಯದರ್ಶಿ ಆರ್‌.ಸುಬ್ರಹ್ಮಣ್ಯಂ ಅವರಿಂದ ನಮಗೆ ಅವಮಾನವಾಗಿದ್ದು, ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿ ವಾರ್ಡ್‌ ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್‌. ಬಸವರಾಜು ಧರಣಿ ನಡೆಸಿದರು.

‘ನೌಕರರ ಭವನದ ನಿರ್ಮಾಣಕ್ಕೆ ಪಾಲಿಕೆ ಹಣ ನೀಡಲಾಗಿದೆ. ಅದಕ್ಕೆ ನಿಮ್ಮ ಹೆಸರು ಇಟ್ಟಿದ್ದೇಕೆ’ ಎಂದು ವಿರೋಧ ಪಕ್ಷದ ನಾಯಕ ಮಂಜುನಾಥ್‌ ರೆಡ್ಡಿ, ಮೇಯರ್‌ ಅವರಿಗೆ ಪ್ರಶ್ನಿಸಿದರು. ವಿರೋಧ ಪಕ್ಷದ ಸದ­ಸ್ಯರೂ ಮೇಯರ್‌ ಪೀಠದ ಮುಂದೆ ಜಮಾಯಿ­ಸಿದ್ದರಿಂದ ಗದ್ದಲ ಉಂಟಾಯಿತು. ಸಭೆ­ಯನ್ನು ಹತ್ತು ನಿಮಿಷ ಮುಂದೂಡಿದ ಮೇಯರ್‌, ತಮ್ಮ ಕೊಠಡಿ­ಯಲ್ಲಿ ಮುಖಂಡರ ಸಭೆ ನಡೆಸಿ, ಕಾವೇರಿದ ವಾತಾ­ವರಣ­ವನ್ನು ಶಮನ ಮಾಡಿದರು.

ಪರಿಹಾರಕ್ಕೆ ಆಗ್ರಹ:‘ಭಾನುವಾರ ರಾತ್ರಿ ಸುರಿದ ಮಳೆಯಿಂದ ವೃಷಭಾವತಿ ಕಣಿವೆಯ ಚರಂಡಿ ತಡೆಗೋಡೆ ಕುಸಿದು ತಿಮ್ಮಕ್ಕ ಎಂಬ ಮಹಿಳೆ ಮೃತಪಟ್ಟಿದ್ದು, ಆಕೆಯ ಕುಟುಂಬದ ಸದಸ್ಯರಿಗೆ ₨ 5 ಲಕ್ಷ ಪರಿಹಾರ ನೀಡಬೇಕು’ ಎಂದು ಮಹಾಲಕ್ಷ್ಮಿ ಲೇಔಟ್‌ ಶಾಸಕ ಕೆ.ಗೋಪಾಲಯ್ಯ ಒತ್ತಾಯಿಸಿದರು. ‘ಚರಂಡಿ ಹೂಳು ತೆಗೆಯಬೇಕು ಮತ್ತು ಶಿಥಿಲಗೊಂಡ ತಡೆಗೋಡೆ ದುರಸ್ತಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT