ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತಾ ಯಾತ್ರೆ ಅಬಾಧಿತ- ಬಿಜೆಪಿ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಶ್ರೀನಗರದ ಲಾಲ್ ಚೌಕದಲ್ಲಿ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸುವ ಬಿಜೆಪಿಯ ‘ಏಕತಾ ಯಾತ್ರೆ’ ಬಗ್ಗೆ ಪ್ರಧಾನ ಮಂತ್ರಿಗಳ ಮಧ್ಯ ಪ್ರವೇಶ ಮತ್ತು ಕಣಿವೆ ರಾಜ್ಯದ ಮುಖ್ಯಮಂತ್ರಿಯ ತೀವ್ರ ವಿರೋಧದ ನಡುವೆಯೂ ಇದರಿಂದ ಹಿಂದೆ ಸರಿಯುವ ಪ್ರಶ್ನೆಯ ಇಲ್ಲ ಎಂದು ಬಿಜೆಪಿ ಹೇಳಿದೆ. ಕೇಂದ್ರ ಸರ್ಕಾರ ಮತ್ತು ಕಾಶ್ಮೀರ ಮುಖ್ಯಮಂತ್ರಿಗಳು ಹೊಂದಾಣಿಕೆ ಆಗದ ಮತ್ತು ದಿಗಿಲಿನ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಿಜೆಪಿ ಅಣಕವಾಡಿದೆ.

‘ಏಕತಾ ಯಾತ್ರೆ’ ಬಗ್ಗೆ ಕೇಂದ್ರ ಮತ್ತು ಕಾಶ್ಮೀರ ರಾಜ್ಯಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖಂಡ ಅರುಣ್ ಜೇಟ್ಲಿ ‘ರಾಷ್ಟ್ರ ಧ್ವಜ ಹಾರಿಸುವುದು ಪ್ರಚೋದನಾತ್ಮಕ ವಿಷಯವೇ’ ಎಂದು ಪ್ರಶ್ನಿಸಿದ್ದಾರೆ.

ಯಾತ್ರೆ ಕೈಬಿಡುವಂತೆ ಪ್ರಧಾನಿ ಸಿಂಗ್ ಮಾಡಿರುವ ಮನವಿಯನ್ನು ತಿರಸ್ಕರಿಸಿರುವ ಅವರು, ಯಾತ್ರೆಯನ್ನು ಹತ್ತಿಕ್ಕುವ ಸರ್ಕಾರದ ಯತ್ನ ಖಂಡನೀಯ. ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುವ ಎಲ್ಲಾ ಮಾರ್ಗಗಳನ್ನೂ ಬಂದ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಅಲ್ಲಿಗೆ ತೆರಳುತ್ತಿರುವ ಕಾರ್ಯಕರ್ತರಿರುವ ರೈಲುಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಸಂಚಾರವನ್ನು ರದ್ದು ಪಡಿಸಲಾಗುತ್ತಿದೆ. ಆದರೂ ಬಿಜೆಪಿ ಶಾಂತಿಯುತವಾಗಿ ಯಾತ್ರೆ ನಡೆಸುವುದಕ್ಕೆ ಬದ್ಧವಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಯಾತ್ರೆಯನ್ನು ತಡೆಯಲು ಸರ್ಕಾರ ಪ್ರಜಾಸತ್ತಾತ್ಮಕವಲ್ಲದ ವಿಧಾನಗಳನ್ನು ಬಳಸುತ್ತಿದೆ. ಆದರೆ ಪ್ರತ್ಯೇಕತಾವಾದಿಗಳ ವಿರುದ್ಧ ಯಾವುದೇ ಶಿಕ್ಷಾರ್ಹ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಸರ್ಕಾರ ಮಾನಸಿಕವಾಗಿ ಪ್ರತ್ಯೇಕತಾವಾದಿಗಳಿಗೆ ಶರಣಾಗಿದೆ. ರಾಷ್ಟ್ರ ಧ್ವಜ ಹಾರಿಸುವುದರಿಂದ ಹಿಂದೆ ಸರಿಯುವ ಮತ್ತು ತಪ್ಪೊಪ್ಪಿಕೊಳ್ಳುವ ಪ್ರಶ್ನೆ ಇಲ್ಲ ಎಂದರು.

ವಿವಾದಿತ ಯಾತ್ರೆಯ ಕುರಿತು ಮಧ್ಯ ಪ್ರವೇಶ ಮಾಡಿ ನಿಷ್ಠೂರವಾಗಿ ಮಾತನಾಡಿದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು, ‘ಗಣರಾಜ್ಯೋತ್ಸವ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂದರ್ಭ ಅಲ್ಲ. ರಾಜಕೀಯ ಮತ್ತು ಒಡಕುಂಟು ಮಾಡುವ ವಿಷಯವನ್ನು ಬಿತ್ತರಿಸಲು ಈ ಸಂದರ್ಭವನ್ನು ಬಳಸಿಕೊಳ್ಳಬಾರದು’ ಎಂದಿದ್ದರು.

‘ತ್ರಿವರ್ಣಧ್ವಜ ಹಾರಿಸಿಯೇ ಸಿದ್ಧ’
ಜಮ್ಮು (ಪಿಟಿಐ): ಶ್ರೀನಗರದ ಕೆಂಪು ಚೌಕದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಸಲುವಾಗಿ ಇಲ್ಲಿಂದ ಆರಂಭವಾಗುವ ‘ರಾಷ್ಟ್ರೀಯ ಏಕತಾ ಯಾತ್ರೆ’ಯಲ್ಲಿ ಪಾಲ್ಗೊಳ್ಳಲು ಐವತ್ತು ಸಾವಿರಕ್ಕೂ ಹೆಚ್ಚು ಯುವಕರು  ಇಲ್ಲಿಗೆ ಆಗಮಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.

‘ರಾಷ್ಟ್ರದಾದ್ಯಂತ ಐವತ್ತು ಸಾವಿರಕ್ಕೂ ಹೆಚ್ಚು ಯುವಕರು ಜ. 25ರಂದು ಜಮ್ಮುವಿಗೆ ಆಗಮಿಸಲಿದ್ದಾರೆ. ಯಾವುದೇ ಶಕ್ತಿಗೂ ಇದನ್ನು ತಡೆಯಲು ಸಾಧ್ಯವಾಗದು’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಶಮ್‌ಶೇರ್ ಸಿಂಗ್ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT