ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆಗೆ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ವಿರೋಧ

Last Updated 23 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕೆಂಬ ಬೇಡಿಕೆಯ ವಿಷಯವನ್ನೇ ಕೈಬಿಡುವಂತೆ ಪಕ್ಷದ ಕೇಂದ್ರ ಸಮಿತಿಗೆ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಶಿಫಾರಸು ಮಾಡಿದೆ ಎಂದು ಮೋರ್ಚಾದ ರಾಷ್ಟ್ರೀಯ ಪ್ರಭಾರಿ ಡಾ.ಜೆ.ಕೆ.ಜೈನ್ ತಿಳಿಸಿದರು.

ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬುಧವಾರ ಆರಂಭವಾದ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಈವರೆಗೆ ಒಂದು ಅಭಿಪ್ರಾಯವಿತ್ತು. ಆದರೆ, ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿರುವ ಅಲ್ಪಸಂಖ್ಯಾತರ ಮೋರ್ಚಾ, ಇದೊಂದು `ಮುಗಿದುಹೋದ ವಿಷಯ~ ಎಂದು ಪರಿಗಣಿಸಿದೆ. ಈ ಕಾರಣಕ್ಕಾಗಿಯೇ ಏಕರೂಪ ನಾಗರಿಕ ಸಂಹಿತೆಯ ವಿಷಯವನ್ನೇ ಕೈಬಿಡುವಂತೆ ಕೇಂದ್ರ ಸಮಿತಿಗೆ ಶಿಫಾರಸು ಕಳುಹಿಸಿದೆ~ ಎಂದರು.

ಭಾರತದ ಸೊಬಗು ಇರುವುದೇ ವೈವಿಧ್ಯದಲ್ಲಿ. ವಿವಿಧ ಧರ್ಮಗಳ ನಡುವಿನ ಸಾಮರಸ್ಯವೇ ದೇಶದ ಶಕ್ತಿ. ಭಾರತದಲ್ಲಿ 120 ಕೋಟಿ ಜನರಿದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಜನರಲ್ಲಿ ಒಂದೇ ಭಾವನೆ ಇರುತ್ತದೆ. ಎಲ್ಲ ವಿಚಾರಗಳಲ್ಲೂ, ಎಲ್ಲರಲ್ಲೂ ಒಂದೇ ದೃಷ್ಟಿಕೋನ ಇರಬೇಕು ಎಂದು ನಿರೀಕ್ಷಿಸುವುದು ತಪ್ಪು. ಈ ಎಲ್ಲ ಅಂಶಗಳನ್ನೂ ಆಧರಿಸಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸುವುದನ್ನು ಕೈಬಿಡುವಂತೆ ಪಕ್ಷದ ಕೇಂದ್ರ ಸಮಿತಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮೀಸಲಾತಿಗೆ ವಿರೋಧ
: ಧರ್ಮ ಆಧಾರಿತ ಮೀಸಲಾತಿಯನ್ನು ನೀಡುವ ಯುಪಿಎ ಸರ್ಕಾರದ ಪ್ರಸ್ತಾವವನ್ನೂ ಮೋರ್ಚಾ ತೀವ್ರವಾಗಿ ವಿರೋಧಿಸುತ್ತದೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ದೇಶದ ಸಂವಿಧಾನದಲ್ಲಿ ಅವಕಾಶ ಇಲ್ಲ. ಅಲ್ಪಸಂಖ್ಯಾತ ಸಮುದಾಯವನ್ನು ತನ್ನ ಶಾಶ್ವತ ಮತಬ್ಯಾಂಕ್ ಆಗಿ ಉಳಿಸಿಕೊಳ್ಳಲು ಕಾಂಗ್ರೆಸ್ ಇಂತಹ ಪ್ರಯತ್ನಕ್ಕೆ ಕೈಹಾಕಿದೆ. ಈ ಪ್ರಸ್ತಾವ ಜಾರಿಗೊಳಿಸಲು ಬಿಜೆಪಿ ಅವಕಾಶ ನೀಡದು ಎಂದರು.

ಬಿಜೆಪಿಯನ್ನು ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಬಹಳ ಹಿಂದಿನಿಂದಲೂ ವ್ಯವಸ್ಥಿತವಾಗಿ ನಡೆದಿದೆ. ಒಂದು ಪಕ್ಷವಂತೂ ಬಿಜೆಪಿ ಕುರಿತು ಜನತೆಯಲ್ಲಿ ಭಯ ಹುಟ್ಟಿಸುವುದರ ಮೂಲಕವೇ ಅವರನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿತ್ತು. ಆದರೆ, ಈಗ ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಂ ಸಮುದಾಯದ ಜನರಿಗೆ ಕೆಲವು ರಾಜಕೀಯ ಪಕ್ಷಗಳು ತಮಗೆ ದ್ರೋಹ ಮಾಡಿವೆ ಎಂಬುದು ಅರಿವಾಗಿದೆ ಎಂದು ಜೈನ್ ಹೇಳಿದರು.

ಮುಸ್ಲಿಮರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಟಿಕೆಟ್ ನೀಡಲು ಬಿಜೆಪಿ ಯೋಚಿಸಿದೆ. ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಈ ನಿರ್ಧಾರ ಜಾರಿಯಾಗಲಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತದಾರರು ಮತ್ತು ಮುಸ್ಲಿಂ ಮತದಾರರು ಒಗ್ಗೂಡಿದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೆಲಂಗಾಣಕ್ಕೆ ಬೆಂಬಲ: ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತನ್ವೀರ್ ಅಹಮ್ಮದ್ ಮಾತನಾಡಿ, `ಸದ್ಯದ ರಾಜಕೀಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮತದಾರರ ಬೆಂಬಲವನ್ನು ಪಕ್ಷಕ್ಕೆ ಸೆಳೆಯುವ ಮಹತ್ವದ ಜವಾಬ್ದಾರಿ ಮೋರ್ಚಾದ ಮೇಲಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕೆಲವು ಪ್ರದೇಶಗಳಲ್ಲಿ ಪಕ್ಷ ದುರ್ಬಲವಾಗಿದೆ. ಇನ್ನು ಕೆಲವೆಡೆ ಬಿಜೆಪಿಯ ಬಗ್ಗೆಯೇ ಋಣಾತ್ಮಕ ಭಾವನೆ ಇದೆ. ಇದನ್ನು ಸರಿಪಡಿಸಲು ಮೋರ್ಚಾದ ಸದಸ್ಯರು ಶ್ರಮಿಸಬೇಕಿದೆ~ ಎಂದು ಸಲಹೆ ಮಾಡಿದರು.

ಮುಸ್ಲಿಮರ ಸುರಕ್ಷತೆಯ ವಿಷಯವನ್ನು ನೆಪವಾಗಿಸಿಕೊಂಡು ಕೆಲವರು ತೆಲಂಗಾಣ ರಾಜ್ಯ ರಚನೆಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಬಿಜೆಪಿ ಮತ್ತು ಪಕ್ಷದ ಅಲ್ಪಸಂಖ್ಯಾತರ ಮೋರ್ಚಾ ತೆಲಂಗಾಣ ರಾಜ್ಯ ರಚನೆಯನ್ನು ಬೆಂಬಲಿಸುತ್ತದೆ. ತೆಲಂಗಾಣ ಮುಸ್ಲಿಮರಿಗೆ ಅತ್ಯಂತ ಸುರಕ್ಷಿತ ನೆಲೆ ಎಂಬುದು ತಮ್ಮ ಅಭಿಪ್ರಾಯ ಎಂದರು.

ವೈಫಲ್ಯ ಬಯಲು: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ನಜ್ಮಾ ಹೆಪ್ತುಲ್ಲಾ, ಅಲ್ಪಸಂಖ್ಯಾತರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಯುಪಿಎ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯ ವರದಿಯು ಕಾಂಗ್ರೆಸ್‌ನ ಆಳ್ವಿಕೆಯ ಲೋಪಗಳನ್ನು ಬಯಲು ಮಾಡಿದೆ. ಬಿಜೆಪಿಯನ್ನು ತೋಳದ ರೂಪದಲ್ಲಿ ಬಿಂಬಿಸಿ ಅಲ್ಪಸಂಖ್ಯಾತರ ಮತಬ್ಯಾಂಕ್ ಸೃಷ್ಟಿಸಿಕೊಂಡಿದ್ದ ಕಾಂಗ್ರೆಸ್, ಅವರನ್ನು ಕುರಿಗಳಂತೆ ನಡೆಸಿಕೊಳ್ಳುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

`ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮುಸ್ಲಿಮರು ಗೌರವಯುತ ಬದುಕು ನಡೆಸುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಆಡಳಿತವಿದ್ದ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಜೀವನ ಈಗಲೂ ಸಂಕಷ್ಟದಿಂದ ಕೂಡಿದೆ. ದೇಶದಲ್ಲಿ ಜಾತ್ಯತೀತ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಾತ್ರ ಸಲ್ಲುತ್ತದೆ ಎಂಬುದನ್ನು ಅಲ್ಪಸಂಖ್ಯಾತರು ಗಮನಿಸಬೇಕು~ ಎಂದರು.

ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ ಕಾರ್ಯಕಾರಿಣಿಯನ್ನು ಉದ್ಘಾಟಿಸಿದರು. ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಡಾ.ಮೊಹ್ಸಿನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT