ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಲವ್ಯ ಪ್ರಶಸ್ತಿಗೆ ಪ್ರಜ್ಞಾ

Last Updated 13 ಜುಲೈ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು:  `ರೋಲರ್ ಸ್ಕೇಟಿಂಗ್~ ಕ್ರೀಡಾ ಪಟು ಮೈಸೂರಿನ ಎಚ್. ಎ.ಪ್ರಜ್ಞಾ ಅವರಿಗೆ 2010ರ `ಏಕಲವ್ಯ ಪ್ರಶಸ್ತಿ~ ನೀಡುವಂತೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಈ ಪ್ರಶಸ್ತಿಗೆ ಮಂಗಳೂರಿನ ಸ್ಕೇಟಿಂಗ್ ಪಟು ಶರಣ್ಯಾ ಮಹೇಶ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ಆದೇಶವನ್ನು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಜಾ ಮಾಡಿದ್ದಾರೆ. `ಶರಣ್ಯಾ ಅವರನ್ನು ನಿಯಮ ಮೀರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ~ ಎಂದು ಸರ್ಕಾರ ತಪ್ಪು ಒಪ್ಪಿಕೊಂಡ ಕಾರಣದಿಂದ ಪ್ರಜ್ಞಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.

ಆಗಸ್ಟ್ 29ರಂದು ನಡೆಯಲಿರುವ `ರಾಷ್ಟ್ರೀಯ ಕ್ರೀಡಾ ದಿನ~ದಂದು ಪ್ರಜ್ಞಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

2011ರಲ್ಲಿ ಯುವಜನ ಪ್ರಶಸ್ತಿಗಾಗಿ ಕ್ರೀಡಾ ಮತ್ತು ಯುವಜನ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಪ್ರಜ್ಞಾ ಅವರೂ ಅರ್ಜಿ ಸಲ್ಲಿಸಿದ್ದರು. ತಾವು ಅಂತರರಾಷ್ಟ್ರೀಯ ಕ್ರೀಡಾಪಟು ಆಗಿರುವ ಕಾರಣ, ಈ ಪ್ರಶಸ್ತಿ ತಮಗೇ ಲಭ್ಯ ಆಗಲಿದೆ ಎನ್ನುವುದು ಪ್ರಜ್ಞಾ ಅವರ ಅನಿಸಿಕೆಯಾಗಿತ್ತು. ಆದರೆ ಶರಣ್ಯಾ ಅವರ ಹೆಸರು ಪ್ರಕಟಗೊಂಡಿದ್ದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಹರಾಗಿರುವ ತಮ್ಮನ್ನು ಕಡೆಗಣಿಸಿ, ಶರಣ್ಯಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಅವರ ಆರೋಪವಾಗಿತ್ತು.

`ಈ ಪ್ರಶಸ್ತಿಗೆ 20 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಅರ್ಹರು. ಐದು ವರ್ಷ ಸತತವಾಗಿ ರಾಜ್ಯ, ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎನ್ನುವುದು ನಿಯಮ. ಇವುಗಳನ್ನು ಗಣನೆಗೆ ತೆಗೆದುಕೊಂಡರೆ ಶರಣ್ಯಾ ಅವರು ಪ್ರಶಸ್ತಿಗೆ ಅನರ್ಹರು~ ಎಂದು ಪ್ರಜ್ಞಾ ಆರೋಪಿಸಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಕೋರ್ಟ್ ಮಾಹಿತಿ ಬಯಸಿತ್ತು. ಇಲಾಖೆಯ ಜೊತೆ ಸಮಾಲೋಚನೆ ನಡೆಸಿದ ನಂತರ ಸರ್ಕಾರದ ಪರ ವಕೀಲ ಕೆ.ಎಸ್.ಮಲ್ಲಿಕಾರ್ಜುನ ಅವರು, ಇಲಾಖೆಯಿಂದ ತಪ್ಪಾಗಿರುವ ಬಗ್ಗೆ ತಿಳಿಸಿದರು.

ಎಲ್ಲ ಅರ್ಹತೆಗಳನ್ನು ಗಣನೆಗೆ ತೆಗೆದುಕೊಂಡರೆ ಶರಣ್ಯಾ ಅವರಿಗೆ 425 ಹಾಗೂ ಪ್ರಜ್ಞಾ ಅವರಿಗೆ 625 ಅಂಕಗಳು ಬರುವುದಾಗಿ ಅವರು ವಿವರಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ಪ್ರಜ್ಞಾ ಅವರಿಗೆ ಪ್ರಶಸ್ತಿ ನೀಡುವಂತೆ ಆದೇಶಿಸಿದರು.

ಸರ್ಕಾರದ ಅರ್ಜಿ ವಜಾ
ಮಾರ್ಚ್ 2ರಂದು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐ ಹೆಚ್ಚುವರಿ ನಿರ್ದೇಶಕ ರೂಪಕ್‌ಕುಮಾರ್ ದತ್ತ ಅವರಿಗೆ ವಹಿಸಿಕೊಟ್ಟಿರುವುದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.

ರೂಪಕ್‌ಕುಮಾರ್ ಅವರನ್ನು ನೇಮಕ ಮಾಡಿ ಹೈಕೋರ್ಟ್ ಮೇ ತಿಂಗಳಿನಲ್ಲಿ ಆದೇಶಿಸಿತ್ತು. ಅವರಿಗೆ ಸಿಬಿಐ ಕೆಲಸಗಳೂ ಇರುವ ಕಾರಣ, ಈ ಹೆಚ್ಚುವರಿ ತನಿಖೆ ಅವರಿಗೆ ಹೊರೆಯಾಗಲಿದೆ ಎನ್ನುವುದು ಸರ್ಕಾರದ ವಾದವಾಗಿತ್ತು. ಅವರ ಬದಲು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಬಿಪಿನ್ ಗೋಪಾಲಕೃಷ್ಣ ಅವರನ್ನು ನೇಮಕ ಮಾಡುವಂತೆ ಸರ್ಕಾರ ಮನವಿ ಮಾಡಿಕೊಂಡಿತ್ತು. ಆದರೆ ಇದನ್ನು ನ್ಯಾಯಮೂರ್ತಿ ಅಜಿತ್ ಗುಂಜಾಳ್ ನೇತೃತ್ವದ ವಿಭಾಗೀಯ ಪೀಠ ಮಾನ್ಯ ಮಾಡಲಿಲ್ಲ. ಗಲಾಟೆಗೆ ಸಂಬಂಧಿಸಿದ ತನಿಖೆಯನ್ನು ವೈಯಕ್ತಿಕ ನೆಲೆಯ ಮೇಲೆ ರೂಪಕ್‌ಕುಮಾರ್ ಅವರು ನಡೆಸುತ್ತಿದ್ದಾರೆ~ ಎಂದು ನ್ಯಾಯಮೂರ್ತಿಗಳು ಹೇಳಿದರು.

ಬಡಾವಣೆಗೆ ರೂ 18.7 ಕೋಟಿ ಖರ್ಚು
ಬಿಡಿಎ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಲ್ಲಿ 1995ರಿಂದ ಈಚೆಗೆ 18.7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಬಿಡಿಎ ಹೈಕೋರ್ಟ್‌ಗೆ ಶುಕ್ರವಾರ ಲಿಖಿತ ಮಾಹಿತಿ ನೀಡಿದೆ. ಜೆ.ಪಿ.ನಗರ, ಬನಶಂಕರಿ, ಅಂಜನಾಪುರ, ಅರ್ಕಾವತಿ ಮುಂತಾದ ಬಡಾವಣೆಗಳಿಗೆ ಇಲ್ಲಿಯವರೆಗೆ ಒದಗಿಸಿರುವ ಮೂಲ ಸೌಕರ್ಯಗಳ ಮಾಹಿತಿಯನ್ನು ಬಿಡಿಎ ಪರ ವಕೀಲರು ಕೋರ್ಟ್‌ಗೆ ನೀಡಿದ್ದಾರೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಶ್ನಿಸಿ ಭೂಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ನೀಡಿರುವ ನಿರ್ದೇಶನದ ಮೇರೆಗೆ ಈ ಮಾಹಿತಿಯುಳ್ಳ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಮಾಹಿತಿ ಅಪೂರ್ಣ ಆಗಿರುವ ಕಾರಣದಿಂದ, ಹೆಚ್ಚುವರಿ ಮಾಹಿತಿ ನೀಡಿ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಬಿಡಿಎಗೆ ನಿರ್ದೇಶಿಸಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT