ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಸದಸ್ಯ ಪೀಠದ ಆದೇಶ ರದ್ದತಿ: ಬಿಎಸ್‌ವೈಗೆ ಮತ್ತೆ ಬಂಧನದ ಭೀತಿ ?

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಭೂಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇತರರ ವಿರುದ್ಧ ವಿಚಾರಣೆ ಮುಂದುವರಿಸಲು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹೈಕೋರ್ಟ್‌ನಿಂದ ಮಂಗಳವಾರ ಅನುಮತಿ ದೊರೆತಿದೆ.

ವಿಚಾರಣೆ ಮುಂದುವರಿಕೆಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ವಿಭಾಗೀಯ ಪೀಠವು ರದ್ದುಗೊಳಿಸಿದೆ. ವಕೀಲ ಸಿರಾಜಿನ್ ಬಾಷಾ ಅವರು ಈ ಎಲ್ಲ ಆರೋಪಿಗಳ ವಿರುದ್ಧ ದಾಖಲು ಮಾಡಿರುವ 2 ಮತ್ತು 3ನೇ ದೂರಿಗೆ ಸಂಬಂಧಿಸಿದ ವಿವಾದ ಇದಾಗಿದೆ.

ಈ ಆದೇಶದಿಂದಾಗಿ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಶಾಸಕರಾದ ಕೃಷ್ಣಯ್ಯ ಶೆಟ್ಟಿ, ಡಾ. ಹೇಮಚಂದ್ರ ಸಾಗರ್ ಹಾಗೂ ಇತರ ಆರೋಪಿಗಳಿಗೆ ಈಗ  ಪುನಃ ಬಂಧನದ ಭೀತಿ ಎದುರಾಗಿದೆ.

ಹೈಕೋರ್ಟ್‌ನ ತಡೆಯಾಜ್ಞೆಯಿಂದಾಗಿ ವಿಶೇಷ    ಕೋರ್ಟ್, ಇವರಿಗೆ ಜಾಮೀನು ನೀಡಿಕೆ ಕುರಿತಾದ ಆದೇಶವನ್ನು ಕಳೆದ ವಾರ ಪ್ರಕಟಿಸಿರಲಿಲ್ಲ. ಅಲ್ಲಿ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಲಾಗಿದೆ. ಈಗ ತಡೆಯಾಜ್ಞೆ ರದ್ದುಗೊಂಡಿರುವ ಕಾರಣ, ವಿಶೇಷ ಕೋರ್ಟ್ ಜಾಮೀನು ಕುರಿತಾದ ಆದೇಶ ಪ್ರಕಟಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಆರೋಪಿಗಳ `ಭವಿಷ್ಯ~ ಈಗ ಲೋಕಾಯುಕ್ತ ಕೋರ್ಟ್ ಕೈಯಲ್ಲಿದೆ.

ವಿಭಾಗೀಯ ಪೀಠ ಹೇಳಿದ್ದೇನು? ನ್ಯಾಯಮೂರ್ತಿಗಳಾದ ಎನ್.ಕುಮಾರ್ ಹಾಗೂ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಏಕಸದಸ್ಯ ಪೀಠದ ತಡೆ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಡೆ ಆದೇಶದ ರದ್ದತಿಗೆ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಹೇಳಿರುವುದು ಇಷ್ಟು..
`ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಧೀನ ಕೋರ್ಟ್‌ಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದರೆ ಆ ಆದೇಶದ ಮಧ್ಯೆ ಉನ್ನತ ಕೋರ್ಟ್‌ಗಳು ಪ್ರವೇಶ ಮಾಡಬಾರದು~ ಎಂದು  `ಸತ್ಯನಾರಾಯಣ ಶರ್ಮಾ ವರ್ಸಸ್ ಸ್ಟೇಟ್ ಆಫ್ ರಾಜಸ್ತಾನ~ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲಿಯೂ ಇದು ಸ್ಪಷ್ಟವಾಗಿದೆ. 

ಈ ತೀರ್ಪನ್ನು ಏಕಸದಸ್ಯ ಪೀಠ (ನ್ಯಾ. ಬಿ.ಎಸ್.ಪಾಟೀಲ್) ತೀರ್ಪಿನಲ್ಲಿ ಉಲ್ಲೇಖಿಸಿದೆ. ಆದರೂ ಲೋಕಾಯುಕ್ತ ಕೋರ್ಟ್ ಆದೇಶಕ್ಕೆ ತಡೆ ನೀಡಿರುವುದು ಅಚ್ಚರಿ ತರುವಂಥದ್ದು.

`ಯಾವುದೇ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಸುಪ್ರೀಂಕೋರ್ಟ್ ಅಥವಾ ಇನ್ನಾವುದೇ ಹೈಕೋರ್ಟ್‌ಗಳ ತೀರ್ಪನ್ನು ಉ್ಲ್ಲಲೇಖಿಸುವ ಮುನ್ನ ಅದರಲ್ಲಿ ಇರುವ ಅಂಶಗಳನ್ನು ಓದಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಆದರೆ ಏಕಸದಸ್ಯ ಪೀಠದ ಆದೇಶ ಗಮನಿಸಿದರೆ ಆ ರೀತಿ ಆದಂತೆ ತೋರುತ್ತಿಲ್ಲ.

ಶರ್ಮಾ ಪ್ರಕರಣದಲ್ಲಿನ ಆಳಕ್ಕೆ ಅವರು ಹೋದಂತಿಲ್ಲ. ಅದರಲ್ಲಿ ಕೋರ್ಟ್ ಏನು ಹೇಳಿದೆ ಎನ್ನುವುದನ್ನೂ ಓದಿದಂತಿಲ್ಲ. ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅಥವಾ ಸಂಸತ್ತಿನಲ್ಲಿ ರೂಪಿಸಲಾದ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸುವ ಅಧಿಕಾರ ಹೈಕೋರ್ಟ್‌ಗೆ ಇಲ್ಲ. ಒಂದು ವೇಳೆ ಈ ರೀತಿ ಆಗಿದೆ ಎಂದು ತಿಳಿದು ಬಂದರೆ, ನಾವು ಕಣ್ಣುಮುಚ್ಚಿ ಕುಳಿತುಕೊಳ್ಳುವುದಿಲ್ಲ.

`ಭ್ರಷ್ಟಾಚಾರದ ವಿರುದ್ಧ ಒಬ್ಬ ವ್ಯಕ್ತಿ ದನಿ ಎತ್ತಿದ ಸಂದರ್ಭದಲ್ಲಿ ಅದನ್ನು ಕೋರ್ಟ್ ಹತ್ತಿಕ್ಕುವುದು ಸರಿಯಲ್ಲ. ಈ ಪ್ರಕರಣದಲ್ಲಿಯೂ ಅರ್ಜಿದಾರರು (ವಕೀಲ ಬಾಷಾ) ಭ್ರಷ್ಟಾಚಾರದ ಆರೋಪ ಹೊತ್ತ ಕೆಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು ಮಾಡಲು ರಾಜ್ಯಪಾಲರ ಮುಂದೆ ಅನುಮತಿ ಕೋರಿದ್ದಾರೆ.

ಅವರು ಲೋಕಾಯುಕ್ತ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿ ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೋರಿದ್ದಾರೆ. ಈ ಮಧ್ಯೆ ಹೈಕೋರ್ಟ್ ಪ್ರವೇಶ ಮಾಡಿದರೆ ಅದು ತಪ್ಪು ಸಂದೇಶ ಸಾರುತ್ತದೆ. ಅಷ್ಟೇ ಅಲ್ಲದೇ ಲೋಕಾಯುಕ್ತ ವಿಶೇಷ ಕೋರ್ಟ್‌ನ ಆದೇಶಕ್ಕೆ ಏಕೆ ತಡೆ ನೀಡುತ್ತಿದ್ದೇವೆ ಎಂಬ ಬಗ್ಗೆಯೂ ಏಕಸದಸ್ಯ ಪೀಠ ತೀರ್ಪಿನಲ್ಲಿ ಉಲ್ಲೇಖಿಸಿಲ್ಲ. ಈ ರೀತಿ ನ್ಯಾಯಮೂರ್ತಿಗಳು ನಡೆದುಕೊಳ್ಳುವದು ಸರಿಯಲ್ಲ~.

ಕೊನೆಗೂ ಸಿಕ್ಕ ಆದೇಶದ ಪ್ರತಿ!

ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶಕ್ಕೆ ಕಳೆದ ಶುಕ್ರವಾರ ಏಕಸದಸ್ಯ ಪೀಠ ತಡೆ ನೀಡಿತ್ತು. `ಸರಿಯಾದ ವಿಚಾರಣೆ ನಡೆಸದೆ ಯಡಿಯೂರಪ್ಪನವರ ಪರ ಆದೇಶ ಹೊರಡಿಸಲಾಗಿದೆ~ ಎಂದು ದೂರಿದ್ದ ವಕೀಲ ಬಾಷಾ ಅವರು, ಆದೇಶವನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಬಯಸಿದ್ದರು. ಆದರೆ ಆದೇಶ ಹೊರಟು ಮೂರು ದಿನಗಳಾದರೂ ಆದೇಶದ ಪ್ರತಿ ದೊರಕಿಸಿಕೊಳ್ಳಲು ಅವರು ಹರಸಾಹಸ ಪಡಬೇಕಾಯಿತು.

ಮಂಗಳವಾರ ಬೆಳಿಗ್ಗೆಯೂ ಅವರಿಗೆ ಪ್ರತಿ ದೊರಕಲಿಲ್ಲ. ಕೊನೆಯದಾಗಿ ಅವರು `ಪ್ರತಿಯು ಇದುವರೆಗೆ ದೊರಕಲಿಲ್ಲ~ ಎಂದು ವಿಭಾಗೀಯ ಪೀಠಕ್ಕೆ ಪ್ರಮಾಣ ಪತ್ರ ನೀಡುವ ಮೂಲಕ ಆದೇಶದ ಪ್ರತಿ ಇಲ್ಲದೇ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದರು. ಆದರೆ ಮಧ್ಯಾಹ್ನ 1.30ರ ಸುಮಾರಿಗೆ ಆದೇಶದ ಪ್ರತಿ ದೊರಕಿತು.
ಸಂಜೆ 5 ಗಂಟೆಯ ವೇಳೆ ಆ ಆದೇಶವನ್ನು ವಿಭಾಗೀಯ ಪೀಠ ರದ್ದು ಮಾಡಿತು.

ನ್ಯಾಯಾಂಗದ ಬಗ್ಗೆ ಜನರು ಇನ್ನೂ ನಂಬಿಕೆ ಉಳಿಸಿಕೊಂಡಿದ್ದಾರೆ. ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮ (ನ್ಯಾಯಮೂರ್ತಿಗಳ) ಕರ್ತವ್ಯ. ಯಾವುದೇ ಪ್ರಕರಣದಲ್ಲಿ ನ್ಯಾಯಾಲಯವೇ ತಮ್ಮ ಅಂತಿಮ ಆಸರೆ ಎಂದು ನ್ಯಾಯ ನಿರೀಕ್ಷಿಸಿ ಕೋರ್ಟ್ ಬಾಗಿಲಿಗೆ ಬರುವ ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಮಗಿರುವ ಅಧಿಕಾರವನ್ನು ಚಲಾಯಿಸುವಾಗ ಜಾಗರೂಕರಾಗಿರಬೇಕು. ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧೀನ ಕೋರ್ಟ್ ಸಮನ್ಸ್ ಜಾರಿ ಮಾಡಿರುವ ಆರಂಭದ ಸಂದರ್ಭದಲ್ಲಿಯೇ ಉನ್ನತ ಕೋರ್ಟ್‌ಗಳು ಮಧ್ಯೆ ಪ್ರವೇಶ ಮಾಡಿದರೆ ಅದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ.

 - ನ್ಯಾ. ಎನ್.ಕುಮಾರ್,
ನ್ಯಾ. ಅರವಿಂದ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT