ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ಪಯಣಿಗ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹುಟ್ಟಿದ ಮೇಲೆ ಸಾವು ಖಚಿತ. ಆದರೆ ಬದುಕಿರುವಾಗಲೇ ಕೈಲಾದಷ್ಟು ಜನೋಪಯೋಗಿ ಕೆಲಸ ಮಾಡಬೇಕು. ಹಣ ಸಂಪಾದನೆಯೇ ಜೀವನದ ಉದ್ದೇಶವಲ್ಲ. ಅದಕ್ಕಿಂತ ಹೆಚ್ಚಿನದನ್ನು ಈ ಜೀವನ ಬೇಡುತ್ತದೆ ಎಂಬ ಧ್ಯೇಯವನ್ನೇ ಗುರಿಯಾಗಿಸಿಕೊಂಡು ಬೈಕ್‌ ಪಯಣವನ್ನು ಆರಂಭಿಸಿದವರು ಯಶಸ್‌.

24 ವರ್ಷದ ಯಶಸ್‌ ವೃತ್ತಿಯಲ್ಲಿ ಎಂಜಿನಿಯರ್‌.  ದೇಶ ಸುತ್ತುವುದು, ಬೈಕ್‌ ಓಡಿಸುವುದು ಎರಡೂ ಇವರ ನೆಚ್ಚಿನ ಹವ್ಯಾಸ. ‘ಹಣ ಗಳಿಕೆಗಿಂತ ನಾಲ್ಕು ಜನರು ಗುರುತಿಸುವಂತಾಗಬೇಕು. ಸಮಾಜಕ್ಕೆ ಕೈಲಾದಷ್ಟು ಒಳಿತು ಮಾಡಬೇಕು’ ಎಂದು ಯೋಚಿಸುತ್ತಿದ್ದಾಗ ಇವರಿಗೆ ಹೊಳೆದದ್ದು ಬೈಕ್‌ ರೈಡಿಂಗ್‌.

ಗುಂಪಿನಲ್ಲಿ ಬೈಕ್‌ ರೈಡ್‌ ಮಾಡುವುದು ಸಾಮಾನ್ಯ. ಆದರೆ ಏನಾದರೂ ವಿಶೇಷವಾಗಿ ಮಾಡಬೇಕು ಎಂದುಕೊಂಡು ‘ಒಂಟಿ ಪಯಣ’ ಆರಂಭಿಸಿದವರು ಇವರು. ಯಮಹಾ R15 ಬೈಕ್‌ನಲ್ಲಿ ಭಾರತ, ನೇಪಾಳ, ಚೀನಾ, ಭೂತಾನ್‌ ಮತ್ತು ಬಾಂಗ್ಲಾದೇಶಕ್ಕೆ ಹೋಗಿ ಬಂದಿದ್ದಾರೆ ಯಶಸ್.

‘ಸಾಮಾನ್ಯವಾಗಿ ಎಲ್ಲರೂ ಗುಂಪಿನಲ್ಲಿ ಹೋಗುತ್ತಾರೆ. ಆದರೆ ನನಗೆ ಮೊದಲಿನಿಂದಲೂ ಏನನ್ನಾದರೂ ವಿಶೇಷವಾಗಿ ಮಾಡುವ ಹಂಬಲ. ಹಾಗಾಗಿ ಒಬ್ಬನೇ ಬೈಕ್‌ ಪಯಣವನ್ನು ಆರಂಭಿಸಿದೆ’ ಎನ್ನುವ ಇವರಿಗೆ ಬೈಕ್‌ ರೈಡಿಂಗ್‌ ಮೂಲಕ ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಆಸ್ಥೆ.

‘ಜನ ಮೊದಲು ನನ್ನನ್ನು ಗುರುತಿಸಬೇಕು. ಆಗ ಮಾತ್ರವೇ ನಾನು ಹೇಳುವ ಸಂದೇಶ ಅವರಿಗೆ ತಲುಪುತ್ತದೆ. ಅದಕ್ಕಾಗಿಯೇ ಈ ಒಂಟಿ ಯಾನ. ಮುಂದೆ ರಸ್ತೆ ಸುರಕ್ಷತೆ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕು... ಹೀಗೆ ಹಲವು ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯೋಜನೆಯಿದೆ’ ಎನ್ನುತ್ತಾರೆ.

ಒಂಬತ್ತನೇ ತರಗತಿಯಲ್ಲಿಯೇ ಬೈಕ್‌ ಓಡಿಸುವುದನ್ನು ಕರಗತ ಮಾಡಿಕೊಂಡಿದ್ದ ಇವರು, 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್‌ ರೈಡ್ ಮಾಡಿದ್ದಾರೆ. ಒಂದು ತಿಂಗಳು ಐದು ದೇಶಗಳನ್ನು ಎಡೆಬಿಡದೆ ರೈಡ್‌ ಮಾಡಿದರೂ ಇವರಿಗೆ ಕೊಂಚವೂ ಆಯಾಸವೆನ್ನಿಸಿಲ್ಲ. ‘ವಿವಿಧ ದೇಶಗಳ ಸಂಸ್ಕೃತಿ, ಜೀವನ ಶೈಲಿಯನ್ನು ಅರಿಯಲು ಉತ್ಸುಕನಾಗಿರುತ್ತೇನೆ’ ಎನ್ನುತ್ತಾರೆ ಯಶಸ್‌. 

ಪರಿಚಯವಿಲ್ಲದ ಊರಾದ್ದರಿಂದ ರಾತ್ರಿ ವೇಳೆ ಇವರು ಬೈಕ್‌ ಚಾಲನೆ ಮಾಡುವುದಿಲ್ಲ. ಸೂರ್ಯನ ಕಿರಣ ಸೋಕುತ್ತಿದ್ದಂತೆ ಇವರ ಬೈಕ್ ಸ್ಟಾರ್ಟ್ ಆಗುತ್ತದೆ. ಮತ್ತೆ ಸೂರ್ಯಾಸ್ತದ ವೇಳೆಗೆ ಪ್ರಯಾಣಕ್ಕೆ ಬ್ರೇಕ್. ಪ್ರಯಾಣದ ನಡುವೆ ಸಿಗುವ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಅವುಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಫೋಟೊಗಳನ್ನು ಕ್ಲಿಕ್ಕಿಸಿ ಆನಂದಿಸುತ್ತಾರೆ.

‘ಬೈಕ್‌ ರೈಡಿಂಗ್‌ ಮಾಡುವ ಹಾದಿ ಸುಲಭವಾಗಿರುವುದಿಲ್ಲ. ವಿವಿಧ ಪ್ರದೇಶಗಳ ವಾತಾವರಣ, ಊಟಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.  ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಿದ್ಧತೆ ಮಾಡಿಕೊಂಡಿರಬೇಕು. ಹವಾಮಾನ ವೈಪರೀತ್ಯಕ್ಕೆ ಎದೆಗೊಡಲು ಮೊದಲೇ ಮಾನಸಿಕವಾಗಿ ಸಿದ್ಧರಾಗಿರಬೇಕು. ಎಂತಹ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ಮೂಡಿದರೆ ದೇಹವೂ ಗುರಿಗೆ ಸ್ಪಂದಿಸುತ್ತದೆ’ ಎಂದು ತಮ್ಮ ಸಾಧನೆಯ ಹಿಂದಿನ ಗುಟ್ಟನ್ನು ಬಿಚ್ಚಿಡುತ್ತಾರೆ.

ಪ್ರಯಾಣಕ್ಕೆ ತಯಾರಿ
ಪ್ರಯಾಣಕ್ಕೆ ಮೊದಲೇ ಸಾಕಷ್ಟು ತಯಾರಿ ಮಾಡಿಕೊಳ್ಳುವುದು ಅವಶ್ಯ. ಒಬ್ಬರೇ ಪ್ರಯಾಣ ಮಾಡುವುದರಿಂದ ಸಿದ್ಧತೆ ವಿಶೇಷವಾಗಿಯೇ ಇರಬೇಕು. ಹಾಗಾಗಿ ಇವರು ತಾವು ತಲುಪಬೇಕಾದ ಹಾದಿಯ ಕುರಿತು ಗೂಗಲ್‌ ಮ್ಯಾಪ್‌ನಲ್ಲಿ ಹುಡುಕಿ ಮಾಹಿತಿ ಕಲೆ ಹಾಕುತ್ತಾರೆ. ಜೊತೆಗೆ, ಹಿಂದೆ ಈ ಸ್ಥಳಕ್ಕೆ ಹೋದವರು ಬರೆದ ಅನುಭವಗಳನ್ನು ಓದಿ ತಿಳಿದುಕೊಳ್ಳುತ್ತಾರೆ.

‘ರಾತ್ರಿ ಎಲ್ಲಿ ಉಳಿದುಕೊಳ್ಳುವುದು ಎನ್ನುವುದರ ಕುರಿತು ಯೋಚಿಸುತ್ತೇನೆ. ಬೇರೆ ದೇಶಕ್ಕೆ ಹೋದಾಗ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತೇನೆ. ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಟೆಂಟ್‌ ಹಾಕಿ ರಾತ್ರಿ ಕಳೆದಿದ್ದೆ. ಚಿಕ್ಕ ಸ್ಟೌ ತೆಗೆದುಕೊಂಡು ಹೋಗಿರುತ್ತೇನೆ. ಕೆಲವೊಮ್ಮೆ ಹೋಟೆಲ್‌ ಸಿಗದಿದ್ದಾಗ ಮ್ಯಾಗಿಯೇ ಆಹಾರ. ಸ್ವಲ್ಪ ಮಟ್ಟಿಗೆ ಬೈಕ್‌ ರಿಪೇರಿ ಮಾಡುವುದು ಗೊತ್ತಿರುವುದರಿಂದ ಪಯಣದಲ್ಲಿ ಅಂತಹ ಸಮಸ್ಯೆ ಎದುರಾಗುವುದಿಲ್ಲ’ ಎನ್ನುತ್ತಾರೆ ಯಶಸ್.

ಹಿಮಾಲಯನ್‌ ಪಾಸ್‌ನಲ್ಲಿ ರೋಚಕ ಅನುಭವ
ಮೊದಲ ಬಾರಿಗೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಯಣ ಆರಂಭಿಸಿದಾಗ ಸಹಜವಾಗಿಯೇ ಸ್ವಲ್ಪ ಭಯವಿತ್ತು. ಪಯಣ ಆರಂಭಿಸಿದಾಗ ಉತ್ತರಾಖಂಡದಲ್ಲಿ ಪ್ರವಾಹ ಉಂಟಾಗಿತ್ತು. ವಿಪರೀತ ಮಳೆಯಿಂದ ರಸ್ತೆಯಲ್ಲೆಲ್ಲ ನೀರು ತುಂಬಿಕೊಂಡು ಕೆಟ್ಟ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಸಾಕಷ್ಟು ತೊಡಕುಗಳನ್ನು ಎದುರಿಸಬೇಕಾಯಿತು ಎನ್ನುತ್ತಾರೆ.   

ಇಲ್ಲಿಯವರೆಗಿನ ಇವರ ಪಯಣದಲ್ಲಿ ರೋಚಕ ಅನುಭವವನ್ನು ನೀಡಿದ್ದು, ಭೂತಾನ್‌ನಿನ ಹಿಮಾಲಯದ ಯೋತಾಂಗ್‌ ಲಾ ಪಾಸ್‌ ದಾಟಿದ್ದು. ‘ಅದೊಂದು ಅದ್ಭುತ ಗಳಿಗೆ. 60 ಕಿ.ಮೀ. ಇರುವ ಅದನ್ನು ದಾಟಿಕೊಂಡು ಮುನ್ನುಗ್ಗುವುದು ನಿಜಕ್ಕೂ ಸವಾಲಾಗಿತ್ತು. ಅಲ್ಲಿಂದ ಹೊರಬಂದ ನಂತರ ಸಿಕ್ಕ ಖುಷಿ ಅಷ್ಟಿಷ್ಟಲ್ಲ. ಏನೋ ಒಂದು ರೀತಿಯ ಸಾರ್ಥಕ ಭಾವ’ ಎಂದು ತಮ್ಮ ಪಯಣದ ಅನುಭವಗಳನ್ನು ಮೆಲುಕು ಹಾಕಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT