ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಗ್ರತೆ ಮಂತ್ರವಾಗಲಿ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನೀವು ಸದಾ ಅಸ್ವಸ್ಥರಾಗುತ್ತಿದ್ದಲ್ಲಿ, ಖಿನ್ನತೆಗೆ ಜಾರುತ್ತಿದ್ದಲ್ಲಿ ಮೌನವಾಗಿ ಕುಳಿತು ಮನಸಿನ ಮಾತು ಆಲಿಸಿ. ಅದಕ್ಕೆ ವಿಶ್ರಾಂತಿ ನೀಡಿ. ಮನಸ್ಸಿಗೆ ವಿಶ್ರಾಂತಿ ನೀಡುವುದು ಬಹುಮುಖ್ಯ.

ಸಾಮಾನ್ಯವಾಗಿ ಮನಸ್ಸು ಒಂದು ವಿಚಾರದಿಂದ ಮತ್ತೊಂದು ವಿಚಾರಕ್ಕೆ ಜಿಗಿಯುತ್ತಲೇ ಇರುತ್ತದೆ. ಇದು ಏಕೆ ಇಷ್ಟೊಂದು ಚಡಪಡಿಸುತ್ತದೆ? ಎಲ್ಲ ವಿಷಯದಲ್ಲೂ ಏಕೆ ಮೂಗು ತೂರಿಸುತ್ತದೆ ? ಇದಕ್ಕೆ ಹುಚ್ಚು ಹಿಡಿದಿದೆಯೇ? ಎಂದು ನಿಮಗೆ ಅನ್ನಿಸಿರಬಹುದು.

ತರಬೇತಿ ಇಲ್ಲದ ಮನಸ್ಸು ಏಷ್ಟು ಅಶಿಸ್ತಿನಿಂದ ಕೂಡಿರುತ್ತದೆ ಅಂದರೆ ಸಂತರು ಅದನ್ನು ಕೋತಿಗೆ ಹೋಲಿಸುತ್ತಾರೆ. ಒಂದು ವಿಚಾರದಿಂದ ಮತ್ತೊಂದು ವಿಚಾರಕ್ಕೆ ನೆಗೆಯುತ್ತ ಅದು ನಿಮ್ಮನ್ನೇ ಹಲವು ಹೋಳಾಗಿಸುತ್ತದೆ. ನೀವು ಯಾವುದೇ ತೀರ್ಮಾನ ತೆಗೆದುಕೊಳ್ಳುವಲ್ಲಿ ಅಸಮರ್ಥರಾಗುತ್ತೀರಿ. ನಿಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ಏಕೆಂದರೆ ನೀವು ಒಬ್ಬರೇ ಆಗಿದ್ದರೂ 10 ತುಂಡುಗಳಾಗಿದ್ದೀರಿ. ಅದಕ್ಕಾಗಿ ಪದೇ ಪದೇ ಕಾಯಿಲೆ ಬೀಳುತ್ತೀರಿ. ಒಬ್ಬನೇ ಮನುಷ್ಯ 10 ಜನರ ಜೀವನ ಸಾಗಿಸಲು ಸಾಧ್ಯವಿಲ್ಲ.

ದೇವತೆಯೊಬ್ಬಳು (ಏಂಜಲ್) ವ್ಯಾಪಾರಿಯೊಬ್ಬನ ಬಳಿ ಬಂದು, `ನೀನು ಏಕೆ ವ್ಯಾಪಾರ ಮಾಡುತ್ತಿರುವೆ~ ಎಂದು ಪ್ರಶ್ನಿಸಿದಳು. `ಲಾಭ ಮಾಡಿಕೊಳ್ಳಲು~ ಎಂದು ಆತ ಉತ್ತರಿಸಿದ. ಯಾವುದು ಲಾಭ? `ಒಂದನ್ನು ಎರಡಾಗಿಸುವುದು~ ಎಂದ ಆತ. `ಆದರೆ, ಅದು ಲಾಭವಲ್ಲ. ಲಾಭ ಅಂದರೆ ಎರಡನ್ನು ಒಂದಾಗಿಸುವುದು~ ಅಂದಳು ಆ ದೇವತೆ.

ಹೌದು, ಇದು ಸತ್ಯ. ಮನಸ್ಸು ಸ್ಥಿರತೆ ಬಯಸುತ್ತದೆ. ಪೂರ್ಣತ್ವ ಬಯಸುತ್ತದೆ, ಒಂದೇ ಸ್ಥಳದಲ್ಲಿ ಧೀರ್ಘಕಾಲ ಇರಲು ಬಯಸುತ್ತದೆ. ಆಗಷ್ಟೇ ಅದು ಶಾಂತಿಯಿಂದ, ಸೌಹಾರ್ದದಿಂದ, ಸಂತೃಪ್ತಿಯಿಂದ ಇರುವುದನ್ನು ಕಲಿಯುತ್ತದೆ. ಈ ಸ್ಥಿರತೆ, ಶಾಂತ ಭಾವ ದೇಹದೊಳಗೆ ಇಳಿಯುತ್ತದೆ. ದೇಹಾರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುತ್ತದೆ.

ಮನಸ್ಸಿಗೆ ತನ್ನದು ಎಂದು ಹೇಳಿಕೊಳ್ಳಲು ಒಂದೇ ಒಂದು ಭಾವ ನೀಡುವುದು ಮುಖ್ಯ. ಎರಡು, ಮೂರಲ್ಲ. ಒಂದು ಇಷ್ಟದ ಮಂತ್ರ, ಒಂದು ಪ್ರೀತಿಸುವ ಪದ್ಯ, ಒಂದೇ ಒಂದು ಪ್ರಾರ್ಥನೆಯನ್ನು ಸಂತಸದಿಂದ ನಿತ್ಯ ಹೇಳಿಕೊಳ್ಳಬೇಕು. ನಿಮ್ಮ ಸುಪ್ತ ಮನಸ್ಸಿನಲ್ಲಿ ಆಳವಾಗಿ ವಿಚಾರಗಳು ಬೇರು ಬಿಡುವಂತೆ ಅತ್ಯಂತ ಇಷ್ಟದ ಪುಸ್ತಕವನ್ನು  ಮತ್ತೆ ಮತ್ತೆ ಓದಿಕೊಳ್ಳಬೇಕು.

ಮನಸ್ಸು ಆ ಆಪ್ತ ಭಾವವನ್ನು, ಭದ್ರತೆಯನ್ನು,  ತನ್ನತನವನ್ನು ಪ್ರೀತಿಸತೊಡಗುತ್ತದೆ. ನಿಮ್ಮ ಕಣ್ಣಿನ ಮೂಲಕ, ಕಿವಿಯ ಮೂಲಕ, ಪುಸ್ತಕ ಅಥವಾ ಮಂತ್ರದ ರೂಪದಲ್ಲಿ ಧನಾತ್ಮಕ ಸಂದೇಶಗಳು ಅಂತರಾತ್ಮ ಪ್ರವೇಶಿಸುತ್ತವೆ. ಮನಸ್ಸು ಅದರ ಸುತ್ತ ಸುತ್ತಿಕೊಳ್ಳುತ್ತದೆ.

ನಿಮ್ಮಳಗಿನ ಮೌಢ್ಯ ಶಬ್ದದಿಂದ, ಅರ್ಥದಿಂದ ಅಳಿದುಹೋಗುತ್ತದೆ. ಯಾವುದೋ ಆದರ್ಶ, ಮೌಲ್ಯ, ಸಿದ್ಧಾಂತ ನಿಮ್ಮ ಮನೋಭೂಮಿಕೆಯ ಭಾಗವಾಗುತ್ತದೆ. ತುಂತುರು ಮಳೆಯಂತೆ ಜಿನುಗುವ ಶಾಶ್ವತ ಸತ್ಯಗಳನ್ನು ಹೀರಿಕೊಳ್ಳಲು ಮನಸ್ಸು ಸಮರ್ಥವಾಗುತ್ತದೆ.
 
ಲಯ ಮತ್ತು ಶಬ್ದ ಹಿಡಿದಿಟ್ಟುಕೊಳ್ಳಲು, ಆಲಿಸಲು ಅನುಕೂಲವಾಗುವಂತೆ ಮೌನದಿಂದ ಇರಲು ಕಲಿಯುತ್ತದೆ. ಮೆಲುಕು ಹಾಕಲು, ವಿಶಾಲವಾಗಲು, ಉನ್ನತ ಮಟ್ಟಕ್ಕೆ ಏರಲು ಕಲಿಯುತ್ತದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ದೊರಕುತ್ತದೆ. ಸಮಸ್ಯೆಗಳು ಬಗೆಹರಿಯುತ್ತವೆ. ಸಮಸ್ಯೆ ಅಂದುಕೊಂಡಿದ್ದು ಶೂನ್ಯದಲ್ಲಿ ಮಾಯವಾಗುತ್ತದೆ.

ಜಗತ್ತಿನ ತುಂಬ ಹುಚ್ಚನಂತೆ ಅಲೆದಾಡಬೇಕಿಲ್ಲ ಎಂಬ ಅಮೂಲ್ಯ ಪಾಠವನ್ನು ಮನಸ್ಸು ಕಲಿಯುತ್ತದೆ. ಸ್ಥಿರವಾಗಿರಿ, ಶಾಂತಿಯಿಂದ ಇರಿ, ಸೌಹಾರ್ದದಿಂದ ಇರಿ. ಆಗ ಇಡೀ ಜಗತ್ತು ಪ್ರೀತಿಯ ಅಲೆಯ ಮೂಲಕ ನಿಮ್ಮ ಮನಸ್ಸು ಮುಟ್ಟುತ್ತದೆ. ನಿಮ್ಮ ಮನಸ್ಸಿನ ಹತ್ತು ಹೋಳುಗಳು ಒಂದಾದಾಗ ನಿಮ್ಮ ಅಂತಃಪ್ರಜ್ಞೆ ನದಿಯಂತೆ ಸರಾಗವಾಗಿ ಹರಿಯುತ್ತದೆ. ಇದು ಏಕಾಗ್ರತೆಯ ಫಲ. ನಮ್ಮತನವೆಲ್ಲ ಒಂದೇ ಕಡೆ ಕೇಂದ್ರೀಕೃತವಾದಾಗ ನಾನು ಬಲಶಾಲಿ ಎಂಬ ಭಾವ ಮೊಳೆಯುತ್ತದೆ. ವಿಶೇಷ ಶಕ್ತಿ ಹುಟ್ಟುತ್ತದೆ.

ಅಲೆದಾಡುವ ಮನಸನ್ನು ಗೆಲ್ಲುವುದು ಒಂದೇ ಒಂದು ಭಾವ. ಆ ಭಾವಕ್ಕೆ ದೇಹವನ್ನು ಗುಣಪಡಿಸುವ ಶಕ್ತಿ ಇದೆ. ಪವಾಡಸದೃಶವಾಗಿ ರೋಗಗಳನ್ನು ಗುಣ ಮಾಡುತ್ತಿದ್ದ ಫ್ರಾನ್ಸ್ ವೈದ್ಯ ಎಮಿಲಿ ಕೂವ್ ಈ ತಂತ್ರವನ್ನು ಯಶಸ್ವಿಯಾಗಿ ಬಳಸಿದ.
 
ಆರೋಗ್ಯವಂತನಾಗುತ್ತೇನೆ ಎಂಬ ಒಂದೇ ಭಾವದ ಮೇಲೆ ಗಮನ ಕೇಂದ್ರೀಕರಿಸುವಂತೆ ಆತ ಸೂಚಿಸುತ್ತಿದ್ದ. ಆತನ ರೋಗಿಗಳು ದಿನವೆಲ್ಲ `ನನ್ನ ಆರೋಗ್ಯ ಸುಧಾರಿಸುತ್ತಿದೆ, ನಾನು ಆರೋಗ್ಯವಂತನಾಗುತ್ತಿರುವೆ, ನಾನು ಖುಷಿಯಿಂದ ಇರುವೆ~ ಎಂಬ ಮಂತ್ರ ಹೇಳಿಕೊಳ್ಳುತ್ತಿದ್ದರು. ಇದರಿಂದ ಅದ್ಭುತವಾದ ಸಂಗತಿಗಳು ಜರುಗಿದವು. ಹಾಸಿಗೆ ಹಿಡಿದವರು ಎದ್ದರು, ಮಾನಸಿಕ ಅಸ್ವಸ್ಥರ ಗೊಂದಲಗಳು ದೂರವಾದವು.
 
ಸಮಸ್ಯೆಗಳು ಬಗೆಹರಿದವು. ಅವರ ಅಂಜಿಕೆ ಮಾಯವಾಯಿತು. ಒಂದೇ ಒಂದು ಸಕಾರಾತ್ಮಕ ಮಾತಿನ ಮೇಲೆ, ಉತ್ತಮ ಉದ್ದೇಶದ ಮೇಲೆ ಗಮನ ಕೇಂದ್ರೀಕರಿಸಿದ ಪರಿಣಾಮ ಇದು.
ದ್ವೀಪವೊಂದರಲ್ಲಿ ವಾಸಿಸುತ್ತಿದ್ದ ಮೂವರು ಸಂತರ ಕುರಿತು ಲಿಯೊ ಟಾಲ್‌ಸ್ಟಾಯ್ ಬರೆದ ಪುಸ್ತಕವನ್ನು ನೀವು ಓದಿರಬಹುದು.

ಇಡೀ ದಿನ ಅವರು ಒಂದೇ ವಾಕ್ಯ ಹೇಳಿಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರು. `ನಾವು ಮೂರು ಜನರಿದ್ದೇವೆ, ನಾವು ಮೂರೇ ಜನ ಆದರೂ ನಮ್ಮ ಮೇಲೆ ಕರುಣೆ ಇರಲಿ~ ಎಂದು ಅವರು ಪ್ರಾರ್ಥಿಸುತ್ತಿದ್ದರು. ಈ ಸುದ್ದಿ ಬಿಷಪ್ ಕಿವಿ ಮೇಲೆ ಬಿದ್ದಿತು. ಆ ದ್ವೀಪಕ್ಕೆ ತೆರಳಿದ ಬಿಷಪ್ ಅವರಿಗೆ ಧರ್ಮಗ್ರಂಥಗಳಲ್ಲಿ ಬರೆದಂತೆ ಪ್ರಾರ್ಥನೆ ಹೇಳಿಕೊಟ್ಟ. ದ್ವೀಪದಿಂದ ಹೊರಟ ಬಿಷಪ್ ಬೋಟು ಮಧ್ಯಸಮುದ್ರ ಮುಟ್ಟಿತ್ತಷ್ಟೇ.

ಕಾಂತಿಯುತ ಬೆಳಕಿನ ಕಿರಣವೊಂದು ಬಿಷಪ್ ಬೋಟನ್ನು ಹಿಂಬಾಲಿಸಿ ಬರುತ್ತಿತ್ತು. ಅದು ಹತ್ತಿರ ಬಂದಂತೆ ಆತ ಸ್ತಬ್ಧನಾದ. ಆ ಮೂವರು ಸಂತರು ಅಲೆಯ ಮೇಲೆ ಓಡಿಕೊಂಡು ಬರುತ್ತಿದ್ದರು. ನೀವು ಹೇಳಿಕೊಟ್ಟ ಪ್ರಾರ್ಥನೆಯನ್ನು ನಾವು ಮರೆತಿದ್ದೇವೆ. ದಯವಿಟ್ಟು ಅದನ್ನು ಮತ್ತೆ ಹೇಳಿ ಎಂದು ಆ ಸಂತರು ಹೇಳಿದರು. ದಿಗ್ಮೂಢನಾದ ಆ ಬಿಷಪ್ ನಿಮ್ಮ ಪ್ರಾರ್ಥನೆಯೇ ಸರಿಯಾಗಿದೆ ಅದನ್ನೇ ಹೇಳಿಕೊಳ್ಳಿ ಎಂದು ಉತ್ತರಿಸಿದ.

ನೀವು ದುಃಖಭರಿತರಾಗಿದ್ದಾಗ, ಒಬ್ಬಂಟಿಯಾದಾಗ, ಎಲ್ಲವೂ ನಿಮಗೆ ವಿರುದ್ಧವಾಗಿ ನಡೆಯುತ್ತಿದೆ ಅಂದಾಗ, ಬದುಕು ಅಸಾಧ್ಯ ಎನಿಸಿದಾಗ ವಿಶೇಷ ಪದ್ಯ, ಪ್ರಾರ್ಥನೆ, ಮಂತ್ರ ಅಥವಾ ವಾಕ್ಯವನ್ನು ಆಯ್ದುಕೊಳ್ಳಿ. ಕೆಲ ನಿಮಿಷಗಳ ಕಾಲ ಅದರ ಮೇಲೆ ಏಕಾಗ್ರತೆಯಿಂದ ಮನಸ್ಸು ಕೇಂದ್ರೀಕರಿಸಿ. ಏಕಾಗ್ರತೆ..ಏಕಾಗ್ರತೆ....ಏಕಾಗ್ರತೆ...ನಿಮ್ಮ ದುಃಖ ಗಾಳಿಯಂತೆ ಹಾರಿಹೋಗುತ್ತದೆ. ವಿಶಿಷ್ಟ ಶಕ್ತಿ ನಿಮ್ಮಳಗೆ ನುಗ್ಗುತ್ತದೆ. ನಿಮ್ಮದೇ ಆದ ಬಲ ಮತ್ತು ಬೆಳಕು ತುಂಬಿದ ಶಬ್ದವೊಂದನ್ನು ಕಂಡುಕೊಳ್ಳಿ. ಹಗುರ ಹೃದಯದಿಂದ, ಹಗುರ ನಡೆಯಿಂದ ಆರೋಗ್ಯದ ಅಲೆಯ ಮೇಲೆ ತೇಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT