ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾದಶಿಗೆ ಹಲಸು ಹಣ್ಣಿನ ವ್ಯಾಪಾರ ಜೋರು !

ಹೊಳಲ್ಕೆರೆ: ಇಂದು, ನಾಳೆ ಶ್ರದ್ಧಾಭಕ್ತಿಯಿಂದ ಹಬ್ಬ ಆಚರಣೆ
Last Updated 19 ಜುಲೈ 2013, 10:40 IST
ಅಕ್ಷರ ಗಾತ್ರ

ಹೊಳಲ್ಕೆರೆ: ಶುಕ್ರವಾರ ಮತ್ತು ಶನಿವಾರ ನಡೆಯುವ ಏಕಾದಶಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗುರುವಾರ ಹಲಸು ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಶುಕ್ರವಾರ `ಹಣ್ಣುಪಲ್ಲಾರ' ಎಂಬ ಆಚರಣೆ ನಡೆಯಲಿದ್ದು, ಕಡಲೆಹಿಟ್ಟು, ಹಲಸಿನಹಣ್ಣು, ಬಾಳೆಹಣ್ಣಿನ ಪಲ್ಲಾರ ತಯಾರಿಸುತ್ತಾರೆ. ನವಣೆ ಅಕ್ಕಿ, ಬೆಲ್ಲ, ಕಡಲೆ, ಶೇಂಗಾ ಬೀಜ, ಎಳ್ಳು, ಕೊಬ್ಬರಿ ಮತ್ತಿತರ ಪದಾರ್ಥಗಳನ್ನು ಮಿಶ್ರಣ ಮಾಡಿ `ಹುರಿ ಅಕ್ಕಿ ಉಂಡೆ' (ತಮುಟ) ಮಾಡುವುದು ಈ ಹಬ್ಬದ ವಿಶೇಷ. ಇನ್ನು ಕೆಲವರು ಕಡಲೆಹಿಟ್ಟಿನ ಉಂಡೆಯನ್ನು ಮಾಡುತ್ತಾರೆ.

ತಿರುಪತಿ ತಿಮ್ಮಪ್ಪನ ಭಕ್ತರು ಹೆಚ್ಚು ಶ್ರದ್ಧಾಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು, ಇಲ್ಲಿ ದಾಸಯ್ಯಗಳದ್ದೆ ಕಾರುಬಾರು. ಮುದ್ರೆ ಹಾಕಿಸಿಕೊಂಡ ದಾಸಯ್ಯಗಳು ಹಬ್ಬದ ಮೂರು ದಿನಗಳವರೆಗೆ ಉಪವಾಸ ವ್ರತ ಆಚರಿಸಿ, ಮನೆ, ಮನೆಗೆ ಹೋಗಿ ಜಾಗಟೆ ಬಡಿದು ಶಂಖ ಊದುತ್ತಾರೆ.

ಪ್ರತೀ ಮನೆಗೆ ಹೋಗಿ `ಗೋವಿಂದಾ, ಗೋವಿಂದ' ಎಂದು ಭವನಾಸಿಯಲ್ಲಿ ಭಿಕ್ಷೆ ಹಾಕಿಸಿಕೊಂಡು ಬರುತ್ತಾರೆ. ಜನ ಮನೆಗೆ ಬಂದ ದಾಸಯ್ಯನ ಕಾಲಿಗೆ ನೀರು ಹಾಕಿ ಕೈಮುಗಿದು ಆಶೀರ್ವಾದ ಪಡೆಯುತ್ತಾರೆ. ಮುದ್ರೆಯಾದವರು ಕಡ್ಡಾಯವಾಗಿ ಮನೆಗಳಿಗೆ ಹೋಗಿ ಭಿಕ್ಷೆ ಬೇಡಬೇಕು.ಶಾಸ್ತ್ರಕ್ಕಾದರೂ 3, 9 ಮನೆಗಳಿಗಾದರೂ ಭೇಟಿ ನೀಡಬೇಕು. ಇಲ್ಲವಾದರೆ ಕೇಡುಂಟಾಗುತ್ತದೆ ಎನ್ನುತ್ತಾರೆ ಹಿರಿಯರು.

ಹಲಸಿನಹಣ್ಣಿಗೆ ಬೇಡಿಕೆ: ಏಕಾದಶಿಗೆ ಹಲಸಿನ ಹಣ್ಣು ತರದಿದ್ದರೆ ಹಬ್ಬ ಪರಿಪೂರ್ಣವಾಗುವುದಿಲ್ಲ. ಪಲ್ಲಾರಕ್ಕೆ ಹಲಸಿನ ತೊಳೆ ಹಾಕುವುದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಹಲಸಿನಹಣ್ಣು ತರುತ್ತಾರೆ. `ನಾವು ಪ್ರತೀವರ್ಷ ಏಕಾದಶಿಗೆ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ಅಜ್ಜಿಹಳ್ಳಿ ಕಡೆಯಿಂದ ಹಲಸು ತಂದು ಮಾರುತ್ತೇವೆ.

ಒಂದು ಹಲಸು ದಪ್ಪದ ಮೇಲೆ ರೂ 0 ರಿಂದ 200 ರವರೆಗೆ ಮಾರಾಟ ಆಗುತ್ತಿವೆ. ಇಲ್ಲಿನ ಜನ ಹಲಸಿನಹಣ್ಣು ಇಲ್ಲದೆ ಹಬ್ಬವನ್ನೇ ಮಾಡುವುದಿಲ್ಲ. ನಿನ್ನೆಯಿಂದ ಸುಮಾರು 2 ಲೋಡ್ ಹಣ್ಣು ಖಾಲಿ ಆಗಿದೆ. ಖರೀದಿ, ಖರ್ಚು, ಬಾಡಿಗೆ ಕಳೆದು ಒಂದಿಷ್ಟು ಲಾಭ ಬರುತ್ತದೆ' ಎನ್ನುತ್ತಾರೆ ಪ್ರತೀ ವರ್ಷ ಇಲ್ಲಿ ಹಲಸು ಮಾರುವ ವ್ಯಾಪಾರಿ ಹಾರೋನಹಳ್ಳಿ ಅಶೋಕ್.

ಹಿರಿಯರ ಪೂಜೆ: ಹಬ್ಬರ ದಿನ ತೋಟ, ಹೊಲಗಳಿಗೆ ತೆರಳಿ ಹಿರಿಯರ ಸಮಾಧಿಗಳಿಗೆ ಪೂಜೆ ಸಲ್ಲಿಸುವುದು ಇಲ್ಲಿನ  ಪ್ರದಾಯ.ಸಮಾಧಿಗಳನ್ನು ಅಲಂಕರಿಸಿ, ಹಿರಿಯರಿಗೆ ಇಷ್ಟವಾಗುತ್ತಿದ್ದ ಎಲೆ, ಅಡಿಕೆ, ಹೊಗೆಸೊಪ್ಪು ಮತ್ತಿತರ ಪದಾರ್ಥಗಳನ್ನು ಗುಡ್ಡೆ (ಸಮಾಧಿ) ಮುಂದೆ ಇಟ್ಟು ಭಕ್ತಿಯಿಂದ ಕೈಮುಗಿಯುತ್ತಾರೆ. ಹೊಲದಲ್ಲಿ ಪಲ್ಲಾರ ಹಂಚಿ ತಿನ್ನುತ್ತಾರೆ. ಕೆಲವರು ಬಾಣಪ್ಪ ಎಂದು ಕಲ್ಲಿಗೂ ಪೂಜೆ ಸಲ್ಲಿಸುತ್ತಾರೆ. ಕೊನೆಯ ದಿನ `ದಾಸಯ್ಯ ಸಾಯುತ್ತಾನೆ' ಎನ್ನುವ ಮೂಲಕ ಹಬ್ಬ ಕೊನೆಗೊಳ್ಳುತ್ತದೆ.

ದಿನಸಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಹಬ್ಬ ಮಾಡುವ ಜನ ಕಂಗಾಲಾಗಿದ್ದಾರೆ. ಪ್ರತೀ ಕೆಜಿಗೆ ಹುರಿ ಕಡಲೆ- ರೂ 55, ಬೆಲ್ಲ-ರೂ 40, ಶೇಂಗಾ ಬೀಜ- ರೂ  85, ಅಡುಗೆ ಎಣ್ಣೆ- ರೂ  70-90, ಸಕ್ಕರೆ- ರೂ  35, ಅಕ್ಕಿ- ರೂ  32-40 ಬೆಲೆಯಾಗಿದ್ದು, ಹಬ್ಬದ ಸಾಮಾನು ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಆದರೂ ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗಿರುವುದರಿಂದ ಜನ ಖುಷಿಯಿಂದಲೇ ಹಬ್ಬ ಮಾಡುತ್ತಿದ್ದಾರೆ ಎಂದು ಕಿರಾಣಿ ಅಂಗಡಿ ಮಾಲೀಕ ಉಜ್ವಲ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT