ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೆ ಅವಧಿ ವಿಸ್ತರಣೆ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳ ಅಧಿಕಾರ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಿಸಿರುವ ಸರ್ಕಾರ ಈ ಕ್ರಮಕ್ಕೆ ಕಾರಣವನ್ನೇನೂ ಕೊಟ್ಟಿಲ್ಲ. ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ಎರಡು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕುಲಪತಿಯೊಬ್ಬರ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ಹೆಚ್ಚಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈಗಿನ ಕುಲಪತಿಗಳ ತಜ್ಞ ಸೇವೆ ಅನಿವಾರ್ಯವೆನಿಸಿದರೆ ಮುಂದಿನ ಅವಧಿಗೂ ವಿಸ್ತರಿಸುವುದಕ್ಕೆ ಕಾಯ್ದೆಯಲ್ಲಿಯೇ ಅವಕಾಶವಿದೆ. ಹಾಗೇಕೆ ಮಾಡಿಲ್ಲ ಎಂಬುದು ಮೊದಲ ಪ್ರಶ್ನೆ. ಬದಲಿಗೆ ಹಂಗಾಮಿ ಸ್ಥಿತಿಯನ್ನು ಮುಂದುವರಿಸುವಂತೆ ಮಾಡಿರುವ ಈ ವಿಸ್ತರಣೆ ಕ್ರಮಕ್ಕೆ ಕಾರಣ ಏನೆಂಬುದನ್ನು ಸರ್ಕಾರ ಸಾರ್ವಜನಿಕಗೊಳಿಸಬೇಕಾಗಿದೆ. ಅಧಿಕಾರದ ಅವಧಿಯನ್ನು ವರ್ಷದ ಮಟ್ಟಿಗಷ್ಟೆ ವಿಸ್ತರಿಸಿದ್ದರಿಂದ ಸೂಕ್ತ ಯೋಜನೆ ರೂಪಿಸಿಕೊಳ್ಳುವುದಕ್ಕೂ ಈಗಿನ ಕುಲಪತಿಗಳಿಗೆ ಆಸ್ಪದವಾಗದು. ಅವರ ಸ್ವಾತಂತ್ರ್ಯವನ್ನೂ ನಿರ್ಬಂಧಿಸುವಂಥ ಈ ಕ್ರಮ ಉನ್ನತ ಶಿಕ್ಷಣ ಕ್ಷೇತ್ರದ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ. ಇದು ಸಂಶೋಧನೆಯೇ ಪ್ರಮುಖವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಪ್ರಯತ್ನ. ವಿಶ್ವವಿದ್ಯಾಲಯದ ವರಿಷ್ಠ ಸ್ಥಾನದಲ್ಲಿದ್ದ ವ್ಯಕ್ತಿಯಲ್ಲಿ ಭದ್ರತೆಯ ಭಾವ ಮೂಡದಿದ್ದರೆ  ಅವರ ಸಂಶೋಧನಾ ವಿದ್ವತ್ತಿನ ಪೂರ್ಣ ಲಾಭ ರಾಜ್ಯದ ಜನತೆಗೆ ಲಭಿಸುವುದು ಕಷ್ಟ. ಏಕೆಂದರೆ ಕನ್ನಡ ವಿಶ್ವವಿದ್ಯಾಲಯ, ನಾಡಿನ ಶ್ರೀಸಾಮಾನ್ಯನ ಸಾಂಸ್ಕೃತಿಕ ಜೀವನಮಟ್ಟದಲ್ಲಿ ಸುಧಾರಣೆಯನ್ನು ತರುವಂಥ ಸಂಶೋಧನೆ ಮತ್ತು ಪ್ರಕಟಣೆಗಳನ್ನು ಹೊರತರಲು ಉದ್ದೇಶಿತವಾದದ್ದು.

ರಾಜ್ಯದಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳ ಆಡಳಿತವನ್ನು ನಿರ್ದೇಶಿಸುವ ಉನ್ನತ ಶಿಕ್ಷಣ ಇಲಾಖೆಗೆ ಯಾವ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಎಂದು ತೆರವಾಗುತ್ತದೆ ಮತ್ತು ಅದಕ್ಕೆ ಯಾವಾಗಿನಿಂದ ಕುಲಪತಿ ನೇಮಕ ಪ್ರಕ್ರಿಯೆ ಆರಂಭಿಸಬೇಕು ಎಂಬುದು ತಿಳಿಯದ ಸಂಗತಿಯಲ್ಲ. ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ಕುಲಪತಿ ಆಯ್ಕೆಯ ಪ್ರಕ್ರಿಯೆಯನ್ನು ಸಕಾಲದಲ್ಲಿ ಪ್ರಾರಂಭಿಸದಿರುವುದು ಇಲಾಖೆಯ ಕರ್ತವ್ಯಲೋಪ. ರಾಜ್ಯದಲ್ಲಿ ಇರುವ ವಿಶ್ವವಿದ್ಯಾಲಯಗಳ ಸಂಖ್ಯೆ ಸರ್ಕಾರದ ವರಿಷ್ಠ ಇಲಾಖೆ ನಿರ್ವಹಿಸಲಾಗದಷ್ಟು ದೊಡ್ಡದೇನೂ ಅಲ್ಲ.

ಸದ್ಯಕ್ಕೆ ಇರುವ 23 ವಿಶ್ವವಿದ್ಯಾಲಯಗಳಿಗೆ ಕುಲಪತಿ ಸ್ಥಾನಗಳು ತೆರವಾಗುವ ಮೊದಲು ಅವರ ನೇಮಕ ಪ್ರಕ್ರಿಯೆ ಆರಂಭಿಸುವಂತಹ ಪ್ರಮುಖ ಕರ್ತವ್ಯದಲ್ಲಿಯೇ ಲೋಪ ಎಸಗುವ ಇಲಾಖೆಯ ಅಧಿಕಾರಿಗಳ ವರ್ತನೆ ಖಂಡನೀಯ. ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ಇಲಾಖೆಯ ಕರ್ತವ್ಯ ಲೋಪದಿಂದ ರಾಜ್ಯದಲ್ಲಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ನಿರ್ವಹಿಸಬಲ್ಲ ಕನ್ನಡಿಗ ಸಂಶೋಧಕರು ಸಿಗುತ್ತಿಲ್ಲವೆಂಬ ಕೆಟ್ಟ ಸಂದೇಶವೇ ರವಾನೆಯಾಗುತ್ತದೆ. ಕುಲಪತಿ ಸ್ಥಾನಕ್ಕೆ ಅರ್ಹರು ಸಿಗದಿರುವ ಕಾರಣ ಈಗಿನವರ ಸೇವೆಯನ್ನು ಒಂದು ವರ್ಷ ಹೆಚ್ಚಿಸಲಾಗುತ್ತಿದೆ ಎಂದರೆ ಅದು ರಾಜ್ಯಕ್ಕೆ ಗೌರವ ತರುವ ಸಂಗತಿಯಲ್ಲ. ವಿಶ್ವವಿದ್ಯಾಲಯದಂಥ ಉನ್ನತ ವಿದ್ವತ್ ಕ್ಷೇತ್ರಗಳನ್ನು ನಿಗಮ, ಮಂಡಲಿಗಳಂತೆ ನೋಡುವ ರಾಜ್ಯ ಸರ್ಕಾರದ ಈ ಮನೋಭಾವವನ್ನು ಕನ್ನಡ ಸಾರಸ್ವತ ಲೋಕ ಉಗ್ರವಾಗಿ ಖಂಡಿಸಬೇಕು. ಈ ಲೋಪಕ್ಕೆ ಕಾರಣರಾದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸುವ ಬದ್ಧತೆಯನ್ನು ಉನ್ನತ ಶಿಕ್ಷಣದ ಉಸ್ತುವಾರಿ ಹೊತ್ತವರು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT