ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್ ಸೋಂಕು ವಿರುದ್ಧ ಜಾಗೃತಿ; ನೈತಿಕ ಅವನತಿ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಏಡ್ಸ್ ಜಾಗೃತಿಯಿಂದಾಗಿ ಸೋಂಕು ತಡೆಗಟ್ಟುವುದನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗುತ್ತಿದೆ. ಇದರಲ್ಲಿ ಮಾಧ್ಯಮವೂ ಮಹತ್ವದ ಪಾತ್ರ ವಹಿಸಿದೆ. ಆದರೆ ಜಾಗೃತಿಯ ಅರೆಬರೆ ಜ್ಞಾನದಿಂದಾಗಿ ಸೋಂಕು ವಿಜೃಂಭಿಸುತ್ತಲೇ ಹರಡುತ್ತಿದೆ ಎನ್ನುವುದೂ ಅಷ್ಟೇ ಸತ್ಯ.

ಇದು ಗುಲ್ಬರ್ಗ ಜಿಲ್ಲೆ, ತಾಲ್ಲೂಕಿನ ಅವರಾದ್ ಗ್ರಾಮದಲ್ಲಿ ಏಡ್ಸ್ ಜಾಗೃತಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯೊಂದರ ನಿರ್ದೇಶಕರು ಹೇಳಿದ ಮಾತು. ‘ಏಡ್ಸ್ ರೋಗವಲ್ಲ. ಅವರು ರೋಗಿಗಳಲ್ಲ. ಅವರು ಸೋಂಕಿತರು. ಅವರೊಡನೆ ಬೆರೆಯಿರಿ, ಅವರೊಡನೆ ಸಾಮಾನ್ಯರಂತೆ ವ್ಯವಹರಿಸಿ. ಮಧುಮೇಹ, ರಕ್ತದ ಒತ್ತಡದಂತೆ ಇದೂ ಒಂದು ದೇಹಸ್ಥಿತಿ.

ರೋಗ ನಿರೋಧಕಶಕ್ತಿಯನ್ನು ಕಳೆದುಕೊಳ್ಳುವ ಸ್ಥಿತಿ’ ಎಂದೆಲ್ಲ ಭರದಿಂದ ಪ್ರಚಾರ ಮಾಡಲಾಗುತ್ತಿದೆ. ಇದಲ್ಲದೆ, ಸಾಕಷ್ಟು ಗೋಡೆಬರಹಗಳು, ಸಮಾಲೋಚಕರ ಸಲಹೆಗಳೂ ಇದೇ ನಿಟ್ಟಿನಲ್ಲಿ ಸಾಗುತ್ತಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಸೋಂಕಿತರು ಮದುವೆಯಾಗಬಹುದು. ಮಕ್ಕಳನ್ನೂ ಪಡೆಯಬಹುದು. ಮಕ್ಕಳಲ್ಲಿ ಸೋಂಕಿರುವ ಸಾಧ್ಯತೆಗಳ ಬಗ್ಗೆ ವೈದ್ಯರ ಬಳಿ ಚರ್ಚಿಸಬೇಕು’ ಇಂಥ ಮಾತುಗಳು ಹಳ್ಳಿಗರಲ್ಲಿ ವಿಚಿತ್ರ ಮನಃಸ್ಥಿತಿ ನಿರ್ಮಾಣ ಮಾಡುತ್ತಿದೆ.

ಏಡ್ಸ್ ರೋಗವೆಂದು ಭಾವಿಸಿ ಬಹಿಷ್ಕೃತ ವ್ಯಕ್ತಿಗಳಂತೆ ವ್ಯವಹರಿಸುತ್ತಿದ್ದಾಗ ಒಂದಿನಿತು ಆತಂಕ ಇತ್ತು. ಆದರೆ ಆ ಸೋಂಕಿತ ಹಿತಾಸಕ್ತಿಗಾಗಿ ಇಡೀ ಸಮಾಜವನ್ನೇ ತಪ್ಪು ಹಾದಿಯತ್ತ ಎಳೆಯುವ ಕೆಲಸವಾಗುತ್ತಿದೆಯೇ? ಮನಸ್ಸು ಬಹಳ ದುರ್ಬಲ. ಎಲ್ಲವೂ ಸಮಯದ ಸುಳಿಯಲ್ಲಿ ಕೊಚ್ಚಿಹೋಗುವಾಗ ಸಾಂತ್ವನದ ಸಣ್ಣ ಎಳೆಕಡ್ಡಿಯೂ ದಡ ಸೇರಿಸುವ ಮರದ ದಿಮ್ಮಿಯಾಗುತ್ತದೆ. ಇಂಥ ಸಮಯದಲ್ಲಿ ವಿಷಯದ ಸಂಪೂರ್ಣ ಅರಿವು ಎದುರಿನವರಿಗಾಗುವುದೇ ಇಲ್ಲ.

ರೋಗಗ್ರಸ್ತ ವ್ಯಕ್ತಿಗೂ ರೋಗಲಕ್ಷಣಗಳಿರುವ ವ್ಯಕ್ತಿಗೂ ವ್ಯತ್ಯಾಸ ಮನವರಿಕೆ ಮಾಡಿಕೊಡುವ ಮುನ್ನವೇ ಗ್ರಾಮೀಣ ಜನರಲ್ಲಿ ಕೇವಲ ಏಡ್ಸ್ ಸೋಂಕಿತರೂ ಮದುವೆಯಾಗಬಹುದು ಎಂಬ ಮಾತು ಮಾತ್ರ ಅಚ್ಚಳಿಯದೇ ನೆನಪಿನಲ್ಲಿ ಉಳಿಯುತ್ತಿದೆ.

ಇಂಥವರಿಗೆ ಹುಡುಗಿಯನ್ನು ಕೊಡುವವರು ಮತ್ಯಾರೂ ಅಲ್ಲ, ಕುಟುಂಬದ ಮರ್ಯಾದೆ ಬೀದಿಗೆ ಬರದಿರಲಿ ಎಂದು ಅಂಥ ಹುಡುಗರ ಸಹೋದರಿಯರು ತಮ್ಮ ಹೆಣ್ಣುಮಕ್ಕಳನ್ನೇ ಬಲಿ ಕೊಡುತ್ತಿದ್ದಾರೆ. ಹೀಗಾಗಿ ಮತ್ತೆ ಒಳ ಸಂಬಂಧಗಳೂ, ವಯಸ್ಸಿನ ಅಂತರವಿರುವ ಮದುವೆಗಳೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿವೆ ಎನ್ನುವುದು ಅವರ ಅವಲೋಕನ.

‘ಸರ್, ಪಾಸಿಟಿವ್ ಜನರೂ ಮದುವೆಯಾಗಬಹುದು ಎಂದು ಹೇಳ್ತಾರಲ್ಲ’ ಎಂಬ ಪ್ರಶ್ನೆಯೇ ಬಹುತೇಕ ಜನರದ್ದು. ಇನ್ನೊಂದು ‘ಅಷ್ಟೆಲ್ಲ ಕಷ್ಟಗಳಿದ್ದರೆ, ಸರ್ಕಾರ ಇಂಥ ಪ್ರಚಾರ ಕೈಗೊಳ್ಳುತ್ತಿರಲಿಲ್ಲ’ ಎಂಬ ವಿತಂಡವಾದ ಬೇರೆ. ಇಂಥ ಪ್ರಚಾರಗಳು ಅಥವಾ ಇಂಥ ಜಾಗೃತಿ ಸಮಾಲೋಚಕರ ಹಂತಕ್ಕೆ ಮಾತ್ರ ಇರಬೇಕು. ಸಮೂಹ ಮಾಧ್ಯಮದಲ್ಲಿ ಬರಲೇಕೂಡದು. ಮಾಧ್ಯಮದಲ್ಲಿ ಏನಿದ್ದರೂ ಏಡ್ಸ್ ತಡೆಗಟ್ಟುವ ಬಗೆಗಿನ ಮಾತುಗಳ ಚರ್ಚೆಯಾಗಬೇಕು. ಕೇವಲ ಒಂದು ದಶಕದ ಹಿಂದೆ, ‘ನಿರೋಧ್’ ಬಳಕೆಯ ಬಗ್ಗೆ ಕುಟುಂಬ ಯೋಜನೆಯ ಬಗ್ಗೆ ಪ್ರಚಾರ ಕೈಗೊಳ್ಳುವಾಗ ಮಾತ್ರ ಆಗುತ್ತಿತ್ತು. ಅಂಥದ್ದೊಂದು ಕಟ್ಟುನಿಟ್ಟಿನ ವ್ಯವಸ್ಥೆ ಮತ್ತೊಮ್ಮೆ ಜಾಗೃತಿ ಮತ್ತು ಪ್ರಚಾರದಲ್ಲಿ ಬರಲೇಬೇಕಿದೆ. ಗ್ರಾಮೀಣ ಜನರಲ್ಲಿ ಪ್ರತಿಯೊಂದನ್ನು ಆಳವಾಗಿ ಮಥಿಸುವ ಬುದ್ಧಿಶಕ್ತಿ ಇರುತ್ತದೆ ಎಂದು ನಿರೀಕ್ಷಿಸಲಾಗದು. ಅವರಿಗೆ ಎಲ್ಲವನ್ನೂ ಅರಿತು ಹೆಜ್ಜೆ ಇಡಬೇಕೆಂಬ ವ್ಯವಧಾನವೂ ಇಲ್ಲ, ಕೆನೆ ಪದರದ ಅರಿವು ಮಾತ್ರ ಸಾಕು. ‘ಮದುವೆಯಾಗಬಹುದು’ ಎಂದರೆ ‘ಆಗಬಹುದು’ ಅಷ್ಟೆ. ಅದು ಯಾರೊಂದಿಗೆ, ಆದರೂ ದೈಹಿಕ ಸಂಪರ್ಕ ಹೇಗೆ, ಇದೆಲ್ಲವನ್ನೂ ಕೇಳುವುದೇ ಇಲ್ಲ. ಜಾಗೃತಿಯೇ ಒಂದು ರೀತಿಯ ಮುಳುವಾಗುತ್ತಿರುವುದು ಮಾತ್ರ ವಿಪರ್ಯಾಸ.

ಇನ್ನೊಂದು ಉದಾಹರಣೆ, ಇವರ ಕೇಂದ್ರಕ್ಕೆ ‘ಆಶಾ’ ಕಾರ್ಯಕರ್ತೆಯರೊಡನೆ, ಹದಿಹರೆಯದ ಹೆಣ್ಣು ಮಕ್ಕಳು ಬರುತ್ತಾರೆ. ಅವರು ತಮ್ಮ ಸಂಗಾತಿಯೊಡನೆ ಮಿಲನಕ್ಕೆ ಮುನ್ನ ಕಾಂಡೋಂ ಬಳಕೆಯ ಬಗ್ಗೆ ವಿಚಾರಿಸುತ್ತಿದ್ದಾರೆ. ಇಲ್ಲಿ ಅವರ ಜಾಗೃತಿಗಾಗಿ ಖುಷಿ ಪಡಬೇಕೆ, ಅಥವಾ ಇಲ್ಲಿ ಆಗುತ್ತಿರುವ ನೈತಿಕ ಅಧಃಪತನಕ್ಕೆ ಖೇದ ಪಡಬೇಕೆ? ‘ಆಶಾ’ ಕಾರ್ಯಕರ್ತೆಯರು ಅವರ ದೇಹ ರಚನೆಯ ಬಗ್ಗೆ ತಿಳಿಸಿ, ‘ಸದ್ಯ ಅವರ ದೇಹ ಈ ಕ್ರಿಯೆಗೆ ಸಿದ್ಧವಾಗಿಲ್ಲ’ ಎಂದು ತಿಳಿ ಹೇಳಿದರೂ, ಎಲ್ಲ ಬಲ್ಲವರಂತೆ ಮಾತನಾಡುತ್ತಾರೆ ಹುಡುಗಿಯರು. ‘ನೀವು ಕೊಡದಿದ್ದರೆ, ಸಿಗುವುದಿಲ್ಲವೇ’ ಎಂದು ಸವಾಲು ಸಹ ಒಡ್ಡುತ್ತಾರೆ ಹದಿನೈದರ ಪೋರಿಯರು.

ಸುರಕ್ಷಿತ ಸೆಕ್ಸ್ ಬಗೆಗಿನ ಜಾಗೃತಿಯಷ್ಟೇ ಮುಖ್ಯವಾಗಿ ಏಕಸಂಗಾತಿ ನಿಷ್ಠೆಯನ್ನೂ ಪ್ರಚಾರಕ್ಕೆ ತರಬೇಕಿದೆ. ದೈಹಿಕ ಕಾಮನೆಗಳು ವಾಂಛೆಗಳಾಗಿ ಕೇವಲ ಅನುಭವಗಳ ಮಟ್ಟಕ್ಕೆ ಇಳಿಯುವ ಕ್ರಿಯೆಯ ಬದಲು, ಸೃಷ್ಟಿಕ್ರಿಯೆಯ, ಪ್ರೀತಿಯ ಸಮರ್ಪಣಾ ಮಾಧ್ಯಮ ಅದು ಎಂಬುದು ಪ್ರಚಾರಕ್ಕೆ ಬರಬೇಕಿದೆ. ಜಾಗೃತಿ ಹಾಗೂ ನೈತಿಕ ಅವನತಿಯ ನಡುವೆ ನೇರ ಸಂಬಂಧ ಏರ್ಪಡುವ ಮುನ್ನ ಪ್ರಚಾರ ಮಾಧ್ಯಮದವರೂ, ಸಮೂಹ ಮಾಧ್ಯಮದವರೂ ಜಾಗೃತರಾಗಬೇಕಿದೆ.

ಇಲ್ಲದಿದ್ದರೆ ಕೇವಲ ‘ಕಾಂಡೋಂ ಬಳಸಿ’ ಎಂಬುದು ‘ದೈಹಿಕ ಕಾಮನೆಗಳಿಗೆ ದಾಸರಾಗಿ, ಆದರೆ ಸುರಕ್ಷಿತ ಮಾರ್ಗದಲ್ಲಿ’ ಎಂಬಂಥ ಸಂದೇಶಗಳೇ ಹರಡುವುದು ನೈತಿಕ ಅಧಃಪತನಕ್ಕೆ ಕಾರಣವಾಗುತ್ತವೆ.

ಜನರಿಗೆ ಯಾವುದನ್ನು ಹೇಗೆ ಮತ್ತು ಎಷ್ಟು ಹೇಳಬೇಕು? ಯಾವುದು ಪ್ರಚಾರದ ವ್ಯಾಪ್ತಿಗೆ ಬರಬೇಕು, ಯಾವುದು ಸಮಾಲೋಚಕ ಹಾಗೂ ರೋಗಿಗಳ ನಡುವೆಯೇ ಇರಬೇಕು? ಇವುಗಳ ನಡುವೆಯೊಂದು ಸ್ಪಷ್ಟ ಗೆರೆ ಇರಬೇಕಿರುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT