ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್‌ ಪೀಡಿತರ ಹೆಚ್ಚಳ; ಜಿಲ್ಲೆಗೆ 8ನೇ ಸ್ಥಾನ

Last Updated 3 ಡಿಸೆಂಬರ್ 2013, 5:29 IST
ಅಕ್ಷರ ಗಾತ್ರ

ದಾವಣಗೆರೆ: ‘ಎಚ್‌ಐವಿ ಪೀಡಿತರಲ್ಲಿ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆ 8ನೇ ಸ್ಥಾನದಲ್ಲಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ರಾಜ್ಯದಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ಎಚ್‌ಐವಿ ಪೀಡಿತರಿದ್ದಾರೆ. ಅದರಲ್ಲಿ ದಾವಣಗೆರೆ 8ನೇ ಸ್ಥಾನದಲ್ಲಿದೆ. ಈ ಮಟ್ಟವನ್ನು ಮುಂದಿನ ದಿನಗಳಲ್ಲಿ ಇನ್ನೂ ಕೆಳಗಿಳಿಸಲು ಎಲ್ಲರೂ ಸಾಮೂಹಿಕ ಹೋರಾಟ ನಡೆಸಬೇಕು. ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನೆರವಾಗಬೇಕು. ಮುಂದಿನ ದಿನಗಳಲ್ಲಿ ಎಚ್‌ಐವಿ ಸಂಬಂಧಿತ ಮರಣ ಸಂಖ್ಯೆಯನ್ನು ಶೂನ್ಯಕ್ಕೆ ತರಬೇಕು ಎಂದು ಕರೆ ನೀಡಿದರು.

ಜಿಲ್ಲೆಯ ವೈದ್ಯ ವರ್ಗ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಎಚ್‌ಐವಿ ನಿಯಂತ್ರಣದಲ್ಲಿ ಸಾಕಷ್ಟು ಶ್ರಮಿಸುತ್ತಿವೆ ಎಂದರು. ಎಚ್‌ಐವಿ ಪೀಡಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಏಡ್ಸ್‌ ನಿಯಂತ್ರಣಾ ಸಂಸ್ಥೆ ವ್ಯೆದ್ಯ ಅನಿಲ್‌ ಪ್ರಸಾದ್‌ ಸಿಂಗ್‌ ಮಾತನಾಡಿ,  ಎಚ್‌ಐವಿ ಪೀಡಿತರನ್ನು ಕಳಂಕಿತರಂತೆ ಬಿಂಬಿಸಬಾರದು. ಎಲ್ಲರೂ ಒಂದೇ ಎಂದು ಭಾವಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಮೊದಲು, ಗುಡ್ಡಪ್ಪ ಜೋಗಿ ತಂಡದಿಂದ ಜನಪದ ಹಾಡಿನ ಮೂಲಕ ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸಲಾಯಿತು. ಐಸಿಟಿಸಿ ಆಪ್ತಸಮಾಲೋಚಕರು ಮತ್ತು ವಿವಿಧ ಸ್ವಯಂ ಸೇವಾ ಸಂಘಟನೆಗಳಿಂದ ‘ಮುಟ್ಟಾಳ ಮತ್ತು ಮನೆಹಾಳ’ ಬೀದಿ ನಾಟಕ ಪ್ರದರ್ಶಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪ್ರೇಮಾ ಲೋಕೇಶಪ್ಪ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸಮಿತಿ ಸ್ಥಾಯಿ ಅಧ್ಯಕ್ಷ ನಾಗರಾಜ್‌, ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಪರಶುರಾಮಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಚ್.ಡಿ.ವಿಶ್ವನಾಥ್‌, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕಿ ಡಿ.ಎಸ್‌,ರೇಣುಕಾ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿಕಾರಿ ಎ.ಎಂ.ಸುನಂದಾ, ಜಿ.ಡಿ.ರಾಘವನ್‌ ಇದ್ದರು. 

ಕಾರ್ಯಕ್ರಮ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಏಡ್ಸ್‌ ಜಾಗೃತಿ ಜಾಥಾ ನಡೆಯಿತು. ವಿವಿಧ ಕಾಲೇಜುಗಳ ನರ್ಸಿಂಗ್‌ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT