ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಣಕೂರ್: ನೀರಿನ ಸಮಸ್ಯೆ ಉಲ್ಬಣ

Last Updated 9 ಏಪ್ರಿಲ್ 2013, 6:37 IST
ಅಕ್ಷರ ಗಾತ್ರ

ಭಾಲ್ಕಿ: ಪ್ರತ್ಯೇಕ ಗ್ರಾಮ ಪಂಚಾಯಿತಿ ಕಚೇರಿಗಾಗಿ ಈ ಹಿಂದೆ ಮತದಾನ ಬಹಿಷ್ಕರಿಸಿದ್ದ ಏಣಕೂರ ಗ್ರಾಮದಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಕೊಡ ನೀರಿಗಾಗಿ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ನೀರು ದೊರೆಯುವ ದೂರ ದೂರದ ಹೊಲಗಳಲ್ಲಿ ಹಗಲಿರುಳು ಅಲೆಯುವ ದಯನೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಭಾಲ್ಕಿ ತಾಲ್ಲೂಕು ಕೇಂದ್ರದಿಂದ ಹುಮನಾಬಾದ ರಸ್ತೆಯಲ್ಲಿ 13 ಕಿ.ಮೀ ದೂರದಲ್ಲಿರುವ ಏಣಕೂರ ಗ್ರಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕುರುಬಖೇಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಏಣಕೂರದಿಂದ 7 ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾಗುತ್ತಾರೆ.

`ನಮ್ಮೂರಿಗೆ ಪ್ರತ್ಯೇಕ ಪಂಚಾಯಿತಿ ಮಂಜೂರಿ ಮಾಡಬೇಕೆಂದು ಈ ಹಿಂದೆ 3 ಸಲ ಚುನಾವಣೆಯನ್ನು ಬಹಿಷ್ಕರಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆದರೂ ಫಲ ದೊರೆತಿಲ್ಲ. ಸಿಕ್ಕಿದ್ದು ಭರವಸೆ ಮಾತ್ರ' ಎಂಬ ಅಳಲು ಸ್ಥಳೀಯರದು.

ಈಗ ಗ್ರಾಮದಲ್ಲಿರುವ 2 ಕೈ ಪಂಪ್‌ಗಳ ಜಲಮೂಲ ಬತ್ತಿ ಹೋಗಿದೆ. ಲಕ್ಷ್ಮೀಮಂದಿರದ ಬಳಿ ಇರುವ ಕೊಳವೆ ಬಾವಿಯಲ್ಲಿ ಮಾತ್ರ ನೀರಿದೆ. ಆದರೆ ಅಲ್ಲಿನ ಕೊಡಗಳ ಸಾಲಿನ ಸಂಖ್ಯೆ ಮಾತ್ರ ನೂರಾರು. ನೀರಿಗಾಗಿ ಸದಾ ನೀರೆಯರು ಗುದ್ದಾಡುವ ಪರಿಸ್ಥಿತಿ ತಲೆದೋರಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಶಾಲಾ ಮಕ್ಕಳ ಬೈಸಿಕಲ್‌ಗಳು, ಪೆನ್ನು ಹಿಡಿದು ಬರೆಯಬೇಕಾದ ಕೈಗಳು ಈಗ ಖಾಲಿ ಕೊಡಗಳನ್ನು ಹಿಡಿದು ಓಡಾಡುವ ಪರಿಸ್ಥಿತಿ ತಪ್ಪಿಸಲು ತಾಲ್ಲೂಕು ಅಡಳಿತ ಸ್ಪಂದಿಸಬೇಕಿದೆ ಎನ್ನುತ್ತಾರೆ ಏಣಕೂರ್‌ನ ಭೀಮಣ್ಣ ಮಾನಕರ್.

ಬಿಸಿಲಿನ ಝಳದಲ್ಲಿ ದನಕರುಗಳ ಪರಿಸ್ಥಿತಿಯಂತೂ ಶೋಚನೀಯವಾಗಿದೆ ಎಂದು ಗ್ರಾಮದ ಚನ್ನಬಸಪ್ಪ ಗೌರೆ ಹೇಳುತ್ತಾರೆ. ಕೊಳವೆಬಾವಿಗಳ ಜಲಮೂಲ ಬತ್ತಿರುವುದರಿಂದ ಸಮೀಪದ ಡಾವರಗಾಂವ ಕೆರೆಯಿಂದ ಪೈಪ್‌ಲೈನ್ ಅಳವಡಿಸಿದರೆ ಶಾಶ್ವತ ಪರಿಹಾರ ಸಾಧ್ಯವಾಗುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT