ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ ನೀರಾವರಿಯ ಬಿ ಸ್ಕೀಂ: ಜಾರಿಗೊಳಿಸುವ ಅನಿವಾರ್ಯತೆ...

Last Updated 10 ಜನವರಿ 2011, 5:20 IST
ಅಕ್ಷರ ಗಾತ್ರ
ADVERTISEMENT

ಆಲಮಟ್ಟಿ: ಕೃಷ್ಣಾ ಕುರಿತ ಮೊದಲ ಐತೀರ್ಪಿನ ಅನ್ವಯ ನೀರನ್ನು ಬಳಸದೇ ಸಾವಿರಾರು ಟಿಎಂಸಿ ಅಡಿ ನೀರು ಕಳೆದುಕೊಂಡ ರಾಜ್ಯಕ್ಕೆ ಈಗಿನ ಐತೀರ್ಪು (‘ಬಿ’ ಸ್ಕೀಂ) ಮಹತ್ವದ್ದು. ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಇದು ಶಕ್ತಿ ತುಂಬುವುದೇ ಎನ್ನುವುದು ಉತ್ತರ ಸಿಗದ ಪ್ರಶ್ನೆ.

 ‘ಎ’ ಸ್ಕೀಂನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಪೂರ್ಣವಾಗದೇ ಇದ್ದರೂ  ‘ಎ’ ಸ್ಕೀಂ ಅನ್ವಯ ಪೂರ್ಣಗೊಳ್ಳಬೇಕಾದ ಕಾಮಗಾರಿಗಳೂ ಸೇರಿ, ‘ಬಿ’ ಸ್ಕೀಂ ಅಡಿ ಕೈಗೊಳ್ಳಬೇಕಾದ ಎಲ್ಲ ಕಾಮಗಾರಿಗಳನ್ನಾದರೂ ವೇಗವಾಗಿ ಪೂರ್ಣಗೊಳಿಸಬೇಕು ಎನ್ನುವುದೇ ಮೇಲ್ದಂಡೆ ವ್ಯಾಪ್ತಿ ರೈತರ ಒತ್ತಾಯ.

ಕಾಲುವೆ ನಿರ್ಮಾಣ ಹಾಗೂ ಇತರ ಪೂರಕ ಕಾಮಗಾರಿಗಳು ಎಂದೋ ಮುಗಿಯಬೇಕಿತ್ತು. ಮೊದಲನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದರೆ ‘ಬಿ’ ಸ್ಕೀಂ ಜಾರಿ ರಾಜ್ಯಕ್ಕೆ ಇಷ್ಟು ದೊಡ್ಡ ಹೊರೆಯಾಗುತ್ತಿರಲಿಲ್ಲ. ಏಕೆಂದರೆ ಏತ ನೀರಾವರಿ ಕಾಮಗಾರಿಗಳು ’ಬಿ’ ಸ್ಕೀಂನ ಜೀವಾಳ. ಏತ ನೀರಾವರಿ ಯಶಸ್ವಿಯಾಗಲು ಕಾಲುವೆ- ಶಾಖಾ ನಾಲೆಗಳು ಸರಿಯಾಗಿರಬೇಕು.

ಕಾಲುವೆಗಳೇ ಇಲ್ಲದೇ ಏತ ನೀರಾವರಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿಯೂ ಪ್ರಯೋಜನ ಇಲ್ಲ. ಆದ್ದರಿಂದ ನಿರ್ದಿಷ್ಟ ಕಾಲಮಿತಿಯ ಒಳಗೆ ಬಾಕಿ ಉಳಿದ ಕಾಮಗಾರಿಗಳು ಹಾಗೂ ‘ಬಿ’ ಸ್ಕೀಂ ಅನ್ವಯ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಕಾಲಮಿತಿಯನ್ನು ಹಾಕಿಕೊಳ್ಳದೇ ಬದ್ಧತೆಯಿಂದ ಕೆಲಸ ಮಾಡದಿದ್ದರೆ ‘ಬಿ’ ಸ್ಕೀಂ ಬಳಕೆಯಲ್ಲೂ ನಾವು ಎಡವಬೇಕಾಗುತ್ತದೆ ಎಂಬುದು ರೈತ ಹೋರಾಟ ಸಮಿತಿಯ ಆತಂಕ.

ಯೋಜನೆಗಳು: ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ (ಇಂಡಿ), ತಿಮ್ಮಾಪುರ ಸೇರಿದಂತೆ ಒಟ್ಟು ಒಂಬತ್ತು ಏತ ನೀರಾವರಿ ಯೋಜನೆಗಳನ್ನು ’ಬಿ’ ಸ್ಕೀಂನಲ್ಲಿ ಐದೂ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಬೇಕಾಗಿದೆ.  ಈ ಪೈಕಿ ವಿಜಾಪುರ ಮತ್ತು ಬಾಗಲಕೋಟೆಯನ್ನು ಒಳಗೊಂಡ ಜಿಲ್ಲೆಗಳಲ್ಲಿ ಮುಳವಾಡ ಏತ ನೀರಾವರಿ ಅತ್ಯಂತ ದೊಡ್ಡದು. ಮೂರು ಹಂತಗಳಲ್ಲಿ ಈ ಯೋಜನೆ ಅನುಷ್ಠಾನ ಆಗಬೇಕು ಎನ್ನುತ್ತದೆ ಯೋಜನಾ ವರದಿ.  ‘ಬಿ’ ಸ್ಕೀಂ ಅನ್ವಯ ಮುಳವಾಡದ ಮೂರನೇ ಹಂತದ ಕಾಮಗಾರಿ ಆರಂಭವಾಗಬೇಕಾಗಿತ್ತು. ವಾಸ್ತವಾಂಶವೆಂದರೆ ಮೊದಲ ಹಂತ ಮಾತ್ರ ಈಗ ಪೂರ್ಣವಾಗಿದೆ.

ಮುಳವಾಡ ಏತ ನೀರಾವರಿ ಮೂರನೇ ಹಂತ ಪೂರ್ಣವಾದಾಗ 54 ಟಿಎಂಸಿ ಅಡಿ ನೀರು ಬಳಕೆಯಾಗಲಿದೆ. ಇದರ ಫಲವನ್ನು 2.3 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪಡೆಯಲಿದೆ. ಇದೆಲ್ಲ ಯೋಜನೆ ಪೂರ್ಣವಾದ ಮೇಲೆ. ಚಿಮ್ಮಲಗಿ ಮತ್ತು ಗುತ್ತಿ ಬಸವಣ್ಣ (ಎರಡೂ ಸೇರಿ 26 ಟಿಎಂಸಿ ಅಡಿ ನೀರಿನ ಬಳಕೆ) ಯೋಜನೆಗಳಿಗೆ ಶ್ರೀಕಾರ ಹಾಕಬೇಕಾಗಿದೆ. ಇಲ್ಲಿನ ರೈತರ ಮಾತಿನಲ್ಲಿ ಹೇಳುವುದಾದರೆ  ‘ಕಾಯಿ ಒಡೆಯಬೇಕಾಗಿದೆ’. ‘ಎ’ ಸ್ಕೀಂ ಒಂದರಲ್ಲೇ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ವಿಜಾಪುರ ಜಿಲ್ಲೆಯಲ್ಲಿ 1.81 ಲಕ್ಷ ಹೆಕ್ಟೇರ್ ನೀರಾವರಿ ಆಗಬೇಕಿತ್ತು. ಸ್ಕೀಂ  ‘ಬಿ’ ಪ್ರಕಾರ 2.81 ಲಕ್ಷ ಹೆಕ್ಟೇರ್ ನೀರಾವರಿ ಆಗಬೇಕು. ಇನ್ನಾದರೂ ಇದು ಸಾಕಾರವಾಗಲಿ ಎನ್ನುವ ಒತ್ತಾಯ ಮೇಲ್ದಂಡೆ ವ್ಯಾಪ್ತಿಯಲ್ಲಿ ಸಾಮಾನ್ಯ.

‘ಪುನರ್ವಸತಿ ಸೇರಿದಂತೆ ಉದ್ದೇಶಿತ ಕಾಮಗಾರಿಗಳಿಗೆ ಪ್ರತ್ಯೇಕ ಹಣಕಾಸಿನ ವ್ಯವಸ್ಥೆಯನ್ನು ಮಾಡಬೇಕು. ಇಲ್ಲದಿದ್ದರೆ  ‘ಬಿ’ ಸ್ಕೀಂ ನೀರು ಕೂಡ ನಮ್ಮ ಕೈತಪ್ಪಲಿದೆ’ ಎನ್ನುತ್ತಾರೆ ಹೋರಾಟದಲ್ಲಿ ನಿರತರಾಗಿರುವ ಜಿ.ಸಿ. ಮುತ್ತಲದಿನ್ನಿ. ನೀರು ನಿರ್ವಹಣೆ ಕುರಿತು ಅರಿವು ಮೂಡಿಸುವುದೂ ಕೂಡ ಮುಖ್ಯವಾಗಿದೆ ಎನ್ನುತ್ತಾರೆ ಗೂಗಿಹಾಳದ ರೈತ ಬಸಪ್ಪ.

ಬಹುತೇಕ ರೈತರ ಅಭಿಪ್ರಾಯವೂ ಇದೇ ಆಗಿದೆ. ‘ಈಗ ನಮಗೆ ಕೃಷ್ಣಾ ಅಂದರೇನೆಂದು ಗೊತ್ತಾಗಿದೆ. ಆದ್ದರಿಂದ  ‘ಬಿ’ ಸ್ಕೀಂ ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಅನಿವಾರ್ಯತೆ ಎದುರಾಗಲಿದೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕು. ನೀರು ಬಳಕೆದಾರರ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬರಬೇಕು‘ ಎನ್ನುತ್ತಾರೆ ಹನುಮಾಪುರ ರೈತ ಚನ್ನಪ್ಪ ಕನ್ಯಾಳ. ಇದು ಹೋರಾಟಗಾರರ ಒತ್ತಾಯವೂ ಆಗಿದೆ.

ಯಶಸ್ವಿ ಆದೀತೆ?: ದೂರದೃಷ್ಟಿಯಿಂದ ನೋಡಿದಾಗ ಏತ ನೀರಾವರಿಯ ಬೃಹತ್ ಯೋಜನೆಗಳು ಯಶಸ್ವಿಯಾಗುತ್ತವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಾರಿ ಪ್ರಮಾಣದ ವಿದ್ಯುತ್ ಪೂರೈಕೆ, ಅದರಲ್ಲೂ ನಿರಂತರ ವಿದ್ಯುತ್ ಪೂರೈಕೆ ಬಯಸುವ ಏತ ನೀರಾವರಿ ಯೋಜನೆಗಳು ಯಶಸ್ಸು ಕಾಣುವುದು ಅಪರೂಪ. ಏತ ನೀರಾವರಿಗೆ ಆದ್ಯತೆ ನೀಡಬೇಡಿ ಎಂಬ ಕೂಗು ಕಾವೇರಿ ಕೊಳ್ಳದಲ್ಲಿ ಹಿಂದೆ ಎದ್ದಿತ್ತು. ಇಲ್ಲಿ ಏತ ನೀರಾವರಿಗೆ ಯಾವುದೇ ಅಪಸ್ವರಗಳಿಲ್ಲ. ಆದರೆ ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣದಂತಹ ಬೃಹತ್ ಏತ ನೀರಾವರಿ ಯೋಜನೆಗಳು ಎಷ್ಟು ವರ್ಷ ಬದುಕಬಹುದು? ಮುಂಬರುವ ದಿನಗಳು ಇದಕ್ಕೆ ಉತ್ತರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT