ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ: ಹೊಡೆದವು ಗೋತ!

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಕಾವೇರಿ ನೀರು ತಮಿಳುನಾಡಿಗೆ ಹರಿದು ಹೋಗಿದ್ದರಿಂದ ರೈತರಿಗೆ ಉಂಟಾದ ಸಂಕಟ ಒಂದೆಡೆಯಾದರೆ ಕಾವೇರಿ ಕಣಿವೆಯಲ್ಲಿ ರೈತರ ಉಪಯೋಗಕ್ಕಾಗಿಯೇ ಕಾರ್ಯಗತಗೊಳಿಸಲಾದ ಏತ ನೀರಾವರಿ ಯೋಜನೆಗಳೂ ನಿರ್ವಹಣೆ ಕೊರತೆಯಿಂದ ಸೊರಗಿರುವುದೂ ರೈತರಲ್ಲಿ ಕಣ್ಣೀರು ತರಿಸಿದೆ.

ಮೈಸೂರು ಜಿಲ್ಲೆಯಲ್ಲಿ 14 ಏತ ನೀರಾವರಿ ಯೋಜನೆಗಳಿವೆ. ಇವುಗಳಿಂದ 3354 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಗುರಿ ಹೊಂದಲಾಗಿದೆ. ಇವುಗಳಲ್ಲಿ ಬಹುತೇಕ ಈಗ ಗೋತಾ ಹೊಡೆದಿವೆ. ಕಾವೇರಿ ಕೊಳ್ಳದಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಕಬಿನಿ ಎರಡನೇ ಹಂತದ ಏತ ನೀರಾವರಿಗೆ ನೀರೇ ಇಲ್ಲದಂತಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಅಣೆಕಟ್ಟೆಗೂ ನೀರು ಸಿಗುವುದು ಕಷ್ಟವಾಗಿದೆ. ಪಿರಿಯಾಪಟ್ಟಣ ತಾಲ್ಲೂಕು ಕರಡಿ ಲಕ್ಕನಗೆರೆ ಏತ ನೀರಾವರಿಗೂ ನೀರಿನ ಲಭ್ಯತೆ ಕಡಿಮೆಯಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 29 ಏತ ನೀರಾವರಿ ಯೋಜನೆಗಳಿವೆ. ಇದರಿಂದ 5823 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಆದರೆ ಇವುಗಳಲ್ಲಿಯೂ ಬಹುತೇಕ ಯೋಜನೆಗಳು ಅಪೂರ್ಣಗೊಂಡಿವೆ ಅಥವಾ ನಿರ್ವಹಣೆ ಸರಿಯಾಗಿಲ್ಲ.

ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು, ಅಲ್ಲಾಪಟ್ಟಣ, ಗಣಂಗೂರು, ಗೌಡಹಳ್ಳಿ, ನೀಲನಕೊಪ್ಪಲು, ಕೆ.ಶೆಟ್ಟಿಹಳ್ಳಿ, ಗರುಡನ ಉಕ್ಕಡ ವ್ಯಾಪ್ತಿಯ ಒಟ್ಟು 887 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಲು ಆರಂಭವಾದ ಕರಿಘಟ್ಟ ಏತ ನೀರಾವರಿ ಯೋಜನೆ 30 ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ.

ಇದು 2 ಹಂತದ ಯೋಜನೆ. ಮೊದಲನೆ ಹಂತದಲ್ಲಿ 33 ಕ್ಯೂಸೆಕ್ ನೀರನ್ನು ಲೋಕಪಾವನಿ ನದಿಯಿಂದ ಚಿಕ್ಕದೇವರಾಯ ಸಾಗರ ನಾಲೆಗೆ ಬಿಡಲಾಗುತ್ತದೆ. 2ನೇ ಹಂತದಲ್ಲಿ ಕರಿಘಟ್ಟದ ನಾಲೆಗೆ ಅಷ್ಟೇ ಪ್ರಮಾಣದ ನೀರನ್ನು ಬಿಡುವುದು ಯೋಜನೆಯ ಉದ್ದೇಶ. ಈ ಯೋಜನೆಯ ಮುಖ್ಯ ನಾಲೆ 2.10 ಕಿಮೀ ಉದ್ದ, ಅಲ್ಲಾಪಟ್ಟಣ ಶಾಖಾ ನಾಲೆ 3.20 ಕಿಮೀ ಉದ್ದ, ಟಿ.ಎಂ.ಹೊಸೂರು ಶಾಖಾ ನಾಲೆ 10.40 ಕಿಮೀ ಉದ್ದ ಇವೆ. ಮುಖ್ಯ ನಾಲೆ 163.56 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಅಲ್ಲಾಪಟ್ಟಣ ಶಾಖಾ ನಾಲೆ 356.27 ಹೆಕ್ಟೇರ್, ಟಿ.ಎಂ.ಹೊಸೂರು ಶಾಖಾ ನಾಲೆ 366.80 ಹೆಕ್ಟೇರ್ ಅಚ್ಚಕಟ್ಟು ಪ್ರದೇಶ ಹೊಂದಿವೆ.ಅಲ್ಲಾಪಟ್ಟಣ ಶಾಖಾ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶದಿಂದ ನೀರನ್ನು ಇನ್ನೂ ಬಿಟ್ಟಿಲ್ಲ. ಟಿ.ಎಂ.ಹೊಸೂರು ಶಾಖಾ ನಾಲೆಗೆ ಒಂದು ಹನಿ ನೀರನ್ನೂ ಬಿಟ್ಟಲ್ಲ.

ಇನ್ನೂ ಅಚ್ಚರಿಯ ಅಂಶ ಎಂದರೆ ಯೋಜನೆ ಆರಂಭವಾಗಿ ಇಷ್ಟು ವರ್ಷದ ನಂತರ ಟಿ.ಎಂ.ಹೊಸೂರು ಶಾಖಾ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ.ಇದಕ್ಕೆ ವಿ.ಸಿ.ಸಂಪರ್ಕ ನಾಲೆಯಿಂದ ಹಿಮ್ಮುಖ ನೀರು ಹರಿಸುವುದಕ್ಕೆ ಮತ್ತೊಂದು ಯೋಜನೆ ಸಿದ್ಧಪಡಿಸಲಾಗಿದೆ.

ಕರಿಘಟ್ಟ ಯೋಜನೆಯ ನಾಲೆಗಳಲ್ಲಿ ಇನ್ನೂ ನೀರೇ ಹರಿದಿಲ್ಲ. ಆದರೂ ಶಾಖಾ ನಾಲೆಗಳ ದುರಸ್ತಿ, ಗೋಡೆಗಳನ್ನು ಎತ್ತರಿಸುವುದು ಹಾಗೂ ಮೋರಿಗಳ ಪುನರ್ ನಿರ್ಮಾಣಕ್ಕೆ 150 ಲಕ್ಷ ರೂಪಾಯಿ ಬೇಕು ಎಂದು ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಕರಿಘಟ್ಟ ಏತ ನೀರಾವರಿ ಯೋಜನೆಯಿಂದ ನೀರು ಬರುತ್ತದೆ ಎಂದು ಕಳೆದ 30 ವರ್ಷಗಳಿಂದ ರೈತರು ಕಾಯುತ್ತಲೇ ಇದ್ದಾರೆ. ನೀರು ಬಂದಿಲ್ಲ. ಕಣ್ಣೀರು ಹರಿದಿದೆ ಅಷ್ಟೆ ಎಂದು ಗೌಡಹಳ್ಳಿಯ ರೈತ ವೆಂಕಟೇಶ ಹೇಳುತ್ತಾರೆ. 

ಏತ ನೀರಾವರಿಗಳ ಕತೆ ಹೀಗಾದರೆ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 202 ಕೆರೆಗಳು ಬರುತ್ತವೆ. ಇವುಗಳಲ್ಲಿ ಬಹುತೇಕ ಕೆರೆಗಳಿಗೆ ನೀರು ಭರ್ತಿ ಮಾಡಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 48 ಕೆರೆಗಳು ಇನ್ನೂ ಖಾಲಿ ಇವೆ.

ಜಲಾಶಯಗಳು ಭರ್ತಿಯಾಗಿಲ್ಲ ದಿರುವುದು ಒಂದೆಡೆಯಾದರೆ ತಮಿಳು ನಾಡಿಗೆ ನೀರು ಹರಿದು ಹೋಗುವ ಸಂಕಷ್ಟ ಇನ್ನೊಂದೆಡೆ. ಜೊತೆಗೆ ಏತ ನೀರಾವರಿ ಯೋಜನೆಗಳು, ಕೆರೆಗಳು ಭರ್ತಿಯಾಗದೆ ಇರುವುದು ಮತ್ತೊಂದು ಕಡೆ. ಒಟ್ಟಿನಲ್ಲಿ ಕಾವೇರಿ ಕೊಳ್ಳದ ರೈತರ ಸ್ಥಿತಿ ಕಷ್ಟ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT