ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾಗುತ್ತೋ ದೇವರಿಗೇ ಗೊತ್ತು - ಬಿ.ಎಸ್.ಯಡಿಯೂರಪ್ಪ

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭದ್ರಾವತಿ: `ಮುಂಬರುವ 3ನೇ ತಾರೀಕು ನನ್ನ ಪಾಲಿಗೆ ನ್ಯಾಯಾಲಯದ ಗಡುವು. ಅಂದು ನನ್ನ ಜಾಮೀನು ವಿಷಯ ಏನಾಗುತ್ತದೋ ಭಗವಂತನಿಗೇ ಗೊತ್ತು~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ವೇಗದಿಂದ ಹೇಳಿದರು.

ಇಲ್ಲಿನ ರಾಜ್ಯ ಕಬ್ಬು ಬೆಳೆಗಾರರ ಸಂಘ ಭಾನುವಾರ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಂದು ನ್ಯಾಯಾಲಯದ ವಿಚಾರಣೆ ಮುಗಿದ ಮೇಲೆ, 8 ಅಥವಾ 10ನೇ ತಾರೀಖಿನ ನಂತರ ಬೀದರ್, ಗುಲ್ಬರ್ಗ ಕಡೆಯಿಂದ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಿಸಿದರು.

`ಹಸಿರು ಶಾಲು ಆನಂದದ ಸಂಕೇತ. ಅಧಿಕಾರ ಸ್ವೀಕರಿಸುವಾಗ ಅದನ್ನು ಹೊದ್ದು ಪ್ರಮಾಣವಚನ ಸ್ವೀಕರಿಸಿದೆ. ಅಧಿಕಾರ ಕಳೆದುಕೊಂಡ ನಂತರ ನನ್ನ ತವರು ಜಿಲ್ಲೆಗೆ ಬಂದ ಸಂದರ್ಭದಲ್ಲಿ ಇಲ್ಲಿನ ರೈತರು ಇಂದು ನನಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಿರುವುದು ನನ್ನ ಹೋರಾಟದ ಕೆಚ್ಚನ್ನು ಹೆಚ್ಚು ಮಾಡಿದೆ~ ಎಂದು ಗದ್ಗದಿತರಾಗಿ ನುಡಿದರು.

ಪಕ್ಷದ ಬಲಕ್ಕಿಂತ, ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ನನ್ನ ಪ್ರವಾಸ ನಡೆಯಲಿದೆ. ಈ ಕುರಿತು ರೈತ ಸಂಘದ ಮುಖಂಡರ ಜತೆ ಚರ್ಚೆ ನಡೆಸಿದ್ದೇನೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪ್ರವಾಸ ಮಾಡಲಿದ್ದೇನೆ ಎಂದರು.

ಶಿಕಾರಿಪುರ ಕ್ಷೇತ್ರದ ಶಾಸಕನಾಗಿ, ನೆನೆಗುದಿಯಲ್ಲಿರುವ ನೀರಾವರಿ ಯೋಜನೆ, ಕೆರೆ-ಕಟ್ಟೆಗಳ ರಕ್ಷಣೆ, ನೀರು ರಕ್ಷಿಸದಿದ್ದಲ್ಲಿ ಮುಂದಿನ 25 ವರ್ಷದಲ್ಲಿ ಒಂದು ಕೊಡ ನೀರಿಗೆ ದುಡ್ಡು ಕೊಡುವ ಸ್ಥಿತಿ ಇದೆ ಎಂಬ ವಿಚಾರವನ್ನು ಮನದಟ್ಟು ಮಾಡುವ ಯತ್ನವಾಗಿ ಪ್ರವಾಸ ಮಾಡುವ ಜತೆಗೆ ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಒತ್ತು ಕೊಡುತ್ತೇನೆ ಎಂದು ಮುಂದಿನ ಯೋಜನೆ ತೆರೆದಿಟ್ಟರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏರುಪೇರು ಸಹಜ. ಕುರ್ಚಿ ಸಿಕ್ಕಾಗ ಆನಂದಪಟ್ಟ ನಾನು, ಅದನ್ನು ಬಿಟ್ಟುಕೊಡುವಾಗ ಸಹ ಅಷ್ಟೇ ಸಂತೋಷದಿಂದ 70 ಜನ ಶಾಸಕರ ಜತೆ ತೆರಳಿ ರಾಜೀನಾಮೆ ಸಲ್ಲಿಸಿದೆ. ಅಂದು ಇಷ್ಟಪಟ್ಟಿದ್ದರೆ ಅಧಿಕಾರದ್ಲ್ಲಲೇ ಇರಬಹುದಿತ್ತು. ಆದರೆ ಒಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತನಾಗಿ, ಮುಖಂಡರ ಮಾತಿಗೆ ಗೌರವ ನೀಡಿ ಅಧಿಕಾರ ತ್ಯಾಗ ಮಾಡಿದ್ದೇನೆ ಎಂದು ಭಾವಾವೇಷದಿಂದ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT