ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನ್ ಹುಡುಗ್ರೋ...ಯಾಕ್ಹಿಂಗಾಡ್ತಾರೋ...

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗೆಳತಿಯೊಬ್ಬಳ ನೋಟ್ ಪುಸ್ತಕವನ್ನು ಅವಳಿಗೆ ಗೊತ್ತಿಲ್ಲದಂತೆ ತಿರುವಿಹಾಕುತ್ತಿದ್ದೆ. ಏನೇನೋ ಗೀಚುಗಳು. ಅರ್ಧಕ್ಕೆ ನಿಂತ ರಂಗೋಲಿ. ಹಗ್ಗದಾಟ ಆಡುತ್ತಿರುವ ಹುಡುಗಿಯ ಚಿತ್ರ. ತಿಂಗಳಿನಿಂದ ತಿಂಗಳಿಗೆ ಏರುತ್ತಿರುವ ಬ್ಯೂಟಿ ಪಾರ್ಲರ್‌ನ ಲೆಕ್ಕಗಳು.

ಒಂದು ಪುಟದ ಮರೆಯಲ್ಲಿ ಮರಿ ಹಾಕಲು ಕಾವಿಗೆ ಕೂತ ನವಿಲುಗರಿ! ಅಲ್ಲಲ್ಲಿ ಯಾರನ್ನೋ ಉದ್ದೇಶಿಸಿ ಬರೆದ ಅರೆಬರೆ ಸಾಲುಗಳು. ಹೀಗೇ ಕುತೂಹಲದಿಂದ ಪುಟ ಮಗುಚುತ್ತಿದ್ದಾಗ ಒಂದು ಬರಹ ಹಿಡಿದು ನಿಲ್ಲಿಸಿತು. ಅಲ್ಲಿ ಬರೆದಿದ್ದಳು-
“ಕರೆನ್ಸಿ ಖಾಲಿಯಾಗಿ ಮೊಬೈಲಿನ ಬಾಯಿಗೆ ಗರ ಬಡಿದದ್ದಕ್ಕೋ ಅಥವಾ ಮನಸ್ಸು ತುಂಬಿಬಂದ ಯಾವುದೋ ಲಹರಿಯಲ್ಲೋ... ನೀನು ಬರೆದ ಮೂರೂವರೆ ಪುಟಗಳ ಪತ್ರ ಓದಿದೆ.

ಏನೆಂದು ಪ್ರತಿಕ್ರಿಯಿಸಬೇಕೊ ಗೊತ್ತಾಗುತ್ತಿಲ್ಲ. ಅಕ್ಷರ ರೂಪದಲ್ಲಿ ಮನಸ್ಸನ್ನು ಇಷ್ಟು ಚೆನ್ನಾಗಿ ತೆರೆದಿಡಬಹುದೇ ಅನ್ನಿಸಿತು. ಆದರೆ, ಒಂದು ವಿಷಯಕ್ಕೆ ಬೇಜಾರಾಯಿತು. ಪುಟ ಪುಟದಲ್ಲೂ ಪ್ರೀತಿಯ ಒರತೆಯನ್ನು ತುಂಬಿರುವ ನೀನು, ಆ ಪುಟಗಳನ್ನು ಒಂದು ಗುಂಡುಸೂಜಿಯ ಮೂಲಕ ಹಿಡಿದಿಟ್ಟಿರುವೆ. ಆ ಸೂಜಿಯನ್ನು ನನ್ನ ಹೃದಯಕ್ಕೇ ಚುಚ್ಚಿದಂತಾಯಿತು. ಪುಟಗಳನ್ನು ಹಿಡಿದಿಡಲು ಸೂಜಿಯ ಬದಲು ಒಂದು ಕ್ಲಿಪ್ ಬಳಸಬಾರದಿತ್ತೇ ಅನ್ನಿಸಿತು”.

ಗೆಳತಿಯ ಗೀಚು ನೋಡಿ ಅರೆಕ್ಷಣ ನನಗೆ ಷಾಕ್ ಆಯಿತು. ಹೊರಗೆ ಅವಳ ಮಾತು ಕೇಳಿಸಿ ಪುಸ್ತಕ ಎತ್ತಿಟ್ಟೆ. ಆದರೆ, ಅವಳ ಪುಸ್ತಕದೊಳಗಿನ ನವಿಲುಗರಿ ನನ್ನ ಮನಸ್ಸಿನೊಳಗೆ ಮರಿ ಹಾಕುತ್ತಿದೆ ಎನ್ನಿಸಿತು.

ಪುಟಗಳನ್ನು ಹಿಡಿದಿಡಲು ಗುಂಡುಸೂಜಿ ಬಳಸುವುದು ಸಹಜ ತಾನೇ? ಆದರೆ ಈ ಯಃಕಶ್ಚಿತ್ ಗುಂಡುಸೂಜಿ ಕೂಡ ಪ್ರೇಮದ ಆರ್ದ್ರತೆಯನ್ನು ಸೂಚಿಸುವ ಒಂದು ರೂಪಕದಂತೆ ನನ್ನ ಗೆಳತಿಗೆ ಕಾಣಿಸಿತ್ತು. ಅವಳ ಮಾತುಗಳು ಒಂದು ಕವಿತೆಯಂತೆ ಅರ್ಥದ ಅಲೆಗಳನ್ನು ನನ್ನಲ್ಲಿ ಏಳಿಸತೊಡಗಿದವು.

ಭಾವನೆಗಳ ಅಭಿವ್ಯಕ್ತಿಯ ವಿಷಯದಲ್ಲಿ ನನ್ನದೊಂದು ಕಡ ತಂದ ಪ್ರಮೇಯವಿದೆ. ಭಾವನೆಗಳ ತೋರ್ಪಡಿಕೆಯ ಮಟ್ಟಿಗೆ ಹುಡುಗಿಯರದು ಕವಿ ಹೃದಯ, ಹುಡುಗರು ಕಪಿ ಹೃದಯ ಎನ್ನುವುದು ಈ ಪ್ರಮೇಯದ ಒಂದು ಸಾಲಿನ ತಿರುಳು. ಗೆಳತಿಯ ದೃಷ್ಟಾಂತವನ್ನೇ ನೋಡಿ: ತನ್ನ ಹುಡುಗ ತನಗೆ ಬರೆದ ಪತ್ರಕ್ಕೆ ಗುಂಡುಸೂಜಿ ಚುಚ್ಚಿದ್ದು ಆಕೆಗೆ ನೋವು ತಂದಿತ್ತು. ಕವಿ ಮನಸ್ಸು ಎಂದರೆ ಇದೇ ಅಲ್ಲವೇ? ಹುಡುಗರು ಹೀಗೆ ಯೋಚಿಸುವುದು ಎಂದಿಗಾದರೂ ಸಾಧ್ಯವೇ?

ಕಾಲೇಜು ದಿನಗಳಲ್ಲಿನ ನನ್ನ ಇನ್ನೊಬ್ಬ ಗೆಳತಿಯ ಕಥೆ ಕೇಳಿ. ಕಾದ ಕಬ್ಬಿಣವನ್ನು ತಣ್ಣಗಾದ ಮೇಲೆ ತಟ್ಟಿದಂತೆ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಹುಡುಗನೊಬ್ಬನ ಮೇಲೆ ಅವಳಿಗೆ ಲವ್ವ. ಬೆಳಿಗ್ಗೆ ಎಚ್ಚರವಾದ ಕ್ಷಣ ಜಿಮ್ಮಿಗೆ ಹೋಗಿ ಸಾಮು ಮಾಡುವ ಹವ್ಯಾಸ ಅವನದು. ಆರೋಗ್ಯಕ್ಕಾಗಿ ದೇಹ ದಂಡಿಸುವುದರ ಬಗ್ಗೆ ನನಗೂ ಸಮ್ಮತವಿದೆ. ಆದರೆ, ಬೆಳಗಿನ ಸಕ್ಕರೆ ನಿದ್ದೆಯನ್ನು ಬಿಟ್ಟು, ಬದುಕಿನ ಉದ್ದೇಶವೇ ದೇಹವನ್ನು ಹುರಿಗಟ್ಟಿಸುವುದು ಎನ್ನುವಂತೆ ಸಾಮು ಮಾಡುವ ಹುಡುಗರ ಬಗ್ಗೆ ನನಗೆ ಕನಿಕರ ಎನ್ನಿಸುತ್ತದೆ. ಸಿಕ್ಕಿದ್ದನ್ನೆಲ್ಲ ಕುಕ್ಕಿಕೊಂಡು ತಿಂದು ದೇಹ ಊದಿಸಿಕೊಂಡ ಫಾರಮ್ಮು ಕೋಳಿಗಳಂತೆ ನನಗವರು ಕಾಣಿಸುತ್ತಾರೆ.

ಇಂಥ -ಕೋಳಿಯಂಥ- ಹುಡುಗನ ಮೇಲೆ ಹಂಸದಂಥ ನಮ್ಮ ಹುಡುಗಿಗೆ ಲವ್ವಾದುದೊಂದು ವಿಸ್ಮಯವೇ ಸರಿ. ಎಲ್ಲಿಯ ಅಮೃತಮತಿ, ಎಲ್ಲಿಯ ಅಷ್ಟಾವಂಕ! ಅದರ ಮಾತಿರಲಿ, ಹುಡುಗಿಯ ಕಷ್ಟದ ವಿಷಯ ಕೇಳಿ.

ಹುಡುಗಿಯೇನೋ ಪ್ರೀತಿಸತೊಡಗಿದಳು. ಆದರದನ್ನು ಹುಡುಗನಿಗೆ ಹೇಳುವುದು ಹೇಗೆ? ದಿನಕ್ಕೆ ಹತ್ತಾರು ಬಾರಿ ಅವನೆದುರು ಸುಳಿದಾಡಿದಳು. ಕಾರಣವಿಲ್ಲದೆ ನಕ್ಕಳು. ಹುಟ್ಟಿದ ಹಬ್ಬವೆಂದು ಅವನೊಬ್ಬನಿಗೇನೆ ಸಿಹಿ ತಂದುಕೊಟ್ಟಳು. ಡಬ್ಬಿಯನ್ನು ಹಂಚಿಕೊಂಡಳು.

ಕೋಂಪ್ಲಾನ್ ಕನ್ನೆ ಹುಡುಗನಿಗಾಗಿ ಕಾಫಿ ಕುಡಿಯುವುದು ಕಲಿತುಕೊಂಡಳು. ಏನು ಮಾಡಿದರೂ ಅಷ್ಟೇ, ಆ ಹಂಸೆಯ ಮನಸ್ಸೇ ಅವನಿಗೆ ಅರ್ಥವಾಗುತ್ತಿಲ್ಲ. ಅವಳಾಗಿ ಮೇಲೆ ಬಿದ್ದಮೇಲೆ ಒಟ್ಟಿಗೆ ಕೂತು ಮಾತನಾಡುವಷ್ಟು ಸಲಿಗೆ ಅವರ ನಡುವೆ ಬೆಳೆಯಿತು. ಅವಳು ಆಕಾಶದಲ್ಲಿನ ಚುಕ್ಕಿಗಳ ಬಗ್ಗೆ, ಮಳೆಯಲ್ಲಿ ನೆನೆಯುವ ಸುಖದ ಬಗ್ಗೆ, ಜಾಜಿಯ ಘಮದ ಬಗ್ಗೆ, ತನ್ನ ಅಪ್ಪಅಮ್ಮನ ಕರಡಿ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಳು.

ಅವನು ಪ್ರತಿದಿನ ತಾನು ಬಸಿಯುವ ಲೀಟರ್‌ಗಟ್ಟಲೆ ಬೆವರಿನ ಬಗ್ಗೆ, ಗುಳುಂ ಮಾಡುವ ಕೋಳಿ ಮೊಟ್ಟೆಗಳ ಬಗ್ಗೆ, ವಿಟಮಿನ್ ಮಾತ್ರೆಗಳ ಬೆಲೆಯ ಬಗ್ಗೆ ಕೊರೆಯುತ್ತಿದ್ದ. ಅಂಥ ಸಂದರ್ಭಗಳಲ್ಲಿ ಕಲ್ಲಿಗೆ ತಲೆ ಚಚ್ಚಿಕೊಳ್ಳಬೇಕು ಎಂದು ಅವಳಿಗನ್ನಿಸುತ್ತಿತ್ತು. ಅವನೋ ಕಲ್ಲಿನಂತೆ ನಿರ್ಭಾವುಕನಾಗಿರುತ್ತಿದ್ದ.

ಒಂದು ದಿನ ಹುಡುಗಿಯ ಮನೆಯಲ್ಲಿ ಉಪ್ಪಿಟ್ಟು, ಕೇಸರಿಬಾತ್ ಪರಿಮಳ. ಮರುದಿನ, ಅಳುವ ದನಿಯಲ್ಲವಳು ತನ್ನ ಹುಡುಗನಿಗೆ ವಿಷಯ ತಿಳಿಸಿದಳು. `ಹೌದಾ? ಕಂಗ್ರಾಟ್ಸ್' ಎಂದು ಕೈಕುಲುಕಿದ. `ಹುಡುಗ ಸಿಕ್ಸ್ ಪ್ಯಾಕಾ?' ಎಂದ. ಉಹುಂ, ಈ ಬಂಡೆ ಎಂದೂ ಕರಗುವುದಿಲ್ಲ, ಕಾಮನಬಿಲ್ಲಾಗುವುದಿಲ್ಲ ಎಂದವಳಿಗೆ ಖಚಿತವಾಗಿ ಹೋಯಿತು.

ಕಟ್ಟುಮಸ್ತು ಹುಡುಗರನ್ನು ಕಂಡಾಗಲೆಲ್ಲ ನನಗೆ ಗೆಳತಿಯ ನೆನಪೇ ಬರುತ್ತದೆ. ಇವರ ದೇಹ ಚಿಗುರಿದಂತೆಲ್ಲ ಮನಸ್ಸು ಮರಗಟ್ಟಿ ಹೋಗುತ್ತದೇನೊ ಅನ್ನಿಸುತ್ತದೆ. ಹುಡುಗಿಯ ಒಂದು ನಗುವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಹೋದರೆ ಎಂಥ ದೇಹವಿದ್ದರೇನು ಲಾಭ? ನಗುವೇ ಅರ್ಥವಾಗದ ಈ ಮೊದ್ದಪ್ಪಗಳಿಗೆ ಕಣ್ಣೋಟ ತಿಳಿಯುವುದು ಹೇಗೆ?

ಸಿನಿಮಾಗಳಲ್ಲಿ ನೋಡಿ: ಹುಡುಗಿಯರ ಬೆನ್ನ ಹಿಂದೆ ಬೀಳುವ ಹುಡುಗರದು ತೀರಾ ಒರಟು ಭಾಷೆ. `ಬುಲ್ ಬುಲ್ ಮಾತಾಡಕಿಲ್ವಾ?' ಎನ್ನುವವರೇ ಎಲ್ಲ. ಈ ಹುಡುಗರಿಗೆ ಪ್ರೇಮ ಎನ್ನುವುದು ಬಯಲಿನಲ್ಲಿ ನಿಂತು ಆಡುವಷ್ಟು ಸಲೀಸು. ಅದು ಮನಸ್ಸುಗಳ ಪಿಸುಮಾತು ಎನ್ನುವ ಸತ್ಯ ಅವರಿಗೆ ಅರ್ಥವಾಗುವುದಿಲ್ಲ. `ನನ್ನನ್ನು ಪ್ರೀತಿಸು' ಎಂದು ಸತಾಯಿಸುವ ಒರಟರೂ ಇರುತ್ತಾರೆ. ಹೂ ಕೊಯ್ಯಲು ಮಚ್ಚು ಬಳಸುವುದೇ... ಛೀ...

ಪ್ರೇಮ ಎನ್ನುವುದು ಹುಡುಗಿಯರ ಪಾಲಿಗೊಂದು ಸಮಶ್ರುತಿಯ ಭಾವಗೀತೆ. ಅದೊಂದು ದಿವ್ಯ ಅನುಭವ. ಹುಡುಗರಿಗೋ ಹುಡುಗಿಯ ಸಖ್ಯ ತಮ್ಮ ಅಹಮ್ಮನ್ನು ಪೋಷಿಸುವ ಸಂಗತಿ. ಅಂಥ ಹುಡುಗರಿಗೆ ಧಿಕ್ಕಾರ ಧಿಕ್ಕಾರ...

`ಎಲ್ಲ ಹುಡುಗರೂ ಹಾಗಲ್ಲ. ನವಿರು ಮನಸ್ಸಿನ ಹುಡುಗರೂ ಇರುತ್ತಾರೆ' ಎಂದು ನನ್ನ ಗೆಳತಿಯೊಬ್ಬಳು ವಾದಿಸುತ್ತಾಳೆ.

ಇರಬಹುದೇನೊ? ನನ್ನ ಅಪ್ಪ ಇಲ್ಲವೇ? ಅಮ್ಮ ಆಡದ ಮಾತುಗಳೆಲ್ಲ ಅಪ್ಪನಿಗೆ ಕೇಳಿಸುತ್ತವೆ. ಅಮ್ಮನ ಕಣ್ಣಸನ್ನೆಯೂ ಅಪ್ಪನಿಗೆ ಅರ್ಥವಾಗುತ್ತದೆ. ಎಲ್ಲ ಹುಡುಗರೂ ಹೀಗಿರಬಾರದೇ?

ಎಲ್ಲಿರುವನೋ ರಾಜಕುಮಾರ? ಇಹನೋ ಇಲ್ಲವೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT