ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಳಿತಗಳಿಲ್ಲದೆ ಕಳೆಯಿತು 2011

Last Updated 2 ಜನವರಿ 2012, 5:50 IST
ಅಕ್ಷರ ಗಾತ್ರ

ಬೀದರ್: ಹೊಸ ವರುಷದ ಹೊಸತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ತೀವ್ರ ನಿರಾಶೆಯೇನೂ ಆಗುವುದಿಲ್ಲ. ಹಾಗೆಯೇ ಸಂಭ್ರಮವೂ ಇರಲಿಲ್ಲ. ರೈತರು ಬರದ ಬವಣೆಯಲ್ಲಿ ಬೆಂದರೆ, ಕೂಲಿಕಾರ್ಮಿಕರು, ಕೆಳವರ್ಗದ ಜನರು ಬೆಲೆಯೇರಿಕೆಯ ಬಿಸಿಲಲ್ಲಿ ಒಣಗಿದರು. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮಧ್ಯಮವರ್ಗದ ಜನ ಮಾತ್ರ ಸಡಗರ- ಸಂಭ್ರಮದಿಂದ ಉತ್ಸವ-ಸಮ್ಮೇಳನ-ಹಬ್ಬ ಆಚರಿಸಿದರು. ಹಲವರು ನಾಯಕರು ಪಕ್ಷಬೇಧ ಮರೆತು ಕುಣಿದು ಕುಪ್ಪಳಿಸಿದರೆ ಕೆಲವರು ಡೊಳ್ಳು-ಹಲಗೆ ಬಡಿದರು. ಕುಸ್ತಿ ಪಟುವೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲದರಲ್ಲೂ ಮುಂದಿದ್ದರು.

ವರ್ಷವಿಡೀ ನಡೆದ ಮೇಳ-ಮೆರವಣಿಗೆಗಳನ್ನು ನೋಡಿದರೆ ಇಡೀ ಜಿಲ್ಲೆ ಸಮೃದ್ಧವಾಗಿತ್ತು ಎಂಬಂತೆ ಭಾಸವಾಗುತ್ತದೆ. ಅದು ಮೇಲ್ನೋಟಕ್ಕೆ ಕಂಡ ಸಡಗರ ಎಂದು ಗೊತ್ತಾಗಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ. ಪ್ರತಿಭಟನೆ-ಹರತಾಳ-ಬಂದ್‌ಗಳು ನಡೆದವು. ಆದರೆ, ಅವು ಕೂಡ ಕಾಡುವ ದೇವರ ಕಾಟ ಕಳೆಯುವ ಸ್ವರೂಪದವುಗಳಾಗಿದ್ದರಿಂದ ಹಿಂದಿನ ಗಂಭೀರ ಸ್ಥಿತಿ ಇರಲಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕಾಗಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ಬೇಡಿಕೆ, ನಾಂದೇಡ್-ಬೆಂಗಳೂರು ರೈಲ್ವೆ ವೇಳೆಯಲ್ಲಿ ಬದಲಾವಣೆ, ಸಿದ್ಧವಾಗಿ ನಿಂತರೂ ಸಾರ್ವಜನಿಕರ ಬಳಕೆಗೆ ಬಾರದ ನಾಗರಿಕ ವಿಮಾನ ನಿಲ್ದಾಣ.. ಹೀಗೆ ಕಳೆದ ವರ್ಷದ ಆರಂಭದಲ್ಲಿ ಕಂಡು ಈಡೇರದೇ ಉಳಿದ ಕನಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ವರ್ಷದ ಆರಂಭವಾಗುವ ಮುನ್ನವೇ ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾನ ನಡೆದಿತ್ತು. ಫಲಿತಾಂಶಕ್ಕಾಗಿ ಕಾದು ಕುಳಿತಿರುವ ದಿನಗಳಲ್ಲಿಯೇ ಕ್ಯಾಲೆಂಡರ್ ಬದಲಾಗಿತ್ತು. ನಂತರ ಪ್ರಕಟವಾದ ಫಲಿತಾಂಶವು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಪರವಾಗಿತ್ತು. 31 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಪಡೆದ ಬಿಜೆಪಿಯು ತನ್ನ ಪ್ರತಿಸ್ಪರ್ಧಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಬಹಳಷ್ಟು ಮುಂದಿತ್ತು. ಒಬ್ಬ ಪಕ್ಷೇತರ ಅಭ್ಯರ್ಥಿಯೂ ಬಿಜೆಪಿಗೆ ಸಮರ್ಥನೆ ನೀಡಿದ್ದರಿಂದ ಬಲ 19ಕ್ಕೆ ಹೆಚ್ಚಿತ್ತು. ಅಧ್ಯಕ್ಷ ಹುದ್ದೆಯು ಜನವಾಡ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕುಶಾಲ್ ಪಾಟೀಲ್ ಗಾದಗಿ ಅವರಿಗೆ ದೊರೆತರೆ ತಾನಾಜಿ ರಾಠೋಡ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. 20 ತಿಂಗಳ ಮೊದಲ ಅವಧಿಯಲ್ಲಿ ಅರ್ಧರ್ಧ ಎಂಬ ಅಧಿಕಾರ ಹಂಚಿಕೆಯ ಸೂತ್ರದ ಪ್ರಕಾರ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಮುಗಿದಿದೆ ಎಂಬ ವಾದ ಪಕ್ಷದ್ದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣದ ಆರೋಪ ಎದುರಿಸುತ್ತ ತುರಂಗವಾಸ ಅನುಭವಿಸುತ್ತಿರುವ ಉಪಾಧ್ಯಕ್ಷರು ಬಿಡುಗಡೆ ಆಗಿ ಬರುವ ವರೆಗೂ ರಾಜೀನಾಮೆ ನೀಡುವುದಿಲ್ಲ ಎಂಬ ಅಭಿಪ್ರಾಯ ಅಧ್ಯಕ್ಷರದ್ದು. ಜೈಲಿನೊಳಗಡೆ ಇರುವಾಗಲೇ ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಆದರೆ, ಹಗ್ಗ ಜಗ್ಗಾಟ ಮಾತ್ರ ಮುಂದುವರೆದಿದೆ. 

 ಬೀದರ್ ಉತ್ಸವವನ್ನು ಹಿಂದಿನ ವರ್ಷಗಳ ಹಾಗೆಯೇ ಉತ್ಸಾಹದಿಂದ ಆಚರಿಸಲಾಯಿತು. ಉತ್ಸವದ ಸಂದರ್ಭದಲ್ಲಿ ಸಿನಿಮಾ ಕಲಾವಿದರು ಕುಣಿಯುವುದು ಮತ್ತು ಹಿನ್ನೆಲೆ ಗಾಯಕರ ಹಾಡಿಗೇ ಹೆಚ್ಚು ಮನ್ನಣೆ ದೊರೆತದ್ದು ಅಸಮಾಧಾನಕ್ಕೆ ಕಾರಣವಾಯಿತು. `ಬೀದರ್ ಉತ್ಸವ~ಕ್ಕೆ ಮನ್ನಣೆ ನೀಡಿ, ಅದಕ್ಕೆ ಅನುಗುಣವಾದ ಅನುದಾನ ನೀಡುವುದಕ್ಕೆ ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂಬ ಅಳಲು ಜಿಲ್ಲೆಯ ಜನರದು. ಜಿಲ್ಲೆಯ ಜನರು ತಮ್ಮದೇ ಕೊಟ್ಯಂತರ ರೂಪಾಯಿ ನೀಡಿ ಉತ್ಸವ ಆಚರಿಸಿಕೊಳ್ಳುವುದರ ಫಲ ಏನು? ಎಂಬ ಮಾತುಗಳು ವರ್ಷಾಂತ್ಯದ ವೇಳೆಗೆ ಚರ್ಚೆಗೆ ಬಂದವು. ಹಾಗೆಯೇ ರಾಜ್ಯ ಸರ್ಕಾರ ಪ್ರಾಯೋಜಿತ `ಬಸವ ಉತ್ಸವ~ಕ್ಕೆ ನೀಡಲಾಗುವ ಅನುದಾನದಲ್ಲಿ ಕಡಿತ ಮಾಡಿದ್ದು ಬೇಸರಕ್ಕೆ ಕಾರಣವಾಗಿದೆ.

ಅಖಿಲ ಭಾರತ  ಮೊದಲ ಜಾನಪದ ಸಮ್ಮೇಳನದ ಆತಿಥ್ಯ ವಹಿಸಿದ ಹಿರಿಮೆ ಬೀದರಿನದಾಗಿತ್ತು. ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜಾನಪದ ಕಲಾವಿದರು ನಗರದ ರಸ್ತೆಗಳಲ್ಲಿ ತಮ್ಮ ಸಾಂಪ್ರದಾಯಿಕ ವೇಷ-ಭೂಷಣಗಳೊಂದಿಗೆ ನಡೆಸಿದ ಮೆರವಣಿಗೆ ಕಣ್ಮನ ತಣಿಸುವಂತಿತ್ತು. ಮೂರು ದಿನಗಳ ಕಾಲ ನಡೆದ ವಿಚಾರ ಸಂಕಿರಣಗಳಲ್ಲಿ ಜಾನಪದ ತಜ್ಞರು ನೀಡಿದ ಮನೋಜ್ಞ ಉಪನ್ಯಾಸಗಳು ಚಿಂತನೆಗೆ ತೊಡಗಿಸುವ ಹಾಗಿದ್ದವು.

ಕರ್ನಾಟಕ ಜಾನಪದ ಅಕಾಡೆಮಿಯ ಮಹತ್ವಾಕಾಂಕ್ಷಿ ಸಮ್ಮೇಳನಕ್ಕೆ ಕೊನೆಯ ದಿನ ಸೂತಕದ ಛಾಯೆ ಆವರಿಸಿತಾದರೂ ಎರಡು ದಿನಗಳ ಪ್ರದರ್ಶನ ಗಮನ ಸೆಳೆಯುವ ಹಾಗಿದ್ದವು. ಜಾನಪದ ಸಮ್ಮೇಳನವಲ್ಲದೇ ಜಿಲ್ಲಾ ಸಾಹಿತ್ಯ ಸಮ್ಮೇಳನ, ಯುವ ಸಾಹಿತ್ಯ ಸಮ್ಮೇಳನ, ಮಹಿಳಾ ಸಾಹಿತ್ಯ ಸಮ್ಮೇಳನ, ತಾಲ್ಲೂಕು ಸಾಹಿತ್ಯ ಸಮ್ಮೇಳನಗಳು ... ಹೀಗೆ ವರ್ಷದುದ್ದಕ್ಕೂ ಸಮ್ಮೇಳನಗಳ ಸರಣಿಯೇ ನಡೆದು ಹೋಯಿತು.

ಸಮ್ಮೇಳನದ ಮೆರವಣಿಗೆಯೂ ಸೇರಿದಂತೆ ಮಹನೀಯರ ಜನ್ಮದಿನದ ಮೆರವಣಿಗೆಗಳಲ್ಲಿಯೂ ಜನನಾಯಕರು ನರ್ತಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿನ ಕುಣಿಯುವ ತಂಡದಲ್ಲಿ ಸಂಸದರೂ ಆದ ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್, ಮಾಜಿಸಚಿವರಾದ ಶಾಸಕ ಬಂಡೆಪ್ಪಾ ಕಾಶೆಂಪೂರ್, ಶಾಸಕರಾದ ರಹೀಮ್‌ಖಾನ್ ಮತ್ತು ಪ್ರಭು ಚವ್ಹಾಣ ಕೂಡ ಸೇರಿದ್ದರು.

ಅವಧಿ ಮುಗಿದ ಪಿಸ್ತೂಲ್‌ನೊಂದಿಗೆ ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕಾಗಿ ಔರಾದ್ ಶಾಸಕ ಪ್ರಭು ಚವ್ಹಾಣ ತೀವ್ರ ಚರ್ಚೆಯಲ್ಲಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಸವಕಲ್ಯಾಣದ ಶಾಸಕ ಬಸವರಾಜ ಪಾಟೀಲ್ ಅವರು ವರ್ಷಾಂತ್ಯದ ವೇಳೆಗೆ ಚೇತರಿಸಿಕೊಂಡರು. ಸಾಯಿಗಾಂವ್ ಸೇತುವೆ ಎತ್ತರ ಹೆಚ್ಚಿಸುವಂತೆ ಆಗ್ರಹಿಸಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಏಪ್ರಿಲ್‌ನಲ್ಲಿ ಶಹಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ನಂತರದ ದಿನಗಳಲ್ಲಿ ರಸ್ತೆ ಕಾಮಗಾರಿ ಅಬಾಧಿತವಾಗಿ ಪೂರ್ಣಗೊಂಡಿತು. ಪಿಡಿಓ ಒಬ್ಬರ ಮೇಲೆ ಹಲ್ಲೆ ನಡೆದ ಪ್ರಕರಣ ನಡೆದ ಬೆನ್ನಹಿಂದೆಯೇ ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆಗೆ ಮೊರೆಹೋಗುವ ಸ್ಥಿತಿ ನಿರ್ಮಾಣ ಆದದ್ದು ವಿಷಾದಕರ ಬೆಳವಣಿಗೆ. ರೈತ ಸಂಘದ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಬಸವರಾಜ ತಂಬಾಕೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದ ಕೆಲವೇ ದಿನಗಳ ನಂತರ ಅವರು ಅಸು ನೀಗಿದ್ದು ಅಕ್ಷರಶಃ ತುಂಬಲಾರದ ನಷ್ಟ.

ಮಳೆಗಾಲ ಆರಂಭವಾಗುವ ಜೂನ್ ತಿಂಗಳಲ್ಲಿ ಮಳೆ ಬೀಳದೇ ಜನ ಆತಂಕಕ್ಕೆ ಒಳಗಾಗಿದ್ದರು. ಜುಲೈನಲ್ಲಿ ಕಾಣಿಸಿಕೊಂಡಂತೆ ಮಾಡಿದ ಮಳೆರಾಯ ನಂತರದ ದಿನಗಳಲ್ಲಿ ಕಣ್ಮರೆಯಾಗಿ ಬಿಟ್ಟ. ಇದರಿಂದಾಗಿ ಮುಂಗಾರು ಬೆಳೆ ಮಾತ್ರವಲ್ಲದೆ ಹಿಂಗಾರು ಬೆಳೆ ಕೂಡ ಕೈಕೊಟ್ಟದ್ದರಿಂದ ರೈತರು ಆತಂಕಕ್ಕೆ ಒಳಗಾಗಬೇಕಾಯಿತು.

ತೊಗರಿಯ ಬೆಲೆ ಇಳಿಕೆ, ಏರದ ಕಬ್ಬಿನ ಬೆಲೆಯ ಕಾರಣದಿಂದಾಗಿ ರೈತರು ಕಂಗಾಲಾಗುವ ದಿನಗಳ ಬಂದವು. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಗಳು ಬಡವರ, ಕೂಲಿ ಕಾರ್ಮಿಕರ ಮೇಲೆ ಇನ್ನಿಲ್ಲದ ಹೊರೆ ಹೇರಿದವು. ಈ ವರ್ಷವೂ ಕೇಳಿದ ಬುಲ್ಡೋಜರ್ ಸದ್ದು ಬಡವರ ನಿದ್ದೆಗೆಡಿಸುವುದರ ಜೊತೆಗೆ ಬದುಕುವ ಹಕ್ಕನ್ನು ಕಸಿದುಕೊಂಡಿತು. ಭ್ರಷ್ಟಾಚಾರ ವಿರೋಧಿಸಿ ನಡೆದ ಚಳವಳಿ, ಕ್ಯಾಂಡಲ್‌ದೀಪಗಳ ಮೆರವಣಿಗೆಯು ವರ್ಷದ ಮಧ್ಯಭಾಗದಲ್ಲಿ ಪ್ರಮುಖ ಚರ್ಚೆ ಕೇಂದ್ರ ಆಗಿತ್ತು.

ಅಂತರರಾಷ್ಟ್ರೀಯ ಗುಣಮಟ್ಟದ ಟೆನಿಸ್ ಕ್ರೀಡಾಂಗಣ ಉದ್ಘಾಟನೆಯಾದರೆ ಅತ್ಯಾಧುನಿಕ ಈಜುಕೊಳ ಸಾರ್ವಜನಿಕರ ಬಳಕೆಗೆ ಲಭ್ಯವಾಯಿತು. `ಡರ್ಟಿ ಪಿಕ್ಚರ್ಸ್‌~ ಮೂಲಕ ಹಾಲಿವುಡ್ ಚಿತ್ರದ ಚಿತ್ರೀಕರಣಕ್ಕೆ ಸಾಕ್ಷಿಯಾದ ಬೀದರ್ ಕೋಟೆಯಲ್ಲಿ ಇಡೀ ವರ್ಷ ಕನ್ನಡ ಚಿತ್ರಗಳ ಚಿತ್ರೀಕರಣ ನಡೆದವು. `ಸಂಜು ವೆಡ್ಸ್ ಗೀತಾ~, `ಮನಸಾಲಜಿ~, `ಜರಾಸಂಧ~, `ಬಾಡಿಗಾರ್ಡ್~, `ಮುಂಜಾನೆ~ ಚಿತ್ರಗಳ ಚಿತ್ರೀಕರಣದಿಂದಾಗಿ ಬೀದರ್ ಚಿತ್ರನಿರ್ಮಾತೃಗಳ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ವರ್ಷಾಂತ್ಯದಲ್ಲಿ ಬೀದರ್‌ನಲ್ಲಿ ರಾಮದೇವ ಬಾಬಾ ಯೋಗ ಶಿಬಿರ ನಡೆಸಿದರು. ಬಸವಕಲ್ಯಾಣದಲ್ಲಿ ಹುತಾತ್ಮ ದಿನಾಚರಣೆ ನಡೆದದ್ದು, ತಡೋಳಕ್ಕೆ ಕೇಂದ್ರ ಕೃಷಿ ಸಚಿವರು ಭೇಟಿ ನೀಡಿದ್ದು ವರ್ಷದ ವಿಶೇಷ ಘಟನೆಗಳಾಗಿದ್ದವು. ಹುಮನಾಬಾದ್ ತಾಲ್ಲೂಕಿನ ಮಾಣಿಕ್ ನಗರದಲ್ಲಿ ಮಾರ್ತಾಂಡ ಮಾಣಿಕಪ್ರಭುಗಳ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಡೆದ ಹತ್ತು ದಿನಗಳ ಸಂಗೀತ ಸಮ್ಮೇಳನವು ಜಿಲ್ಲೆಯ ಮಹತ್ವದ `ಸಾಂಸ್ಕೃತಿಕ ಉತ್ಸವ~ ಆಗಿತ್ತು.

ವರ್ಷದ ಕೊನೆ ಕ್ಯಾಲೆಂಡರ್ ಬದಲಾಗುತ್ತದೆ. ಹೊಸ ಕ್ಯಾಲೆಂಡರ್ ಬರುತ್ತದೆ. ಎಲ್ಲರಿಗೂ ಒಳ್ಳೆಯ ದಿನಗಳು ಬರಲಿ ಎಂಬ ಆಸೆ, ಆಶಯ. ಹೊಸ ಕನಸುಗಳ ಹೊತ್ತ ಕಂಗಳು ನಿರೀಕ್ಷೆಯನು ಹೊಸ ವರುಷ ಹುಸಿಯಾಗಿಸದಿರಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT