ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಇಂಡಿಯಾ ಆರ್ಥಿಕ ಬಿಕ್ಕಟ್ಟು ; ಶೀಘ್ರ ಪರಿಹಾರ ನಿರೀಕ್ಷೆ

Last Updated 19 ಸೆಪ್ಟೆಂಬರ್ 2011, 16:05 IST
ಅಕ್ಷರ ಗಾತ್ರ

ಬೆಂಗಳೂರು: ಏರ್ ಇಂಡಿಯಾ ಸಂಸ್ಥೆ ಇನ್ನು ಆರು ತಿಂಗಳಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ವಿಶ್ವಾಸ ವ್ಯಕ್ತಪಡಿಸಿದರು.

ಭಾರತದಲ್ಲಿ ನಾಗರಿಕ ವಿಮಾನಯಾನ ಆರಂಭವಾಗಿ ನೂರು ವರ್ಷಗಳು ಸಂದ ಹಿನ್ನೆಲೆಯಲ್ಲಿ ಬೆಂಗಳೂರಿನ `ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್~ನಲ್ಲಿ (ಎಚ್‌ಎಎಲ್) ಸೋಮವಾರ ಆಯೋಜಿಸಲಾಗಿದ್ದ `ಪ್ರಸಕ್ತ ದಶಕದಲ್ಲಿ ನಾಗರಿಕ ವಿಮಾನಯಾನದ ಬೆಳವಣಿಗೆಗೆ ಮಾರ್ಗೋಪಾಯಗಳು~  ವಿಚಾರ ಸಂಕಿರಣದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಏರ್ ಇಂಡಿಯಾದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಆರು ತಿಂಗಳಿನಲ್ಲಿ ಏರ್ ಇಂಡಿಯಾ ಹಣಕಾಸಿನ ಸಂಕಷ್ಟದಿಂದ ಪಾರಾಗಲಿದೆ. ಆ ಕೂಡಲೇ ಲಾಭಗಳಿಸುವತ್ತ ಸಂಸ್ಥೆ ಮುಖಮಾಡದಿರಬಹುದು. ಆದರೆ ನಷ್ಟವಂತೂ ಆಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವೃತ್ತಿಪರ ಮುಖ್ಯಸ್ಥರು: ಏರ್ ಇಂಡಿಯಾದಲ್ಲಿ ಹೆಚ್ಚಿನ ವೃತ್ತಿಪರತೆ ತರುವ ಉದ್ದೇಶದಿಂದ ಮಾನವ ಸಂಪನ್ಮೂಲ, ಮಾರುಕಟ್ಟೆ, ಹಣಕಾಸು ಮತ್ತು ವಾಣಿಜ್ಯ ವಿಭಾಗಗಳಿಗೆ ಬೇರೆ ಸಂಸ್ಥೆಗಳಿಂದ ನುರಿತ ಮುಖ್ಯಸ್ಥರನ್ನು ನೇಮಕ ಮಾಡುವ ಪ್ರಸ್ತಾವನೆಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಏರ್ ಇಂಡಿಯಾ ಬಳಿ ಪ್ರಸ್ತುತ 81 ವಿಮಾನಗಳಿವೆ ಇದರಲ್ಲಿ ಕೆಲವು 20 ವರ್ಷಗಳಿಗಿಂತ ಹಿಂದಿನವು. ಇನ್ನೂ 27 ವಿಮಾನಗಳನ್ನು ಸಂಸ್ಥೆ ಖರೀದಿಸಲಿದೆ ಎಂದರು.

ಕೆಲವು ಖಾಸಗಿ ವಿಮಾನಯಾನ ಸಂಸ್ಥೆಗಳೂ ನಷ್ಟದಲ್ಲಿವೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರವಿ, `ಖಾಸಗಿ ಸಂಸ್ಥೆಗಳು ತಮ್ಮ ಷೇರು ಬಂಡವಾಳ ಹೆಚ್ಚಿಸಲು ಅನುಮತಿ ಕೋರಿದರೆ ಅದಕ್ಕೆ ಒಪ್ಪಿಗೆ ನೀಡಲಾಗುವುದು~ ಎಂದರು.

ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಆಂಬುಲೆನ್ಸ್ ಹೆಲಿಕಾಪ್ಟರ್‌ಗಳ ಅವಶ್ಯಕತೆ ಇದೆ. ಎಚ್‌ಎಎಲ್ ಇಂಥ ಹೆಲಿಕಾಪ್ಟರ್‌ಗಳನ್ನು ತಯಾರಿಸುವ ನಿಟ್ಟಿನಲ್ಲಿ ಮುಂದಡಿ ಇಡಬೇಕು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT