ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಇಂಡಿಯಾ ವಿರುದ್ಧ ; ದುಪ್ಪಟ್ಟು ದರ ವಸೂಲಿ ಆರೋಪ!

Last Updated 1 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ಮುಂಬೈ, (ಪಿಟಿಐ): ಗಲಭೆಪೀಡಿತ ಈಜಿಪ್ಟ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಏರ್ ಇಂಡಿಯಾ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡಿದೆ ಎಂದು ಅಲ್ಲಿಂದ ಬಂದವರು ಆರೋಪಿಸಿದ್ದಾರೆ.

ಕೈರೊದಿಂದ ಮುಂಬೈಗೆ ಏಕಮುಖ ಸಂಚಾರಕ್ಕೆ 45,000 ದಿಂದ 55,000 ರೂಪಾಯಿ ವಸೂಲು ಮಾಡಲಾಗಿದೆ. ಆದರೆ ವಿಮಾನಯಾನಕ್ಕೆ ಹೆಚ್ಚು ದರ ಪಡೆದಿರುವುದನ್ನು ಏರ್ ಇಂಡಿಯಾ ಸಮರ್ಥಿಸಿಕೊಂಡಿದೆ.

ವಿಶೇಷ ವಿಮಾನಗಳನ್ನು ಸರ್ಕಾರ ಸಂಕಷ್ಟದಲ್ಲಿರುವವರನ್ನು ರಕ್ಷಿಸುವುದಕ್ಕಾಗಿ ಕಳುಹಿಸಿರಲಿಲ್ಲ. ಆ ರೀತಿ ಕಳುಹಿಸಿದ್ದರೆ ದರದಲ್ಲಿ ರಿಯಾಯಿತಿ ನೀಡಬಹುದಿತ್ತು ಅಥವಾ ಉಚಿತವಾಗಿ ಕರೆತರಬಹುದಿತ್ತು ಎಂದು ಹೇಳಿದೆ.

‘ಕೈರೊಗೆ ಏರ್ ಇಂಡಿಯಾ ಸೇವೆ ಇಲ್ಲದ ಕಾರಣ ನಾವು ವಾಣಿಜ್ಯದ ದೃಷ್ಟಿಯಿಂದಲೇ ಕಾರ್ಯಾಚರಣೆ ಮಾಡಬೇಕಾಯಿತು. ಅಲ್ಲಿ ಸಿಕ್ಕಿಕೊಂಡಿದ್ದ ಭಾರತೀಯರನ್ನು ಕರೆತರಲು ಇಲ್ಲಿಂದ ಖಾಲಿ ವಿಮಾನ ಕೈರೊಗೆ ಹೋಗಿತ್ತು. ಇದಕ್ಕಾಗಿ ಮೊದಲೇ ಬೇರೆಡೆಗೆ ತೆರಳಬೇಕಿದ್ದ ವಿಮಾನಯಾನವನ್ನು ರದ್ದುಪಡಿಸಬೇಕಾಯಿತು’ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.

‘ಇತರೆ ಜಾಗತಿಕ ವಿಮಾನಯಾನ ಸಂಸ್ಥೆಗಳು ನಿಗದಿಪಡಿಸಿರುವ ಪ್ರಯಾಣ ದರ ಕೂಡ ಅಧಿಕವೇ. ಏರ್ ಇಂಡಿಯಾ ಕೂಡ ಇಷ್ಟೇ ಪ್ರಮಾಣದ ದರವನ್ನು ನಮ್ಮಿಂದ ವಸೂಲು ಮಾಡಿರುವುದು ಸರಿಯಲ್ಲ. ಅದೂ ನಗದು ರೂಪದಲ್ಲಿಯೇ ಹಣವನ್ನು ನೀಡಿ ಟಿಕೆಟ್ ಪಡೆಯಬೇಕಾಯಿತು’ ಎಂದು ಮಂಗಳವಾರ ಬೆಳಿಗ್ಗೆ ಮುಂಬೈಗೆ ಬಂದಿಳಿದ ಪ್ರಯಾಣಿಕರೊಬ್ಬರು ತೀವ್ರ ಅಸಮಾಧಾನ ತೋಡಿಕೊಂಡರು.

‘ಅರಾಜಕತೆ ತಾಂಡವವಾಡುತ್ತಿರುವ ಕೈರೊದಿಂದ ಜನರನ್ನು ರಕ್ಷಿಸಿರುವುದು ಒಳ್ಳೆಯ ಕೆಲಸ ಎನ್ನು ವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಏರ್ ಇಂಡಿಯಾ ಸಂಸ್ಥೆ ಅತಿಯಾಗಿ ದರವನ್ನು ಏರಿಸಿದ್ದು ಮಾತ್ರ ಈ ಸಂದರ್ಭದಲ್ಲಿ ಸಮರ್ಥನೀಯ ವಲ್ಲ’ ಎಂದು ಇನ್ನೊಬ್ಬರು ಹೇಳಿದ್ದಾರೆ.

‘ಯಾರಿಗೆ ನಗದು ನೀಡಲು ಸಾಧ್ಯ ವಾಗಿದೆಯೋ ಅಂತಹವರನ್ನು ಮಾತ್ರ ಅವರು ಕರೆತಂದರು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡುವುದಾಗಿ ಹೇಳಿದರೆ ಒಪ್ಪಲಿಲ್ಲ. ಈ ಕಾರಣ ದಿಂದಾಗಿ ಅನೇಕ ವಿದ್ಯಾರ್ಥಿಗಳು, ಹಣ ಸಂದಾಯ ಮಾಡಲು ಸಾಧ್ಯ ವಾಗದವರು ಈಗಲೂ ಕೈರೊದಲ್ಲಿ ಸಿಲುಕಿಕೊಂಡಿದ್ದಾರೆ’ ಎಂದು ಮತ್ತೊ ಬ್ಬರು ಪ್ರಯಾಣಿಕರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಒಂದು ಟಿಕೆಟ್‌ನ ಬೆಲೆ ಸುಮಾರು 20 ಸಾವಿರ ರೂಪಾಯಿ ಆಗಿರುತ್ತದೆ ಎಂದು ಇಲ್ಲಿನ ಪ್ರಯಾಣದ ಏಜೆಂಟ್ ಹೇಳುತ್ತಾನೆ.

ಇಲ್ಲಿನ ಛತ್ರಪತಿ ವಿಮಾನ ನಿಲ್ದಾಣಕ್ಕೆ ಕೈರೊದಿಂದ ಮಂಗಲವಾರ ಬೆಳಿಗ್ಗೆ 219 ಪ್ರಯಾಣಿಕರು ಬಂದಿಳಿದರು. ಸೋಮವಾರ 300 ಭಾರತೀಯರನ್ನು ಈಜಿಪ್ಟ್‌ನಿಂದ ಕರೆ ತರಲಾಗಿತ್ತು.

ಇಲ್ಲಿಯವರೆಗೆ ಈಜಿಪ್ತಿನಲ್ಲಿ ತೊಂದ ರೆಗೆ ಸಿಲುಕಿಕೊಂಡ  ಪ್ರವಾಸಿಗರೂ ಸೇರಿದಂತೆ ಸುಮಾರು 550 ಭಾರತೀ ಯರನ್ನು ಹಿಂದಕ್ಕೆ ಕರೆತರಲಾಗಿದೆ.

ಈಜಿಪ್ಟ್ ಬಿಕ್ಕಟ್ಟು-ಆಂತರಿಕ ವಿಚಾರ: ಕೃಷ್ಣ
 
ನವದೆಹಲಿ (ಪಿಟಿಐ): ಈಜಿಪ್ಟ್‌ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಆ ದೇಶದ ಆಂತರಿಕ ವಿಚಾರವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇಲ್ಲಿ ಹೇಳಿದರು.

ಪ್ರತಿಭಟನಾಕಾರರಿಗೆ ಒಪ್ಪಿಗೆಯಾಗುವಂತಹ ಪರಿಹಾರವನ್ನು ಆ ದೇಶ ಕಂಡುಕೊಳ್ಳುತ್ತದೆ ಎಂಬ ಆಶಾಭಾವನೆ ನಮ್ಮದಾಗಿದೆ ಎಂದು ಇಲ್ಲಿನ ತಮಿಳುನಾಡು ಭವನದಲ್ಲಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರೊಂದಿಗೆ ಮಂಗಳವಾರ ನಡೆಸಿದ ಸಭೆಯ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸಿದರು.

ಈಜಿಪ್ಟ್‌ನಲ್ಲಿ ನೆಲೆಸಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಎರಡು ವಿಶೇಷ ವಿಮಾನಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕರೆತರಲಾಗಿದೆ. ಇನ್ನುಳಿದ ಭಾರತೀಯರು ತಾಯ್ನಾಡಿಗೆ ಮರಳಲು ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಅವರನ್ನು ಕೂಡ ವಾಪಸ್ ಕರೆಸಿಕೊಳ್ಳಲಾಗುವುದು. ಕೈರೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಸಮುದಾಯದವರೊಂದಿಗೆ ಸಂಪರ್ಕದಲ್ಲಿದೆ.

ಅಲ್ಲಿ ನೆಲೆಸಿರುವ ಭಾರತೀಯರು ದೇಶಕ್ಕೆ ಮರಳುವಂತೆ ಒತ್ತಡ ಹೇರುವುದಿಲ್ಲ. ಸದ್ಯದ ಸ್ಥಿತಿಯಲ್ಲಿ ದೇಶದ ಜನ ಈಜಿಪ್ಟ್ ಪ್ರವಾಸ ಕೈಗೊಳ್ಳಬಾರದು ಎಂದು ಕೇವಲ ಸಲಹೆ ರೂಪದಲ್ಲಿ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈಜಿಪ್ಟ್‌ನಲ್ಲಿ ಸುಮಾರು 3,200 ಭಾರತೀಯರಿದ್ದಾರೆ. ಈ ಪೈಕಿ 2,000 ಜನರು ಕೈರೋದಲ್ಲೇ ನೆಲೆಸಿದ್ದಾರೆ ಎಂದು ಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT